Monday, July 27, 2020

ಸೈನಿಕರ ಸೇವೆ ಎಂದಿಗೂ ಅಮರ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ಮಾಜಿ ಸೈನಿಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ  ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು. 
ಭದ್ರಾವತಿ, ಜು. ೨೭: ವೀರ ಸೈನಿಕರ ದೇಶ ಸೇವೆ ಎಂದಿಗೂ ಅಮರ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು. 
ಅವರು ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಜನ್ನಾಪುರ ಜಯಶ್ರೀ ವೃತ್ತದ ಬಳಿ ಹಮ್ಮಿಕೊಳ್ಳಲಾಗಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
ಭಾರತೀಯ ಯೋಧರು ಸುಮಾರು ೧೮೦೦ ಮೀಟರ್ ಎತ್ತರದ ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ತಾನ ಸೈನಿಕರ ವಿರುದ್ಧ ಹೋರಾಟ ನಡೆಸಿ ವಿಜಯ ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ದೇಶಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿ ಹೋರಾಟ ನಡೆಸುವ ಯೋಧರಿಗೆ ಭಾರತ ಮಾತೆ ಮತ್ತಷ್ಟು ಶಕ್ತಿಯನ್ನು ನೀಡುವ ಮೂಲಕ ದೇಶವನ್ನು ಅತಿಕ್ರಮಣ ಮಾಡುವವರ ವಿರುದ್ಧ ಹೋರಾಟ ಮುಂದುವರೆಸಬೇಕಾಗಿದೆ. ಪ್ರಸ್ತುತ ಚೀನಾ ಸಹ ದೇಶದ ಗಡಿ ಭಾಗವನ್ನು ಅತಿಕ್ರಮಣ ಮಾಡುತ್ತಿದ್ದು, ಚೀನಾ ದೇಶದ ವಿರುದ್ಧ ಸಹ ನಮ್ಮ ಸೈನಿಕರು ಹೋರಾಟ ನಡೆಸುತ್ತಿದ್ದು, ಈಗಾಗಲೇ ಅನೇಕ ಸೈನಿಕರು ಹುತಾತ್ಮರಾಗಿದ್ದಾರೆ. ಇವರ ಬಲಿದಾನ ಎಂದಿಗೂ ವ್ಯರ್ಥವಾಗಬಾರದು. ಈ ನಿಟ್ಟಿನಲ್ಲಿ ಆಡಳಿತ ನಡೆಸುವ ಸರ್ಕಾರ ಸೇರಿದಂತೆ ದೇಶದ ಎಲ್ಲಾ ಪ್ರಜೆಗಳು ಸೈನಿಕರ ಹೋರಾಟಕ್ಕೆ ಮತ್ತಷ್ಟು ಬಲ ತುಂಬಬೇಕೆಂದರು. 
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಶೋಕ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ನಮ್ಮ ದೇಶದ ಯೋಧರ ಹೋರಾಟ ರೋಮಾಂಚನಕಾರಿಯಾಗಿದ್ದು, ಸುಮಾರು ೬೦ ದಿನ ನಡೆದ ಈ ಯುದ್ಧದಲ್ಲಿ ಹುತಾತ್ಮರಾದ ಯೋಧರನ್ನು ನಾವೆಲ್ಲರೂ ಸ್ಮರಿಸಿಕೊಂಡು ಗೌರವ ಸೂಚಿಸಬೇಕಾಗಿವುದು ಕರ್ತವ್ಯವಾಗಿದೆ ಎಂದರು. 
ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಪ್ರೀತಿ ಕಾರ್ಗಿಲ್ ಯುದ್ಧ ಕುರಿತು ವಿವರಿಸಿದರು. ಮಾಜಿ ಸೈನಿಕರ ಪತ್ನಿಯರು ನೂತನವಾಗಿ ರಚಿಸಿಕೊಂಡಿರುವ ಮಹಿಳಾ ಸೇವಾ ಸಂಘದ ಅಧ್ಯಕ್ಷೆ ಶಶಿಕಲಾ ವೀರ ಯೋಧರ ಕುರಿತು ಮಾತನಾಡಿದರು. 
ನಗರಸಭೆ ಪೌರಾಯುಕ್ತ ಮನೋಹರ್, ಸಂಘದ ಕಾರ್ಯದರ್ಶಿ ವಿನೊದ್ ಪೂಜಾರಿ, ಉಪಾಧ್ಯಕ್ಷ ಬೋರೇಗೌಡ, ಯುವ  ಮುಖಂಡ ಬಿ.ಎಸ್ ಗಣೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ನಿರ್ದೇಶಕ ಗಿರಿ ಕಾರ್ಯಕ್ರಮ ನಿರೂಪಿಸಿದರು. ನಗರದ ವಿವಿಧೆಡೆಗಳಿಂದ ಮಾಜಿ ಸೈನಿಕರು ಪಾಲ್ಗೊಂಡಿದ್ದರು.  

No comments:

Post a Comment