Monday, June 19, 2023

ಹಳೇನಗರ ಪೊಲೀಸರ ಕಾರ್ಯಾಚರಣೆ : ಇಬ್ಬರ ಸೆರೆ, ೧.೪೯೦ ಕೆ.ಜಿ ಒಣ ಗಾಂಜಾ ವಶ

ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಭಾನುವಾರ ಸುಮಾರು ೧ ಕೆ.ಜಿ ೪೯೦ ಗ್ರಾಂ. ಒಣ ಗಾಂಜಾ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ಭದ್ರಾವತಿ, ಜೂ. ೧೯: ಇತ್ತೀಚಿನ ವರ್ಷಗಳಲ್ಲಿ ಕ್ಷೇತ್ರದಲ್ಲಿ ಗಾಂಜಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಸದ್ದಿಲ್ಲದೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹಳೇನಗರ ಠಾಣೆ ಪೊಲೀಸರು ಭಾನುವಾರ ಸುಮಾರು ೧ ಕೆ.ಜಿ ೪೯೦ ಗ್ರಾಂ. ಒಣ ಗಾಂಜಾ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ಖಚಿತ ಮಾಹಿತಿ ಆಧಾರದ ಮೇರೆಗೆ ನಗರಸಭೆ ವ್ಯಾಪ್ತಿಯ ಜಟ್‌ಪಟ್ ನಗರದ ವೀರಶೈವ ರುದ್ರಭೂಮಿ ಬಳಿ ದಾಳಿ ನಡೆಸಿ ನಸ್ರುಲ್ಲಾ ಅಲಿಯಾಸ್ ನಸ್ರು(೧೯) ಮತ್ತು ಸೈಫ್ ಆಲಿ ಖಾನ್(೨೫) ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ ಒಟ್ಟು ಸುಮಾರು ೩೪,೪೦೦ ರು. ಮೌಲ್ಯದ ೧ ಕೆ.ಜಿ ೪೯೦ ಗ್ರಾಂ ಒಣ ಗಾಂಜಾ ಹಾಗು ೭೦೦ ರು. ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
    ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಠಾಣಾಧಿಕಾರಿ ಶರಣಪ್ಪ ನೇತೃತ್ವದ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಹಾಗು ಪೊಲೀಸ್ ಉಪಾಧೀಕ್ಷಕರು ಅಭಿನಿಂದಿಸಿದ್ದಾರೆ.

ಬಾಲ ಕಾರ್ಮಿಕರ ವಿರೋಧಿ ದಿನ : ಜಾಥಾಕ್ಕೆ ಚಾಲನೆ

ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ನೇತೃತ್ವದಲ್ಲಿ ಬಾಲ ಕಾರ್ಮಿಕರ ವಿರೋಧಿ ದಿನದ ಅಂಗವಾಗಿ ಭದ್ರಾವತಿಯಲ್ಲಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಆರ್.ವೈ ಶಶಿಧರ ಜಾಥಾ ವಾಹನಕ್ಕೆ ಹಸಿರು ತೋರಿಸಿ ಚಾಲನೆ ನೀಡಿದರು
    ಭದ್ರಾವತಿ, ಜೂ. ೧೯: ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ನೇತೃತ್ವದಲ್ಲಿ ಬಾಲ ಕಾರ್ಮಿಕರ ವಿರೋಧಿ ದಿನದ ಅಂಗವಾಗಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
    ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಆರ್.ವೈ ಶಶಿಧರ ಜಾಥಾ ವಾಹನಕ್ಕೆ ಹಸಿರು ತೋರಿಸಿ ಚಾಲನೆ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಅಧ್ಯಕ್ಷತೆ ವಹಿಸಿದ್ದರು.
    ಬಾಲ ಕಾರ್ಮಿಕರ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಕಾನೂನು ಅರಿವು ಹೊಂದಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕೆಂಬ ಆಶಯದೊಂದಿಗೆ ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು.
    ಕಾರ್ಮಿಕ ನಿರೀಕ್ಷಕಿ ಮಮ್ತಾಜ್ ಬೇಗಂ ಸೇರಿದಂತೆ ನ್ಯಾಯಾಧೀಶರು, ವಕೀಲರು ಹಾಗು ಕಾರ್ಮಿಕ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ದಾಖಲೆ ನಿರ್ಮಿಸಿದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ


ಶಿಬಿರದ ಸದುಪಯೋಗ ಪಡೆದ  ೭೪೧ ಮಂದಿ

ಭದ್ರಾವತಿ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು ಹಾಗು ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

    ಭದ್ರಾವತಿ, ಜೂ. ೧೯ : ನಗರದ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು ಹಾಗು ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ಮುಕ್ತಾಯಗೊಳ್ಳುವ ಜೊತೆಗೆ ದಾಖಲೆ ನಿರ್ಮಿಸಿದೆ.
    ಶಿಬಿರದಲ್ಲಿ ಸುಮಾರು ೭೪೧ ಮಂದಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸುವ ಜೊತೆಗೆ ಚಿಕಿತ್ಸೆ ನೀಡಿ ಅಗತ್ಯವಿರುವ ಔಷಧಿಗಳನ್ನು ಸಹ ನೀಡಲಾಯಿತು. ಇದರ ಜೊತೆಗೆ ಸುಮಾರು ೨೫ ಮಂದಿ ರಕ್ತದಾನ ಮಾಡುವ ಮೂಲಕ ಶಿಬಿರ ಯಶಸ್ವಿಗೆ ಮುನ್ನುಡಿ ಬರೆದರು.
    ಶಿಬಿರದ ಯಶಸ್ವಿಗೆ ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ೩೧ ಮಂದಿ ಪರಿಣಿತ ತಜ್ಞ ವೈದ್ಯರು, ಪ್ಯಾರ ಮೆಡಿಕಲ್ ಮತ್ತು ಇತರೆ ಸಿಬ್ಬಂದಿಗಳು ಸುಮಾರು ೪೦ ಮಂದಿ ಒಟ್ಟು ೭೧ ಮಂದಿ ಹಾಗು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಸೇವಾದಳದ ೧೪೦ ಮಂದಿ ಹಾಗು ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದದವರು ಶ್ರಮಿಸಿದರು.
    ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವೈದ್ಯಕೀಯ ವಿಭಾಗದ ವ್ಯವಸ್ಥಾಪಕ ಡಾ. ಡಾ. ಶಿವಮೂರ್ತಿ, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕರಾದ ಕಾಂತರಾಜ್, ಮೊಹಮದ್, ಶಿವಮೊಗ್ಗ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನರರೋಗ ತಜ್ಞ ಡಾ. ನಾರಾಯಣ ಪಂಜಿ, ನಗರದ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ವೈದ್ಯೆ ಡಾ. ವೀಣಾಭಟ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ, ಜಿಲ್ಲಾಧ್ಯಕ್ಷ ಗೋಪಾಲ್, ಸತ್ಯಜ್ಯೋತಿ ಗೋಪಾಲ್, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಜಂಟಿ ಆಡಳಿತಾಧಿಕಾರಿ ಸೌಮ್ಯ ಡಿ. ಪ್ರಭಾಕರ ಬೀರಯ್ಯ, ಸಂಯೋಜಕ ಜಿ.ಪಿ ಪರಮೇಶ್ವರಪ್ಪ, ಪ್ರಾಂಶುಪಾಲರಾದ ಶಾಮರಾಯ ಆಚಾರ್, ಮೃತ್ಯುಂಜಯ ಕಾನಿಟ್ಕರ್, ಉಪಪ್ರಾಂಶುಪಾಲ ಪ್ರಸನ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



____________________________________________
ಪ್ರಶಾಂತಿ ಸೇವಾ ಟ್ರಸ್ಟ್ ಹಾಗು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ವತಿಯಿಂದ ನಿರಂತರವಾಗಿ ಯಾವುದೇ ಫಲಾಫೇಕ್ಷೆ ಇಲ್ಲದೆ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಅದರಲ್ಲೂ ಬಹುಮುಖ್ಯವಾಗಿ ಶಿಕ್ಷಣ, ಆರೋಗ್ಯ ಹಾಗು ಹಸಿದವರಿಗೆ ಅನ್ನ ನೀಡುವ ಅನ್ನದಾಸೋಹ ಕಾರ್ಯಗಳಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕೈಗೊಳ್ಳುತ್ತಿರುವ ಸೇವಾ ಕಾರ್ಯಗಳಿಗೆ ನೆರವಾಗಲು ಮುಂದೆ ಬರುವ ದಾನಿಗಳು, ಸಂಘ-ಸಂಸ್ಥೆಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಈ ನಿಟ್ಟಿನಲ್ಲಿ ಆರೋಗ್ಯ ಶಿಬಿರ ಸಹ ನಡೆದಿದ್ದು, ಶಿಬಿರದ ಯಶಸ್ವಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಶ್ರೀ ಸತ್ಯಸಾಯಿ ಬಾಬಾ ಅವರ ಕೃಪೆ ಇರಲಿ ಎಂದು ಪ್ರಾರ್ಥಿಸುತ್ತೇನೆ.
 - ಡಿ. ಪ್ರಭಾಕರ ಬೀರಯ್ಯ, 
ರಾಜ್ಯ ಸಂಯೋಜಕರು, 
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು.

ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ರಾಷ್ಟ್ರಮಟ್ಟದ ಪ್ರಶಸ್ತಿ

ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಲಕ್ಷ್ಯ ಕಾರ್ಯಕ್ರಮದಡಿ ಭದ್ರಾವತಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಿಭಾಗ ಮತ್ತು ಹೆರಿಗೆ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಉತ್ತಮ ಸಾಧನೆ ಕಂಡು ಬಂದಿದ್ದು, ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ. ಈ ಹಿನ್ನಲೆಯಲ್ಲಿ ಈ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ಸಿಬ್ಬಂದಿಗಳು ಸಂಭ್ರಮ ಹಂಚಿಕೊಂಡರು.  
    ಭದ್ರಾವತಿ, ಜೂ. ೧೯ : ಖಾಸಗಿ ಆಸ್ಪತ್ರೆಗಳ ಪೈಪೋಟಿ ನಡುವೆ ಸರ್ಕಾರಿ ಆಸ್ಪತ್ರೆಗಳು ಸಹ ಯಾವುದಕ್ಕೂ ಕಡಿಮೆ ಇಲ್ಲ ಎಂಬಂತೆ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬಹುದು ಎಂಬುದನ್ನು ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಾಬೀತು ಮಾಡಿ ತೋರಿಸಿದೆ.
    ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ (ಎನ್.ಹೆಚ್.ಎಂ) ಹೆರಿಗೆ ವಿಭಾಗ ಮತ್ತು ಹೆರಿಗೆ ಶಸ್ತ್ರಚಿಕಿತ್ಸಾ ವಿಭಾಗಳ ಆರೈಕೆಯ ಗುಣಮಟ್ಟ ಸುಧಾರಿಸಲು ಲಕ್ಷ್ಯ ಕಾರ್ಯಕ್ರಮ ರೂಪಿಸಿದ್ದು, ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಿಭಾಗ ಈ ಕಾರ್ಯಕ್ರಮದಡಿ ಶೇ.೯೪ ಹಾಗೂ ಹೆರಿಗೆ ಶಸ್ತ್ರಚಿಕಿತ್ಸಾ ವಿಭಾಗ ಶೇ.೯೫ರಷ್ಟು ಗುರಿ ತಲುಪುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ಲಾಟಿನಂ ಪ್ರಶಸ್ತಿಗೆ ಭಾಜನವಾಗಿದೆ.
    ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಲಕ್ಷ್ಯ ಕಾರ್ಯಕ್ರಮದ ಅಧಿಕಾರಿಗಳು ಮೇ.೧೫ ರಂದು ಆಸ್ಪತ್ರೆಗೆ ಭೇಟಿ ನೀಡಿ ಸೌಲಭ್ಯಗಳನ್ನು ಪರಿಶೀಲನೆ ನಡೆಸಿದ್ದರು. ಹೆರಿಗೆ ವಿಭಾಗ ಮತ್ತು ಹೆರಿಗೆ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಉತ್ತಮ ಸಾಧನೆ ಕಂಡು ಬಂದಿದ್ದು, ಇದೀಗ ಪ್ರಶಸ್ತಿ ಘೋಷಣೆಯಾಗಿದೆ. ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿರುವುದು ವಿಶೇಷ ಸಂಗತಿಯಾಗಿದೆ.

ಆಸ್ಪತ್ರೆಗೆ ಲಕ್ಷ್ಯ ಕಾರ್ಯಕ್ರಮದಡಿ ರಾಷ್ಟ್ರಮಟ್ಟದ ಪ್ರಶಸ್ತಿ ಸಿಕ್ಕಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ. ಹೆರಿಗೆ ವಿಭಾಗ ಹಾಗೂ ಹೆರಿಗೆ ಶಸ್ತ್ರಚಿಕಿತ್ಸಾ ವಿಭಾಗ ರಾಷ್ಟ್ರಮಟ್ಟದಲ್ಲಿ ಗುರುತಿಸಿದ್ದು, ಈ ವಿಭಾಗಗಳಲ್ಲಿ ಕೆಲಸ ಮಾಡಿದ ವೈದ್ಯರು, ಸಿಬ್ಬಂದಿಗಳಿಗೂ ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಆಸ್ಪತ್ರೆಯ ಪ್ರತಿಯೊಬ್ಬರಿಗೂ ಹಾಗು ಜನಪ್ರತಿನಿಧಿಗಳು, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೂ ಕೃತಜ್ಞತೆ ಸಲ್ಲಿಸುತ್ತೇನೆ.  
                       - ಡಾ. ಡಿ.ಎಸ್ ಶಿವಪ್ರಕಾಶ್, 
ಮುಖ್ಯ ವೈದ್ಯಾಧಿಕಾರಿಗಳು, 
ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ, ಭದ್ರಾವತಿ