
ಭದ್ರಾವತಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಜನಕ್ರಾಂತಿ ಸಮಾವೇಶದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಭದ್ರಾವತಿ: ದೇಶದಲ್ಲಿ ಹಿಂದೂ ರಾಷ್ಟ್ರ ರಕ್ಷಣೆಯ ಹೆಸರಿನಲ್ಲಿ ಪುನಃ ಮನುಧರ್ಮ ಮರುಸ್ಥಾಪಿಸುವ ಹುನ್ನಾರ ನಡೆಸಲಾಗುತ್ತಿದ್ದು, ಇದರ ಕುರಿತು ಜಾಗೃತಿ ಮೂಡಿಸುವ ಹಾಗು ದಲಿತರ ಅಭಿವೃದ್ಧಿಗಾಗಿ ಕೆಲವು ಹಕ್ಕೊತ್ತಾಯ ಮಾಡುವ ಉದ್ದೇಶದಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೪ನೇ ಜನ್ಮದಿನದ ಅಂಗವಾಗಿ ಏ.೨೩ರಂದು `ಜನಕ್ರಾಂತಿ ಸಮಾವೇಶ' ಹಮ್ಮಿಕೊಳ್ಳಲಾಗಿದೆ ಎಂದು ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಮುಖಂಡ ಶಿವಬಸಪ್ಪ ಹೇಳಿದರು.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ೭೫ ವರ್ಷಗಳಿಂದ ಸಂವಿಧಾನ ಹಾಗು ಅಂಬೇಡ್ಕರ್‌ರವರನ್ನು ವಿರೋಧಿಸುತ್ತಿರುವ ಸಂಘ ಪರಿವಾರದವರು ಪ್ರಸ್ತುತ ಸಂವಿಧಾನ ಹಾಗು ಅಂಬೇಡ್ಕರ್‌ರವರನ್ನು ಗೌರವಿಸುವ ನಾಟಕವಾಡುತ್ತಿದ್ದಾರೆಂದು ಆರೋಪಿಸಿದರು.
ಇತ್ತೀಚೆಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜರುಗಿದ ಕುಂಭಮೇಳದಲ್ಲಿ ಮಠಾಧೀಶರು ಎಂದು ಕರೆದುಕೊಂಡ ಗುಂಪು ಧಾರ್ಮಿಕ ಸಭೆ ನಡೆಸಿ ಆ ಮೂಲಕ ಹಿಂದೂ ರಾಷ್ಟ್ರಕ್ಕಾಗಿ ೫೦೧ ಪುಟಗಳ ಸಂವಿಧಾನವನ್ನು ಸಿದ್ದಪಡಿಸಿದೆ. ಅದನ್ನು ಶೀಘ್ರವಾಗಿ ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದೆ. ಈ ಸಂವಿಧಾನವನ್ನು ನೋಡಿದರೆ ಮತ್ತೆ ಪುನಃ ವೈದಿಕ ಧರ್ಮ, ಮನು ಧರ್ಮ ಸ್ಥಾಪಿಸುವ ಹುನ್ನಾರದಂತೆ ಕಂಡು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಸುಮಾರು ೨ ವರ್ಷ, ೧೧ ತಿಂಗಳು, ೧೭ ದಿನ ಅವಿರತ ಶ್ರಮದಿಂದ ಬರೆದ ಬಲಿಷ್ಠ ಮತ್ತು ಶ್ರೇಷ್ಠ ಸಂವಿಧಾನ ಇರುವಾಗ ಪ್ರತ್ಯೇಕ ಸಂವಿಧಾನ ರಚಿಸುವುದು, ಅದನ್ನು ಬಿಡುಗಡೆ ಮಾಡುವುದು ದೇಶದ್ರೋಹದ ಕೃತ್ಯ. ಇದಕ್ಕೆ ಕೋಮುವಾದಿ ಪಕ್ಷಗಳ ರಕ್ಷಣೆಯೂ ಇರುವಂತೆ ಕಂಡು ಬರುತ್ತಿದೆ ಎಂದು ದೂರಿದರು.
ಇದೀಗ ಪ್ರಧಾನಿ ನರೇಂದ್ರ ಮೋದಿ ಹಾಗು ಕೇಂದ್ರ ಸಚಿವರು ಮತ್ತು ಸಂಘ ಪರಿವಾರದವರು ಮೇಲ್ನೋಟಕ್ಕೆ ಅಂಬೇಡ್ಕರ್ ಹಾಗು ಸಂವಿಧಾನ ಗೌರವಿಸುವ ನಾಟಕವಾಡುತ್ತಿದ್ದಾರೆ. ಮತ್ತೊಂದೆಡೆ ಅಂಬೇಡ್ಕರ್‌ರವರ ಸಂವಿಧಾನ ಬದಲಿಸುವ ಹೇಳಿಕೆಗಳು, ಸಂವಿಧಾನ ವಿರೋಧಿ ಕೃತ್ಯಗಳು ನಡೆಯುತ್ತಿವೆ. ಇದನ್ನು ವಿರೋಧಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು, ಮಾಗಡಿ ರಸ್ತೆ, ಸುಮನಹಳ್ಳಿಯಲ್ಲಿರುವ ಡಾ. ಬಾಬು ಜಗಜೀವನ್ ರಾಂ ಸಂಶೋಧನಾ ಕೇಂದ್ರದಲ್ಲಿ ಏ.೨೩ರಂದು ಬೆಳಿಗ್ಗೆ ೧೧ ಗಂಟೆಗೆ ಜನಕ್ರಾಂತಿ ಸಮಾವೇಶ ನಡೆಯಲಿದ್ದು, ಇದಕ್ಕೂ ಮೊದಲು ಬೆಂಗಳೂರು ಚಲೋ ನಡೆಯಲಿದೆ ಎಂದರು.
ರಾಜ್ಯ ಸಮಿತಿ ಸದಸ್ಯ, ನ್ಯಾಯವಾದಿ ಎಂ. ಶಿವಕುಮಾರ್ ಸಮಾವೇಶ ಕುರಿತು ಮಾತನಾಡಿದರು. ಜಿಲ್ಲಾ ಸಂಚಾಲಕ ಏಳುಕೋಟಿ, ತಾಲೂಕು ಸಂಚಾಲಕ ನಾಗರಾಜ್ ಕಾಚಗೊಂಡನಹಳ್ಳಿ, ಮುಖಂಡರಾದ ಶ್ರೀನಿವಾಸ್, ರಾಜಶೇಖರ್, ಬಾಷಾ ಸಾಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.