![](https://blogger.googleusercontent.com/img/a/AVvXsEj5rNXl8pyfIbuzM0YbZcDHpiq9WhjnfgHeX0NyeqjaTB6V1iLbTx7Qbp6-pSqcVlCZGBxEgOsODVDm-RMuan4hmEsh5JJXX-TnatyZ-DM5qZwoLdgtd5ZeVyEZQXsKZxvE4VmVbabjI3X7MnqJXaNXjv7vgPqs9Ipaxfuc-ltxFNLJw00mFbhAvTuJrCYu=w400-h300-rw)
ಭದ್ರಾವತಿ ಅಂತರಗಂಗೆ ಗ್ರಾಮ ಪಂಚಾಯಿತಿ.
ಭದ್ರಾವತಿ : ನಗರದ ಪ್ರದೇಶದಿಂದ ಸುಮಾರು ೧೦ ಕಿ.ಮೀ ದೂರದಲ್ಲಿರುವ ತಾಲೂಕಿನ ಕೂಡ್ಲಿಗೆರೆ ಹೋಬಳಿ ಅಂತರಗಂಗೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಸ್ಥರ ಬಹಳ ವರ್ಷಗಳ ಬೇಡಿಕೆಯಾದ ವಾರದ ಸಂತೆ ಆರಂಭಿಸಲಾಗುತ್ತಿದ್ದು, ಜ.೨೩ರಂದು ಮೊದಲ ಸಂತೆ ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮುಂಭಾಗ ಹಾಗು ಗ್ರಾಮ ಪಂಚಾಯಿತಿ ಬಳಿ ಆಯೋಜಿಸಲಾಗಿದೆ.
ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ೧೦ ಗ್ರಾಮಗಳಿದ್ದು, ಪ್ರಸ್ತುತ ಸುಮಾರು ೧೦ ಸಾವಿರ ಜನಸಂಖ್ಯೆ ಒಳಗೊಂಡಿದೆ. ಅಲ್ಲದೆ ಈ ಗ್ರಾಮ ಪಂಚಾಯಿತಿಗೆ ದೊಡ್ಡೇರಿ, ಎರೇಹಳ್ಳಿ ಹಾಗು ಮಾವಿನಕೆರೆ ಗ್ರಾಮ ಪಂಚಾಯಿತಿಗಳು ಹೊಂದಿಕೊಂಡಿವೆ. ಗ್ರಾಮಸ್ಥರು ವಾರದ ಸಂತೆಗೆ ಪ್ರತಿ ಭಾನುವಾರ ನಗರದ ಪ್ರದೇಶದ ಸುಮಾರು ೧೦ ಕಿ.ಮೀ ದೂರದ ಹೊಸಮನೆ ಸಂತೆ ಮೈದಾನದಲ್ಲಿ ನಡೆಯುವ ವಾರದ ಸಂತೆಗೆ ಬರಬೇಕಾಗಿದೆ. ಇದರಿಂದಾಗಿ ಗ್ರಾಮಸ್ಥರಿಗೆ ಸಾಕಷ್ಟು ಸಮಸ್ಯೆ ಎದುರಾಗಿದೆ.
ಹಲವಾರು ವರ್ಷಗಳಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ವಾರದ ಸಂತೆ ಆಯೋಜಿಸಬೇಕೆಂಬ ಬೇಡಿಕೆ ಗ್ರಾಮಸ್ಥರದ್ದಾಗಿತ್ತು. ಇದೀಗ ವಾರದ ಆರಂಭಿಸಲಾಗುತ್ತಿದ್ದು, ಇದರಿಂದ ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ ಗ್ರಾಮೀಣ ಭಾಗದ ವ್ಯಾಪಾರಸ್ಥರಿಗೆ, ಅದರಲ್ಲೂ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಕಾಡಂಚಿನ ಗ್ರಾಮಗಳು :
ಬಹುತೇಕ ಗ್ರಾಮಗಳು ಅರಣ್ಯ ವ್ಯಾಪ್ತಿಯಲ್ಲಿದ್ದು, ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ರಾತ್ರಿ ವೇಳೆ ಗ್ರಾಮಸ್ಥರ ಸಂಚಾರ ವಿರಳವಾಗಿದೆ. ಈ ಭಾಗದಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಿಲ್ಲ. ಸದಾ ಭಯಭೀತಿಯಲ್ಲಿ ಬದುಕುತ್ತಿರುವ ಗ್ರಾಮಸ್ಥರಿಗೆ ವಾರದ ಸಂತೆಯಿಂದ ಹೆಚ್ಚಿನ ಪ್ರಯೋಜನವಾಗಲಿದೆ. ದಿನನಿತ್ಯದ ಬಳಕೆ ವಸ್ತುಗಳನ್ನು ವಾರದ ಒಂದೇ ದಿನ ಖರೀದಿಸಿಕೊಂಡು ಬರಬಹುದಾಗಿದೆ.
ಮಾರುಕಟ್ಟೆ ಕಲ್ಪಿಸಲು ಕ್ರಮ :
ಪ್ರಸ್ತುತ ವಾರದ ಸಂತೆಗೆ ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮುಂಭಾಗ ಹಾಗು ಗ್ರಾಮ ಪಂಚಾಯಿತಿ ಬಳಿ ಅವಕಾಶ ಕಲ್ಪಿಸಿಕೊಡಲಾಗಿದೆ. ವ್ಯಾಪಾರ ವಹಿವಾಟಿನ ಪ್ರಮಾಣ ನೋಡಿಕೊಂಡು ಗ್ರಾಮ ಪಂಚಾಯಿತಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ. ಸರ್ಕಾರದ ವಿವಿಧ ಯೋಜನೆಗಳು ಹಾಗು ಗ್ರಾಮ ಪಂಚಾಯಿತಿ ಅನುದಾನದಲ್ಲಿ ಮಾರುಕಟ್ಟೆ ಅಭಿವೃದ್ಧಿಗೊಳಿಸುವ ರೂಪುರೇಷೆ ಸಿದ್ದಪಡಿಸಿಕೊಂಡಿದೆ.
ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿ ಗುರುವಾರ ವಾರದ ಸಂತೆ ನಡೆಸಲು ತೀರ್ಮಾನಿಸಲಾಗಿದೆ. ಸದ್ಯಕ್ಕೆ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮುಂಭಾಗ ಹಾಗು ಗ್ರಾಮ ಪಂಚಾಯಿತಿ ಬಳಿ ಅವಕಾಶ ಕಲ್ಪಿಸಿಕೊಡಲಾಗಿದೆ. ಸೂಕ್ತ ಮಾರುಕಟ್ಟೆ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಸ್ಥಳವಕಾಶಗಳಿದ್ದು, ಪ್ರಸ್ತುತ ವ್ಯಾಪಾರ ವಹಿವಾಟಿನ ಪ್ರಮಾಣ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಗ್ರಾಮಸ್ಥರು, ವ್ಯಾಪಾರಸ್ಥರು ಗುರುವಾರ ನಡೆಯಲಿರುವ ವಾರದ ಸಂತೆ ಸದ್ಬಳಕೆ ಮಾಡಿಕೊಂಡು ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಕೈಜೋಡಿಸಬೇಕು.
- ನಾಗೇಶ್, ಅಧ್ಯಕ್ಷರು, ಅಂತರಗಂಗೆ ಗ್ರಾಮ ಪಂಚಾಯಿತಿ, ಭದ್ರಾವತಿ.