Tuesday, July 4, 2023

ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರಿಗೆ ಎರಡು ದಿನಗಳ ಸಾಹಿತ್ಯ ರಸಗ್ರಹಣ ಶಿಬಿರ


    ಭದ್ರಾವತಿ, ಜು. ೪  : ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರು ಹಾಗು ಉರ್ದು ಶಾಲೆಗಳಲ್ಲಿ ಕನ್ನಡ ಶಿಕ್ಷಕರಿಗೆ ಪಠ್ಯವನ್ನು ಆಧರಿಸಿದ ಸಾಹಿತ್ಯ ರಸಗ್ರಹಣ ಶಿಬಿರ  ಜು.೬ ಮತ್ತು ೭ರಂದು  ಏರ್ಪಡಿಸಲಾಗಿದೆ.
    ನ್ಯೂಟೌನ್‌ ಎಸ್ಎವಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆಯಲಿರುವ ಶಿಬಿರವನ್ನು ಜು.೬ರ ಬೆಳಿಗ್ಗೆ ೧೦ ಗಂಟೆಗೆ ಶಾಸಕ ಬಿ. ಕೆ. ಸಂಗಮೇಶ್ವರ್ ಉದ್ಘಾಟಿಸಲಿದ್ದು,  ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ  ಶ್ರೀ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.    ‌
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ, ವಿಶ್ರಾಂತ ಪ್ರಾಧ್ಯಾಪಕ ಡಾ. ಕುಮಾರಚಲ್ಯ  ಆಧುನಿಕ ಕಾವ್ಯಗಳು, ಅವುಗಳನ್ನು ಪಾಠಮಾಡುವ ಕ್ರಮಗಳ ಕುರಿತು ಮಾತನಾಡಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಎ. ಕೆ. ನಾಗೇಂದ್ರಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ  ಬಿ. ಸಿದ್ಧಬಸಪ್ಪ, ವಿ. ಜಗದೀಶ್, ಕೋಡ್ಲು ಯಜ್ಞಯ್ಯ ಮತ್ತು ಪ್ರಶಾಂತ ಸಣ್ಣಕ್ಕಿ ಉಪಸ್ಥಿತರಿರುವರು.
     ವಿಶ್ರಾಂತ ಪ್ರಾಂಶುಪಾಲ, ಸಾಹಿತಿ ಡಾ. ಬಿ. ಎಂ ಜಯಶೀಲಾ  ಪ್ರಾಚೀನ ಕಾವ್ಯ ಓದು-ವಿಶ್ಲೇಷಣೆ ಕುರಿತು ಹಾಗು  ಹಳೆಗನ್ನಡ, ನಡುಗನ್ನಡ, ಗಮಕ ಓದು ವಾಚನ ಕುರಿತು  ಲಲಿತಮ್ಮ ವಿಠಲದಾಸ್ ಮಾಹಿತಿ ನೀಡಲಿದ್ದಾರೆ.   ಹಿರಿಯ ಸಾಹಿತಿ ವಿಶ್ರಾಂತ ಉಪನ್ಯಾಸಕ ಡಾ. ಶಾಂತಾರಾಮ್ ಪ್ರಭು  ಭಾಷೆ-ವ್ಯಾಕರಣ ಕುರಿತು ಮಾತನಾಡಲಿದ್ದಾರೆ. ವಿಶ್ರಾಂತ ಪ್ರಾಂಶುಪಾಲ, ಚಿಂತಕ ಡಾ. ಎಚ್. ಟಿ. ಕೃಷ್ಣಮೂರ್ತಿ ಕಾವ್ಯ ಮಿಮಾಂಸೆ - ಶೋಧನೆ ಕುರಿತು ಮಾಹಿತಿ ನೀಡಲಿದ್ದಾರೆ.
      ಜು. 7ರಂದು ಶುಕ್ರವಾರ ಬೆಳಿಗ್ಗೆ 10ಕ್ಕೆ ಕನ್ನಡ ಪಠ್ಯದಲ್ಲಿರುವ ಕಥೆ-ಪ್ರಬಂಧ ಗಳನ್ನು ಓದುವ, ವಿಶ್ಲೇಷಣೆ ಮಾಡುವ ಬಗೆಯನ್ನು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರಯ್ಯ ವಿವರಿಸುವರು. ವಚನ ಸಾಹಿತ್ಯ ಹಿರಿಮೆ ಕುರಿತು ಕಸ್ತೂರಿಬಾ ಬಾಲಿಕಾ ಪ್ರೌಢಶಾಲಾ ಶಿಕ್ಷಕರಾದ ಡಾ. ಬಿ. ಎಸ್. ತಂಬೂಳಿ ಅವರು ಮಾತನಾಡಲಿದ್ದಾರೆ. ಜನಪದ ಸಾಹಿತ್ಯ ಕುರಿತು ಡಾ. ಎಸ್. ಎಂ. ಮುತ್ತಯ್ಯ ಹಾಗು ಭಾಷಾ ಕೌಶಲ್ಯ-ಮಹತ್ವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಎ. ಕೆ. ನಾಗೇಂದ್ರಪ್ಪ ಮಾತನಾಡುವರು.  ಪಠ್ಯದಲ್ಲಿರುವ ನಾಟಕ ಕುರಿತು ಓದು, ಪ್ರದರ್ಶನ ಕುರಿತು ಉಪನ್ಯಾಸಕ, ರಂಗನಿರ್ದೇಶಕ ಡಾ. ಜಿ. ಆರ್. ಲವ ಮಾಹಿತಿ ನೀಡಲಿದ್ದಾರೆ.
    ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಲು, ಫಲಿತಾಂಶದಲ್ಲಿ ಪ್ರಗತಿ ಕಾಣುವ ಉದ್ದೇಶದಿಂದ ಸಾಹಿತ್ಯ ರಸಗ್ರಹಣ ಶಿಬಿರ ಏರ್ಪಡಿಸಲಾಗಿದೆ.  ಸರ್ಕಾರಿ, ಅನುದಾನ, ಅನುದಾನ ರಹಿತ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರು, ಉರ್ದು ಶಾಲೆಗಳ ಕನ್ನಡ ಭಾಷಾ ಶಿಕ್ಷಕರು ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳಲು ವೇದಿಕೆ ತಾಲೂಕು ಅಧ್ಯಕ್ಷೆ  ಎಂ.ಎಸ್  ಸುಧಾಮಣಿ  ಕೋರಿದ್ದಾರೆ. 

ಗುರು ಕೃಪೆಯಿಂದ ಎಲ್ಲವೂ ಸಾಧ್ಯ : ಶ್ರೀ ಕೃಷ್ಣಮೂರ್ತಿ ಸೋಮಯಾಜಿ

ಭದ್ರಾವತಿ ತಾಲೂಕು ಶಂಕರ ಸಮಿತಿ ಸಂಚಾಲಕರಾದ ವೇದಬ್ರಹ್ಮ ಶ್ರಿ ಕೃಷ್ಣ ಮೂರ್ತಿ ಸೋಮಯಾಜಿ ಜನ್ನಾಪುರ ಶ್ರೀ ಮಹಾಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುರುಪೂರ್ಣಿಮೆ ಕಾ‍ರ್ಯಕ್ರಮದ ನೇತೃತ್ವ ವಹಿಸಿ  ಮಾತನಾಡಿದರು.

    ಭದ್ರಾವತಿ, ಜು. : ಜೀವನದಲ್ಲಿ ಗುರು ಕೃಪೆಯಿಂದ  ಲೌಕಿಕ ಹಾಗೂ ಅಲೌಕಿಕ ಸಾಧನೆ ಗುರಿ ತಲುಪಲು ಸಾಧ್ಯ ಎಂದು ತಾಲೂಕು ಶಂಕರ ಸಮಿತಿ ಸಂಚಾಲಕರಾದ  ವೇದಬ್ರಹ್ಮ ಶ್ರಿ ಕೃಷ್ಣಮೂರ್ತಿ ಸೋಮಯಾಜಿ ಹೇಳಿದರು.

    ಅವರು ಜನ್ನಾಪುರ ಶ್ರೀ ಮಹಾಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುರುಪೂರ್ಣಿಮೆ ಕಾ‍ರ್ಯಕ್ರಮದ ನೇತೃತ್ವವಹಿಸಿ  ಮಾತನಾಡಿದರು

   ಗುರುಪೂರ್ಣಿಮೆ ಮಹತ್ವ ತಿಳಿಸಿಕೊಡಲಾಯಿತು. ಅಲ್ಲದೆ  ಭಜನೆ ಹಾಗೂ ಅಷ್ಟೋತ್ತರ ಪಠಣ ನಡೆಯಿತು.  ಜಯಲಕ್ಷ್ಮಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು.  ಎನ್ ಎಸ್ ಸುಬ್ರಹ್ಮಣ್ಯ ಸ್ವಾಗತಿಸಿ, ಸ್ವರ್ಣ ನಾಗೇಂದ್ರ ವಂದಿಸಿದರು