ಶಾಸಕ ಬಿ.ಕೆ ಸಂಗಮೇಶ್ವರ್, ಜಿ.ಪಂ. ಮಾಜಿ ಸದಸ್ಯ ಎಸ್. ಕುಮಾರ್ ಬೆಂಬಲಿಗರಿಗೆ ಅಧಿಕಾರ
ಭದ್ರಾವತಿ ಹಿರಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಅಯ್ಕೆಯಾದ ನೂತನ ಅಧ್ಯಕ್ಷರು, ಉಪಾಧ್ಯಕ್ಷರೊಂದಿಗೆ ಕಾಂಗ್ರೆಸ್ ಹಾಗು ಜೆಡಿಎಸ್ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು.
ಭದ್ರಾವತಿ, ಫೆ. ೯: ತಾಲೂಕಿನ ೪ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ಚುನಾವಣೆ ನಡೆದಿದ್ದು, ಬಹುತೇಕ ಕಡೆ ಅವಿರೋಧ ಆಯ್ಕೆ ನಡೆಯಿತು.
ಹಿರಿಯೂರು ಗ್ರಾಮ ಪಂಚಾಯಿತಿ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಜಿ.ಜಿ ಗಂಗಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದು, ಇವರು ಈ ಪಂಚಾಯಿತಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಏಕೈಕ ಸದಸ್ಯೆಯಾಗಿದ್ದಾರೆ. ಉಳಿದಂತೆ ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದು, ಒಬ್ಬರ ನಾಮಪತ್ರ ತಿರಸ್ಕೃತಗೊಂಡ ಹಿನ್ನಲೆಯಲ್ಲಿ ಪವಿತ್ರ ಜಿ. ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ೨ನೇ ಬಾರಿಗೆ ಪಂಚಾಯಿತಿಗೆ ಆಯ್ಕೆಯಾಗಿರುವ ಇವರು ಮೊದಲ ಅವಧಿಯಲ್ಲಿಯೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿಗರು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಕೆ. ಬಸವರಾಜ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಹಿಂದುಳಿದ 'ಎ' ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಮಂಜುಳ ಹಾಗು ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಬಿ. ಆನಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಅರಳಿಕೊಪ್ಪ ಗ್ರಾಮ ಪಂಚಾಯಿತಿ ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಉತ್ತರೇಶ್ .ಎಸ್ ಹಾಗು ಸಾಮಾನ್ಯ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀ ಬಾಯಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕು ಪಂಚಾಯಿತಿ ಅಧ್ಯಕ್ಷ ದಾಸೋಹ ಸಹಾಯಕ ನಿರ್ದೇಶಕ ಬಿ. ನಟರಾಜ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಬೆಂಬಲಿಗರು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅತ್ತಿಗುಂದ ಗ್ರಾಮ ಪಂಚಾಯಿತಿ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ರತ್ನಮ್ಮ ಹಾಗು ಹಿಂದುಳಿದ 'ಎ' ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಮೊಹ್ಸಿನಾ ಬಾನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ ಚುನಾವಣಾಧಿಕಾರಿಯಾರಿ ಕರ್ತವ್ಯ ನಿರ್ವಹಿಸಿದರು. ಕಾಂಗ್ರೆಸ್ ಬೆಂಬಲಿಗರು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
No comments:
Post a Comment