Thursday, January 21, 2021

ಭದ್ರಾವತಿಯಲ್ಲಿ ಭೂಮಿ ಕಂಪನ : ಆತಂಕಗೊಂಡ ಜನರು

ಭದ್ರಾವತಿ : ನಗರಸಭೆ ವ್ಯಾಪ್ತಿಯ ಸಿದ್ದಾಪುರ ಮತ್ತು ಜನ್ನಾಪುರ  ಭಾಗದಲ್ಲಿ  ರಾತ್ರಿ ಸುಮಾರು 10.30ರ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. 

   ಭಯಭೀತರಾದ ಜನರು ಮನೆಗಳಿಂದ ಹೊರ ಬಂತು ಭೂಮಿ ಕಂಪನದ ಬಗ್ಗೆ ಆತಂಕ ವ್ಯಕ್ತಪಡಿಸಿದರು.  ಆದರೆ ಇದುವರೆಗೂ ಯಾವುದೇ ದುರ್ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ. 

ಜ.೨೪ರಂದು ೪೩ನೇ ವರ್ಷದ ಸಂಭಮದ ಸಮಾರಂಭ

ಭದ್ರಾವತಿ, ಜ. ೨೧: ನಗರದ ಬೈಪಾಸ್ ರಸ್ತೆ ಉಜ್ಜನಿಪುರದಲ್ಲಿರುವ ಕುರುಹೀನಶೆಟ್ಟಿ ಸಂಘದ ೪೩ನೇ ವರ್ಷದ ಸಂಭ್ರಮ ಸಮಾರಂಭ ಜ.೨೪ರಂದು ನಡೆಯಲಿದೆ.
    ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಎನ್ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಬಿ.ಕೆ ಸಂಗಮೇಶ್ವರ್, ತಾಲೂಕು ದೇವಾಂಗ ಸಂಘದ ಅಧ್ಯಕ್ಷ ಎಂ. ಪ್ರಭಾಕರ್, ನಗರಸಭೆ ಸದಸ್ಯೆ ವಿಶಾಲಾಕ್ಷಿ, ಮಹಿಳಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಚಂದ್ರಶೇಖರ್, ಸಂಘದ ಅಧ್ಯಕ್ಷ ಎನ್.ಆರ್ ಜಯರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

ಜ.೨೩ರಂದು ಶ್ರೀ ಷಹಾಜಿ ರಾಜೆ ಬೋಂಸ್ಲೆ ಪುಣ್ಯರಾಧನೆ

ಭದ್ರಾವತಿ, ಜ. ೨೧: ಶ್ರೀ ಷಹಾಜಿ ರಾಜೆ ಬೋಸ್ಲೇರವರ ೩೫೭ನೇ ಪುಣ್ಯರಾಧನೆ ಜ.೨೩ರಂದು ಬೆಳಿಗ್ಗೆ ೧೧ ಗಂಟೆಗೆ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿರುವ ಶ್ರೀ ಷಹಾಜಿ ರಾಜೆ ಬೋಂಸ್ಲೆರವರ ಸ್ಮಾರಕದ ಆವರಣದಲ್ಲಿ ನಡೆಯಲಿದೆ.
    ಶ್ರೀ ಮಂಜುನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ತಾಲೂಕಿನ ಮರಾಠ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘ ಕೋರಿದೆ.

ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಅಚರಣೆ

ಭದ್ರಾವತಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಗುರುವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ಸರಳವಾಗಿ ಅಚರಿಸಲಾಯಿತು.
     ಭದ್ರಾವತಿ, ಜ. ೨೧: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಗುರುವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ಸರಳವಾಗಿ ಅಚರಿಸಲಾಯಿತು.
      ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಜಯಂತಿ ಆಚರಣೆಗೆ ಚಾಲನೆ ನೀಡಲಾಯಿತು.
ಶಾಸಕ ಬಿ.ಕೆ ಸಂಗಮೇಶ್ವರ್, ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ಗಂಗಾಮತಸ್ಥರ ಸಂಘದ ಪ್ರಮುಖರಾದ ಯಲ್ಲಪ್ಪ ಹಾಗು ಪದಾಧಿಕಾರಿಗಳು ಮತ್ತು ತಾಲೂಕು ಕಛೇರಿ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪೊಕ್ಸೋ ಕಾಯಿದೆ ಕುರಿತು ಹೆಚ್ಚಿನ ಅರಿವು ಹೊಂದಿ


ಭದ್ರಾವತಿ : ದೇಶದಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ ಪೊಕ್ಸೋ ಕಾಯಿದೆಯನ್ನು ಜಾರಿಗೆ ತರುವ ಮೂಲಕ ರಕ್ಷಣೆಗೆ ಮುಂದಾಗಿದ್ದು, ಹೆಣ್ಣುಮಕ್ಕಳು ಈ ಕಾಯಿದೆ ಕುರಿತು ಹೆಚ್ಚಿನ ಅರಿವು ಹೊಂದಬೇಕೆಂದು ನ್ಯಾಯವಾದಿ ಟಿ ಚಂದ್ರೇಗೌಡ ತಿಳಿಸಿದರು.
    ಅವರು ಗುರುವಾರ ನ್ಯೂಟೌನ್ ಸರ್ ಎಂ ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ತಾಲೂಕು  ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸರ್ ಎಂ ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು,  ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ  ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
     ದೇಶದಲ್ಲಿ  ಅಪ್ರಾಪ್ತ ಬಾಲಕಿಯರ ಮೇಲಿನ ಪ್ರಕರಣಗಳು  ಹೆಚ್ಚಾಗುತ್ತಿರುವುದು ಒಂದೆಡೆ ವಿಷಾದನೀಯ ಬೆಳವಣಿಗೆಯಾಗಿದೆ. ಅತ್ಯಾಚಾರ ಬಾಲ್ಯ ವಿವಾಹ, ಅಪ್ರಾಪ್ತ ಬಾಲಕಿಯರ ಮಾರಾಟ    ಸೇರಿದಂತೆ ಹಲವು  ಪ್ರಕರಣಗಳಲ್ಲಿ  ಪ್ರತ್ಯಕ್ಷ, ಪರೋಕ್ಷವಾಗಿ ಭಾಗಿಯಾದ ಎಲ್ಲರನ್ನೂ ಕಠಿಣವಾಗಿ ಶಿಕ್ಷಿಸುವ  ವ್ಯವಸ್ಥೆ ರೂಪಿಸಲಾಗಿದ್ದು, ಈ ನಿಟ್ಟಿನಲ್ಲಿ ಪೊಕ್ಸೋ ಕಾಯ್ದೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂದರು.   
       ಕಾರ್ಯಕ್ರಮವನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಟಿ.ಪಿ ಪುರುಷೋತ್ತಮ್ ಉದ್ಘಾಟಿಸಿದರು.  ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಜಿ ಉಮಾಶಂಕರ್  ಅಧ್ಯಕ್ಷತೆ ವಹಿಸಿದ್ದರು . ತಾಲೂಕು  ವಕೀಲರ ಸಂಘದ ಅಧ್ಯಕ್ಷ ವಿ. ವೆಂಕಟೇಶ್, ಉಪಾಧ್ಯಕ್ಷ ಜಯರಾಮ್, ಕಾರ್ಯದರ್ಶಿ ಟಿ ಎಸ್ ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
     ವಿದ್ಯಾರ್ಥಿನಿ ಸುಪ್ರಿಯಾ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಡಾ ಬಿ.ಎಂ ನಾಸಿರ್ ಖಾನ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಎಸ್ ವರದರಾಜು ನಿರೂಪಿಸಿದರು. ಡಾ. ದ್ರಾಕ್ಷಾಯಿಣಿ ಎಂ ಡೋಂಗ್ರೆ ವಂದಿಸಿದರು. 
   ಕಾಲೇಜಿನ ವಿವಿಧ ವಿಭಾಗಗಳ ಸಹಾಯಕ  ಪ್ರಾಧ್ಯಾಪಕರಾದ ಡಾ. ಮಂಜುನಾಥ್, ಡಾ. ಸಕ್ರಿ ನಾಯ್ಕ್,  ಫರ್ಹಾನ ಅಂಜುಮ್, ವಿಶ್ವನಾಥ್ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.