Thursday, February 4, 2021

ಅಯೋಧ್ಯೆ ರಾಮಮಂದಿರ ನಿರ್ಮಾಣ : ದೇಶದ ಬಹುಸಂಖ್ಯಾತರ ಸ್ವಾಭಿಮಾನದ ಪ್ರತೀಕ

ಭದ್ರಾವತಿ ಸಿದ್ದಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ಆಯೋಧ್ಯೆ ರಾಮಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
     ಭದ್ರಾವತಿ, ಫೆ.೪:  ಆಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಅತ್ಯಂತ ಪವಿತ್ರವಾದ ಧಾರ್ಮಿಕ ಕಾರ್ಯವಾಗಿದ್ದು, ಜೊತೆಗೆ ಈ ದೇಶದ ಬಹುಸಂಖ್ಯಾತ ಜನರ ಸ್ವಾಭಿಮಾನದ ಪ್ರತೀಕವಾಗಿದೆ ಎಂದು ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.  
       ಅವರು ಗುರುವಾರ ಸಿದ್ದಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆಯೋಧ್ಯೆ ರಾಮಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯದಲ್ಲಿ ವಹಿಸಿ ಮಾತನಾಡಿದರು.
   ಶ್ರೀರಾಮ ದೇಶದ ಬಹುಸಂಖ್ಯಾತರ ಆರಾಧ್ಯ ದೈವ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ರಾಮಮಂದಿರ ನಿರ್ಮಾಣ ಕಾರ್ಯವನ್ನು ದೇಶದ ಯಾವುದಾದರೂ ದೊಡ್ಡ ಕಂಪನಿಗಳು, ಉದ್ದಿಮೆದಾರರು, ಶ್ರೀಮಂತರು ವಹಿಸಿಕೊಳ್ಳಬಹುದಾಗಿತ್ತು.  ಆದರೆ ಆ ರೀತಿ ಮಾಡದೆ ದೇಶದ ಪ್ರತಿಯೊಬ್ಬ ರಾಮಭಕ್ತರ ಭಾವನೆ, ಆಸೆ, ಸಂಕಲ್ಪ ಹಾಗು ಕಾಣಿಕೆ ಸಲ್ಲಬೇಕು ಹಾಗು ಈ ಪುಣ್ಯದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಬೇಕೆಂಬ ಉದಾತ್ತ ಮನೋಭಾವನೆಯೊಂದಿಗೆ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿರುವುದು ಈ ದೇಶದ ಹೆಮ್ಮೆಯ ವಿಚಾರವಾಗಿದೆ ಎಂದರು.
    ಮಾತೃ ಮಂಡಳಿ ಅಧ್ಯಕ್ಷೆ ಯಶೋಧ ವೀರಭದ್ರಪ್ಪ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಹಲವು ಹೋರಾಟಗಳು ನಡೆದಿವೆ. ಲಕ್ಷಾಂತರ ಜನರು ತಮ್ಮ ಬದುಕನ್ನು ಸಮರ್ಪಿಸಿಕೊಂಡಿದ್ದಾರೆ. ಇವೆಲ್ಲದರ ಫಲವಾಗಿ ಇಂದು ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ಪುಣ್ಯದ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.
    ಶಾಶ್ವತಿ ಮಹಿಳಾ ಸಮಾಜದ ಅಧ್ಯಕ್ಷೆ ರೂಪರಾವ್ ಮಾತನಾಡಿ, ಮಂದಿರ ನಿರ್ಮಾಣ ಕಾರ್ಯಕ್ಕೆ ನಿಧಿ ಸಂಗ್ರಹದ ಸಲುವಾಗಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ಕಾಣಿಕೆ ಸ್ವೀಕರಿಸುತ್ತಿದ್ದು, ಹೊಸತನದ ಅನುಭವವನ್ನುಂಟು ಮಾಡುತ್ತಿದೆ. ಬಹುಮುಖ್ಯವಾಗಿ ಬಹಳಷ್ಟು ಮುಸ್ಲಿಂ ಹಾಗು ಕ್ರಿಶ್ಚಿಯನ್ ಸಮುದಾಯದವರು ಸಹ ಅಭಿಮಾನ ಪೂರ್ವಕವಾಗಿ ನಿಧಿಯನ್ನು ಸಮರ್ಪಿಸುತ್ತಿರುವುದು ವಿಶೇಷವಾದ ಸಂಗತಿಯಾಗಿದೆ ಎಂದರು.  
    ವೇದಿಕೆಯಲ್ಲಿ ಡಾ. ದತ್ತಾತ್ರಿ, ರಮೇಶ್ ಬಾಬು, ಶಿವಮೂರ್ತಿ, ಶಿವಕುಮಾರ್, ಪಿ. ವೆಂಕಟರಮಣ ಶೇಟ್, ಕೆ. ಮುತ್ತು ರಾಮಲಿಂಗಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
     ಕಾರ್ಯಕ್ರಮದಲ್ಲಿ ಭಕ್ತರಿಂದ ಸಂಗ್ರಹಿಸಲಾದ ೨.೧೫ ಲಕ್ಷ ರು. ದೇಣಿಗೆಯನ್ನು ಶ್ರೀ ರಾಮಜನ್ಮ ಭೂಮಿ ನಿರ್ಮಾಣದ ನಿಧಿ ಸಮರ್ಪಣ ಟ್ರಸ್ಟ್‌ಗೆ ಸಮರ್ಪಿಸಲಾಯಿತು. ಹಾ. ರಾಮಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪಂಚರತ್ನಮ್ಮ ಪ್ರಾರ್ಥಿಸಿದರು. ರಾಮಮೂರ್ತಿ ಸ್ವಾಗತಿಸಿದರು.  

ಫೆ.೬ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಫೆ. ೪: ನಗರದ ಸೀಗೆಬಾಗಿ ಮೆಸ್ಕಾಂ ೬೬/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಫೆ.೬ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೪ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
   ಹಳೇನಗರ, ತಾಲೂಕು ಕಛೇರಿ ರಸ್ತೆ, ರಂಗಪ್ಪ ವೃತ್ತ, ಬಸವೇಶ್ವರ ವೃತ್ತ, ಕೋಟೆ ಏರಿಯಾ, ಕಂಚಿಬಾಗಿಲು, ಶ್ರೀ ಹಳದಮ್ಮ ದೇವಸ್ಥಾನ ಬೀದಿ, ಖಾಜಿ ಮೊಹಲ್ಲಾ, ಭೂತನಗುಡಿ, ಹೊಸಮನೆ, ಸೀಗೇಬಾಗಿ, ಹಳೇಸೀಗೇಬಾಗಿ, ಅಶ್ವಸ್ಥ ನಗರ, ಕಬಳಿಕಟ್ಟೆ, ಭದ್ರಾಕಾಲೋನಿ, ಸಿ.ಎನ್ ರಸ್ತೆ, ಎಪಿಎಂಸಿ, ತರೀಕೆರೆ ರಸ್ತೆ, ಗಾಂಧಿವೃತ್ತ, ಕೋಡಿಹಳ್ಳಿ, ಮಾರುತಿ ನಗರ, ಸುಣ್ಣದಹಳ್ಳಿ, ಚನ್ನಗಿರಿ ರಸ್ತೆ, ಹೊಸ ಸೇತುವೆ ರಸ್ತೆ, ಸಿದ್ದಾರೂಢ ನಗರ, ಶಂಕರಮಠ, ಕನಕನಗರ, ಸ್ಮಶಾನ ಪ್ರದೇಶ, ಕ.ರಾ.ರ.ಸಾ.ನಿ ಘಟಕ, ಹೊಳೆಹೊನ್ನೂರು ರಸ್ತೆ, ಖಲಂದರ ನಗರ, ಜಟ್‌ಪಟ್ ನಗರ, ಅನ್ವರ್ ಕಾಲೋನಿ, ಮೊಮಿನ್ ಮೊಹಲ್ಲಾ, ಅಮೀರ್‌ಜಾನ್ ಕಾಲೋನಿ, ಕೂಡ್ಲಿಗೆರೆ, ಅತ್ತಿಗುಂದ, ಕಲ್ಪನಹಳ್ಳಿ, ಕುಮರಿ ನಾರಾಯಣಪುರ, ಸೀತಾರಾಮಪುರ, ಅರಳಿಹಳ್ಳಿ, ಬೆಳ್ಳಿಗೆರೆ, ಬಂಡಿಗುಡ್ಡ, ಕೊಮಾರನಹಳ್ಳಿ, ಮಜ್ಜಿಗೇನಹಳ್ಳಿ, ಗುಡ್ಡದನೇರಳೆಕೆರೆ, ಗೌಡ್ರಹಳ್ಳಿ, ಬಾಬಳ್ಳಿ, ವೀರಾಪುರ, ಶ್ರೀರಾಮನಗರ, ಲಕ್ಷ್ಮೀಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
   ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.

ಮಾದಿಗ ಚೈತನ್ಯ ರಥ ಯಾತ್ರೆಗೆ ಅದ್ದೂರಿ ಸ್ವಾಗತ : ಎ.ಜೆ ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಆಗ್ರಹ

ಬುಧವಾರ ರಾತ್ರಿ ಭದ್ರಾವತಿ ನಗರಕ್ಕೆ ಆಗಮಿಸಿದ ೨ನೇ ಹಂತದ ಮಾದಿಗ ವಿರಾಟ್ ಶಕ್ತಿ ಪ್ರದರ್ಶನದ ಮಾದಿಗ 'ಚೈತನ್ಯ ರಥ ಯಾತ್ರೆ'ಗೆ ಅದ್ದೂರಿ ಸ್ವಾಗತ ಕೋರಲಾಯಿತು.  ಈ ಸಂದರ್ಭದಲ್ಲಿ ಮಾದಿಗ ಒಕ್ಕೂಟದ ರಾಜ್ಯ ಮುಖಂಡರು ಮಾತನಾಡಿದರು.
    ಭದ್ರಾವತಿ, ಫೆ. ೪: ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿ ಜಾರಿಗಾಗಿ  ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ೨ನೇ ಹಂತದ ಮಾದಿಗ ವಿರಾಟ್ ಶಕ್ತಿ ಪ್ರದರ್ಶನದ ಮಾದಿಗ 'ಚೈತನ್ಯ ರಥ ಯಾತ್ರೆ' ಬುಧವಾರ ರಾತ್ರಿ ನಗರಕ್ಕೆ ಆಗಮಿಸಿತು.
    ತಾಲೂಕು ಮಾದಿಗ ಒಕ್ಕೂಟದಿಂದ ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ರಥ ಯಾತ್ರೆಗೆ ಅದ್ದೂರಿ ಸ್ವಾಗತ ಕೋರಲಾಯಿತು. ಒಕ್ಕೂಟದ ರಾಜ್ಯ ಸಮಿತಿ ಮುಖಂಡರಾದ ಹೆಣ್ಣೂರು ಲಕ್ಷ್ಮಿನಾರಾಯಣ, ರಾಮಚಂದ್ರ ಕಬಲಿಕ್ಕರ್, ಅಮ್ಮಣಾ ಲಿಂಬೋಲಿಕರ್ ಮತ್ತು ನಾಗರಾಜ್ ಸೇರಿದಂತೆ ಇನ್ನಿತರರು ಮಾತನಾಡಿ, ಎ.ಜೆ ಸದಾಶಿವ ಆಯೋಗದ ವರದಿಯನ್ನು ಸರ್ಕಾರ ತಕ್ಷಣ ಜಾರಿಗೆ ತರಬೇಕೆಂದು ಆಗ್ರಹಿಸಿದರು.



ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿ ಜಾರಿಗಾಗಿ  ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ೨ನೇ ಹಂತದ ಮಾದಿಗ ವಿರಾಟ್ ಶಕ್ತಿ ಪ್ರದರ್ಶನದ ಮಾದಿಗ 'ಚೈತನ್ಯ ರಥ ಯಾತ್ರೆ' ಬುಧವಾರ ರಾತ್ರಿ ಭದ್ರಾವತಿ ನಗರಕ್ಕೆ ಆಗಮಿಸಿತು. ಈ ಸಂದರ್ಭದಲ್ಲಿ ಮಾದಿಗ ಒಕ್ಕೂಟದ ರಾಜ್ಯ ಮುಖಂಡರು ಮಾತನಾಡಿದರು.
     ಒಕ್ಕೂಟದ ತಾಲೂಕು ಅಧ್ಯಕ್ಷ ಎಂ. ಶಿವಕುಮಾರ್, ಗೌರವಾಧ್ಯಕ್ಷ ಶಿವಬಸಪ್ಪ, ಪ್ರಮುಖರಾದ ಹರೀಶ್, ಕೃಷ್ಣ, ಮೈಲಾರಪ್ಪ, ವೆಂಕಟೇಶ್, ಮಂಜು(ಹಜಾರೆ), ನಾಗರಾಜ್, ಭರತ್, ಸಿರಿಯೂರು ಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಫೆ.೮ರಿಂದ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ

ಭದ್ರಾವತಿ, ಫೆ. ೪: ನಗರಸಭೆ ವ್ಯಾಪ್ತಿಯ ಎಂಪಿಎಂ ಕಾರ್ಖಾನೆ ರಸ್ತೆಯ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಫೆ. ೮ ಮತ್ತು ೯ರಂದು ಶ್ರೀ ಚೌಡೇಶ್ವರಿ ಅಮ್ಮನವರ ೫೧ನೇ ವರ್ಷದ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
  ಜಾತ್ರಾ ಮಹೋತ್ಸವ ಅಂಗವಾಗಿ ಅಮ್ಮನವರಿಗೆ ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಅಮ್ಮನವರ ಉತ್ಸವ ಮೆರವಣಿಗೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಪುರಸಭಾ ಸದಸ್ಯೆ ಉಮಾದೇವಿ ನಿಧನ

ಉಮಾದೇವಿ
ಭದ್ರಾವತಿ, ಜ. ೪: ಹಳೇನಗರದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ರಸ್ತೆ ನಿವಾಸಿ, ಮಾಜಿ ಪುರಸಭಾ ಸದಸ್ಯೆ ಉಮಾದೇವಿ(೭೯) ಗುರುವಾರ ನಿಧನ ಹೊಂದಿದರು.
     ಉಮಾದೇವಿಯವರು ಜನಸಂಘದ ಕಾರ್ಯಕರ್ತರು, ಬಿಜೆಪಿ ಪಕ್ಷದ ಹಿರಿಯ ಮುಖಂಡ ಬಿ.ಎಚ್ ರುದ್ರಪ್ಪನವರ ಪತ್ನಿಯಾಗಿದ್ದು, ಪತಿ ಹಾಗು ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳನ್ನು ಬಿಟ್ಟಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಫೆ.೫ರ ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ. 
    ಮೃತರ ನಿಧನಕ್ಕೆ ಪುರಸಭೆ ಮಾಜಿ ಉಪಾಧ್ಯಕ್ಷ ಟಿ. ವೆಂಕಟೇಶ್, ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ನರಸಿಂಹಚಾರ್, ಬಿಜೆಪಿ ಮಂಡಲ ಕಾರ್ಯದರ್ಶಿ ಚನ್ನೇಶ್  ಹಾಗು ಪಕ್ಷದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.