Monday, July 27, 2020

ಭದ್ರಾವತಿಯಲ್ಲಿ ಒಂದೇ ದಿನ ೧೭ ಸೋಂಕು ಪತ್ತೆ

ಭದ್ರಾವತಿ, ಜು. ೨೭: ತಾಲೂಕಿನಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸೋಮವಾರ ಒಂದೇ ದಿನ ೧೭ ಪ್ರಕರಣಗಳು ದಾಖಲಾಗಿವೆ.
ಉಜ್ಜನಿಪುರದಲ್ಲಿ ೬೫ ವರ್ಷದ ಮಹಿಳೆ ಮತ್ತು ೩೪ ವರ್ಷದ ಪುರುಷ,  ಹಳೇನಗರ ಮರಾಠ ಬೀದಿಯಲ್ಲಿ ೬೨ ವರ್ಷದ ವ್ಯಕ್ತಿ ಮತ್ತು ೫೫ ವರ್ಷದ ಮಹಿಳೆ, ಬೊಮ್ಮನಕಟ್ಟೆಯಲ್ಲಿ ೪೫ ವರ್ಷದ ವ್ಯಕ್ತಿ, ಹುತ್ತಾ ಕಾಲೋನಿ ೩೭ ವರ್ಷದ ಪುರುಷ, ಅಂಬೇಡ್ಕರ್ ನಗರದಲ್ಲಿ ೪೪ ವರ್ಷದ ವ್ಯಕ್ತಿ, ಗಾಂಧಿನಗರದಲ್ಲಿ ೫೫ ವರ್ಷದ ಮಹಿಳೆ, ಜೈ ಭೀಮ ನಗರದಲ್ಲಿ ೫೭ ವರ್ಷದ ಮಹಿಳೆ, ಸೀಗೆಬಾಗಿಯಲ್ಲಿ ೪೧ ವರ್ಷದ ಪುರುಷ, ಹೊಳೆ ನೇರಳೆಕೆರೆ ೬೫ ವರ್ಷದ ವ್ಯಕ್ತಿ, ದೊಣಬಘಟ್ಟ ತಡಸದಲ್ಲಿ ೪೨ ವರ್ಷದ ಮಹಿಳೆ, ಹೊಳೆಹೊನ್ನೂರಿನಲ್ಲಿ ೨೪ ವರ್ಷದ ಯುವತಿ, ಬಿಆರ್’ಪಿ ಗ್ಯಾರೇಜ್ ಕ್ಯಾಂಪ್’ನಲ್ಲಿ 25 ಹಾಗೂ 65 ವರ್ಷದ ಇಬ್ಬರು ಪುರುಷರು ಮತ್ತು ಹುಣಸೆ ಕಟ್ಟಿ  ಜಂಕ್ಷನ್’ನಲ್ಲಿ 26 ವರ್ಷದ ಯುವಕ  ಒಟ್ಟು ೧೭ ಮಂದಿ ಸೋಂಕಿಗೆ ಒಳಗಾಗಿದ್ದಾರೆ. 
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ,  ಆರೋಗ್ಯ ನಿರೀಕ್ಷಕಿ ಲತಾಮಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದೆ. 

ನಂದಿನ ಹಾಲಿನ ಉತ್ಪನ್ನಗಳ ಮಾರಾಟ ಕೇಂದ್ರ ಉದ್ಘಾಟನೆ

ಭದ್ರಾವತಿ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿ ನೂತನವಾಗಿ ಶ್ರೀ ಕಮಲ್ ಎಂಟರ್‌ಪ್ರೈಸಸ್ ವತಿಯಿಂದ ಆರಂಭಗೊಂಡಿರುವ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟ ಕೇಂದ್ರವನ್ನು ಸೋಮವಾರ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
ಭದ್ರಾವತಿ, ಜು. ೨೭: ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿ ನೂತನವಾಗಿ ಶ್ರೀ ಕಮಲ್ ಎಂಟರ್‌ಪ್ರೈಸಸ್ ವತಿಯಿಂದ ಆರಂಭಗೊಂಡಿರುವ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟ ಕೇಂದ್ರವನ್ನು ಸೋಮವಾರ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
ನಂದಿನಿ ಹಾಲಿನ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ, ಮಜ್ಜಿಗೆ ಹಾಗೂ ಸಿಹಿ ತಿನಿಸುಗಳ ಅಧಿಕೃತ ಮಾರಾಟಗಾರರಾಗಿದ್ದು, ಸುತ್ತಮುತ್ತಲಿನ ಚಿಲ್ಲರೆ ವ್ಯಾಪಾರಿಗಳು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ. 
ಮಾರಾಟ ಕೇಂದ್ರದ ಮಾಲೀಕ ಪಿ.ಸಿ ಜೈನ್, ಪ್ರಮುಖರಾದ ಅಮಿತ್‌ಕುಮಾರ್ ಜೈನ್, ಬಿ. ಮೂರ್ತಿ, ಎಂ. ರವಿ, ಮಿಥುನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಸೈನಿಕರ ಸೇವೆ ಎಂದಿಗೂ ಅಮರ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ಮಾಜಿ ಸೈನಿಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ  ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು. 
ಭದ್ರಾವತಿ, ಜು. ೨೭: ವೀರ ಸೈನಿಕರ ದೇಶ ಸೇವೆ ಎಂದಿಗೂ ಅಮರ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು. 
ಅವರು ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಜನ್ನಾಪುರ ಜಯಶ್ರೀ ವೃತ್ತದ ಬಳಿ ಹಮ್ಮಿಕೊಳ್ಳಲಾಗಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
ಭಾರತೀಯ ಯೋಧರು ಸುಮಾರು ೧೮೦೦ ಮೀಟರ್ ಎತ್ತರದ ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ತಾನ ಸೈನಿಕರ ವಿರುದ್ಧ ಹೋರಾಟ ನಡೆಸಿ ವಿಜಯ ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ದೇಶಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿ ಹೋರಾಟ ನಡೆಸುವ ಯೋಧರಿಗೆ ಭಾರತ ಮಾತೆ ಮತ್ತಷ್ಟು ಶಕ್ತಿಯನ್ನು ನೀಡುವ ಮೂಲಕ ದೇಶವನ್ನು ಅತಿಕ್ರಮಣ ಮಾಡುವವರ ವಿರುದ್ಧ ಹೋರಾಟ ಮುಂದುವರೆಸಬೇಕಾಗಿದೆ. ಪ್ರಸ್ತುತ ಚೀನಾ ಸಹ ದೇಶದ ಗಡಿ ಭಾಗವನ್ನು ಅತಿಕ್ರಮಣ ಮಾಡುತ್ತಿದ್ದು, ಚೀನಾ ದೇಶದ ವಿರುದ್ಧ ಸಹ ನಮ್ಮ ಸೈನಿಕರು ಹೋರಾಟ ನಡೆಸುತ್ತಿದ್ದು, ಈಗಾಗಲೇ ಅನೇಕ ಸೈನಿಕರು ಹುತಾತ್ಮರಾಗಿದ್ದಾರೆ. ಇವರ ಬಲಿದಾನ ಎಂದಿಗೂ ವ್ಯರ್ಥವಾಗಬಾರದು. ಈ ನಿಟ್ಟಿನಲ್ಲಿ ಆಡಳಿತ ನಡೆಸುವ ಸರ್ಕಾರ ಸೇರಿದಂತೆ ದೇಶದ ಎಲ್ಲಾ ಪ್ರಜೆಗಳು ಸೈನಿಕರ ಹೋರಾಟಕ್ಕೆ ಮತ್ತಷ್ಟು ಬಲ ತುಂಬಬೇಕೆಂದರು. 
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಶೋಕ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ನಮ್ಮ ದೇಶದ ಯೋಧರ ಹೋರಾಟ ರೋಮಾಂಚನಕಾರಿಯಾಗಿದ್ದು, ಸುಮಾರು ೬೦ ದಿನ ನಡೆದ ಈ ಯುದ್ಧದಲ್ಲಿ ಹುತಾತ್ಮರಾದ ಯೋಧರನ್ನು ನಾವೆಲ್ಲರೂ ಸ್ಮರಿಸಿಕೊಂಡು ಗೌರವ ಸೂಚಿಸಬೇಕಾಗಿವುದು ಕರ್ತವ್ಯವಾಗಿದೆ ಎಂದರು. 
ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಪ್ರೀತಿ ಕಾರ್ಗಿಲ್ ಯುದ್ಧ ಕುರಿತು ವಿವರಿಸಿದರು. ಮಾಜಿ ಸೈನಿಕರ ಪತ್ನಿಯರು ನೂತನವಾಗಿ ರಚಿಸಿಕೊಂಡಿರುವ ಮಹಿಳಾ ಸೇವಾ ಸಂಘದ ಅಧ್ಯಕ್ಷೆ ಶಶಿಕಲಾ ವೀರ ಯೋಧರ ಕುರಿತು ಮಾತನಾಡಿದರು. 
ನಗರಸಭೆ ಪೌರಾಯುಕ್ತ ಮನೋಹರ್, ಸಂಘದ ಕಾರ್ಯದರ್ಶಿ ವಿನೊದ್ ಪೂಜಾರಿ, ಉಪಾಧ್ಯಕ್ಷ ಬೋರೇಗೌಡ, ಯುವ  ಮುಖಂಡ ಬಿ.ಎಸ್ ಗಣೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ನಿರ್ದೇಶಕ ಗಿರಿ ಕಾರ್ಯಕ್ರಮ ನಿರೂಪಿಸಿದರು. ನಗರದ ವಿವಿಧೆಡೆಗಳಿಂದ ಮಾಜಿ ಸೈನಿಕರು ಪಾಲ್ಗೊಂಡಿದ್ದರು.