ಎಚ್‌ಡಿಎಫ್‌ಸಿ ಬ್ಯಾಂಕ್ ಶಿವಮೊಗ್ಗ ಶಾಖೆ ಇದರ ಸಹಯೋಗದೊಂದಿಗೆ ಭದ್ರಾವತಿ ತರುಣ ಭಾರತಿ ವಿದ್ಯಾಕೇಂದ್ರದ ವತಿಯಿಂದ ನಗರದ ನ್ಯೂ ಕಾಲೋನಿಯಲ್ಲಿರುವ ಬಾಲಭಾರತಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವನಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಜೂ. ೨೬: ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದು ಇಂದಿನ ದಿನಗಳಲ್ಲಿ ಅತಿ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ವನಮಹೋತ್ಸವ ಕಾರ್ಯಕ್ರಮ ಹೆಚ್ಚು ಸಹಕಾರಿಯಾಗಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಶಿವಮೊಗ್ಗ ಶಾಖಾ ಅಧಿಕಾರಿ ಮಧುಸೂದನ್ ಹೇಳಿದರು.
ಎಚ್‌ಡಿಎಫ್‌ಸಿ ಬ್ಯಾಂಕ್ ಶಿವಮೊಗ್ಗ ಶಾಖೆ ಇದರ ಸಹಯೋಗದೊಂದಿಗೆ ತರುಣ ಭಾರತಿ ವಿದ್ಯಾಕೇಂದ್ರದ ವತಿಯಿಂದ ನಗರದ ನ್ಯೂ ಕಾಲೋನಿಯಲ್ಲಿರುವ ಬಾಲಭಾರತಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ತಿಳಿಸಿಕೊಡುವ ಜೊತೆಗೆ ಪರಿಸರ ಸಂರಕ್ಷಣೆಯಂತಹ ಸಮಾಜ ಮುಖಿ ಕಾರ್ಯಗಳನ್ನು ವಿದ್ಯಾಸಂಸ್ಥೆ ಆಯೋಜಿಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ವಿಶ್ವ ಭೂಷಣ ವಿಶ್ವಸ್ಥ ಮಂಡಳಿ ಅಧ್ಯಕ್ಷ ಡಾ.ಎಂ.ಎಚ್ ವಿದ್ಯಾಶಂಕರ್ ಮಾತನಾಡಿ, ಪ್ರಸ್ತುತ ಎದುರಾಗಿರುವ ಕೋವಿಡ್-೧೯ರ ಸಂಕಷ್ಟದ ಸಂದರ್ಭದಲ್ಲಿ ಆಮ್ಲಜನಕದ ಪ್ರಾಮುಖ್ಯತೆ ಎಲ್ಲರಿಗೂ ತಿಳಿಯುತ್ತಿದೆ. ಈ ಹಿನ್ನಲೆಯಲ್ಲಿ ಸಹಜವಾಗಿ ಪರಿಸರ ಪ್ರಜ್ಞೆ ಬೆಳೆಯುತ್ತಿದೆ. ಸಸಿಗಳನ್ನು ನೆಡುವ ಮೂಲಕ ಅವುಗಳನ್ನು ಪೋಷಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ತರುಣ ಭಾರತಿ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ಹೆಚ್ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಾಲಭಾರತಿ ಶಾಲೆಯ ಮುಖ್ಯ ಶಿಕ್ಷಕಿ ಶಕುಂತಲಾ, ರಾಮಚಂದ್ರ, ರಮೇಶ್, ಕಿರಣ್, ವಿಶ್ವವಂದ್ಯ, ರವಿ, ಉಮೇಶ್, ಶಾಂತಮ್ಮ, ಪುರುಷೋತ್ತಮ್, ದೀಪಿಕಾ, ರಾಧಿಕಾ ಮತ್ತು ಸವಿತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಾಲಾ ಆವರಣದಲ್ಲಿ ೭೫ಕ್ಕೂ ಹೆಚ್ಚಿನ ಹಣ್ಣಿನ ಗಿಡಗಳನ್ನು ನೆಡಲಾಯಿತು.
No comments:
Post a Comment