Sunday, November 24, 2024

ಸರ್ಕಾರದಿಂದ ಮಂಜೂರಾದ ಜಮೀನು ಮೂಲ ವಾರಸುದಾರರಿಗೆ ಬಿಡಿಸಿಕೊಡಲು ಆಗ್ರಹಿಸಿ ಪ್ರತಿಭಟನೆ

ಸರ್ಕಾರದಿಂದ ಪರಿಶಿಷ್ಟ ಜಾತಿ/ಪಂಗಡದವರಿಗೆ ಮಂಜೂರಾಗಿರುವ ಜಮೀನು ನ್ಯಾಯಾಲಯದ ಆದೇಶದಂತೆ ಪಿಟಿಸಿಎಲ್ ಕಾಯ್ದೆಯಡಿ ಮೂಲ ಜಮೀನುದಾರರಿಗೆ ಬಿಡಿಸಿಕೊಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಭದ್ರಾವತಿ ತಾಲೂಕಿನ ಹಳ್ಳಿಕೆರೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಯಿತು. 
    ಭದ್ರಾವತಿ: ಸರ್ಕಾರದಿಂದ ಪರಿಶಿಷ್ಟ ಜಾತಿ/ಪಂಗಡದವರಿಗೆ ಮಂಜೂರಾಗಿರುವ ಜಮೀನು ನ್ಯಾಯಾಲಯದ ಆದೇಶದಂತೆ ಪಿಟಿಸಿಎಲ್ ಕಾಯ್ದೆಯಡಿ ಮೂಲ ಜಮೀನುದಾರರಿಗೆ ಬಿಡಿಸಿಕೊಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. 
    ಹಳ್ಳಿಕೆರೆ ಗ್ರಾಮದ ಸ.ನಂ ೧೪/೬ ರಲ್ಲಿ  ಸೋಮ್ಲಾನಾಯ್ಕ ಬಿನ್ ಭಜನಾನಾಯ್ಕ ರವರಿಗೆ (ಆರ್.ಆರ್ ನಂ.೧೫೨ ರಂತೆ ಆದೇಶ ನಂ.ಜಿ.ಡಿ ೩೫/೫೨-೫೩ ದಿನಾಂಕ: ೨೮-೧೧-೧೯೫೬ರ ರೀತ್ಯಾ ಸಾಗುವಳಿ ಚೀಟಿ ಸಂಖ್ಯೆ ೬೫/೫೬-೫೭) ೪ ಎಕರೆ ಜಮೀನು ೧೦ ವರ್ಷ ಪರಭಾರೆ ಮಾಡಬಾರದೆಂಬ ನಿಬಂಧನೆಗಳಿಗೆ ಒಳಪಟ್ಟು ದರಖಾಸ್ತಿನಡಿ ಮಂಜೂರಾಗಿತ್ತು. 
    ಸೋಮ್ಲಾನಾಯ್ಕ ಅವರಿಗೆ ಮಂಜೂರಾದ ಈ ಜಮೀನನ್ನು ಇತರೆ ವ್ಯಕ್ತಿಗಳು ಖರೀದಿಸಿದ್ದು, ಪಿಟಿಸಿಎಲ್ ಕಾಯ್ದೆಯಡಿ ಸರ್ಕಾರದ ಅನುಮತಿ ಇಲ್ಲದೆ ಜಮೀನು ಖರೀದಿಸುವಂತಿಲ್ಲ. ಈ ಹಿನ್ನಲೆಯಲ್ಲಿ ಜಮೀನಿನ ಸಂಬಂಧ ಉಪ ವಿಭಾಗಾಧಿಕಾರಿಗಳ ಪ್ರಾಧಿಕಾರದಲ್ಲಿ ವಿಚಾರಣೆ ನಡೆದು ಪಿ.ಟಿ.ಸಿ.ಎಲ್.ಸಿ ಆರ್.೦೬/೮೧-೮೨ ರ ದಿನಾಂಕ: ೨೪-೦೧-೧೯೮೬ ರಂತೆ ಆದೇಶವಾಗಿದ್ದು, ಈ ಆದೇಶದಂತೆ ಅಂದಿನಿಂದ ಇಂದಿನವರೆಗೂ ವಾರಸುದಾರರಿಗೆ ಜಮೀನಿನ ಸ್ವಾಧೀನತೆಯನ್ನು ಬಿಡಿಸಿಕೊಟ್ಟಿರುವುದಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. 
    ಈ ಸಂಬಂಧ ಉಪ ವಿಭಾಗಾಧಿಕಾರಿಗಳಿಗೆ ಜಮೀನು ಬಿಡಿಸಿಕೊಡುವಂತೆ ಮನವಿ ಸಲ್ಲಿಸಲಾಗಿತ್ತು. ಈ ಕುರಿತು ತಾಲೂಕು ಆಡಳಿತಕ್ಕೆ ನಿರ್ದೇಶನ ನೀಡಲಾಗಿದೆ. ಆದರೆ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ತಕ್ಷಣ ಜಮೀನು ಮೂಲ ಜಮೀನುದಾರರಿಗೆ ಬಿಡಿಸಿಕೊಡುವಂತೆ ಆಗ್ರಹಿಸಿದರು. 
    ಬಂಜಾರ ರೈತ ಸಂಘದ ರಾಜ್ಯಾಧ್ಯಕ್ಷ ಕೃಷ್ಣಾ ನಾಯ್ಕ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಚ್ ಹಾಲೇಶಪ್ಪ ಸೇರಿದಂತೆ ದಲಿತ ಮುಖಂಡರು, ಜಮೀನಿನ ಮೂಲ ವಾರಸುದಾರ ಕುಟುಂಬದವರು, ಸ್ಥಳೀಯರು ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ನ.೨೫ರಂದು ರಕ್ತದಾನ-ರಕ್ತ ಗುಂಪು ತಪಾಸಣೆ ಶಿಬಿರ



    ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಕಡದಕಟ್ಟೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ) ಮತ್ತು ಶಿವಮೊಗ್ಗ ರೋಟರಿ ರಕ್ತ ನಿಧಿ ಸಹಯೋಗದೊಂದಿಗೆ ದಿವಂಗತ ಡಾ. ಪಿ. ಪ್ರವೀಣ್ ಮತ್ತು ದಿವಂಗತ ಆರ್. ನಾರಾಯಣಸ್ವಾಮಿ ನಾಯ್ಡು ಸ್ಮರಣಾರ್ಥವಾಗಿ ನ.೨೫ರಂದು ರಕ್ತದಾನ ಹಾಗು ರಕ್ತ ಗುಂಪು ತಪಾಸಣೆ ಶಿಬಿರ ಆಯೋಜಿಸಲಾಗಿದೆ. 
    ಐಟಿಐ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಸ್ವಯಂ ಪ್ರೇರಿತ ರಕ್ತದಾನ ಹಾಗು ರಕ್ತ ಗುಂಪು ತಪಾಸಣೆ ಶಿಬಿರ ಬೆಳಿಗ್ಗೆ ೮.೩೦ ರಿಂದ ಮಧ್ಯಾಹ್ನ ೨ ಗಂಟೆವರೆಗೆ ನಡೆಯಲಿದ್ದು, ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಶಿಬಿರ ಉದ್ಘಾಟಿಸಲಿದ್ದಾರೆ. 
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ಐಟಿಐ ಆಡಳಿತಾಧಿಕಾರಿ ಎಸ್.ಎಲ್ ರಂಗನಾಥ್, ದಾನಿಗಳಾದ ಇಂಜಿನಿಯರ್ ಟಿ. ಪುಷ್ಪರಾಜ್ ಮತ್ತು ಆಲೆಮನೆ ಮಾಲೀಕ ಎನ್. ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಐಟಿಐ ಪ್ರಾಚಾರ್ಯ ಕಾಳಿದಾಸ ನಾಯ್ಕ ಅಧ್ಯಕ್ಷತೆ ವಹಿಸಲಿದ್ದು, ಶಿಬಿರ ಯಶಸ್ವಿಗೊಳಿಸಲು ಕೋರಲಾಗಿದೆ. 

ಶ್ರೀ ರವೀಂದ್ರನಾಥ ಠಾಗೂರ್ ಆಟೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ

ಭದ್ರಾವತಿ ನಗರದ ಜನ್ನಾಪುರ ಜಯಶ್ರೀ ಕಲ್ಯಾಣ ಮಂದಿರ ಮುಂಭಾಗದ ಶ್ರೀ ರವೀಂದ್ರನಾಥ ಠಾಗೂರ್ ಆಟೋ ನಿಲ್ದಾಣದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಭಾನುವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. 
    ಭದ್ರಾವತಿ: ನಗರದ ಜನ್ನಾಪುರ ಜಯಶ್ರೀ ಕಲ್ಯಾಣ ಮಂದಿರ ಮುಂಭಾಗದ ಶ್ರೀ ರವೀಂದ್ರನಾಥ ಠಾಗೂರ್ ಆಟೋ ನಿಲ್ದಾಣದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಭಾನುವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. 
    ಬೆಳಿಗ್ಗೆ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಯಿತು. ಈ ಬಾರಿ ವಿಶೇಷವಾಗಿ ಜನ್ನಾಪುರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ನಗರಸಭೆ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಅನ್ನಸಂತರ್ಪಣೆ ನೆರವೇರಿತು. 
    ಪ್ರಮುಖರಾದ ರಮೇಶ್ ನಾಯ್ಕ, ಪರಮೇಶ್, ಶಿವು, ಕಂಠ, ಸತೀಶ್, ಸೋಮಣ್ಣ, ರಾಜು, ವೆಂಕಟೇಶ್, ಎ.ಎನ್ ಬಸವರಾಜ್, ಪರಶುರಾಮ್, ವಿನೋದ್, ಬಾಬು, ಉದಯ್, ಸದಾನಂದ ಮತ್ತು ಮೋಹನ್ ಕುಮಾರ್ ಹಾಗು ಸ್ಥಳೀಯರು ಉಪಸ್ಥಿತರಿದ್ದರು.