Saturday, June 26, 2021

ಚನ್ನಗಿರಿ ಅರಣ್ಯ ವಲಯದ ವಾಚರ್ ಆತ್ಮಹತ್ಯೆಗೆ ಯತ್ನ

ಆರ್‌ಎಫ್‌ಓ ವಿರುದ್ಧ ಕಿರುಕುಳ ಆರೋಪ


ದಿನಗೂಲಿ ನೌಕರ ಮಹಾದೇವಪ್ಪ
   ಭದ್ರಾವತಿ, ಜೂ. ೨೬: ತಾಲೂಕಿನ ಅರಣ್ಯ ವಿಭಾಗದ ಚನ್ನಗಿರಿ ವಲಯದ ಕ್ಷೇಮಾಭಿವೃದ್ಧಿಯ ದಿನಗೂಲಿ ನೌಕರರೊಬ್ಬರು ಆರ್‌ಎಫ್‌ಓ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
    ದಿನಗೂಲಿ ನೌಕರ ಮಹಾದೇವಪ್ಪ ಆತ್ಮಹತ್ಯೆಗೆ ಯತ್ನಿಸಿದ್ದು, ಇವರನ್ನು ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
    ಮಹಾದೇವಪ್ಪ ಚನ್ನಗಿರಿ ವಲಯದಲ್ಲಿ ವಾಚರ್ ಕರ್ತವ್ಯ ನಿರ್ವಹಿಸುತ್ತಿದ್ದು, ವಲಯಾಧಿಕಾರಿ ಸತೀಶ್‌ರವರು ಇವರಿಗೆ ಕಗ್ಗಿ ಅರಣ್ಯ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಸೂಚಿಸಿದ್ದರು. ಆದರೆ ಮಹಾದೇವಪ್ಪರವರು ಕಗ್ಗಿ ಅರಣ್ಯ ಶಾಖೆ ವಾಸದ ಸ್ಥಳದಿಂದ ಸುಮಾರು ೪೦ ಕಿ.ಮೀ ದೂರದಲ್ಲಿರುವ ಹಿನ್ನಲೆಯಲ್ಲಿ ಹಾಗು ಆರೋಗ್ಯ ಸರಿ ಇಲ್ಲದ ಕಾರಣ ಚನ್ನಗಿರಿ ವಲಯದಲ್ಲಿಯೇ ಮುಂದುವರೆಸುವಂತೆ ಕೋರಿದ್ದರು ಎನ್ನಲಾಗಿದೆ.
    ಈ ನಡುವೆ  ಮಹಾದೇವಪ್ಪ ಅವರಿಗೆ ವಲಯಾಧಿಕಾರಿ ಸತೀಶ್‌ರವರು ಕಗ್ಗಿ ಅರಣ್ಯ ಶಾಖೆಯಲ್ಲೇ ಕರ್ತವ್ಯ ನಿರ್ವಹಿಸುವಂತೆ  ಒತ್ತಡ ಹಾಕಿದ್ದರು. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಹಿನ್ನಲೆಯಲ್ಲಿ ಮಹಾದೇವಪ್ಪ ಅವರ ಎದುರಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಆದರೆ ಈ ಕುರಿತು ಪೊಲೀಸ್ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಾಗಿದೆ.

ತುರ್ತು ಪರಿಸ್ಥಿತಿ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡವರ ಸ್ಮರಣೆ

ಭಾರತೀಯ ಜನತಾ ಪಕ್ಷ ಭದ್ರಾವತಿ ತಾಲೂಕು ಮಂಡಲ ವತಿಯಿಂದ ಶನಿವಾರ ಇಂದಿರಾಗಾಂಧಿಯವರ ಆಡಳಿತಾವಧಿಯಲ್ಲಿ ದೇಶಾದ್ಯಂತ ಜಾರಿಗೊಳಿಸಲಾಗಿದ್ದ ತುರ್ತು ಪರಿಸ್ಥಿತಿ ವಿರುದ್ಧ ಅಂದು ಹೋರಾಟದಲ್ಲಿ ಪಾಲ್ಗೊಂಡಿದ್ದವರನ್ನು ಸ್ಮರಿಸುವ ಮೂಲಕ ಅವರನ್ನು ಗೌರವಿಸಲಾಯಿತು.
   ಭದ್ರಾವತಿ, ಜೂ. ೨೬: ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ವತಿಯಿಂದ ಶನಿವಾರ ಇಂದಿರಾಗಾಂಧಿಯವರ ಆಡಳಿತಾವಧಿಯಲ್ಲಿ ದೇಶಾದ್ಯಂತ ಜಾರಿಗೊಳಿಸಲಾಗಿದ್ದ ತುರ್ತು ಪರಿಸ್ಥಿತಿ ವಿರುದ್ಧ ಅಂದು ಹೋರಾಟದಲ್ಲಿ ಪಾಲ್ಗೊಂಡಿದ್ದವರನ್ನು ಸ್ಮರಿಸುವ ಮೂಲಕ ಅವರನ್ನು ಗೌರವಿಸಲಾಯಿತು.
   ೧೯೭೫ರ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗು ಜನ ಸಂಘದ ನೇತೃತ್ವದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡಿದ್ದ ಕ್ಷೇತ್ರದ ನಿವಾಸಿಗಳಾದ ರುದ್ರಪ್ಪ, ಸುದರ್ಶನಮೂರ್ತಿ, ಬಾರದಮ್ಮ, ಮಧುಕರ್‌ಕಾನಿಟ್ಕರ್, ಇಂದ್ರಸೇನಾ, ರಾಮಲಿಂಗಯ್ಯ ಮತ್ತು ಟಿ. ವೆಂಕಟೇಶ್ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
   ಅಲ್ಲದೆ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಹೋರಾಟವನ್ನು ಸ್ಮರಿಸಲಾಯಿತು.
    ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಚನ್ನೇಶ್, ರಾಜ್ಯ ಕಾರ್ಯಕಾರಣಿ ಸದಸ್ಯೆ ಆರ್.ಎಸ್ ಶೋಭಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ಯುವ ಘಟಕದ ಅಧ್ಯಕ್ಷ ವಿಜಯ್, ನಗರಸಭಾ ಸದಸ್ಯೆ ಶಶಿಕಲಾ, ಪ್ರಮುಖರಾದ ವಿಶ್ವನಾಥರಾವ್ ಕೋಠಿ, ಚಂದ್ರಪ್ಪ, ಬಿ.ಎಸ್ ನಾರಾಯಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಿ : ಮಧುಸೂದನ್

ಎಚ್‌ಡಿಎಫ್‌ಸಿ ಬ್ಯಾಂಕ್ ಶಿವಮೊಗ್ಗ ಶಾಖೆ ಇದರ ಸಹಯೋಗದೊಂದಿಗೆ ಭದ್ರಾವತಿ ತರುಣ ಭಾರತಿ ವಿದ್ಯಾಕೇಂದ್ರದ ವತಿಯಿಂದ ನಗರದ ನ್ಯೂ ಕಾಲೋನಿಯಲ್ಲಿರುವ ಬಾಲಭಾರತಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವನಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.
   ಭದ್ರಾವತಿ, ಜೂ. ೨೬: ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದು ಇಂದಿನ ದಿನಗಳಲ್ಲಿ ಅತಿ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ವನಮಹೋತ್ಸವ ಕಾರ್ಯಕ್ರಮ ಹೆಚ್ಚು ಸಹಕಾರಿಯಾಗಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಶಿವಮೊಗ್ಗ ಶಾಖಾ ಅಧಿಕಾರಿ ಮಧುಸೂದನ್ ಹೇಳಿದರು.
   ಎಚ್‌ಡಿಎಫ್‌ಸಿ ಬ್ಯಾಂಕ್ ಶಿವಮೊಗ್ಗ ಶಾಖೆ ಇದರ ಸಹಯೋಗದೊಂದಿಗೆ ತರುಣ ಭಾರತಿ ವಿದ್ಯಾಕೇಂದ್ರದ ವತಿಯಿಂದ ನಗರದ ನ್ಯೂ ಕಾಲೋನಿಯಲ್ಲಿರುವ ಬಾಲಭಾರತಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
   ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ತಿಳಿಸಿಕೊಡುವ ಜೊತೆಗೆ ಪರಿಸರ ಸಂರಕ್ಷಣೆಯಂತಹ ಸಮಾಜ ಮುಖಿ ಕಾರ್ಯಗಳನ್ನು ವಿದ್ಯಾಸಂಸ್ಥೆ ಆಯೋಜಿಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
      ವಿಶ್ವ ಭೂಷಣ ವಿಶ್ವಸ್ಥ ಮಂಡಳಿ ಅಧ್ಯಕ್ಷ ಡಾ.ಎಂ.ಎಚ್ ವಿದ್ಯಾಶಂಕರ್ ಮಾತನಾಡಿ,  ಪ್ರಸ್ತುತ ಎದುರಾಗಿರುವ ಕೋವಿಡ್-೧೯ರ ಸಂಕಷ್ಟದ ಸಂದರ್ಭದಲ್ಲಿ ಆಮ್ಲಜನಕದ ಪ್ರಾಮುಖ್ಯತೆ ಎಲ್ಲರಿಗೂ ತಿಳಿಯುತ್ತಿದೆ. ಈ ಹಿನ್ನಲೆಯಲ್ಲಿ ಸಹಜವಾಗಿ ಪರಿಸರ ಪ್ರಜ್ಞೆ ಬೆಳೆಯುತ್ತಿದೆ. ಸಸಿಗಳನ್ನು ನೆಡುವ ಮೂಲಕ ಅವುಗಳನ್ನು ಪೋಷಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ತರುಣ ಭಾರತಿ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ಹೆಚ್ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಾಲಭಾರತಿ ಶಾಲೆಯ ಮುಖ್ಯ ಶಿಕ್ಷಕಿ ಶಕುಂತಲಾ, ರಾಮಚಂದ್ರ, ರಮೇಶ್, ಕಿರಣ್, ವಿಶ್ವವಂದ್ಯ, ರವಿ, ಉಮೇಶ್, ಶಾಂತಮ್ಮ, ಪುರುಷೋತ್ತಮ್, ದೀಪಿಕಾ, ರಾಧಿಕಾ ಮತ್ತು ಸವಿತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಾಲಾ ಆವರಣದಲ್ಲಿ ೭೫ಕ್ಕೂ ಹೆಚ್ಚಿನ ಹಣ್ಣಿನ  ಗಿಡಗಳನ್ನು ನೆಡಲಾಯಿತು.  

ಎಂಪಿಎಂ ಆಸ್ಪತ್ರೆಯಲ್ಲಿ ಹೆಚ್ಚುವರಿ ಲಸಿಕಾ ಕೇಂದ್ರ ಉದ್ಘಾಟನೆ

ಭದ್ರಾವತಿ ನಗರಸಭೆ ವಾರ್ಡ್ ನಂ.೧೯ರ ವ್ಯಾಪ್ತಿಯ ಎಂಪಿಎಂ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ತೆರೆಯಲಾಗಿರುವ ಕೋವಿಡ್-೧೯ ಲಸಿಕಾ ಕೇಂದ್ರವನ್ನು ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
   ಭದ್ರಾವತಿ, ಜೂ. ೨೬: ನಗರಸಭೆ ವಾರ್ಡ್ ನಂ.೧೯ರ ವ್ಯಾಪ್ತಿಯ ಎಂಪಿಎಂ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ತೆರೆಯಲಾಗಿರುವ ಕೋವಿಡ್-೧೯ ಲಸಿಕಾ ಕೇಂದ್ರವನ್ನು ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
   ವಾರ್ಡ್ ಸದಸ್ಯ ಬಸವರಾಜ ಬಿ. ಆನೇಕೊಪ್ಪರವರು ಎಂಪಿಎಂ ಆಸ್ಪತ್ರೆಯಲ್ಲಿ ಲಸಿಕಾ ಕೇಂದ್ರ ತೆರೆಯುವಂತೆ ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ ಹಾಗು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದ್ದರು. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗು ಶಾಸಕರ ಗಮನಕ್ಕೂ ತಂದಿದ್ದರು. ಈ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ ಲಸಿಕಾ ಕೇಂದ್ರ ತೆರೆಯಲಾಗಿದೆ.
    ನಗರಸಭಾ ಸದಸ್ಯರಾದ ಬಸವರಾಜ ಬಿ ಆನೇಕೊಪ್ಪ, ಜಯಶೀಲ ಸುರೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಎಂಪಿಎಂ ನಗರಾಡಳಿತ ಇಲಾಖೆ ಅಧಿಕಾರಿ ಸತೀಶ್, ಮುಖಂಡರಾದ ತಿಮ್ಮಪ್ಪ, ವೆಂಕಟೇಶ್ ಉಜ್ಜನಿಪುರ, ಗಿರ್ಗೇಶ್, ರಮೇಶ್, ದಿನೇಶ್, ಪ್ರವೀಣ್‌ಕುಮಾರ್, ಗಂಗಾಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.