ಆರ್‌ಎಫ್‌ಓ ವಿರುದ್ಧ ಕಿರುಕುಳ ಆರೋಪ
ದಿನಗೂಲಿ ನೌಕರ ಮಹಾದೇವಪ್ಪ
ಭದ್ರಾವತಿ, ಜೂ. ೨೬: ತಾಲೂಕಿನ ಅರಣ್ಯ ವಿಭಾಗದ ಚನ್ನಗಿರಿ ವಲಯದ ಕ್ಷೇಮಾಭಿವೃದ್ಧಿಯ ದಿನಗೂಲಿ ನೌಕರರೊಬ್ಬರು ಆರ್‌ಎಫ್‌ಓ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ದಿನಗೂಲಿ ನೌಕರ ಮಹಾದೇವಪ್ಪ ಆತ್ಮಹತ್ಯೆಗೆ ಯತ್ನಿಸಿದ್ದು, ಇವರನ್ನು ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಾದೇವಪ್ಪ ಚನ್ನಗಿರಿ ವಲಯದಲ್ಲಿ ವಾಚರ್ ಕರ್ತವ್ಯ ನಿರ್ವಹಿಸುತ್ತಿದ್ದು, ವಲಯಾಧಿಕಾರಿ ಸತೀಶ್‌ರವರು ಇವರಿಗೆ ಕಗ್ಗಿ ಅರಣ್ಯ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಸೂಚಿಸಿದ್ದರು. ಆದರೆ ಮಹಾದೇವಪ್ಪರವರು ಕಗ್ಗಿ ಅರಣ್ಯ ಶಾಖೆ ವಾಸದ ಸ್ಥಳದಿಂದ ಸುಮಾರು ೪೦ ಕಿ.ಮೀ ದೂರದಲ್ಲಿರುವ ಹಿನ್ನಲೆಯಲ್ಲಿ ಹಾಗು ಆರೋಗ್ಯ ಸರಿ ಇಲ್ಲದ ಕಾರಣ ಚನ್ನಗಿರಿ ವಲಯದಲ್ಲಿಯೇ ಮುಂದುವರೆಸುವಂತೆ ಕೋರಿದ್ದರು ಎನ್ನಲಾಗಿದೆ.
ಈ ನಡುವೆ ಮಹಾದೇವಪ್ಪ ಅವರಿಗೆ ವಲಯಾಧಿಕಾರಿ ಸತೀಶ್‌ರವರು ಕಗ್ಗಿ ಅರಣ್ಯ ಶಾಖೆಯಲ್ಲೇ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹಾಕಿದ್ದರು. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಹಿನ್ನಲೆಯಲ್ಲಿ ಮಹಾದೇವಪ್ಪ ಅವರ ಎದುರಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಆದರೆ ಈ ಕುರಿತು ಪೊಲೀಸ್ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಾಗಿದೆ.
No comments:
Post a Comment