Tuesday, January 4, 2022

ಎಎಪಿ ಪುನರ್ ಸಂಘಟನೆ : ಹಂಗಾಮಿ ಸಮಿತಿ ರಚನೆ

ಸಂಚಾಲಕಾಗಿ ಅಬ್ದುಲ್ ಖದೀರ್ ನೇಮಕ

ಭದ್ರಾವತಿಯಲ್ಲಿ ಜರುಗಿದ ಆಮ್ ಆದ್ಮಿ ಪಾರ್ಟಿ ನಗರ ಕಾರ್ಯಕರ್ತರ ಸಭೆಯಲ್ಲಿ ನೂತನ ಸಂಘಟನಾ ಸಂಚಾಲಕ ಮನೋಹರ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಜ. ೪: ದೆಹಲಿ ಮೂಲಕ ಹಂತ ಹಂತವಾಗಿ ದೇಶದ ಇತರೆ ರಾಜ್ಯಗಳಿಗೂ ವಿಸ್ತರಿಸಿಕೊಳ್ಳುತ್ತಿರುವ ಆಮ್ ಆದ್ಮಿ ಪಾರ್ಟಿ ಇದೀಗ ತಾಲೂಕಿನಲ್ಲಿ ಪಕ್ಷವನ್ನು ಪುನರ್ ಸಂಘಟಿಸಲು ಮುಂದಾಗಿದ್ದು, ಪ್ರಸ್ತುತ ೫ ಜನರ ನೂತನ ಹಂಗಾಮಿ ಸಮಿತಿ ರಚಿಸಲಾಗಿದೆ.
    ಜಿಲ್ಲಾ ಸಂಘಟನಾ ಸಂಚಾಲಕ ಮನೋಹರ ಗೌಡ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ನಗರ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಹಿರಿಯರಾದ ಪರಮೇಶ್ವರಚಾರ್, ಎಚ್. ರವಿಕುಮಾರ್, ಪೀಟರ್, ರೇಷ್ಮಬಾನು ಮತ್ತು ಅಬ್ದುಲ್ ಖದೀರ್ ಸೇರಿದಂತೆ ೫ ಜನರನ್ನೊಳಗೊಂಡ ಹಂಗಾಮಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಗೆ ಅಬ್ದುಲ್ ಖದೀರ್ ಅವರನ್ನು ತಾಲೂಕು ಸಂಚಾಲಕರಾಗಿ ನೇಮಕಗೊಳಿಸಲಾಗಿದೆ.
    ಸಭೆಯಲ್ಲಿ ನೂತನ ಜಿಲ್ಲಾ ಸಂಘಟನಾ ಸಂಚಾಲಕ ಮನೋಹರ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಭೆಯಲ್ಲಿ ಸುರೇಶ ಕೋಟೆಕರ್, ಅರವಿಂದ್, ಕಿರಣ್, ಲಕ್ಷ್ಮೀಶ್, ಶಶಿಧರ್, ವಿನಯ್, ರಮೇಶ್, ಬಸವಕುಮಾರ್, ಮಹಮ್ಮದ್ ಪರ್ವೀಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶಿಕ್ಷಣ ಕ್ಷೇತ್ರಕ್ಕೆ ಸಾವಿತ್ರಿ ಬಾಯಿ ಪುಲೆ, ಜ್ಯೋತಿ ಬಾಪುಲೆ ಕೊಡುಗೆ ಅಪಾರ : ಜಗನ್ನಾಥ ಡಾಂಗೆ

ಕರ್ನಾಟಕ ದಲಿತ ನೌಕರರ ಒಕ್ಕೂಟದ ವತಿಯಿಂದ ಭದ್ರಾವತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಕ್ಷರದವ್ವ ಶ್ರೀಮಾತೆ ಸಾವಿತ್ರಿ ಬಾಯಿ ಪುಲೆ ಅವರ ೧೯೧ನೇ ಜಯಂತಿ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಜ. ೪: ಶಿಕ್ಷಣ ಕ್ಷೇತ್ರಕ್ಕೆ ಸಾವಿತ್ರಿ ಬಾಯಿ ಪುಲೆ ಮತ್ತು ಜ್ಯೋತಿ ಬಾಪುಲೆ ಅವರ ಕೊಡುಗೆ ಅಪಾರವಾಗಿದ್ದು, ಈ ದಂಪತಿ ಸಾಧನೆಯನ್ನು ಯಾರು ಮರೆಯುವಂತಿಲ್ಲ ಎಂದು ಕುವೆಂಪು ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಜಗನ್ನಾಥ ಡಾಂಗೆ ಹೇಳಿದರು.
    ಅವರು ಕರ್ನಾಟಕ ದಲಿತ ನೌಕರರ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಕ್ಷರದವ್ವ ಶ್ರೀಮಾತೆ ಸಾವಿತ್ರಿ ಬಾಯಿ ಪುಲೆ ಅವರ ೧೯೧ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮಹಿಳೆಯರು ಮನೆಯಿಂದ ಹೊರಬರದಿರುವಂತಹ ಕಾಲಘಟ್ಟದಲ್ಲಿ ಶಿಕ್ಷಣವನ್ನು ಕಲಿತು ಶಿಕ್ಷಣದೊಂದಿಗೆ ಜ್ಞಾನದ ಮಹತ್ವವನ್ನು ತಿಳಿಸಿಕೊಟ್ಟ ಮೊದಲ ಮಹಿಳೆ ಸಾವಿತ್ರಿ ಬಾಯಿ ಪುಲೆ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು.
    ಸಾವಿತ್ರಿ ಬಾಯಿ ಪುಲೆ ಮತ್ತು ಜ್ಯೋತಿ ಬಾಪುಲೆ ಇಬ್ಬರು ಸಹ ತಮ್ಮ ಬದುಕನ್ನು ಕೇವಲ ಶಿಕ್ಷಣಕ್ಕೆ ಮೀಸಲಿಡದೆ ಜಾತಿ, ಲಿಂಗ ತಾರತಮ್ಯ ಹಾಗು ಅನಿಷ್ಟ ಪದ್ದತಿಗಳ ನಿರ್ಮೂಲನೆ ಸೇರಿದಂತೆ ಸಾಮಾಜಿಕ ಸುಧಾರಣೆಗಾಗಿ ಹೋರಾಟ ನಡೆಸಿರುವುದು ವಿಶೇಷವಾಗಿದೆ. ಪ್ರಸ್ತುತ ಈ ದಂಪತಿಯ ಆದರ್ಶತನವನ್ನು ಸಮಾಜದ ಎಲ್ಲರಿಗೂ ಮೈಗೂಡಿಸಿಕೊಳ್ಳಬೇಕಾಗಿದೆ. ಆಗ ಮಾತ್ರ ಇವರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದರು.
    ತಹಸೀಲ್ದಾರ್ ಆರ್. ಪ್ರದೀಪ್ ಮಾತನಾಡಿ, ಸಾವಿತ್ರಿ ಬಾಯಿ ಪುಲೆ ಮತ್ತು ಜ್ಯೋತಿ ಬಾಪುಲೆ ಅವರು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ವಿಶೇಷವಾಗಿ ಸ್ಮರಿಸಿದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಡಿಎಸ್‌ಎಸ್  ರಾಜ್ಯ ಖಜಾಂಚಿ ಸತ್ಯ, ಜಿಲ್ಲಾ ಸಂಚಾಲಕ ಚಿನ್ನಯ್ಯ ಸೇರಿದಂತೆ ಇನ್ನಿತರರು ಮಾತನಾಡಿದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ದಲಿತ ನೌಕರರ ಒಕ್ಕೂಟದ ಕಾರ್ಯಾಧ್ಯಕ್ಷ ಸಿ. ಜಯಪ್ಪ, ಡಿಎಸ್‌ಎಸ್ ತಾಲೂಕು ಸಂಚಾಲಕ ಕೆ. ರಂಗನಾಥ್, ನಗರಸಭಾ ಸದಸ್ಯ ಬಸವರಾಜ ಬಿ. ಆನೇಕೊಪ್ಪ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಶಾರದಮ್ಮ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಒಕ್ಕೂಟದ ಅಧ್ಯಕ್ಷೆ ಎಸ್. ಉಮಾ ಅಧ್ಯಕ್ಷತೆ ವಹಿಸಿದ್ದರು. ಈಶ್ವರಪ್ಪ  ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಎ. ತಿಪ್ಪೇಸ್ವಾಮಿ ಸೇರಿದಂತೆ ದಲಿತ ನೌಕರರು, ಮಹಿಳೆಯರು ಪಾಲ್ಗೊಂಡಿದ್ದರು.

ಡಿ.ಕೆ ಸುರೇಶ್ ವಿರುದ್ಧ ಬಿಜೆಪಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ

ರಾಮನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವ ಡಾ. ಅಶ್ವಥ್ ನಾರಾಯಣ್ ವಿರುದ್ಧ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಗೂಂಡಾಗಿರಿ ವರ್ತನೆ ಖಂಡಿಸಿ ಮಂಗಳವಾರ ಭದ್ರಾವತಿ ಮಾಧವಚಾರ್ ವೃತ್ತದಲ್ಲಿ ಬಿಜೆಪಿ ಮಂಡಲ ವತಿಯಿಂದ ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಜ. ೪: ರಾಮನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವ ಡಾ. ಅಶ್ವಥ್ ನಾರಾಯಣ್ ವಿರುದ್ಧ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಗೂಂಡಾಗಿರಿ ವರ್ತನೆ ಖಂಡಿಸಿ ಮಂಗಳವಾರ ನಗರದ ಮಾಧವಚಾರ್ ವೃತ್ತದಲ್ಲಿ ಬಿಜೆಪಿ ಮಂಡಲ ವತಿಯಿಂದ ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಲಾಯಿತು.
    ಡಿ.ಕೆ ಸುರೇಶ್ ಗೂಂಡಾಗಿರಿತನದಿಂದ ವರ್ತಿಸಿರುವುದು ಅಕ್ಷಮ್ಯ ಅಪರಾಧವಾಗಿದ್ದು, ತಕ್ಷಣ ನಾಡಿನ ಜನತೆಗೆ ಕ್ಷಮೆಯಾಚಿಸಬೇಕು. ಅಲ್ಲದೆ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುವ ಜೊತೆಗೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಪ್ರತಿಕೃತಿ ದಹಿಸಲಾಯಿತು.


    ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ನೇತೃತ್ವ ವಹಿಸಿದ್ದರು.  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಬಿ.ಕೆ.ಶ್ರೀನಾಥ್, ಜಿ. ಧರ್ಮಪ್ರಸಾದ್, ಭೋವಿ ನಿಗಮದ ನಿರ್ದೇಶಕ ಜಿ. ಆನಂದ ಕುಮಾರ್, ಹಟ್ಟಿ ಚಿನ್ನದ ಗಣಿ ಕಂಪನಿ ಆಡಳಿತ ಮಂಡಳಿ ನಿರ್ದೇಶಕ ಕೂಡ್ಲಿಗೆರೆ ಹಾಲೇಶ್, ನಗರಸಭಾ ಸದಸ್ಯರಾದ ವಿ. ಕದಿರೇಶ್, ಅನುಪಮ ಚನ್ನೆಶ್, ಮುಖಂಡರಾದ , ಎಂ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಚನ್ನೆಶ್, ಯುವ ಮೋರ್ಚಾ ಅಧ್ಯಕ್ಷ ವಿಜಯ್‌ರಾಜ್, ಎಸ್‌ಸಿ ಮೋರ್ಚಾ ಅಧ್ಯಕ್ಷ ಪಿ. ಗಣೇಶ್‌ರಾವ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ  ಆರ್.ಎಸ್. ಶೋಭಾ, ಮಹಿಳಾ ಮೋರ್ಚಾಅಧ್ಯಕ್ಷೆ ಶೋಭಾ ಪಾಟೀಲ್, ಕಾರ್ಯದರ್ಶಿ ಮಂಜುಳ, ಸುಲೋಚನಾ ಪ್ರಕಾಶ್, ಅನ್ನಪೂರ್ಣ ಸಾವಂತ್, ಹೇಮಾವತಿ ಕುಟ್ಟಿ, ಉಷಾ, ಕರುಣಾಕರ, ಆಟೋ ಮೂರ್ತಿ, ಚಂದ್ರು, ಓಬಿಸಿ ಅಧ್ಯಕ್ಷ ಸುಬ್ರಮಣಿ, ಕೆ.ಆರ್ ಸತೀಶ್, ರಾಮನಾಥ ಬರ್ಗೆ, ಬಿ.ಎಸ್ ಶ್ರೀನಾಥ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
    ಪ್ರತಿಭಟನೆಯಿಂದಾಗಿ ಸುಮಾರು ಅರ್ಧಗಂಟೆಗೂ ಹೆಚ್ಚು ಸಮಯ ವಾಹನ ದಟ್ಟಣೆ ಅಧಿಕಗೊಂಡು ಸಂಚಾರ ವ್ಯವಸ್ಥೆ ಅಸ್ತವ್ಯಸ್ತ ಗೊಂಡಿತ್ತು.