ಗುರುವಾರ, ಮಾರ್ಚ್ 20, 2025

ಫಲಾನುಭವಿ ದಂಪತಿಗೆ ಮಂಜೂರಾದ ಜಮೀನು ದೌರ್ಜನ್ಯ, ದಬ್ಬಾಳಿಕೆ, ಕುತಂತ್ರದ ಮೂಲಕ ವಶಕ್ಕೆ ಪಡೆಯಲು ಯತ್ನ

ನ್ಯಾಯಾಲಯದ ಆದೇಶ ಫಲಕ ಧ್ವಂಸ, ಕಂಗಲಾದ ದಂಪತಿ 

ಭದ್ರಾವತಿ ತಾಲೂಕಿನ ಹುಳಿಯಾರ್ ರಾಮನಕೊಪ್ಪ ಗ್ರಾಮದ ಸರ್ವೆ ನಂ. ೧೫ರಲ್ಲಿ ೪ ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಅಳವಡಿಸಲಾಗಿರುವ ನ್ಯಾಯಾಲಯದ ಆದೇಶದ ಫಲಕ ಧ್ವಂಸಗೊಳಿಸುತ್ತಿರುವುದು. 
    ಭದ್ರಾವತಿ: ಸರ್ಕಾರದಿಂದ ಮಂಜೂರಾಗಿರುವ ಸಾಗುವಳಿ ಜಮೀನನ್ನು ಮೂಲ ಫಲಾನುಭವಿ ದಂಪತಿಗೆ ವಂಚಿಸಿ ದೌರ್ಜನ್ಯ, ದಬ್ಬಾಳಿಕೆ ಹಾಗು ಕುತಂತ್ರದ ಮೂಲಕ ವಶಕ್ಕೆ ಪಡೆಯಲು ಯತ್ನಿಸುತ್ತಿರುವ ಘಟನೆ ನಡೆದಿದ್ದು, ಇದರಿಂದಾಗಿ ಬಡ ಕುಟುಂಬದವರು ಅತಂತ್ರರಾಗಿದ್ದಾರೆ. 
    ತಾಲೂಕಿನ ಹುಳಿಯಾರ್ ರಾಮನಕೊಪ್ಪ ಗ್ರಾಮದ ಸರ್ವೆ ನಂ. ೧೫ರಲ್ಲಿ ೪ ಎಕರೆ ವಿಸ್ತೀರ್ಣದ ಜಮೀನನ್ನು ೨೨ ಮಾರ್ಚ್, ೨೦೧೮ರಲ್ಲಿ ಗ್ರಾಮದ ನಿವಾಸಿ ಕೃಷ್ಣಪ್ಪ ಮತ್ತು ಇವರ ಪತ್ನಿ ಸಣ್ಣಮ್ಮ ಅವರಿಗೆ ಸಾಗುವಳಿಗಾಗಿ ಕೆಲ ಷರತ್ತಿನೊಂದಿಗೆ ಜಂಟಿ ಖಾತೆಯಲ್ಲಿ ಮಂಜೂರು ಮಾಡಿದ್ದು, ಅದರಂತೆ ೨೦೨೪-೨೫ನೇ ಸಾಲಿನ ಪಹಣಿ ಪ್ರತಿಯಲ್ಲೂ ಸಹ ಸ್ಪಷ್ಟವಾಗಿ ನಮೂದಾಗಿದೆ. ಅಲ್ಲದೆ ಪ್ರಸ್ತುತ ಜಮೀನು ಸಾಗುವಳಿ ಮಾಡಲಾಗುತ್ತಿರುತ್ತದೆ. 
    ಈ ನಡುವೆ ಇದೆ ಸರ್ವೆ ನಂ. ಜಮೀನು ವಿಭಾಗಿಸಿ ೧೯೯೬-೯೭ನೇ ಸಾಲಿನಲ್ಲಿ ದರಖಾಸ್ತು ಮೂಲಕ ವೆಂಕಟೇಶ ಅವರಿಗೆ ೩ ಎಕರೆ ಜಮೀನು ಹಾಗು ಇವರ ಪತ್ನಿ ನಂಜಮ್ಮ ಅವರಿಗೆ ೩ ಎಕರೆ ಜಮೀನು ಮಂಜೂರಾತಿ ಮಾಡಲಾಗಿದೆ. ಅಲ್ಲದೆ ೧೯೯೬-೯೭ನೇ ಸಾಲಿನಲ್ಲಿ ಸಾಗುವಳಿ ನೀಡಿ ಪ್ರಸ್ತುತ ಪಹಣಿ ಸಹ ಚಾಲ್ತಿಯಲ್ಲಿದೆ. ಆದರೆ ಮಂಜೂರಾದ ಜಮೀನು ವೆಂಕಟೇಶ್ ಮತ್ತು ಇವರ ಪತ್ನಿ ನಂಜಮ್ಮ ಅವರ ಅನುಭವದಲ್ಲಿ ಇರುವುದಿಲ್ಲ. 
    ಇದೊಂದು ವಿಚಿತ್ರ ಪ್ರಕರಣವಾಗಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರು ಪ್ರಕರಣದ ದಾಖಲಾತಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಕಾನೂನು ಅಭಿಪ್ರಾಯ ಸೂಚಿಸಿದ್ದು, ಕೃಷ್ಣಪ್ಪ ಮತ್ತು ಇವರ ಪತ್ನಿ ಸಣ್ಣಮ್ಮ ದಂಪತಿ ಜಮೀನಿನ ಜಂಟಿ ಮಾಲೀಕರಾಗಿದ್ದಾರೆಂದು ತಿಳಿಸಿದೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಶಾಶ್ವತ ನಿರ್ಬಂಧಕ ತಡೆಯಾಜ್ಞೆ ನೀಡಿದೆ. 
    ಇದೀಗ ಜಮೀನನ್ನು ದೌರ್ಜನ್ಯ, ದಬ್ಬಾಳಿಕೆ ಹಾಗು ಕುತಂತ್ರದ ಮೂಲಕ ವಶಕ್ಕೆ ಪಡೆಯಲು ಮುಂದಾಗಿದ್ದು, ಇದರಿಂದಾಗಿ ಕೃಷ್ಣಪ್ಪ ಮತ್ತು ಇವರ ಪತ್ನಿ ಸಣ್ಣಮ್ಮ ರಕ್ಷಣೆ ಕೋರಿದ್ದರು. ತಾಲೂಕು ಆಡಳಿತ ದಂಪತಿಗೆ ರಕ್ಷಣೆ ನೀಡಲು ಮುಂದಾಗಿದೆ. ಈ ನಡುವೆ ತಾಲೂಕು ಆಡಳಿತ ಜಮೀನಿನ ಸರ್ವೇ ನಡೆಸಿ ೪ ಎಕರೆ ಜಮೀನು ಗುರುತಿಸಿದೆ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಕಳೆದ ೩-೪ ದಿನಗಳ ಹಿಂದೆ ಜಮೀನಿನಲ್ಲಿ ಅಳವಡಿಸಲಾಗಿರುವ ನ್ಯಾಯಾಲಯದ ಆದೇಶದ ಫಲಕ ಧ್ವಂಸಗೊಳಿಸಿ ಜೆಸಿಬಿ ಹಾಗು ಟ್ರ್ಯಾಕ್ಟರ್ ಇನ್ನಿತರ ವಾಹನಗಳನ್ನು ಬಳಸಿ ಅಕ್ರಮವಾಗಿ ಜಮೀನು ಪ್ರವೇಶಿಸಿ ದೌರ್ಜನ್ಯ, ದಬ್ಬಾಳಿಕೆ ನಡೆಸಲಾಗಿದೆ. ಇದರಿಂದಾಗಿ ಬಡ ಕುಟುಂಬಕ್ಕೆ ದಾರಿ ದೋಚದಂತಾಗಿದೆ. ಈ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಮಧ್ಯ ಪ್ರವೇಶಿಸಿ ನ್ಯಾಯ ದೊರಕಿಸಿ ಕೊಡಬೇಕಾಗಿದೆ.   

ಮಹಿಳೆಯರಿಗೆ ಎಂದಿಗೂ ಸುರಕ್ಷತೆ ಇಲ್ಲ : ಆರ್.ಎಸ್ ಶೋಭಾ ಕಳವಳ


ಭದ್ರಾವತಿ ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಏರ್ಪಡಿಸಲಾಗಿತ್ತು. 
    ಭದ್ರಾವತಿ : ಇಂದಿಗೂ ಸಮಾಜದಲ್ಲಿ ಮಹಿಳೆಯರನ್ನು ನೋಡುವ ಭಾವನೆ ಬದಲಾಗಿಲ್ಲ. ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಮೇಲೆ ಹೆಚ್ಚಾಗುತ್ತಿರುವ ದೌರ್ಜನ್ಯಗಳನ್ನು ಗಮನಿಸಿದಾಗ ಮಹಿಳೆಯರಿಗೆ ಎಂದಿಗೂ ಸುರಕ್ಷತೆ ಇಲ್ಲ ಎಂಬ ಭಾವನೆ ಮೂಡುತ್ತಿದೆ ಎಂದು ನಗರದ ಜೆಎಂಎಫ್‌ಸಿ ನ್ಯಾಯಾಲಯದ ನೋಟರಿ ಆರ್.ಎಸ್ ಶೋಭಾ ಕಳವಳ ವ್ಯಕ್ತಪಡಿಸಿದರು. 
    ಅವರು ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
    ಮಹಿಳೆಯರು ಸಮಾಜದಲ್ಲಿ ಯಾವುದೇ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತರಾಗದೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸಿ ತಮ್ಮ ಇರುವಿಕೆಯನ್ನು, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಇಂತಹ ಮಹಿಳೆಯರನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯವಾಗಿದೆ ಎಂದರು.
    ಮಹಿಳಾ ಸಮಾಜದ ಯಶೋಧ ವೀರಭದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಸಮಾಜದಲ್ಲಿ ಮಹಿಳೆಯರು ಅಬಲೆಯರಲ್ಲ ಸಬಲೆಯರಾಗಿದ್ದಾರೆ. ಸ್ವಾಭಿಮಾನದಿಂದ ಬದುಕು ನಡೆಸಬೇಕು. ಸಮಾಜದ ಅನಿಷ್ಟ ಪದ್ಧತಿಗಳು, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ಕಾನೂನು ಬಾಹೀರ ಚಟುವಟಿಕೆಗಳ ವಿರುಧ್ಧ ಹೋರಾಡಬೇಕೆಂದು ಕರೆ ನೀಡಿದರು.
    ಸಮಾಜದಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದನ್ನು ಸುಳ್ಳು ಮಾಡಿ ನಾಗರೀಕ ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸಗಳಿಂದ ಬಾಳಬೇಕು. ಸರ್ಕಾರ ಮಹಿಳೆಯರಿಗೆ ನೀಡಬೇಕಾದ ಸೌಲಭ್ಯಗಳನ್ನು ಸರಿಯಾಗಿ ಸರಿಯಾದ ಕಾಲಕ್ಕೆ ನೀಡಬೇಕು ಎಂದು ಮನವಿ ಮಾಡಿದರು.
    ಇತ್ತೀಚೆಗೆ ರಾಜ್ಯಮಟ್ಟದ ಪ್ರಶಸ್ತಿಗೆ ಪುರಸ್ಕೃತರಾದ ಸಮಾಜದ ಹಿರಿಯ ಸದಸ್ಯೆ ಕಮಲಾ ಕುಮಾರಿ ಹಾಗು ವಿಜಯ ಪ್ರಭು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ವೇದಿಯಲ್ಲಿ ಗೌರಮ್ಮ ಶಂಕರಯ್ಯ, ಶೋಭಾ ಗಂಗರಾಜ್, ಜಯಂತಿ ಶೇಟ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಇಂದಿರಾ ರಮೇಶ್ ಸ್ವಾಗತಿಸಿದರು. ಕಲ್ಪನಾ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ, ಗೀತಾ ರಘುನಂದನ್ ವಂದಿಸಿದರು.
ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಬಾರಿ ಅದೃಷ್ಟದ ಮಹಿಳೆಯಾಗಿ ಮಲ್ಲಿಕಾಂಬ ಮಲ್ಲಿಕಾರ್ಜುನ ಆಯ್ಕೆಯಾದರು.