Monday, May 31, 2021

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್. ಕೃಷ್ಣಪ್ಪರಿಗೆ ಬೀಳ್ಕೊಡುಗೆ


ಭದ್ರಾವತಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಸೋಮವಾರ ನಿವೃತ್ತಿ ಹೊಂದಿದ ಎನ್. ಕೃಷ್ಣಪ್ಪ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
   ಭದ್ರಾವತಿ, ಮೇ. ೨೧: ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಸೋಮವಾರ ನಿವೃತ್ತಿ ಹೊಂದಿದ ಎನ್. ಕೃಷ್ಣಪ್ಪ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
    ಎನ್. ಕೃಷ್ಣಪ್ಪ ಸತತವಾಗಿ ೪ ಬಾರಿ ಸಂಘದ ತಾಲೂಕು ಶಾಖೆ ಅಧ್ಯಕ್ಷರಾಗಿ ಹಾಗು ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ತಮ್ಮ ಅವಧಿಯಲ್ಲಿ ಸಂಘವನ್ನು ಸದೃಢವಾಗಿ ಕಟ್ಟಿ ಬೆಳೆಸುವಲ್ಲಿ ಹೆಚ್ಚಿನ ಶ್ರಮವಹಿಸಿದ್ದಾರೆ. ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ವ್ಯವಸ್ಥಾಪಕರಾಗಿ, ಪ್ರಭಾರ ಸಹಾಯಕ ನಿರ್ದೇಶಕರಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
    ಇದೆ ಸಂದರ್ಭದಲ್ಲಿ ಪ್ರಭಾರಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕರಾದ ಬಿ. ಸಿದ್ದಬಸಪ್ಪ ಅವರನ್ನು ಸಹ ಸನ್ಮಾನಿಸಿ ಅಭಿನಂದಿಸಲಾಯಿತು.
   ಪ್ರಮುಖರಾದ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಎಲ್ ರಂಗಸ್ವಾಮಿ, ಎಂ.ಎಸ್ ಬಸರಾಜ್, ಎಸ್.ಕೆ ಮೋಹನ್, ಸಿ. ಜಯಪ್ಪ, ಉಪನ್ಯಾಸಕ ಡಾ. ಧನಂಜಯ, ರಾಜ್‌ಕುಮಾರ್, ಶ್ರೀಕಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾವತಿಯಲ್ಲಿ ೮೨ ಸೋಂಕು : ೬ ಬಲಿ

ಭದ್ರಾವತಿ, ಮೇ. ೩೧: ತಾಲೂಕಿನಲ್ಲಿ ಇದೀಗ ಕೊರೋನಾ ಸೋಂಕು ಕಡಿಮೆಯಾಗುವ ಲಕ್ಷಣಗಳು ಕಂಡು ಬರುತ್ತಿದೆ.  ಸೋಮವಾರ ೮೨ ಸೋಂಕು ಪತ್ತೆಯಾಗಿದ್ದು, ಒಂದೇ ದಿನ ೬ ಮಂದಿ ಬಲಿಯಾಗಿದ್ದಾರೆ.
   ಸುಮಾರು ೧೦ ದಿನಗಳಿಂದ ನೂರು, ಇನ್ನೂರರ ಗಡಿಯಾಚೆಯಲ್ಲೇ ಇದ್ದ ಸೋಂಕಿನ ಪ್ರಮಾಣ ಇದೀಗ ಕಡಿಮೆಯಾಗಿದೆ. ಒಟ್ಟು ೪೪೦ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ೮೨ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ೭೬ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೂ ೪೯೩೦ ಸೋಂಕು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೪೨೮೫ ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ ೬೪೫ ಸಕ್ರಿಯ ಪ್ರಕರಣಗಳಿದ್ದು, ಒಂದೇ ದಿನ ೬ ಮಂದಿ ಬಲಿಯಾಗಿದ್ದಾರೆ.
    ತಾಲೂಕಿನಲ್ಲಿ ಇದುವರೆಗೂ ೧೩೨ ಮಂದಿ ಮೃತಪಟ್ಟಿದ್ದು, ೩೮೬ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರ ಭಾಗದಲ್ಲಿ ೮೪ ಹಾಗು ಗ್ರಾಮಾಂತರ ಭಾಗದಲ್ಲಿ ೨೮ ಕಂಟೈನ್‌ಮೆಂಟ್ ಜೋನ್‌ಗಳಿವೆ.

ಕೋವಿಡ್ ಲಸಿಕಾ ಕೇಂದ್ರ ಉದ್ಘಾಟನೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಕಾಗದನಗರ ಮತ್ತು ಉಜ್ಜನಿಪುರ ಸುತ್ತಮುತ್ತಲಿನ ನಿವಾಸಿಗಳಿಗೆ ಅನುಕೂಲವಾಗುವಂತೆ ಕಾಗದನಗರದ ಸರ್ಕಾರಿ ಪಶ್ಚಿಮ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋವಿಡ್ ಲಸಿಕಾ ಕೇಂದ್ರ ತೆರೆಯಲಾಗಿದ್ದು, ಸೋಮವಾರ ನಗರಸಭಾ ಸದಸ್ಯರಾದ ಬಿ.ಕೆ ಮೋಹನ್ ಮತ್ತು ಬಸವರಾಜ ಬಿ. ಆನೇಕೊಪ್ಪ ಉದ್ಘಾಟಿಸಿದರು.
   ಭದ್ರಾವತಿ, ಮೇ. ೩೧: ನಗರಸಭೆ ವ್ಯಾಪ್ತಿಯ ಕಾಗದನಗರ ಮತ್ತು ಉಜ್ಜನಿಪುರ ಸುತ್ತಮುತ್ತಲಿನ ನಿವಾಸಿಗಳಿಗೆ ಅನುಕೂಲವಾಗುವಂತೆ ಕಾಗದನಗರದ ಸರ್ಕಾರಿ ಪಶ್ಚಿಮ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋವಿಡ್ ಲಸಿಕಾ ಕೇಂದ್ರ ತೆರೆಯಲಾಗಿದ್ದು, ಸೋಮವಾರ ನಗರಸಭಾ ಸದಸ್ಯರಾದ ಬಿ.ಕೆ ಮೋಹನ್ ಮತ್ತು ಬಸವರಾಜ ಬಿ. ಆನೇಕೊಪ್ಪ ಉದ್ಘಾಟಿಸಿದರು.
   ಈ ವ್ಯಾಪ್ತಿಯಲ್ಲಿ ನಗರಸಭೆ ವಾರ್ಡ್ ನಂ.೧೯, ೨೦ ಮತ್ತು ೨೧ ಒಟ್ಟು ೩ ವಾರ್ಡ್‌ಗಳಿದ್ದು, ಈ ವಾರ್ಡ್‌ಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಲಸಿಕಾ ಕೇಂದ್ರವನ್ನು ತೆರೆಯಲಾಗಿದೆ. ಶನಿವಾರ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಉಜ್ಜನಿಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಗರಸಭಾ ಸದಸ್ಯ ಬಸವರಾಜ ಬಿ. ಆನೇಕೊಪ್ಪರವರು ಎಂಪಿಎಂ ಆಸ್ಪತ್ರೆಯಲ್ಲಿ ಹೆಚ್ಚುವರಿ ಕೇಂದ್ರ ತೆರೆಯಲು ಮನವಿ ಮಾಡಿದ್ದರು. ಹೆಚ್ಚುವರಿ ಕೇಂದ್ರದ ಬದಲು ವಿಶಾಲವಾದ ಸ್ಥಳದಲ್ಲಿ ಒಂದೇ ಕಡೆ ಲಸಿಕಾ ಕೇಂದ್ರ ತೆರೆಯುವುದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂಬ ಉದ್ದೇಶದೊಂದಿಗೆ ನಗರ ಆರೋಗ್ಯ ಕೇಂದ್ರದಲ್ಲಿ ತೆರೆಯಲಾಗಿದ್ದ ಲಸಿಕಾ ಕೇಂದ್ರವನ್ನು ಇದೀಗ ಪಶ್ಚಿಮ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಲಾಗಿದೆ.
   ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ವೈದ್ಯ ಡಾ. ಗಿರಿಧರ್, ನಗರಸಭೆ ಮಾಜಿ ಸದಸ್ಯ ವೆಂಕಟಯ್ಯ, ಮುಖಂಡರಾದ ಜಿ. ರಾಜು, ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.