Saturday, April 8, 2023

ಕೆಆರ್‌ಎಸ್ ಪಕ್ಷದ ಅಭ್ಯರ್ಥಿಯಾಗಿ ಸಮಾಜ ಸೇವಕಿ ಸುಮಿತ್ರ ಬಾಯಿ

ಸುಮಿತ್ರ ಬಾಯಿ
    ಭದ್ರಾವತಿ, ಏ. ೮ : ರಾಜ್ಯ ವಿಧಾನಸಭಾ ಚುನಾವಣೆಗೆ ರವಿ ಕೃಷ್ಣಾ ರೆಡ್ಡಿ ನೇತೃತ್ವದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ಸುಮಿತ್ರ ಬಾಯಿಯವರಿಗೆ ಅವಕಾಶ ಲಭಿಸಿದೆ.
    ಉಜ್ಜನಿಪುರ ಶಂಕ್ರಪ್ಪ ಕಟ್ಟೆ ಕೆರೆ ಸಮೀಪ ತೋಟದ ಮನೆ ನಿವಾಸಿ ಸುಮಿತ್ರ ಬಾಯಿ ಸಾಮಾನ್ಯ ಕುಟುಂಬಕ್ಕೆ ಸೇರಿದ್ದು, ಇವರು ಹಲವಾರು ವರ್ಷಗಳಿಂದ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
    ಇವರ ಪತಿ ನಾಗರಾಜ್‌ರಾವ್ ಸಿಂಧೆ ಎಂಪಿಎಂ ನಿವೃತ್ತ ಕಾರ್ಮಿಕರಾಗಿದ್ದು, ಪ್ರಸ್ತುತ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಹ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಗುರುತಿಸಿಕೊಂಡಿದ್ದಾರೆ.
    ಈ ಬಾರಿ ಚುನಾವಣೆಗೆ ಪಕ್ಷದಿಂದ ಸ್ಪರ್ಧಿಸಲು ೩-೪ ಆಕಾಂಕ್ಷಿಗಳು ಪೈಪೋಟಿಗೆ ಮುಂದಾಗಿದ್ದರು. ಪಕ್ಷದ ರಾಜ್ಯ ಚುನಾವಣಾ ಸಮಿತಿ ಸುಮಿತ್ರ ಬಾಯಿಯವರನ್ನು ಆಯ್ಕೆ ಮಾಡಿದೆ.
    ಪಕ್ಷದ ವತಿಯಿಂದ ಈಗಾಗಲೇ ಕಳೆದ ಸುಮಾರು ೬ ತಿಂಗಳಿನಿಂದ ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯ ಕೈಗೊಳ್ಳಲಾಗಿದ್ದು,  ಅಲ್ಲದೆ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಸಹ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡುವುದಾಗಿ ಪಕ್ಷದ ವರಿಷ್ಠರು ಈ ಹಿಂದೆ ಭರವಸೆ ನೀಡಿದ್ದರು. ಇದಕ್ಕೆ ಪೂರಕವೆಂಬಂತೆ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ವಿಶೇಷವಾಗಿದೆ.  

ನೆಟ್ಟಕಲ್ಲಹಟ್ಟಿ ಮರಕಡಿತಲೆ ಪ್ರಕರಣ : ಕಂದಾಯ ಅಭಿಪ್ರಾಯ ಕೋರಿಕೆ

    ಭದ್ರಾವತಿ, ಏ. ೮ : ತಾಲೂಕಿನ ಕೂಡ್ಲಿಗೆರೆ ಹೋಬಳಿ ನೆಟ್ಟಕಲ್ಲಹಟ್ಟಿ ಗ್ರಾಮದ ಸರ್ವೆ ನಂ.೮/೨ರ ಜಮೀನಿನಲ್ಲಿ ಬೆಳೆದಿರುವ ಹಾಗು ಕೆರೆ ಅಂಗಳದಲ್ಲಿನ ವಿವಿಧ ಜಾತಿಯ ನೂರಾರು ಮರಗಳ ಕಡಿತಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಗಿರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಮೊಗ್ಗ ಉಪವಿಭಾಗಾಧಿಕಾರಿಯಿಂದ ಕಂದಾಯ ಅಭಿಪ್ರಾಯ ಕೋರಿದ್ದಾರೆ.
 ಗ್ರಾಮದ ಸರ್ವೆ ನಂ.೮/೨ರ ಜಮೀನು ಈ ಹಿಂದೆ ನಾಗರಾಜ ಬಿನ್ ಬೆಟ್ಟೇಗೌಡ ಎಂಬುವರ ಮಾಲೀಕತ್ವದಲ್ಲಿದ್ದು, ನಂತರ ಪಿ. ರೂಪಾ ಕೋಂ ತಿರುಪತಿರೆಡ್ಡಿ ಎಂಬುವರ ಹೆಸರಿಗೆ ಖಾತೆ ಬದಲಾವಣೆಯಾಗಿರುತ್ತದೆ. ಈ ಜಮೀನಿನಲ್ಲಿ ಬೆಳೆದಿರುವ ಹಾಗು ಜಮೀನಿಗೆ ಹೊಂದಿಕೊಂಡಂತೆ ಇರುವ ಕೆರೆ ಅಂಗಳದಲ್ಲಿನ ವಿವಿಧ ಜಾತಿಯ ನೂರಾರು ಮರಗಳನ್ನು ಕಡಿತಲೆ ಮಾಡಲಾಗಿತ್ತು. ಅರಣ್ಯ ಇಲಾಖೆ ಮರಗಳ ಕಡಿತಲೆಗೆ ಸಹಕರಿಸಿದೆ ಎಂದು ಇತ್ತೀಚೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಸಾರ್ವಜನಿಕ ಕುಂದುಕೊರತೆ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿತ್ತು.
    ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯರವರು ಈ ಸಂಬಂಧ ಸೂಕ್ತ ತನಿಖೆ ಕೈಗೊಂಡು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಇದಕ್ಕೆ ಪೂರಕವೆಂಬಂತೆ ಚನ್ನಗಿರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಮೊಗ್ಗ ಉಪವಿಭಾಗಾಧಿಕಾರಿಯಿಂದ ಮತ್ತೊಮ್ಮೆ ಕಂದಾಯ ಅಭಿಪ್ರಾಯ ಕೋರಿ ಪತ್ರ ಬರೆದಿದ್ದಾರೆ.

ಏ.೯ರಂದು ವೀರಭದ್ರ ಲಯನ್ಸ್ ಜಿಲ್ಲಾ ಕ್ರೀಡಾಕೂಟ

ಕೆ.ಸಿ ವೀರಭದ್ರಪ್ಪ
    ಭದ್ರಾವತಿ, ಏ. ೮: ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ ೩೧೭ಸಿ ವತಿಯಿಂದ ಏ.೯ರ ಭಾನುವಾರ ವೀರಭದ್ರ ಲಯನ್ಸ್ ಜಿಲ್ಲಾ ಕ್ರೀಡಾಕೂಟ ವಿಐಎಸ್‌ಎಲ್ ಹಾಕಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ದಿವಂಗತ ಲಯನ್ಸ್ ಕೆ.ಸಿ ವೀರಭದ್ರಪ್ಪ ಸ್ಮರಣಾರ್ಥ ಕ್ರೀಡಾಕೂಟ ಆಯೋಜಿಸಲಾಗಿದೆ. ಬೆಳಿಗ್ಗೆ ೯.೪೫ಕ್ಕೆ ಕ್ರೀಡಾಕೂಟ ಆರಂಭಗೊಳ್ಳಲಿದ್ದು, ಜಿಲ್ಲಾ ಗವರ್ನರ್ ಲಯನ್ಸ್ ಡಾ. ಎಂ.ಕೆ ಭಟ್ ನೇತೃತ್ವದಲ್ಲಿ ಕ್ರೀಡಾಕೂಟ ನಡೆಯಲಿದೆ. ಕ್ರೀಡಾ ಸಂಯೋಜಕರಾಗಿ ಎಲ್. ದೇವರಾಜ್, ಗಿರೀಶ್ ಬಂಡಿಗಡಿ ಮತ್ತು ಎಂ.ಜಿ ರಾಜೀವ್ ಕಾರ್ಯನಿರ್ವಹಿಸಲಿದ್ದಾರೆ.
    ವಿಶೇಷ ಮನೋರಂಜನೆ, ಸಮಾಜಮುಖಿ ಕಾರ್ಯಕ್ರಮ ಸಹ ನಡೆಯಲಿದ್ದು, ಜಿಲ್ಲೆಯ ಲಯನ್ಸ್ ಹಾಗು ಲಿಯೋ ಕ್ಲಬ್ ಸದಸ್ಯರು ಈ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ.
    ಲಯನ್ಸ್ ಪುರುಷರಿಗೆ ೧೦೦ ಮೀ. ಮತ್ತು ೨೦೦ ಮೀ. ಓಟ, ಗುಂಡು ಎಸೆತ ಹಾಗು ಹಿರಿಯ ಪುರುಷರಿಗೆ ೧೦೦ ಮೀ. ನಡಿಗೆ, ಸಂಗೀತ ಕುರ್ಚಿ, ಗುರಿ ಎಸೆತ,  ಲಿಯೋಗಳಿಗೆ  ೧೦೦ ಮೀ. ಓಟ, ಷಟಲ್ ರಿಲೇ, ಗುರಿ ಎಸೆತ ಮತ್ತು ಕ್ಲಬ್‌ಗಳಿಗೆ ಥ್ರೋ ಬಾಲ್(ಮಹಿಳೆಯರಿಗೆ), ವಾಲಿಬಾಲ್(ಪುರುಷರಿಗೆ), ಹಗ್ಗಜಗ್ಗಾಟ(ಮಹಿಳೆಯ ಹಾಗು ಪುರುಷರಿಗೆ), ಪೆನಾಲ್ಟಿ ಶೂಟ್ ಔಟ್(ಪುರುಷರಿಗೆ) ಹಾಗು ೩೦ ಯಾರ್ಡ್ ಕ್ರಿಕೆಟ್ ಆಯೋಜಿಸಲಾಗಿದೆ.
    ಲಯನ್ಸ್ ಮಹಿಳೆಯರಿಗೆ ೧೦೦ ಮೀ. ಓಟ, ೨೦೦ ಮೀಟರ್ ಓಟ ಮತ್ತು ಗುಂಡು ಎಸೆತ ಹಾಗು ಹಿರಿಯ ಮಹಿಳೆಯರಿಗೆ ೧೦೦ ಮೀ. ಓಟ, ಸಂಗೀತ ಕುರ್ಚಿ ಹಾಗು ಗುರಿ ಎಸೆತ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
    ಲಯನ್ಸ್ ಕೆ.ಸಿ ವೀರಭದ್ರಪ್ಪ :
    ೧೯೮೭ರಿಂದ ಲಯನ್ಸ್ ಕ್ಲಬ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ವೀರಭದ್ರಪ್ಪನವರು, ಖಜಾಂಚಿಯಾಗಿ, ಅಧ್ಯಕ್ಷರಾಗಿ, ವಲಯಾಧ್ಯಕ್ಷರಾಗಿ, ವಲಯ ಸಲಹೆಗಾರರಾಗಿ, ವಲಯ ರಾಯಬಾರಿಯಾಗಿ, ಡಿ.ಜಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಸಮುದಾಯ ಸೇವೆ, ಜಿಲ್ಲಾ ಗೌರ‍್ನರ್ ಪ್ರತಿನಿಧಿಯಾಗಿ, ಜಿಎಲ್‌ಟಿ ಮತ್ತು ಜಿಎಂಟಿ ಸಂಯೋಜಕರಾಗಿ, ಜಿಲ್ಲಾ ರಾಯಬಾರಿಯಾಗಿ ಹಾಗು ಲಯನ್ಸ್ ಕ್ಲಬ್ ೩೧೭-ಸಿ ಮೊದಲನೇ ಜಿಲ್ಲಾ ಉಪಗೌರ‍್ನರ್ ಆಗಿ ಸೇವೆ ಸಲ್ಲಿಸಿದ್ದರು. ನ.೨೫, ೨೦೨೧ರಂದು ನಿಧನ ಹೊಂದಿದರು.