Monday, November 14, 2022

ಆನಂದ ಮಾರ್ಗ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಭದ್ರಾವತಿ ಹೊಸಮನೆ ಹನುಮಂತನಗರದ ಆನಂದ ಮಾರ್ಗ ಶಾಲೆಯಲ್ಲಿ ಸೋಮವಾರ ಮಕ್ಕಳ ದಿನಾಚರಣೆ ವಿಶಿಷ್ಟವಾಗಿ ಅಚರಿಸಲಾಯಿತು. ಎಲ್ಲಾ ಮಕ್ಕಳಿಗೂ ಬಾಳೆಹಣ್ಣು, ಬಿಸ್ಕೆಟ್, ಬನ್ ಹಾಗು ಸಿಹಿ ವಿತರಿಸಿ ಮಕ್ಕಳ ದಿನಾಚರಣೆ ಶುಭ ಕೋರಲಾಯಿತು.
    ಭದ್ರಾವತಿ, ನ. ೧೪ : ಹೊಸಮನೆ ಹನುಮಂತನಗರದ ಆನಂದ ಮಾರ್ಗ ಶಾಲೆಯಲ್ಲಿ ಸೋಮವಾರ ಮಕ್ಕಳ ದಿನಾಚರಣೆ ವಿಶಿಷ್ಟವಾಗಿ ಅಚರಿಸಲಾಯಿತು.
    ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
    ಯೂನಿಯನ್ ಪ್ರಮುಖರು ಮಾತನಾಡಿ, ಮಕ್ಕಳು ಕಲಿಕೆಗೆ ಹೆಚ್ಚಿನ ಒತ್ತು ನೀಡುವಂತೆ ಕರೆ ನೀಡಲಾಯಿತು. ಶಾಲೆಯ ಮಾತಾಜಿ(ದೀದಿ) ಅಧ್ಯಕ್ಷತೆ ವಹಿಸಿದ್ದರು.
    ಶಾಲೆಯ ಎಲ್ಲಾ ಮಕ್ಕಳಿಗೂ ಬಾಳೆಹಣ್ಣು, ಬಿಸ್ಕೆಟ್, ಬನ್ ಹಾಗು ಸಿಹಿ ವಿತರಿಸಿ ಮಕ್ಕಳ ದಿನಾಚರಣೆ ಶುಭ ಕೋರಲಾಯಿತು.
ಯೂನಿಯನ್ ಪ್ರಮುಖರಾದ ಸುಂದರ್‌ಬಾಬು, ಚಂದ್ರಶೇಖರ್, ಸುರೇಶ್‌ಕುಮಾರ್, ಅಭಿಲಾಷ್, ಮನೋಹರ್, ಶಿವಣ್ಣಗೌಡ, ಬಿ.ಎಚ್ ನಾಗೇಂದ್ರರೆಡ್ಡಿ, ಕೃಷ್ಣ, ನಾರಾಯಣಸ್ವಾಮಿ, ಷಣ್ಮುಖ, ಪ್ರಕಾಶ್ ಹಾಗು ಶಾಲೆಯ ಶಿಕ್ಷಕಿಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.  


ಭದ್ರಾವತಿ ಹೊಸಮನೆ ಹನುಮಂತನಗರದ ಆನಂದ ಮಾರ್ಗ ಶಾಲೆಯಲ್ಲಿ ಸೋಮವಾರ ಮಕ್ಕಳ ದಿನಾಚರಣೆ ವಿಶಿಷ್ಟವಾಗಿ ಅಚರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.  

ಬಾಲಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಭದ್ರಾವತಿ ತರುಣ ಭಾರತಿ ವಿದ್ಯಾಕೇಂದ್ರ, ನ್ಯೂಕಾಲೋನಿ ಬಾಲಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಕ್ಕಳ ದಿನಾಚರಣೆ ನಡೆಯಿತು.
    ಭದ್ರಾವತಿ, ನ. ೧೪: ತರುಣ ಭಾರತಿ ವಿದ್ಯಾಕೇಂದ್ರ, ನ್ಯೂಕಾಲೋನಿ ಬಾಲಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಕ್ಕಳ ದಿನಾಚರಣೆ ನಡೆಯಿತು.
      ಈ ಶಾಲೆಯನ್ನು ಹಳೇಯ ವಿದ್ಯಾರ್ಥಿಗಳು ಮುನ್ನಡೆಸಿಕೊಂಡು ಹೋಗುತ್ತಿದ್ದು, ಪೂರ್ವ ಪ್ರಾಥಮಿಕದಿಂದ ೭ನೇ ತರಗತಿವರೆಗೂ ಉಚಿತ ಶಿಕ್ಷಣ ನೀಡುತ್ತಿರುವುದು ಈ ಶಾಲೆಯ ವಿಶೇಷತೆಯಾಗಿದೆ. ಸುಮಾರು ೮೦ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.
      ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ ಪ್ರಶಸ್ತಿಗಳನ್ನು ವಿತರಿಸಲಾಯಿತು. ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಎಲ್ಲಾ ಮಕ್ಕಳಿಗೂ ಸಿಹಿ ಹಂಚುವ ಮೂಲಕ ಉಚಿತವಾಗಿ ಮಗ್ಗಿ ಪುಸ್ತಕಗಳನ್ನು ವಿತರಿಸಲಾಯಿತು.
      ಶಾಲೆಯ ಮುಖ್ಯ ಶಿಕ್ಷಕಿ ಶಕುಂತಲ ಜನಾರ್ಧನ ಅಧ್ಯಕ್ಷತೆ ವಹಿಸಿದ್ದರು. ಎಮೆರೆಟಸ್ ಪ್ರೊಫೆಸರ್, ಸಾಹಿತಿ ಡಾ. ವಿಜಯದೇವಿ, ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್, ಗೌರವಾಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷೆ ಯಶೋಧ ವೀರಭದ್ರಪ್ಪ, ಕಾರ್ಯದರ್ಶಿ ಶೋಭ ಗಂಗರಾಜ್, ಖಜಾಂಚಿ ಜಯಂತಿ ನಾಗರಾಜ್‌ಶೇಟ್, ಸದಸ್ಯರಾದ ಕಲ್ಪನ ಮಂಜುನಾಥ್, ಭಾಗ್ಯ ನಿಜಗುಣ, ರೇಣುಕಾ ಚಂದ್ರಶೇಖರಯ್ಯ, ಶಕುಂತಲ, ವಾಣಿ ನಾಗರಾಜ್, ಅನ್ನಪೂರ್ಣ ಸತೀಶ್ ಸೇರಿದಂತೆ ಶಾಲೆಯ ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

೨೬ನೇ ವರ್ಷದ ಚಿದಂಬರ ಜಯಂತಿ



ಭದ್ರಾವತಿ ಹಳೇನಗರದ ಶ್ರೀ ರಾಮೇಶ್ವರ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಸೋಮವಾರ ೨೬ನೇ ವರ್ಷದ ಚಿದಂಬರ ಜಯಂತಿ ವಿಜೃಂಭಣೆಯಿಂದ ಜರುಗಿತು.  
    ಭದ್ರಾವತಿ, ನ. ೧೪ : ಹಳೇನಗರದ ಶ್ರೀ ರಾಮೇಶ್ವರ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಸೋಮವಾರ ೨೬ನೇ ವರ್ಷದ ಚಿದಂಬರ ಜಯಂತಿ ವಿಜೃಂಭಣೆಯಿಂದ ಜರುಗಿತು.  
    ಮುಂಜಾನೆ ಕಾಕಡಾರತಿ ನಡೆಸಿ ನಂತರ ಶ್ರೀ ರಾಮೇಶ್ವರ ದೇವರಿಗೆ ಅಭಿಷೇಕ, ಈಶ್ವರ ದೇವರಿಗೆ ರುದ್ರಾಭಿಷೇಕ, ರುದ್ರವೇದಮಂತ್ರ ಜರುಗಿತು. ದೇವರಿಗೆ ವಿಶೇಷ ಅಲಂಕಾರ ಕೈಗೊಂಡ ನಂತರ ಚಿದಂಬರರ ಭಾವಚಿತ್ರ ಪುಷ್ಪಾಲಂಕೃತ ಅಡ್ಡಪಲ್ಲಿಕ್ಕಿಯಲ್ಲಿರಿಸಿ ಮಂಗಳವಾದ್ಯದೊಂದಿಗೆ ಪುರಾಣಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದವರೆಗೂ ಉತ್ಸವ ಮೆರವಣಿಗೆ ನಡೆಸಲಾಯಿತು. ಕೊನೆಯಲ್ಲಿ ಉತ್ಸವ ಮೆರವಣಿಗೆ ಪುನಃ ಇದೆ ಮಾರ್ಗದಲ್ಲಿ ಹಿಂದಿರುಗಿ ದೇವಸ್ಥಾನ ತಲುಪಿತು.  
    ನಂತರ ಪಂಡಿತರಾದ ಪ್ರಕಾಶ ಮತ್ತು ಸೋಮಯಾಜಿಯವರಿಂದ ಚಿದಂಬರರ ಕುರಿತಂತೆ ಉಪನ್ಯಾಸ ನಡೆಯಿತು. ದೇವರಿಗೆ, ಗುರುಗಳಿಗೆ ಮಹಾಮಂಗಳಾರತಿ, ತೊಟ್ಟಿಲು ಪೂಜೆ ನಡೆಸಿ ಭಕ್ತಾದಿಗಳಿಗೆ ತೀರ್ಥಪ್ರಸಾದ ವಿತರಿಸಲಾಯಿತು
    ಸಮಿತಿ ಅಧ್ಯಕ್ಷ ದೇಶಪಾಂಡೆ, ಇಂದ್ರಸೇನ, ಜೆ.ಎನ್ ಆನಂದರಾವ್, ಸಿ.ಕೆ ರಾಮಣ್ಣ, ಮಂಜುನಾಥ್, ರಮಾಕಾಂತ, ಗಾಯತ್ರಿ, ಶೋಭ, ಗೀತಾ ಸೇರಿದಂತೆ ಭಕ್ತಾದಿಗಳು ಭಾಗವಹಿಸಿದ್ದರು.

ಪತ್ರಕರ್ತ ನಾಗರಾಜ್ ನಿಧನ

ಭದ್ರಾವತಿ, ನ. 14:  ಹಿರಿಯ ಪತ್ರಕರ್ತ, ತಾಲೂಕಿನ ಕಾರೆಹಳ್ಳಿ ಗ್ರಾಮದ ನಿವಾಸಿ ನಾಗರಾಜ್(69) ಭಾನುವಾರ  ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು.  
     ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಇದ್ದರು.  ಮೂಲತಃ ಶಿಕ್ಷಕರಾಗಿದ್ದ ನಾಗರಾಜ್ ರವರು ಸುಮಾರು 15 ವರ್ಷಗಳಿಗೂ ಹೆಚ್ಚಿನ  ಕಾಲ ಜಿಲ್ಲೆಯ ಹಲವು ಸ್ಥಳೀಯ ದಿನಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು.  
       ಕೆಲವು ವರ್ಷಗಳಿಂದ  ಅನಾರೋಗ್ಯ ಒಳಗಾಗಿ ವಿಶ್ರಾಂತಿ ಪಡೆಯುತ್ತಿದ್ದರು. ಇವರ ನಿಧನಕ್ಕೆ ನಗರದ ಪತ್ರಕರ್ತರು ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಸಮಾಜ ಸೇವೆ ಮಾಡುವ ಗುಣ ಬೆಳೆಸಿ ಕೊಳ್ಳಿ : ನಿವೃತ್ತ ಶಿಕ್ಷಕ ಎಸ್.ಬಿ ಹಿರೇಮಠ್

ಭದ್ರಾವತಿ ಬಿ.ಎಚ್ ರಸ್ತೆ ಹಾಲಪ್ಪ ವೃತ್ತದಲ್ಲಿರುವ ಭದ್ರಾ ಪ್ರೌಢಶಾಲೆಯಲ್ಲಿ ೧೯೮೭-೯೦ನೇ ಸಾಲಿನ ಹಳೇಯ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗು ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ, ನ. ೧೪: ಸಮಾಜದಲ್ಲಿ ಸೇವೆ ಮಾಡುವ ಗುಣ ಬೆಳೆಸಿಕೊಳ್ಳುವುದು ಗುರುಗಳಿಗೆ ನೀಡುವ ದೊಡ್ಡ ಗೌರವಾಗಿದೆ ಎಂದು ನಿವೃತ್ತ ಶಿಕ್ಷಕ ಎಸ್.ಬಿ ಹಿರೇಮಠ್ ಹೇಳಿದರು.
    ಅವರು ನಗರದ ಬಿ.ಎಚ್ ರಸ್ತೆ ಹಾಲಪ್ಪ ವೃತ್ತದಲ್ಲಿರುವ ಭದ್ರಾ ಪ್ರೌಢಶಾಲೆಯಲ್ಲಿ ೧೯೮೭-೯೦ನೇ ಸಾಲಿನ ಹಳೇಯ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾಗಿದ್ದ ಗುರುವಂದನೆ ಹಾಗು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಗುರುಗಳು ಹೇಳಿಕೊಡುವ ವಿದ್ಯೆಯಿಂದ ಉತ್ತಮ ವ್ಯಕ್ತಿತ್ವ ರೂಢಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಂಡಾಗ ಗುರುಗಳ ಬದುಕು ಸಾರ್ಥಕಗೊಳ್ಳುತ್ತದೆ. ಇಂದಿನ ಕಾಲಘಟ್ಟದಲ್ಲಿ ಹಳೇಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಕರೆತಂದು ಗುರು ವಂದನೆ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಈ ಬೆಳವಣಿಗೆ ಭವಿಷ್ಯದಲ್ಲಿ ತಮ್ಮ ಮಕ್ಕಳಿಗೂ ಸಹ ಸ್ಪೂರ್ತಿದಾಯಕವಾಗಬೇಕು. ಈ ಹಿನ್ನಲೆಯಲ್ಲಿ ಇಂತಹ ಕಾರ್ಯಕ್ರಮಗಳಿಗೆ ಅವರನ್ನು ಸಹ ಕರೆತರಬೇಕೆಂದರು.
    ೧೯೮೭-೯೦ನೇ ಸಾಲಿನಲ್ಲಿ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿರುವ ಎಸ್.ಬಿ ಹಿರೇಮಠ್, ಜಿ.ಟಿ ರುದ್ರಪ್ಪ, ಕೆ.ಜಿ ಸೋಮಶೇಖರ್, ಟಿ. ಲೋಕೇಶ್, ಜಿ. ವಿಮಲಮ್ಮ ಮತ್ತು ಎನ್.ಎಂ ಸುನಂದ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
    ಹಳೇವಿದ್ಯಾರ್ಥಿಗಳಾದ ಸುಧೀರ್, ಸ್ನೇಹಜೀವಿ ಪೊಲೀಸ್ ಉಮೇಶ್, ರವಿ, ಮಂಜುನಾಥ ಮೋರೆ, ರೂಪ, ಇಂದೂಮತಿ, ಮಂಜುನಾಥ್, ಮೇಘರಾಜ್, ಅಜಯ್, ಕೊಮಾರನಹಳ್ಳಿ ರವಿಕುಮಾರ್, ಸರೋಜಾ, ಜೋಸ್ನಾ, ಭವಾನಿ ದಂಪತಿ, ಪುಷ್ಪ, ಹಾಲಮ್ಮ, ರಾಘವೇಂದ್ರ ಹೆಗಡೆ, ರತ್ನಾಕರ್(ಎಎಸ್‌ಐ), ಕೂಡ್ಲಿಗೆರೆ ಸುರೇಖಾ, ಜನ್ನಾಪುರ ಲೋಕೇಶ್, ದೇವರಾಜ ಮತ್ತು ಜಿ. ಆನಂದಕುಮಾರ್ ಸೇರಿದಂತೆ ಸುಮಾರು ೫೦ ರಿಂದ ೬೦ ಹಳೇವಿದ್ಯಾರ್ಥಿಗಳು ಒಂದೆಡೆ ಸೇರಿ ತಮ್ಮ ಶಾಲಾ ದಿನದ ಹಳೇಯ ನೆನಪುಗಳನ್ನು ಮೆಲುಕು ಹಾಕಿಕೊಂಡರು.


    ಇದಕ್ಕೂ ಮೊದಲು ಹಾಲಪ್ಪವೃತ್ತದಲ್ಲಿರುವ ಶ್ರೀ ಗಣಪತಿ ದೇವಸ್ಥಾನದಲ್ಲಿ ಹಳೇಯ ವಿದ್ಯಾರ್ಥಿಗಳು ವಿಶೇಷ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ, ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಗುರುಗಳನ್ನು ಕರೆ ತಂದರು. ಮೆರವಣಿಗೆಯಲ್ಲಿ ಹಳೇಯ ವಿದ್ಯಾರ್ಥಿಗಳು ಕುಣಿದು ಸಂಭ್ರಮಿಸಿದರು.