Thursday, May 13, 2021

ಹಸಿದವರ ಸಂಕಷ್ಟಕ್ಕೆ ಸ್ಪಂದಿಸಿದ ನೂತನ ನಗರಸಭಾ ಸದಸ್ಯ ಕೆ. ಸುದೀಪ್‌ಕುಮಾರ್

ಭದ್ರಾವತಿಯಲ್ಲಿ ಗುರುವಾರ ನಗರಸಭೆ ೧೨ನೇ ವಾರ್ಡ್ ನಿವಾಸಿಗಳಿಗೆ ನೂತನ ನಗರಸಭಾ ಸದಸ್ಯ ಕೆ. ಸುದೀಪ್‌ಕುಮಾರ್ ನೇತೃತ್ವದಲ್ಲಿ ಸಿದ್ದಪಡಿಸಿದ ಆಹಾರ ವಿತರಿಸಲಾಯಿತು.
     ಭದ್ರಾವತಿ, ಮೇ. ೧೩: ನೂತನ ನಗರಸಭಾ ಸದಸ್ಯ ಕೆ. ಸುದೀಪ್‌ಕುಮಾರ್ ನೇತೃತ್ವದಲ್ಲಿ ಗುರುವಾರ ನಗರಸಭೆ ವಾರ್ಡ್ ನಂ. ೧೨ರಲ್ಲಿ ಎಲ್ಲಾ ರಸ್ತೆಗಳಿಗೂ ಸ್ಯಾನಿಟೈಜರ್ ಸಿಂಪಡಿಸಲಾಯಿತು.
    ಅಲ್ಲದೆ ವಾರ್ಡ್‌ನ ಪ್ರತಿಯೊಂದು ಮನೆಗೂ ಸಿದ್ದಪಡಿಸಿದ ಆಹಾರ ವಿತರಿಸಲಾಯಿತು. ವಾರ್ಡ್ ಪ್ರಮುಖರಾದ ಗಿರೀಶ್, ನವೀನ್, ಪ್ರಕಾಶ್, ಅಶೋಕ್, ಚರಣ್, ರಘು, ಆಕಾಶ್, ಸುನಿಲ್, ಕಿಶೋರ್ ಸೇರಿದಂತೆ ಇನ್ನಿತರರು ಈ ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
   ಕಳೆದ ಬಾರಿ ಸಹ ಲಾಕ್‌ಡೌನ್ ಸಮಯದಲ್ಲೂ ಸುದೀಪ್‌ಕುಮಾರ್ ಬಡವರ ಸಂಕಷ್ಟಕ್ಕೆ ಸ್ಪಂದಿಸಿದ್ದರು. ಅಲ್ಲದೆ ಜಯಕರ್ನಾಟಕ ಜನಪರ ವೇದಿಕೆ, ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರಸೇನಾ ವಿನಾಯಕ ಸೇವಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಒಂದೇ ದಿನ ೨೭೭ ಮಂದಿಗೆ ಸೋಂಕು : ೪ ಮಂದಿ ಬಲಿ

೧೦೦ ಹಾಸಿಗೆಯುಳ್ಳ ಆರೈಕೆ ಕೇಂದ್ರ ಮೇ.೧೪ ರಿಂದ ಕಾರ್ಯಾರಂಭ


ಕಳೆದ ೪ ದಿನಗಳ ಹಿಂದೆ ಭದ್ರಾವತಿ ಕಾಗದ ನಗರದ ಎಂಪಿಎಂ ಕಲ್ಯಾಣ ಮಂಟಪದಲ್ಲಿ ತೆರೆಯಲಾಗಿರುವ ೧೦೦ ಹಾಸಿಗೆಯುಳ್ಳ ಕೋವಿಡ್ ಆರೈಕೆ ಕೇಂದ್ರ ಇನ್ನೂ ಕಾರ್ಯಾರಂಭಗೊಂಡಿಲ್ಲ
   ಭದ್ರಾವತಿ, ಮೇ. ೧೩: ರಾಜ್ಯ ಸರ್ಕಾರ ಸೆಮಿ ಲಾಕ್‌ಡೌನ್ ಜಾರಿಗೊಳಿಸಿ ೪ ದಿನ ಕಳೆದಿದ್ದು, ಈ ನಡುವೆ ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಗುರುವಾರ ಒಂದೇ ದಿನ ೨೭೭ ಸೋಂಕು ಪತ್ತೆಯಾಗಿದೆ.
   ಸೋಂಕಿನ ಪ್ರಮಾಣ ಇಳಿಮುಖವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಕಳೆದ ೪ ದಿನಗಳಿಂದ ಏರಿಕೆ ಹಂತದಲ್ಲಿಯೇ ಸಾಗುತ್ತಿದೆ. ಒಟ್ಟು ೩೩೮ ಮಾದರಿ ಸಂಗ್ರಹಿಸಲಾಗಿದ್ದು, ಈ ಪೈಕಿ ೨೭೭ ಸೋಂಕು ದೃಢಪಟ್ಟಿದೆ. ಈ ನಡುವೆ ೭೮ ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಒಟ್ಟು ೪ ಜನ ಬಲಿಯಾಗಿದ್ದಾರೆ.
   ಇದುವರೆಗೂ ಒಟ್ಟು ೫೮ ಮಂದಿ ಮೃತಪಟ್ಟಿದ್ದು, ೨೮೯ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ೨೫ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ಈ ಪೈಕಿ ೨ ಜೋನ್ ತೆರವುಗೊಳಿಸಲಾಗಿದೆ.
       ಆರೈಕೆ ಕೇಂದ್ರ ಖಾಲಿ:
    ಕಳೆದ ೪ ದಿನಗಳ ಹಿಂದೆ ಕಾಗದ ನಗರದ ಎಂಪಿಎಂ ಕಲ್ಯಾಣ ಮಂಟಪದಲ್ಲಿ ತೆರೆಯಲಾಗಿರುವ ೧೦೦ ಹಾಸಿಗೆಯುಳ್ಳ ಕೋವಿಡ್ ಆರೈಕೆ ಕೇಂದ್ರ ಇನ್ನೂ ಕಾರ್ಯಾರಂಭಗೊಂಡಿಲ್ಲ. ಪ್ರಸ್ತುತ ವಿಐಎಸ್‌ಎಲ್ ಆಸ್ಪತ್ರೆಯ ಕೋವಿಡ್ ಆರೈಕೆ ಕೇಂದ್ರದಲ್ಲಿ ೧೨ ಮಂದಿ ಇದ್ದು, ಇವರನ್ನು ಶುಕ್ರವಾರ ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ತಿಳಿಸಿದ್ದಾರೆ.

ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವತಿಯಿಂದ ಸ್ಯಾನಿಟೈಜರ್ ಸಿಂಪಡಣೆ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವತಿಯಿಂದ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸ್ಯಾನಿಟೈಜರ್ ಸಿಂಪಡಣೆ ಮಾಡಲಾಯಿತು.
    ಭದ್ರಾವತಿ, ಮೇ. ೧೩: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವತಿಯಿಂದ ಸ್ಯಾನಿಟೈಜರ್ ಸಿಂಪಡಿಸಲಾಯಿತು.
    ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಲಕ್ಕಪ್ಪನ ಕ್ಯಾಂಪ್, ಅಟಗಾರಿ ಕ್ಯಾಂಪ್, ಕಲ್ಪನಹಳ್ಳಿ, ಹಳೇ ಕೂಡ್ಲಿಗೆರೆ, ಕೂಡ್ಲಿಗೆರೆ ಹಾಗು ಕೋಡಿಹಳ್ಳಿ ಒಟ್ಟು ೬ ಗ್ರಾಮಗಳಲ್ಲಿ ಸ್ಯಾನಿಟೈಜರ್ ಸಿಂಪಡಿಸಲಾಯಿತು.
    ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲಕ್ ವೀರಪ್ಪನ್, ಸದಸ್ಯರಾದ ಎಂ. ಜಯಣ್ಣ, ಆರ್.ಎನ್ ರುದ್ರೇಶ್, ಸಿ. ವಿಶ್ವನಾಥ್, ಗೌರಮ್ಮ ಮಹಾದೇವ, ಉಮಾದೇವಿ ತಿಪ್ಪೇಶ್, ಸಿದ್ದಮ್ಮ ನಾಗೇಶ್, ಮುಖಂಡರಾದ ಕೂಡ್ಲಿಗೆರೆ ಎಸ್ ಮಹಾದೇವ, ಎಸ್‌ಡಿಎಂಸಿ ಅಧ್ಯಕ್ಷ ವೀರಪ್ಪನ್, ಆಶಾ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.