ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ
ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ, ಯಡೇಹಳ್ಳಿ ಸರ್ವೆ ನಂ.೬೬ರ ೧೯೬೦-೬೧ನೇ ಸಾಲಿನಲ್ಲಿ ಮಂಜೂರು ಮಾಡಿದ ಜಮೀನಿನ ಖಾತೆ ಪತ್ರಗಳನ್ನು ರದ್ದುಪಡಿಸಿರುವ ಕ್ರಮ ಖಂಡಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿ ಮನವಿ ಸಲ್ಲಿಸಲಾಯಿತು.
ಭದ್ರಾವತಿ: ತಾಲೂಕಿನ ಹೊಳೆಹೊನ್ನೂರು ಹೋಬಳಿ, ಯಡೇಹಳ್ಳಿ ಸರ್ವೆ ನಂ.೬೬ರ ೧೯೬೦-೬೧ನೇ ಸಾಲಿನಲ್ಲಿ ಮಂಜೂರು ಮಾಡಿದ ಜಮೀನಿನ ಖಾತೆ ಪತ್ರಗಳನ್ನು ರದ್ದುಪಡಿಸಿರುವ ಕ್ರಮ ಖಂಡಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿ ಮನವಿ ಸಲ್ಲಿಸಲಾಯಿತು.
ಯಡೇಹಳ್ಳಿ ಗ್ರಾಮದ ಸರ್ವೆ ನಂ. ೬೬ರಲ್ಲಿ ೧೯೬೦-೬೧ನೇ ಸಾಲಿನಲ್ಲಿ ಸರ್ಕಾರ ೩೦ ಜನರಿಗೆ ತಲಾ ೨ ಎಕರೆ ಜಮೀನಿನಂತೆ ಒಟ್ಟು ೬೬ ಎಕರೆ ಜಮೀನನ್ನು ಮಂಜೂರು ಮಾಡಿ ಆದೇಶಿಸಿತ್ತು. ಈ ನಡುವೆ ೧೯೮೦ ರಿಂದ ಅರಣ್ಯ ಜಮೀನು ಎಂದು ರೈತರ ಮೇಲೆ ಅನೇಕ ಮೊಕದ್ದಮೆಗಳನ್ನು ದಾಖಲಿಸುವ ಜೊತೆಗೆ ೨೦೨೪ರಲ್ಲಿ ಸಾಗುವಳಿ ಮಾಡುತ್ತಿದ್ದ ರೈತರ ಜಮೀನನ್ನು ಕಿತ್ತುಕೊಂಡು ಅವರುಗಳ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿತ್ತು ಎಂದು ಧರಣಿನಿರತರು ಆರೋಪಿಸಿದರು.
೨೦೨೦ರಲ್ಲಿ ಬೆಂಗಳೂರು ಪ್ರಾದೇಶಿಕ ಕಛೇರಿಯ ಆಯುಕ್ತರು ಸರ್ವೆ ನಂ : ೬೬ರ ಜಮೀನು ಅರಣ್ಯ ಎಂದು ರದ್ದುಗೊಳಿಸಿ ಬದಲಿ ಜಮೀನು ನೀಡಲು ಆದೇಶಿಸಿದ್ದರು. ಆದರೆ ೨೦೧೦ ರಿಂದ ೨೦ ರವರೆಗೂ ಬೆಂಗಳೂರು ಆರ್.ಸಿ ಕಛೇರಿಯಲ್ಲಿ ಪ್ರಕರಣ ನಡೆಯುತ್ತಿರುವಾಗಲೇ ಆಕ್ರಮವಾಗಿ ಸರ್ವೆ ನಂ. ೬೬ರ ಜಮೀನಿನ ಪೈಕಿ ೧೮ ಎಕರೆ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಬದಲಾವಣೆ ಮಾಡಿ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂದು ಧರಣಿನಿರತರು ದೂರಿದರು. ಈ ಅಕ್ರಮಕ್ಕೆ ಕಾರಣಕರ್ತರಾಗಿರುವ ತಾಲೂಕು ಕಛೇರಿಯ ಕಂದಾಯ ಅಧಿಕಾರಿಗಳು ಮತ್ತು ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ವೆ ನಂ.೬೬ರ ಸಾಗುವಳಿದಾರರಿಗೆ ಅದೇ ಜಮೀನಿನ ಸಾಗುವಳಿದಾರರನ್ನಾಗಿ ಮುಂದುವರೆಸಬೇಕೆಂದು ಆಗ್ರಹಿಸಿದರು.
ಧರಣಿ ಸತ್ಯಾಗ್ರಹ ಸ್ಥಳಕ್ಕೆ ತಹಸೀಲ್ದಾರ್ ಪರುಸಪ್ಪ ಕುರುಬರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಆಗಮಿಸಿ ಮನವಿ ಸ್ವೀಕರಿಸಿ ಸಮಸ್ಯೆ ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷ ಬಿ.ಎನ್ ರಾಜು ಧರಣಿ ಸತ್ಯಾಗ್ರಹ ನೇತೃತ್ವವಹಿಸಿದ್‌ದರು.