Sunday, October 11, 2020

ವಿದ್ಯುತ್ ತಗುಲಿ ಯುವತಿ ಸಾವು

     ಸಿಂಧೂ
ಭದ್ರಾವತಿ, ಅ. ೧೧: ಆಕಸ್ಮಿಕವಾಗಿ ವಿದ್ಯುತ್ ತಗುಲಿದ ಪರಿಣಾಮ ಯುವತಿಯೋರ್ವಳು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
    ತಳ್ಳಿಕಟ್ಟೆ ಗ್ರಾಮದ ವಸಂತ್ ಎಂಬುವರ ಪುತ್ರಿ ಸಿಂಧೂ ಮೃತಪಟ್ಟಿದ್ದು, ಮನೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಗುಲಿದೆ ಎನ್ನಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕನ ಶವ ಪತ್ತೆ

ಶಿವಮೊಗ್ಗ, ಅ. ೧೧: ಚಾನಲ್ ದಂಡೆಯಲ್ಲಿ ಆಡುತ್ತಿದ್ದ ಬಾಲಕ ಶವವಾಗಿ ಪತ್ತೆಯಾಗಿರುವ ಘಟನೆ ಭಾನುವಾರ ಬೆಳಲಕಟ್ಟೆಯಲ್ಲಿ ನಡೆದಿದೆ.
       ಅ.೧೦ ರಂದು ಮಧ್ಯಾಹ್ನ ೨ ಗಂಟೆಯ ವೇಳೆಗೆ  ಹುಡಗರೊಂದಿಗೆ ಬೆಳಲಕಟ್ಟೆಯ ನಿವಾಸಿ ಕುಮಾರನಾಯ್ಕ್‌ರವರ ಮಗ ದಿಲೀಪ ನಾಯ್ಕ ಎಂಬ ೧೩ ವರ್ಷದ  ಬಾಲಕ  ದಿಡೀರನೇ ನಾಪತ್ತೆಯಾಗಿದ್ದನು.
        ಈ ಕುರಿತು ಅವರ ತಂದೆ ಕುಮಾರ ನಾಯ್ಕ್ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಗನ ನಾಪತ್ತೆ ಕುರಿತು ದೂರು ದಾಖಲಿಸಿದ್ದರು. ಅದೇ ಚಾನಲ್ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಬಾಲಕನ ಮುಖ, ಕಣ್ಣು ಹಾಗು ಕಿವಿಗಳನ್ನು ಜಲಚರಗಳು ತಿಂದಿರುವ ಕಲೆ ಕಂಡುಬಂದಿದೆ.

ಮಹಿಳೆಯ ಕೊರಳಿನಲ್ಲಿದ್ದ ಚಿನ್ನದ ಸರ ಅಪಹರಣ

ಭದ್ರಾವತಿ, ಅ. ೧೧: ದೇವಸ್ಥಾನಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರ ಕೊರಳಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರಸಭೆ ವ್ಯಾಪ್ತಿಯ ಭಂಡಾರಹಳ್ಳಿಯಲ್ಲಿ ನಡೆದಿದೆ.
      ಭಂಡಾರಹಳ್ಳಿ ನಿವಾಸಿ ವಸಂತಿ ಎಂಬುವರು ಪತಿ ಕೃಷ್ಣಪ್ಪನಾಯಕ ಮತ್ತು ತನ್ನ ೩ ಚಿಕ್ಕ ಮಕ್ಕಳೊಂದಿಗೆ ಶನಿವಾರ ಮಧ್ಯಾಹ್ನ ಸುಮಾರು ೧.೪೫ರ ಸಮಯದಲ್ಲಿ ಮನೆಯ ಸಮೀಪದಲ್ಲಿರುವ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ದ್ವಿಚಕ್ರವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಕೊರಳಿನಲ್ಲಿದ್ದ ಸುಮಾರು ೩೦ ಗ್ರಾಂ. ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದು, ಅಪಹರಿಸಲಾಗಿರುವ ಚಿನ್ನದ ಸರದ ಅಂದಾಜು ಮೌಲ್ಯ ೯೦ ಸಾವಿರ ರು. ಗಳಾಗಿದ್ದು, ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ಕರ್ತವ್ಯನಿರತ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕ ನಿಧನ

ಭದ್ರಾವತಿ, ಅ. ೧೧: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಕರ್ತವ್ಯದಲ್ಲಿ ತೊಡಗಿದ್ದ ಗುತ್ತಿಗೆ ಕಾರ್ಮಿಕನೋರ್ವ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
    ಜಿಂಕ್‌ಲೈನ್ ನಿವಾಸಿ ಮಂಜುನಾಥ್(೪೦) ನಿಧನ ಹೊಂದಿದ್ದು, ಮಧ್ಯಾಹ್ನ ೩.೪೫ರ ಸುಮಾರಿನಲ್ಲಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ.
      ಬಡ ಕುಟುಂಬಕ್ಕೆ ಸಾಂತ್ವಾನ ಹೇಳಿರುವ ಸಮಾಜ ಸೇವಕ ಪೊಲೀಸ್ ಉಮೇಶ್ ಮೃತರ ನಿವಾಸಕ್ಕೆ ತೆರಳಿ ಸ್ನೇಹಜೀವಿ ಗೆಳೆಯರ ಬಳಗದ ವತಿಯಿಂದ ಮೃತರ ೨೫ ಸಾವಿರ ರು. ನೆರವು ನೀಡಿದ್ದಾರೆ. ಅಲ್ಲದೆ ಸೂಕ್ತ ಪರಿಹಾರ ನೀಡುವಂತೆ ಗುತ್ತಿಗೆದಾರರಿಗೆ ಆಗ್ರಹಿಸಿದ್ದಾರೆ.