ಗುರುವಾರ, ನವೆಂಬರ್ 26, 2020

ವಚನ ಸಾಹಿತ್ಯ, ದಾಸ ಸಾಹಿತ್ಯ ಕನ್ನಡ ನಾಡಿನಲ್ಲಿ ಜೀವಂತ ಸಾಹಿತ್ಯಗಳಾಗಿ ಉಳಿದಿವೆ : ಎಚ್.ಎನ್ ಮಹಾರುದ್ರ

ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗುರುವಾರ ದತ್ತಿ ದಾನಿಗಳಾದ ವಿಜಾಪುರ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಡಾ. ಎಸ್.ಎಸ್ ವಿಜಯರವರ ಸಹಕಾರೊಂದಿಗೆ ಕಾಗದನಗರದ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ದತ್ತಿ ಕಾರ್ಯಕ್ರಮವನ್ನು ಎಂಪಿಎಂ ಶಿಕ್ಷಣ ಸಂಸ್ಥೆಗಳ ಕೋಶಾಧ್ಯಕ್ಷ ಎಂ.ಡಿ ರವಿಕುಮಾರ್ ಉದ್ಘಾಟಿಸಿದರು. 
ಭದ್ರಾವತಿ, ನ. ೨೬: ವಚನ ಸಾಹಿತ್ಯ, ದಾಸ ಸಾಹಿತ್ಯ ಸೇರಿದಂತೆ ಹಲವು ಸಾಹಿತ್ಯಗಳು ಕನ್ನಡ ನಾಡಿನಲ್ಲಿ ಎಂದಿಗೂ ಜೀವಂತವಾಗಿ ಉಳಿದುಕೊಳ್ಳುವ ಸಾಹಿತ್ಯಗಳಾಗಿವೆ. ಈ ಹಿನ್ನಲೆಯಲ್ಲಿ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ ಲಭಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ ತಿಳಿಸಿದರು.
      ಅವರು ಗುರುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದತ್ತಿ ದಾನಿಗಳಾದ ವಿಜಾಪುರ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಡಾ. ಎಸ್.ಎಸ್ ವಿಜಯರವರ ಸಹಕಾರೊಂದಿಗೆ ಕಾಗದನಗರದ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ದತ್ತಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
     ಕನ್ನಡಕ್ಕೆ ತನ್ನದೇ ಆದ ಪರಂಪರೆ ಇದ್ದು, ವೈಭವದ ಭಾಷೆಯಾಗಿದೆ. ವಿಶೇಷವಾದ ಸ್ಥಾನಮಾನ ನೀಡಲಾಗಿದೆ. ಇಂತಹ ಭಾಷೆ ಮೇಲಿನ ಅಭಿಮಾನ ಹೆಚ್ಚಾಗಬೇಕು. ಎಲ್ಲಾ ಭಾಷೆಗಳನ್ನು ಕಲಿಯಬೇಕು. ಆದರೆ ಮಾತೃ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.
ವಚನ ಸಾಹಿತ್ಯ ಎಂಬುದು ಬದುಕಿನ ಸಾಹಿತ್ಯವಾಗಿದೆ. ನಮ್ಮ ಬದುಕು ವಚನಗಳ ಆಶಯದಂತೆ ರೂಪುಕೊಳ್ಳಬೇಕು. ಈ ಹಿನ್ನಲೆಯಲ್ಲಿ ನಾವುಗಳು ವಚನಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕೆಂದರು.
   ಪ್ರಾಂಶುಪಾಲ ಆರ್. ಸತೀಶ್ ಮಾತನಾಡಿ, ದೇಶದ ಸಂವಿಧಾನ ಎಲ್ಲರೂ ಸಮಾನತೆ, ಸಹಬಾಳ್ವೆಯಿಂದ ಬದುಕುವಂತಹ ಅವಕಾಶ ಕಲ್ಪಿಸಿಕೊಟ್ಟಿದೆ. ಇಂತಹ ಸಂವಿಧಾನವನ್ನು ನಾವೆಲ್ಲರೂ ಗೌರವಿಸಬೇಕೆಂದು ಸಂವಿಧಾನ ಪ್ರತಿಜ್ಞಾ ವಿಧಿ ಬೋಧಿಸಿದರು.
ಕುರಿತು ಬೊಮ್ಮನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎ. ತಿಪ್ಪೇಸ್ವಾಮಿ ವಚನಗಾರ್ತಿಯರ ವಚನ ಗಾಯನ ಮತ್ತು ವ್ಯಾಖ್ಯಾನ ಕುರಿತು ಉಪನ್ಯಾಸ ನೀಡಿದರು.
    ಎಂಪಿಎಂ ಶಿಕ್ಷಣ ಸಂಸ್ಥೆಗಳ ಕೋಶಾಧ್ಯಕ್ಷ ಎಂ.ಡಿ ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಜಿ.ಎನ್ ಲಕ್ಷ್ಮೀಕಾಂತ, ಮುಖ್ಯೋಪಾಧ್ಯಾಯಿನಿ ಭಾರತಿ, ಕಸಾಪ ಕಾರ್ಯದರ್ಶಿಗಳಾದ ಸಿ. ಚನ್ನಪ್ಪ, ವೈ.ಕೆ ಹನುಮಂತಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಐಎಸ್‌ಎಲ್ ಕಾರ್ಖಾನೆ ಖಾಸಗಿಕರಣ ವಿರೋಧಿಸಿ ಪ್ರತಿಭಟನೆ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಖಾಸಗಿಕರಣ ವಿರೋಧಿಸಿ ಗುರುವಾರ ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ನ. ೨೬: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ  ಖಾಸಗಿಕರಣಗೊಳಿಸಬಾರದು ಹಾಗು ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಕಾರ್ಖಾನೆ ಮುಂಭಾಗ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
    ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುತ್ತಿದೆ. ಅಲ್ಲದೆ ಹಲವಾರು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕ ವರ್ಗವನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಕಾರ್ಮಿಕ ಮುಖಂಡರು ಆರೋಪಿಸಿದರು.
     ವಿಐಎಸ್‌ಎಲ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗಿಕರಣಗೊಳಿಸಬಾರದು. ಇದರಿಂದ ಭವಿಷ್ಯದಲ್ಲಿ ಕಾರ್ಖಾನೆ ಶಾಶ್ವತವಾಗಿ ಮುಚ್ಚಿ ಹೋಗಲಿದೆ. ಕಾರ್ಮಿಕರು ಬೀದಿ ಪಾಲಾಗಲಿದ್ದು, ಉದ್ಯೋಗ ಹುಡುಕಿಕೊಂಡು ಬೇರೆಡೆಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದೀಗ ನಿವೃತ್ತ ಕಾರ್ಮಿಕರು ವಾಸಿಸುತ್ತಿರುವ ಮನೆಗಳನ್ನು ಖಾಲಿ ಮಾಡಿಸುವ ಹುನ್ನಾರ ನಡೆಸಲಾಗುತ್ತಿದ್ದು, ೩೦-೪೦ ವರ್ಷ ಕಾರ್ಖಾನೆಯಲ್ಲಿ ದುಡಿದ ಕಾರ್ಮಿಕರು, ಕುಟುಂಬ ವರ್ಗದವರು ಅತಂತ್ರರಾಗಿ ಬದುಕುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಕ್ಷಣ ಖಾಸಗಿಕರಣ ಪ್ರಕ್ರಿಯೆ ಕೈಬಿಡಬೇಕು. ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಬೇಕು. ಕಾರ್ಮಿಕರಿಗೆ ನಿರಂತರವಾಗಿ ಕೆಲಸ ನೀಡಬೇಕೆಂದು ಆಗ್ರಹಿಸಿದರು.
    ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಪದಾಧಿಕಾರಿಗಳಾದ ಬಸಂತಕುಮಾರ್, ಅಮೃತ್, ರಾಘವೇಂದ್ರ, ಮೋಹನ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ರಾಕೇಶ್, ನಿವೃತ್ತ ಕಾರ್ಮಿಕರ ಸಂಘದ ನರಸಿಂಹಚಾರ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸುರೇಶ್ ಸೇರಿದಂತೆ ಕಾಯಂ ಮತ್ತು ಗುತ್ತಿಗೆ ಕಾರ್ಮಿಕರು, ಇನ್ನಿತರರು ಪಾಲ್ಗೊಂಡಿದ್ದರು.  

ವಿವಿಧ ಬೇಡಿಕೆ ಈಡೇರಿಕೆಗಾಗಿ ಗ್ರಾಮೀಣ ನೌಕರರ ಪ್ರತಿಭಟನೆ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘಟನೆ(ಎಐಜಿಡಿಎಸ್‌ಯು)ವತಿಯಿಂದ ಗುರುವಾರ ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಸಮೀಪದಲ್ಲಿರುವ ಪ್ರಧಾನ ಅಂಚೆ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ನ. ೨೬: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘಟನೆ(ಎಐಜಿಡಿಎಸ್‌ಯು)ವತಿಯಿಂದ ಗುರುವಾರ ನಗರದ ವಿಐಎಸ್‌ಎಲ್ ಕಾರ್ಖಾನೆ ಸಮೀಪದಲ್ಲಿರುವ ಪ್ರಧಾನ ಅಂಚೆ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
   ಗ್ರಾಮೀಣ ಅಂಚೆ ನೌಕರರನ್ನು ಖಾಯಂಗೊಳಿಸಬೇಕು, ಸೇವಾವಧಿಯಲ್ಲಿ ಕಾಲ ಕಾಲಕ್ಕೆ ಬಡ್ತಿ ನೀಡಬೇಕು, ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು, ೧೮೦ ದಿನಗಳ ರಜಾ ನಗದೀಕರಣಕ್ಕೆ ಮಂಜೂರಾತಿ ನೀಡಬೇಕು, ತಡೆಹಿಡಿದ ತುಟ್ಟಿ ಭತ್ಯೆಯನ್ನು ಬಿಡುಗಡೆಗೊಳಿಸಬೇಕು, ಹಬ್ಬದ ಮುಂಗಡ ಹಣವನ್ನು ಬಡ್ಡಿ ರಹಿತವಾಗಿ ನೀಡಬೇಕು, ಗುಂಪು ವಿಮಾ ಮೊತ್ತ ಹೆಚ್ಚಿಸಬೇಕು ಮತ್ತು ಕಾನೂನು ಬದ್ದವಲ್ಲದ ಫೆಡಿಲಿಟಿ ಬಾಂಡ್ ನೀತಿ ರದ್ದುಗೊಳಿಸಬೇಕು ಸೇರಿದಂತೆ ಇತ್ಯಾದಿ ೧೨ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು.
  ಸಂಘಟನೆಯ ಶಿವಮೊಗ್ಗ ವಿಭಾಗದ ಖಜಾಂಚಿ ಎಚ್.ವಿ ರಾಜ್‌ಕುಮಾರ್ ನೇತೃತ್ವ ವಹಿಸಿದ್ದರು. ಅಂಚೆ ಕಛೇರಿಯ ಎಲ್ಲಾ ಗ್ರಾಮೀಣ ಅಂಚೆ ನೌಕರರು ಪಾಲ್ಗೊಂಡಿದ್ದರು.

ಭದ್ರಾವತಿ ವಿವಿಧೆಡೆ ಸಂವಿದಾನ ದಿನ ಆಚರಣೆ

ಭದ್ರಾವತಿ ಬೈಪಾಸ್ ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಗುರುವಾರ ವಿಶೇಷವಾಗಿ ಸಂವಿಧಾನ ದಿನ ಆಚರಿಸಲಾಯಿತು.
ಭದ್ರಾವತಿ, ನ. ೨೬: ನಗರದ ರಂಗಪ್ಪ ವೃತ್ತ, ಅಗ್ನಿಶಾಮಕ ಠಾಣೆ, ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ವಿವಿಧೆಡೆ ಗುರುವಾರ ಸಂವಿಧಾನ ದಿನ ಆಚರಿಸಲಾಯಿತು.
       ಅಗ್ನಿಶಾಮಕ ಠಾಣೆಯಲ್ಲಿ ಸಂವಿಧಾನ ದಿನ ಆಚರಣೆ :
   ನಗರದ ಬೈಪಾಸ್ ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ವಿಶೇಷವಾಗಿ ಸಂವಿಧಾನ ದಿನ ಆಚರಿಸಲಾಯಿತು. ಮಕ್ಕಳಿಗೆ ಚರ್ಚಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ಮತ್ತು ಸಂಸತ್ ಅಣುಕು ಪ್ರದರ್ಶನ ಏರ್ಪಡಿಸಲಾಗಿತ್ತು. ಅಲ್ಲದೆ ಅಗ್ನಿ ಅವಗಡಗಳ ಕುರಿತು ಜಾಗೃತಿ ಮೂಡಿಸಲಾಯಿತು. ಠಾಣಾಧಿಕಾರಿ ವಸಂತ ಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಕೊರೋನಾ ಸಂಕಷ್ಟದ ಸಮಯದಲ್ಲಿ ಹಮ್ಮಿಕೊಳ್ಳಲಾಗಿರುವ ವಿಶೇಷ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. 
  

ಭದ್ರಾವತಿ ರಂಗಪ್ಪ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದ ಎಸ್‌ಸಿ ಮೋರ್ಚಾ ವತಿಯಿಂದ ಸಂವಿಧಾನ ದಿನ ಆಚರಿಸಲಾಯಿತು.
     ಬಿಜೆಪಿ ಎಸ್‌ಸಿ ಮೋರ್ಚಾದಿಂದ ಸಂವಿಧಾನ ದಿನ ಆಚರಣೆ:
   ರಂಗಪ್ಪ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದ ಎಸ್‌ಸಿ ಮೋರ್ಚಾ ವತಿಯಿಂದ ಸಂವಿಧಾನ ದಿನ ಆಚರಿಸಲಾಯಿತು. ಕಾರ್ಯಕ್ರಮ ಆರಂಭಕ್ಕೂ ಮೊದಲು ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಇರುವ ಭಾರತರತ್ನ, ಸಂವಿಧಾನ ಶಿಲ್ಪಿ, ಡಾ. ಬಾಬಾ ಸಾಹೇಬ್ ಅಂಬೇಡ್‌ರವರ ಪ್ರತಿಮೆ ಮಾಲಾರ್ಪಣೆ ಮಾಡಲಾಯಿತು.
    ಎಸ್‌ಸಿ ಮೋರ್ಚಾ ಅಧ್ಯಕ್ಷ ಪಿ. ಗಣೇಶ್‌ರಾವ್ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಕಾರ್ಯದರ್ಶಿ ಚನ್ನೇಶ್, ಮುಖಂಡರಾದ ವಿ. ಕದಿರೇಶ್, ಕೂಡ್ಲಿಗೆರೆ ಹಾಲೇಶ್, ಬಿ.ಕೆ ಶ್ರೀನಾಥ್, ರಾಮನಾಥ ಬರ್ಗೆ, ಕುಪ್ಪಸ್ವಾಮಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ದಿನ ಆಚರಿಸಲಾಯಿತು.
      ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ದಿನ ಆಚರಣೆ:
    ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ದಿನ ಆಚರಣೆ ಪ್ರಯುಕ್ತ ಸಂವಿಧಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಮಾತನಾಡಿ, ಭಾರತೀಯ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠ ಹಾಗು ಬಲಿಷ್ಠ ಸಂವಿಧಾನವಾಗಿದೆ. ಎಲ್ಲರೂ ಸಂವಿಧಾನವನ್ನು ಗೌರವಿಸುವ ಮೂಲಕ ಅದರಂತೆ ಮುನ್ನಡೆಬೇಕೆಂದರು.
ಉಪನ್ಯಾಸಕರಾದ ಡಾ. ಬಿ.ಜಿ ಅಮೃತೇಶ್ವರ, ಎನ್‌ಯುಆರ್ ಹೆಗಡೆ, ಡಾ. ಬಸವರಾಜ್, ಮಲ್ಲಪ್ಪ, ಉಮೇಶ್, ರೇವಣ್ಣಸಿದ್ದಪ್ಪ, ಡಾ. ಜಿ.ಆರ್ ರಾಜಶೇಖರ್, ಮನೋಹರ್ ಹಾಗು ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮಾನವ ಹಕ್ಕುಗಳ ರಕ್ಷಣೆ, ಭ್ರಷ್ಟಾಚಾರ ನಿಯಂತ್ರಣ ಮಂಡಳಿ ಕಾರ್ಮಿಕ ಘಟಕದ ಉಪ ನಿರ್ದೇಶಕರಾಗಿ ಎನ್. ಉಮೇಶ್

ಎನ್ ಉಮೇಶ್
ಭದ್ರಾವತಿ, ನ. ೨೬: ಭಾರತ ಸರ್ಕಾರದಿಂದ ಸಾಮಾಜಿಕ ಸೇವಾ ಟ್ರಸ್ಟ್‌ಗಳ ಕಾಯಿದೆಯಡಿ ನೋಂದಾಯಿಸಲ್ಪಟ್ಟಿರುವ ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ಕಾರ್ಮಿಕ ಘಟಕದ ತಾಲ್ಲೂಕು ಉಪ ನಿರ್ದೇಶಕರಾಗಿ ಸುರಗಿತೋಪಿನ ಎನ್. ಉಮೇಶ್ ನೇಮಕಗೊಂಡಿದ್ದಾರೆ.
   ಮಂಡಳಿಯ ಅಧ್ಯಕ್ಷರ ಆದೇಶದ ಮೇರೆಗೆ ಪ್ರಧಾನ ಕಾರ್ಯದರ್ಶಿಗಳು ನೇಮಕಾತಿಗೆ ಆದೇಶ ಹೊರಡಿಸಿದ್ದಾರೆಂದು ರಾಷ್ಟ್ರೀಯ ಹೆಚ್ಚುವರಿ ಮುಖ್ಯ ನಿರ್ದೇಶಕ ಆರ್. ಸ್ಕಂದ ಶರತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಉಮೇಶ್‌ರವರು ನಗರದ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಹಲವಾರು ವರ್ಷಗಳಿಂದ ಗುತ್ತಿಗೆ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಾರ್ಮಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ.