![](https://blogger.googleusercontent.com/img/a/AVvXsEirxSyWeubyyojAeibYvkoUo1zZYt81ZKFmDD0-rehrNIsKrcMhGSYbQtju_-Aovq_iAtdjD7Cj1IahwUaWPrWaJvisMDPnOQgXOYMmkQQRxLaoQoSj_Col-J_ok1XLPH63YzVwJZj9vaPkdNFVHJfLMXvob5ix3uWyYHhm_SzHF4mBB8u7qW79MHvvfQ=w400-h214-rw)
ಭದ್ರಾವತಿ ತಾಲೂಕು ಕುರುಬರ ಸಂಘದ ಆಶ್ರಿತದ ಹಳೇನಗರದ ಕನಕ ವಿದ್ಯಾಸಂಸ್ಥೆಗೆ ಶುಕ್ರವಾರ ಭೇಟಿ ನೀಡಿದ ಪದ್ಮಶ್ರೀ ಹಾಗು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ, ಕರ್ನಾಟಕ ಜಾನಪದ ಆಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಜೂ ೩: ಮಕ್ಕಳು ಗುರು-ಹಿರಿಯರೊಂದಿಗೆ ಗೌರವ, ಪ್ರೀತಿಯಿಂದ ವರ್ತಿಸಬೇಕು ಎಂದು ಪದ್ಮಶ್ರೀ ಹಾಗು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ, ಕರ್ನಾಟಕ ಜಾನಪದ ಆಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು.
ಅವರು ಶುಕ್ರವಾರ ತಾಲೂಕು ಕುರುಬರ ಸಂಘದ ಆಶ್ರಿತದ ಹಳೇನಗರದ ಕನಕ ವಿದ್ಯಾಸಂಸ್ಥೆಗೆ ಭೇಟಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಸಮಾಜದಲ್ಲಿ ಎಲ್ಲರನ್ನು ಸಮಾನವಾಗಿ ಕಾಣಬೇಕು. ಎಲ್ಲಾದರೂ ಮಂಗಳ ಮುಖಿಯರು (ತೃತೀಯ ಲಿಂಗಿಗಳು) ಕಂಡಾಗ ಅವರೊಂದಿಗೆ ಪ್ರೀತಿ ಹಂಚಿಕೊಳ್ಳುವ ಜೊತೆಗೆ ಅವರನ್ನು ಎಲ್ಲರಂತೆ ಗೌರವದಿಂದ ಕಾಣಬೇಕು. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ನೀಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಜೋಗತಿ ಹಾಡು ಹಾಗು ಪರಶುರಾಮನ ಜನನದ ಅಭಿನಯದ ಸಂಭಾಷಣೆಯೊಂದಿಗೆ ಮಂಜಮ್ಮ ಜೋಗತಿ ಮಕ್ಕಳ ಮನ ಸೂರೆಗೊಳಿಸಿದರು.
ಇದಕ್ಕೂ ಮೊದಲು ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಮಂಜಮ್ಮ ಜೋಗತಿಯವರಿಗೆ ಪಾದ ಪೂಜೆ ಮಾಡುವ ಮೂಲಕ ಸ್ವಾಗತ ಕೋರಿದರು.
ವಿದ್ಯಾ ಸಂಸ್ಥೆ ವತಿಯಿಂದ ಮಂಜಮ್ಮ ಜೋಗತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲೆ ಮುಖ್ಯೋಪಾಧ್ಯಾಯರಾದ ಸಿ.ಡಿ ಮಂಜುನಾಥ್, ಜಿ.ಕೆ ಹರೀಶ್ ಸೇರಿದಂತೆ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶಿಕ್ಷಕ ಪ್ರಶಾಂತ್ ಸಣ್ಣಕ್ಕಿ ಸ್ವಾಗತಿಸಿ, ವಂದಿಸಿದರು.