ತಾಂತ್ರಿಕ ಸಮಸ್ಯೆ ಬಗೆಹರಿಸಿ ಹಕ್ಕುಪತ್ರ ನೀಡಿ ಖಾತೆ ಮಾಡಿಕೊಡಲು ವಸತಿ ಸಚಿವರ ಆದೇಶ
![](https://blogger.googleusercontent.com/img/a/AVvXsEjUvCd4A3CLQfe8RfNZmrafRxFZYkoDl6yPRdDZbPLhC1_JpTsi70g-FcyGtuVPI7Nuqb7W9uQ1NKJ0LP87F5gj5rveGaCDD6kJpRJ2tTGKPxsaCFDNiFuUjYLBK4OIY-87iLdW2iNygdSfUf7uBGfRiVmk4g1VlRkA098hf2Rb8M4UmimnUFo0xpl_YQ=w283-h400-rw)
ಭದ್ರಾವತಿ ನಗರಸಭೆ ವ್ಯಾಪ್ತಿಯ ೩೭ ಘೋಷಿತ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ವಿತರಿಸಲಾಗಿರುವ ಹಕ್ಕುಪತ್ರದಲ್ಲಿ ಉಂಟಾಗಿರುವ ತಾಂತ್ರಿಕ ದೋಷ ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳಲು ವಸತಿ ಸಚಿವ ವಿ. ಸೋಮಣ್ಣನವರ ನಿರ್ದೇಶನದ ಮೇರೆಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿಮಂಡಳಿ ಬೆಂಗಳೂರಿನ ಮುಖ್ಯ ಇಂಜಿನಿಯರ್‌ರವರು ಸೂಚಿಸಿರುವುದು.
ಭದ್ರಾವತಿ, ನ. ೩೦: ಕಳೆದ ಸುಮಾರು ೪೦ ವರ್ಷದಿಂದ ಕೊಳಚೆ ಪ್ರದೇಶದ ನಿವಾಸಿಗಳ ಧ್ವನಿಯಾಗಿ ಹೋರಾಟ ನಡೆಸುತ್ತಿರುವ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ಮುಖಂಡರು, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್‌ರವರ ಪರಿಶ್ರಮ ಸಾರ್ಥಕಗೊಳ್ಳುತ್ತಿದ್ದು, ನಗರಸಭೆ ವ್ಯಾಪ್ತಿಯ ೩೭ ಘೋಷಿತ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ವಿತರಿಸಲಾಗಿರುವ ಹಕ್ಕುಪತ್ರದಲ್ಲಿ ಉಂಟಾಗಿರುವ ತಾಂತ್ರಿಕ ದೋಷ ಬಗೆಹರಿಸಿ ಖಾತೆ ಮಾಡಿಕೊಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ವಸತಿ ಸಚಿವ ವಿ. ಸೋಮಣ್ಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಆರ್. ವೇಣುಗೋಪಾಲ್.
ಆರ್. ವೇಣುಗೋಪಾಲ್‌ರವರು ಈ ಹಿಂದೆ ವಸತಿ ಸಚಿವರಿಗೆ ಮನವಿ ಸಲ್ಲಿಸಿ ನಗರಸಭೆ ವಿಐಎಸ್‌ಎಲ್ ಆಡಳಿತ ವ್ಯಾಪ್ತಿಯ ವೇಲೂರ್ ಶೆಡ್, ಜಿಂಕ್‌ಲೈನ್, ಕೂಲಿಬ್ಲಾಕ್, ಆಂಜನೇಯ ಅಗ್ರಹಾರ, ಸುರಗಿತೋಪು ಕೊಳಚೆ ಪ್ರದೇಶಗಳಿಗೆ ಹಕ್ಕುಪತ್ರ ವಿತರಣೆಯಾಗಿದ್ದು, ಫಿಲ್ಟರ್‌ಶೆಡ್ ಕೊಳಚೆ ಪ್ರದೇಶದಲ್ಲಿ ಪರಿಚಯ ಪತ್ರ ವಿತರಣೆಯಾಗಿದೆ. ಕಾಗದನಗರ ಎಂಪಿಎಂ ಆಡಳಿತ ವ್ಯಾಪ್ತಿಯ ವಾರ್ಡ್ ನಂ.೪,೫,೬ ಮತ್ತು ೮ ಹಾಗು ಆನೆಕೊಪ್ಪ ಸೇರಿದಂತೆ ನಗರಸಭೆ ವ್ಯಾಪ್ತಿಯ ಸುಮಾರು ೩೭ ಘೋಷಿತ ಕೊಳಚೆ ಪ್ರದೇಶಗಳಲ್ಲಿ ಸುಮಾರು ೫೦ ಸಾವಿರ ಜನಸಂಖ್ಯೆ ಇದ್ದು, ಇವರುಗಳಿಗೆ ಹಕ್ಕುಪತ್ರ ವಿತರಣೆಯಾಗಿರುತ್ತದೆ. ಈ ನಡುವೆ ವಿಐಎಸ್‌ಎಲ್ ಮತ್ತು ಎಂಪಿಎಂ ಆಡಳಿತ ವ್ಯಾಪ್ತಿಯ ಕೊಳಚೆ ಪ್ರದೇಶಗಳಿಗೆ ಜಿಲ್ಲಾಡಳಿತ ನಿಗದಿಪಡಿಸಿರುವ ಪರಿಹಾರ ಮೊತ್ತವನ್ನು ಎರಡು ಕಾರ್ಖಾನೆಗಳ ಆಡಳಿತ ಮಂಡಳಿಯವರು ತಿರಸ್ಕರಿಸಿದ್ದು, ಇದರಿಂದಾಗಿ ವಿತರಣೆಯಾಗಿರುವ ಹಲವು ಕೊಳಚೆ ಪ್ರದೇಶಗಳ ಹಕ್ಕು ಪತ್ರಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಅಲ್ಲದೆ ಹಾಲಪ್ಪಶೆಡ್ ಸೇರಿದಂತೆ ಇನ್ನಿತರ ಕೊಳಚೆ ಪ್ರದೇಶಗಳ ಸುಮಾರು ೧೦೦೦ಕ್ಕೂ ಅಧಿಕ ಮನೆಗಳಿಗೆ ಇನ್ನೂ ಹಕ್ಕುಪತ್ರ ವಿತರಣೆಯಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ತಕ್ಷಣ ತಾಲೂಕು ಆಡಳಿತ, ನಗರಸಭೆ ಹಾಗು ವಿಐಎಸ್‌ಎಲ್ ಮತ್ತು ಎಂಪಿಎಂ ಆಡಳಿತ ಮಂಡಳಿ ಹಾಗು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಜೊತೆ ಸಭೆನಡೆಸಿ ಸಮಸ್ಯೆ ಪರಿಹರಿಸುವಂತೆ ಕೋರಿದ್ದರು.
ಅಲ್ಲದೆ ೨೦೨೦ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪನವರು ರಾಜ್ಯದೆಲ್ಲೆಡೆ ಘೋಷಿತ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವಂತೆ ಆದೇಶ ಹೊರಡಿಸಿದ್ದರು. ಅದರಂತೆ ಸಾಮಾನ್ಯ ವರ್ಗದವರಿಗೆ ರು. ೨೦೦೦, ಪರಿಶಿಷ್ಟ ಜಾತಿ/ಪಂಗಡದವರಿಗೆ ರು.೧೦೦೦ ಪಡೆದು ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದ್ದರು.
ಮನವಿಗೆ ಸ್ಪಂದಿಸಿರುವ ವಸತಿ ಸಚಿವರು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಈ ಹಿನ್ನಲೆಯಲ್ಲಿ ಮಂಡಳಿಯ ಬೆಂಗಳೂರಿನ ಮುಖ್ಯ ಇಂಜಿನಿಯರ್‌ರವರು ಧಾರವಾಡದ ತಾಂತ್ರಿಕ ನಿರ್ದೇಶಕರಿಗೆ ಹಾಗು ಶಿವಮೊಗ್ಗ ಕಾರ್ಯಪಾಲಕ ಅಭಿಯಂತರರಿಗೆ ಅಗತ್ಯಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಮನವಿಗೆ ಸ್ಪಂದಿಸಿ ಕೊಳಚೆ ಪ್ರದೇಶದ ನಿವಾಸಿಗಳ ಸಂಕಷ್ಟ ಬಗೆಹರಿಸಲು ಮುಂದಾಗಿರುವ ವಸತಿ ಸಚಿವ ವಿ. ಸೋಮಣ್ಣನವರಿಗೆ ಆರ್. ವೇಣುಗೋಪಾಲ್ ಕೃತಜ್ಞತೆ ಸಲ್ಲಿಸಿದ್ದಾರೆ.