Sunday, May 16, 2021

೨೦೨ ಮಂದಿಗೆ ಸೋಂಕು, ೮ ಬಲಿ

ಭದ್ರಾವತಿ, ಮೇ. ೧೬:  ಕೊರೋನಾ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಮಧ್ಯೆ ತಾಲೂಕಿನಲ್ಲಿ ತಪಾಸಣೆ ಕಡಿಮೆಗೊಳಿಸಿರುವ ಸಾಧ್ಯತೆಗಳು ಕಂಡು ಬರುತ್ತಿದ್ದು, ಭಾನುವಾರ ಕೇವಲ ೯೪ ಮಂದಿಯ ಮಾದರಿ ಸಂಗ್ರಹಿಸಲಾಗಿದೆ. ಈ ನಡುವೆಯೂ ೨೦೨ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
      ಒಟ್ಟು ೯೮ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ೮ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೂ ೬೮ ಮಂದಿ ಮೃತಪಟ್ಟಿದ್ದು, ೨೦೮ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ೨೫ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ಈ ಪೈಕಿ ೨ ಜೋನ್‌ಗಳನ್ನು ತೆರವುಗೊಳಿಸಲಾಗಿದೆ.
      ಕೋವಿಶೀಲ್ಡ್ ಲಸಿಕೆ ಅಂತರ ಹೆಚ್ಚಳ :
    ರಾಜ್ಯದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ, ೧೮ ರಿಂದ ೪೪ ಹಾಗು ೪೫ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕಾಕರಣ ನಡೆಯುತ್ತಿದ್ದು, ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದ ನಂತರ ೬ ರಿಂದ ೮ ವಾರಗಳ ಅಂತರದಲ್ಲಿ ೨ನೇ ಡೋಸ್ ಪಡೆಯಲು ಈ ಹಿಂದೆ ಶಿಫಾರಸ್ಸು ಮಾಡಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಲಸಿಕಾಕರಣದ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು(ಎನ್‌ಟಿಎಜಿಐ) ಮತ್ತು ಲಸಿಕಾಕರಣದ ಕುರಿತು ರಾಷ್ಟ್ರೀಯ ಪರಿಣಿತಿ ಗುಂಪು(ಎನ್‌ಇಜಿವಿಎಸಿ)ಗಳ ಶಿಫಾರಸ್ಸಿನ ಆಧಾರದ ಮೇಲೆ  ಲಸಿಕೆ ಪಡೆಯುವ ಅಂತರವನ್ನು ೧೨ ರಿಂದ ೧೬ವಾರಗಳಿಗೆ ಪರಿಷ್ಕರಣೆ ನಡೆಸಿದೆ. ಈ ಹಿನ್ನಲೆಯಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಪಡೆದ ನಂತರ ೧೨ ವಾರಗಳು ಪೂರ್ಣಗೊಂಡ ನಂತರವೇ ೨ನೇ ಡೋಸ್ ನೀಡಲಾಗುವುದು. ಈ ಪರಿಷ್ಕರಣೆ ಕೋವ್ಯಾಕ್ಸಿನ್ ಲಸಿಕೆಗೆ ಅನ್ವಯವಾಗುವುದಿಲ್ಲ. ಸಾರ್ವಜನಿಕರು ಈ ಬಗ್ಗೆ ಮಾಹಿತಿ ಅರಿತು ಕೊಂಡು ಲಸಿಕೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಾಲೂಕು ವೈದ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಕೋರಿದ್ದಾರೆ.