Friday, January 17, 2025

ನಿರ್ಮಲ ಆಸ್ಪತ್ರೆಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ

ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆ ಹಾಗು ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಶುಕ್ರವಾರ ಭದ್ರಾವತಿ ಹಳೇನಗರದ ನಿರ್ಮಲ ಆಸ್ಪತ್ರೆಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಗಾರ ಹಮ್ಮಿಕೊಳ್ಳಲಾಯಿತು. 
    ಭದ್ರಾವತಿ : ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆ ಹಾಗು ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಶುಕ್ರವಾರ ಹಳೇನಗರದ ನಿರ್ಮಲ ಆಸ್ಪತ್ರೆಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಗಾರ ಹಮ್ಮಿಕೊಳ್ಳಲಾಯಿತು. 
    ಸಂಚಾರಿ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಶಾಂತಲಾರವರು ಮಾತನಾಡಿ, ಅತಿಯಾದ ವೇಗ, ಸಂಚಾರಿ ನಿಯಮ ಉಲ್ಲಂಘನೆ, ಸೂಚನಾ ಫಲಕಗಳ ನಿರ್ಲಕ್ಷತನ ಈ ಮೂರು ಅಂಶಗಳು ರಸ್ತೆ ಅಪಘಾತಕ್ಕೆ ಮುಖ್ಯ ಕಾರಣಗಳಾಗಿವೆ.  ಶೇ.೭೫ ರಷ್ಟು ರಸ್ತೆ ಅಪಘಾತಗಳು ಅತಿಯಾದ ವೇಗದಿಂದ ಸಂಭವಿಸಿವೆ. ಇನ್ನು ಕೆಲವು ವಾಹನ ಚಲಾಯಿಸುವವರ ತಪ್ಪು ಇಲ್ಲದಿದ್ದರೂ, ಎದುರಿನಿಂದ ಬರುವ ವಾಹನ ಸವಾರರ ವೇದದಿಂದ ಮತ್ತು ತಪ್ಪುಗಳಿಂದ ಅಪಘಾತಗಳು ಸಂಭವಿಸುತ್ತವೆ.  ಇದನ್ನು ತಡೆಯಲು ಸೀಟ್ ಬೆಲ್ಟ್, ಹೆಲ್ಮೆಟ್, ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದರು. 
    ಭಾರತೀಯ ವೈದ್ಯಕೀಯ ಸಂಘದ ತಾಲೂಕು ಅಧ್ಯಕ್ಷೆ ಡಾ. ಸ್ವರ್ಣರವರು ಮಾತನಾಡಿ, ವಾಹನ ಚಲಾಯಿಸುವ ಚಾಲಕರು ಮನೆಯಿಂದ ಹೊರಡುವಾಗ ನಿಗದಿತ ಸಮಯಕ್ಕಿಂತ ಮುಂಚೆಯೇ ಹೊರಡುವುದು ಸೂಕ್ತ. ಮನೆಯಿಂದ ಕೆಲಸಕ್ಕೆ ಹೊರಡುವಾಗ, ವಾಹನ ಚಲಾಯಿಸುವ ಪುರುಷರಿಗೆ ಮಹಿಳೆಯರು ಯಾವುದೇ ಒತ್ತಡ ಹೇರಬಾರದು ಎಂದರು. 
    ನಿರ್ಮಲ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಗ್ಲಾಡಿಸ್ ಪಿಂಟೋ,  ತಾಲೂಕು ಮಹಿಳಾ ವೈದ್ಯಕೀಯ ಸಂಘದ  ಅಧ್ಯಕ್ಷೆ ಡಾ. ವೀಣಾ ಭಟ್, ಡಾ. ರೆಜಿನಾ, ಡಾ. ಲವ್‌ಲಿನ್,  ಡಾ. ಸುಷ್ಮಾ, ಡಾ. ಸೈಯದ್ ಹಾಗು ದಾದಿಯರು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ಡಾ. ಎಂ.ಎಚ್ ವಿದ್ಯಾಶಂಕರ್‌ಗೆ ಲೆಫ್ಟಿನೆಂಟ್ ಪದವಿ

ಭದ್ರಾವತಿ ನಗರದ ನಿವಾಸಿ, ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಎಂ.ಎಚ್ ವಿದ್ಯಾಶಂಕರ್‌ರವರಿಗೆ ಲೆಫ್ಟಿನೆಂಟ್ ಪದವಿ ನೀಡಿ ಗೌರವಿಸಲಾಗಿದೆ. 
    ಭದ್ರಾವತಿ : ನಗರದ ನಿವಾಸಿ, ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಎಂ.ಎಚ್ ವಿದ್ಯಾಶಂಕರ್‌ರವರಿಗೆ ಲೆಫ್ಟಿನೆಂಟ್ ಪದವಿ ನೀಡಿ ಗೌರವಿಸಲಾಗಿದೆ. 
    ಇವರು ಇತ್ತೀಚೆಗೆ ನಾಗಪುರದ ಕಾಮಟೆಯಲ್ಲಿ ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯದಿಂದ ನಡೆಸುವ ಸೈನಿಕ ತರಬೇತಿ ಆಫೀಸರ್ ಟ್ರೈನಿಂಗ್ ಅಕಾಡೆಮಿಯಲ್ಲಿ ನಡೆದ ಮೂರು ತಿಂಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿ ವಿಷಯ ವಿವರಣೆ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದರು. 
    ವಿದ್ಯಾಶಂಕರ್ ನಗರದ ಪುರೋಹಿತರತ್ನ ಎಂ.ಡಿ ಹಿರಿಯಣ್ಣ ಭಟ್ ಮತ್ತು ಸರೋಜಾ ದಂಪತಿ ಪುತ್ರರಾಗಿದ್ದು, ಇವರನ್ನು ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಅಭಿನಂದಿಸಿದ್ದಾರೆ. 

ಜ.೧೮ರಂದು ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನ ಉದ್ಘಾಟನೆ

    ಭದ್ರಾವತಿ : ನಗರದ ಸೈಲ್ ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ವಿಐಎಸ್‌ಎಲ್ ಸಂಸ್ಥಾಪಕರ ದಿನ, ಸೈಲ್ ಸಂಸ್ಥಾಪನೆ ದಿನ ಮತ್ತು ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿಐಎಸ್‌ಎಲ್ ವಸ್ತು ಪ್ರದರ್ಶನ ಉದ್ಘಾಟನೆ ಜ.೧೮ರಂದು ನಡೆಯಲಿದೆ. 
    ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಸಂಜೆ ೭ ಗಂಟೆಗೆ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಉದ್ಘಾಟಿಸಲಿದ್ದಾರೆ.  ಸ್ಥಳೀಯ ಪ್ರತಿಭೆಗಳಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾಂಸ್ಕೃತಿಕ ತಂಡಗಳಿಗೆ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸಿ ಕೊಡಲಾಗಿದೆ. ಇದರ ಸದುಪಯೋಗಪಡಿಸಿಕೊಂಡು ಯಶಸ್ವಿಗೊಳಿಸುವಂತೆ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್ ಕುಮಾರ್ ಕೋರಿದ್ದಾರೆ. 

ಶ್ರಮ ಜೀವಿಗಳ ಬದುಕಿನ ಮಾರ್ಗದರ್ಶಕರು ಶ್ರೀ ಶಿವಯೋಗಿ ಸಿದ್ದರಾಮೇಶ್ವರರು : ಬಿ.ಕೆ ಜಗನ್ನಾಥ

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯಿತಿ ಹಾಗು ಸರ್ಕಾರದ ವಿವಿಧ ಇಲಾಖೆಗಳು ಮತ್ತು ಭೋವಿ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ತಾಲೂಕು ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೮೫೨ನೇ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಹಿರಿಯ ಮುಖಂಡ ಬಿ.ಕೆ ಜಗನ್ನಾಥ ಉದ್ಘಾಟಿಸಿದರು.  
    ಭದ್ರಾವತಿ: ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ೧೨ನೇ ಶತಮಾನದಲ್ಲಿ ಆಧ್ಯಾತ್ಮಿಕ ಬದುಕಿನ ಜೊತೆಗೆ ಶ್ರಮ ಜೀವಿಗಳಿಗೆ ಮಾರ್ಗದರ್ಶಕರಾಗಿ ಸಾಮಾಜಿಕ ಸುಧಾರಣೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಆದರ್ಶತನ ನಾವೆಲ್ಲರೂ ಅರ್ಥಮಾಡಿಕೊಂಡು ಮುನ್ನಡೆಯಬೇಕೆಂದು ನಗರದ ಹಿರಿಯ ಮುಖಂಡ ಬಿ.ಕೆ ಜಗನ್ನಾಥ ಹೇಳಿದರು. 
    ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯಿತಿ ಹಾಗು ಸರ್ಕಾರದ ವಿವಿಧ ಇಲಾಖೆಗಳು ಮತ್ತು ಭೋವಿ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ತಾಲೂಕು ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೮೫೨ನೇ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ಯಾವುದೇ ತಂತ್ರಜ್ಞಾನದ ಅರಿವಿಲ್ಲದ ಹಾಗು ಯಾವುದೇ ಸೌಲಭ್ಯಗಳು ಇಲ್ಲದ ಅಂದಿನ ಕಾಲದಲ್ಲಿ ನೀರಿನ ಮಹತ್ವ ಅರಿತು ಕೆರೆ, ಕಟ್ಟೆ, ಜಲಾಶಯಗಳನ್ನು ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ಭೋವಿ ಸಮಾಜದ ಶ್ರಮ ಜೀವಿಗಳಿಗೆ ಮಾರ್ಗದರ್ಶಕರಾಗಿ ಆ ಮೂಲಕ ಸಮಾಜದ ಎಲ್ಲಾ ವರ್ಗದ, ಎಲ್ಲಾ ಜಾತಿಯ ಜನರಿಗೂ ನೀರಿನ ಸೌಕರ್ಯಗಳು ಲಭಿಸಲು ಕಾರಣಕರ್ತರಾದರು. ಅಲ್ಲದೆ ಭೋವಿ ಸಮಾಜದವರು ಕೇವಲ ಕೆರೆ, ಕಟ್ಟೆ, ಜಲಾಶಯಗಳು ಮಾತ್ರವಲ್ಲ, ದೇವಸ್ಥಾನ ಸೇರಿದಂತೆ ಹಲವಾರು ಕಟ್ಟಡಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಇಂದಿಗೂ ಶ್ರಮ ನಂಬಿ ಬದುಕು ಕಟ್ಟಿಕೊಂಡಿದ್ದಾರೆ ಎಂದರು. 
    ಎನ್.ಆರ್ ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಧನಂಜಯ ಮಾತನಾಡಿ, ೧೨ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿದ್ದ ಪ್ರಮುಖ ಕಾಯಕ ಯೋಗಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು. ಇವರು ಕಾಯಕದ ಜೊತೆಗೆ ಸಮಾಜದಲ್ಲಿನ ಶೋಷಣೆಗಳ ವಿರುದ್ಧ ಧ್ವನಿ ಎತ್ತಿದರು. ಅಂದಿನ ಅನುಭವ ಮಂಟದಲ್ಲಿನ ಚಿಂತನೆಗಳು, ಆಶಯಗಳನ್ನು ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಪ್ರತಿಪಾದಿಸುವ ಮೂಲಕ ಇಂದು ನಮ್ಮೆಲ್ಲರಿಗೂ ಬೆಳಕಾಗಿದ್ದಾರೆ. ಇವರೆಲ್ಲರ ಆಶಯಗಳಂತೆ ನಾವುಗಳು ಮುನ್ನಡೆಯುವ ಮೂಲಕ ಭವಿಷ್ಯದ ಸಮಾಜ ರೂಪಿಸಬೇಕೆಂದರು. 
    ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರಸಭೆ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ಉಪತಹಸೀಲ್ದಾರ್ ಮಂಜ್ಯಾನಾಯ್ಕ, ಸೂಡಾ ಸದಸ್ಯ ಎಚ್. ರವಿಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ನಗರಸಭೆ ಸದಸ್ಯರಾದ ಬಿ.ಟಿ ನಾಗರಾಜ್, ಬಿ.ಎಂ ಮಂಜುನಾಥ್, ಕಂದಾಯಾಧಿಕಾರಿ ರಮೇಶ್, ಪ್ರಮುಖರಾದ ಭೋವಿ ಸಮಾಜದ ಅಧ್ಯಕ್ಷ ಶಿವು ಪಾಟೀಲ್, ಚೌಡಪ್ಪ, ಅರ್ಜುನ್, ಟಿ.ಎಂ ಮಂಜುನಾಥ್, ಪ್ರಕಾಶ್, ಯಲ್ಲಪ್ಪ, ರಾಮಣ್ಣ, ದಶರಥಗಿರಿ, ಶಿವಬಸಪ್ಪ, ರಂಗನಾಥ್, ವೆಂಕಟೇಶ್, ತಮ್ಮಣ್ಣ, ವೈ. ಮಂಜುನಾಥ್, ಬಸವಂತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೃಥ್ವಿರಾಜ್ ಸ್ವಾಗತಿಸಿ, ಎಸ್.ಕೆ ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಸುಮತಿ ಕಾರಂತ್, ಕೋಕಿಲ ತಂಡದವರು ಪ್ರಾರ್ಥಿಸಿದರು.