
ಭದ್ರಾವತಿ ತಾಲೂಕು ಕಛೇರಿ ರಸ್ತೆಯಲ್ಲಿರುವ ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಸ್ವಾಮಿಯ ೧೦ನೇ ವರ್ಷದ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಭದ್ರಾವತಿ: ತಾಲೂಕು ಕಛೇರಿ ರಸ್ತೆಯಲ್ಲಿರುವ ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಸ್ವಾಮಿಯ ೧೦ನೇ ವರ್ಷದ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಮಹಾರಥೋತ್ಸವ ಅಂಗವಾಗಿ ಬೆಳಿಗ್ಗೆ ನವಗ್ರಹ ಹೋಮ, ಆದಿವಾಸ ಹೋಮ, ರಥ ಶುದ್ಧಿ ಹೋಮ, ರಥಾಧಿವಾಸ ಹೋಮ, ಶ್ರೀ ಸ್ವಾಮಿಯ ರಥಾರೋಹಣ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಮಧ್ಯಾಹ್ನ ಸುಮಾರು ೧.೩೦ರ ಸಮಯದಲ್ಲಿ ದೇವಸ್ಥಾನ ಮುಂಭಾಗದಿಂದ ಮಹಾರಥೋತ್ಸವ ಆರಂಭಗೊಂಡು ರಂಗಪ್ಪ ವೃತ್ತ ಹಾಗು ಅಂಬೇಡ್ಕರ್ ವೃತ್ತದವರೆಗೂ ಸಾಗಿತು. ನಂತರ ಅನ್ನಸಂರ್ಪಣೆ ನಡೆಯಿತು.
ಇದಕ್ಕೂ ಮೊದಲು ದೇವಸ್ಥಾನದ ಪ್ರಾಂಗಣದಲ್ಲಿ ಶ್ರೀ ಸ್ವಾಮಿಯ ಉತ್ಸವ ಮೆರವಣಿಗೆ ಆರಂಭಗೊಂಡು ಪುರಾಣ ಪ್ರಸಿದ್ದ ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ತೆರಳಿ ಪುನಃ ಹಿಂದಿರುಗಿ ದೇವಸ್ಥಾನದ ಮುಂಭಾಗದಲ್ಲಿ ಸ್ವಾಮಿಯನ್ನು ಅಲಂಕೃತಗೊಂಡ ಭವ್ಯ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತರಿಂದ ಸ್ವಾಮಿಗೆ ಜೈಕಾರ ಹಾಕಲಾಯಿತು. ಅಲ್ಲದೆ ವಿವಿಧ ಮಹಿಳಾ ಭಜನಾ ತಂಡಗಳಿಂದ ಭಜನೆ ನಡೆಯಿತು. ರಥೋತ್ಸವದಲ್ಲಿ ಚಂಡೆ ವಾದ್ಯ ತಂಡ ಗಮನ ಸೆಳೆಯಿತು.
ದೇವಸ್ಥಾನ ಪ್ರಧಾನ ಅರ್ಚಕ ಪವನ್‌ಕುಮಾರ್ ಉಡುಪ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಶಾಸಕ ಬಿ.ಕೆ ಸಂಗಮೇಶ್ವರ್, ತಹಸೀಲ್ದಾರ್ ಪರುಸಪ್ಪ ಕುರುಬರ, ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಕೆ. ನರಸಿಂಹಮೂರ್ತಿ, ಉಪಾಧ್ಯಕ್ಷ ಬಿ. ಅಪ್ಪಾಜಿ ಗೌಡರು, ಪ್ರಧಾನ ಕಾರ್ಯದರ್ಶಿ ಎಸ್.ಎನ್ ರಾಜಶೇಖರ್, ಕಾರ್ಯದರ್ಶಿ ಎ.ಎಸ್ ಆಶಾ ಪುಟ್ಟಸ್ವಾಮಿ, ಖಜಾಂಚಿ ಎಸ್.ಬಿ ದುಗ್ಗೇಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಟಿ ನಾಗರಾಜ್, ಬಿ.ಎನ್ ಜಯರಾಂ, ರತ್ನಮ್ಮ ಸುಭಾಷ್, ಎನ್. ಜವರೇಗೌಡ, ವೀಣಾ ಶ್ರೀನಿವಾಸ್ ಮತ್ತು ಎಸ್.ಎಸ್ ಪ್ರಸನ್ನ ಕುಮಾರ್ ಹಾಗು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಹಳೇನಗರ, ಹನುಮಂತ ನಗರ, ಅಂಬೇಡ್ಕರ್ ನಗರ, ಹೊಸಮನೆ ಸೇರಿದಂತೆ ನಗರದ ವಿವಿದೆಡೆಗಳಿಂದ ಭಕ್ತರು ಪಾಲ್ಗೊಂಡಿದ್ದರು.