
ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದಿಂದ ಬಿಇಡಿ ವಿಭಾಗದ ಪ್ರಶಿಕ್ಷಣಾರ್ಥಿಗಳಿಗಾಗಿ ಏರ್ಪಡಿಸಿದ್ದ `ಒಡಲಾಳ' ನಾಟಕ ಪ್ರದರ್ಶನದ ದೃಶ್ಯ.
ಭದ್ರಾವತಿ: ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ಆಶ್ರಯದಲ್ಲಿ ಬಿಇಡಿ ವಿಭಾಗದ ಪ್ರಶಿಕ್ಷಣಾರ್ಥಿಗಳಿಗಾಗಿ `ಒಡಲಾಳ' ನಾಟಕ ಪ್ರದರ್ಶನ ಮತ್ತು ರಂಗ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ ಎಸ್.ಪಿ ರಾಕೇಶ್ ತಮಟೆ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಜಾನಪದ ಕಲಾ ಸಂಘದ ಪ್ರಧಾನ ಕಾರ್ಯದರ್ಶಿ ತಮಟೆ ಜಗದೀಶ್, ಹಿರಿಯ ಕಲಾವಿದರಾದ ಕೆ.ಎಸ್ ರವಿಕುಮಾರ್, ವೈ.ಕೆ ಹನುಮಂತಯ್ಯ, ಬಿ. ಪ್ರವೀಣ್‌ಕುಮಾರ್, ದಿವಾಕರ್, ರತ್ನ, ಶಿಕ್ಷಕರ ವರ್ಗದವರು ಹಾಗು ನೂರಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ನಾಟಕದ ಅಭಿನಯ ಮಾಡಿದ ಇಂದು ಡಿ. ನೀನಾಸಂ ಅವರನ್ನು ಗೌರವಿಸಲಾಯಿತು. ರಂಗ ಭೂಮಿಯ ಕಲೆ ಗೀಳು, ಕಲೆಯ ಉಳಿವು, ಯುವ ಸಮೂಹದ ಪಾತ್ರ, ಜಾನಪದ ಅಳಿವು-ಉಳಿವು ಹಾಗು ನಾಟಕದಲ್ಲಿನ ಕೆಲ ವಿಚಾರಗಳ ಕುರಿತು ಶಿಕ್ಷಣಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಒಡಲಾಳ ನಾಟಕದ ಪ್ರಮುಖ ಸಾಕವ್ವನ ಪಾತ್ರದಾರಿ ರಂಗ ಕಲಾವಿದೆ ಇಂದು ಡಿ. ನೀನಾಸಂ ಮತ್ತು ತಮಟೆ ಜಗದೀಶ್ ಉತ್ತರಿಸಿದರು.
ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದಿಂದ ಬಿಇಡಿ ವಿಭಾಗದ ಪ್ರಶಿಕ್ಷಣಾರ್ಥಿಗಳಿಗಾಗಿ ಏರ್ಪಡಿಸಿದ್ದ `ಒಡಲಾಳ' ನಾಟಕದ ರಂಗ ಕಲಾವಿದೆ ಇಂದು ಡಿ. ನೀನಾಸಂ ಅವರನ್ನು ಆಡಳಿತಾಧಿಕಾರಿ ಡಾ: ಎಸ್.ಪಿ.ರಾಕೇಶ್ ಗೌರವಿಸಿದರು.
ನಾಟಕದ ಸಾರಾಂಶ:
ದಲಿತ ಕವಿ ದೇವನೂರು ಮಹಾದೇವರವರ ಕಾದಂಬರಿ "ಒಡಲಾಳ" ಆಯ್ದ ಭಾಗದ ನಾಟಕದಲ್ಲಿ, ಊರಿಗೆ ಹೊಸದಾಗಿ ಆಗಮಿಸಿದ ಪೊಲೀಸ್ ಅಧಿಕಾರಿಗೆ ಊರಿನ ಗೌಡನೋರ್ವ ಭಕ್ಷ್ಯ ಭೋಜನ ಮಾಡಿಸಲು ಕೋಳಿವೊಂದನ್ನು ಕದ್ದು ಅಡಿಗೆ ಮಾಡಿಸಿ ತಿನ್ನಿಸುತ್ತಾನೆ. ಕೆಳ ವರ್ಗದ ಬಡವಿ ಸಾಕವ್ವನಿಗೆ ಸೇರಿದ ಆ ಕೋಳಿ ತಿಂದು ತೇಗಿದ ಉಳ್ಳವರ ಮತ್ತು ಅದರಿಂದ ಕೋಳಿಯ ಒಡತಿ ಸಾಕವ್ವನಿಗಾಗುವ ಅನ್ಯಾಯ, ದಮನಿತರ ಶೋಷಿತ ವರ್ಗದ ಬೆಳಕು ಚೆಲ್ಲುವ ಹಾಗೂ ಪೊಲೀಸರ ದರ್ಪ, ಉಳ್ಳವರ ಅಟ್ಟಹಾಸ ಚಿತ್ರಣದ ಆಯ್ದ ಭಾಗದ ತಿರುಳನ್ನು ಬಲು ತೀಕ್ಷವಾಗಿ ತೆರೆದಿಡುವಲ್ಲಿ ಸಾಕವ್ವನ ಪಾತ್ರ ನೋಡುಗರಿಗೆ ಮನಸೂರೆಗೊಂಡಿತು.