Thursday, July 1, 2021

ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಕೋವಿಡ್ ಲಸಿಕಾಕರಣ ಅಭಿಯಾನಕ್ಕೆ ಚಾಲನೆ


ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ಸೇವಾ ಭಾರತಿ ಮತ್ತು ಪ್ರೇರಣಾ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಕೋವಿಡ್ ಲಸಿಕಾಕರಣ ಅಭಿಯಾನಕ್ಕೆ ಗುರುವಾರ ಭದ್ರಾವತಿ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.
    ಭದ್ರಾವತಿ, ಜು. ೧: ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ಸೇವಾ ಭಾರತಿ ಮತ್ತು ಪ್ರೇರಣಾ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಕೋವಿಡ್ ಲಸಿಕಾಕರಣ ಅಭಿಯಾನಕ್ಕೆ ಗುರುವಾರ ನಗರದ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.
    ಸೇವಾ ಭಾರತಿ ಮತ್ತು ಪ್ರೇರಣಾ ಟ್ರಸ್ಟ್ ವತಿಯಿಂದ ಭದ್ರಾವತಿಗೆ ಸುಮಾರು ೨೦೦೦ ಲಸಿಕೆಗಳನ್ನು ಉಚಿತವಾಗಿ ನೀಡಲಾಗಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ ಹಾಗು ಬೋಧಕ ಹಾಗು ಬೋಧಕೇತರ ಸಿಬ್ಬಂದಿಗಳಿಗೆ ಲಸಿಕೆ ಹಾಕಲಾಗುತ್ತಿದೆ.
    ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ಪ್ರಾಂಶುಪಾಲರಾದ ಡಾ.ಎಂ.ಜಿ ಉಮಾಶಂಕರ್, ಡಾ. ಬಿ.ಜಿ ಧನಂಜಯ, ಕುವೆಂಪು ವಿ.ವಿ ಸಿಂಡಿಕೇಟ್ ಸದಸ್ಯ ಜಿ. ಧರ್ಮಪ್ರಸಾದ್, ಕರ್ನಾಟಕ ರಾಜ್ಯ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಇಎಸ್ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಲ್ ರಂಗಸ್ವಾಮಿ, ಡಾ.ಎಂ.ವಿ ಅಶೋಕ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
  ಭದ್ರಾವತಿ, ಜು. ೧: ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತ  ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ರಾಷ್ಟ್ರೀಯ ವೈದ್ಯರ ದಿನಾಚರಣೆ ಆಚರಿಸಲಾಯಿತು.
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಲ್ ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ನಿರ್ದೇಶಕರಾದ ನಾಗರಾಜು, ಕೃಷ್ಣ, ವಿದ್ಯಾ ಸಂಸ್ಥೆ ಸಹಾಯಕ ಆಡಳಿತಾಧಿಕಾರಿ ಶಿವಲಿಂಗೇಗೌಡ, ಎಲ್ಲಾ ವಿಭಾಗಗಳ ಪ್ರಾಂಶುಪಾಲರು, ಮುಖ್ಯಸ್ಥರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸ್ವ ಸಹಾಯ ಸಂಘಗಳಿಗೆ ಪೂರ್ಣ ಲಾಭಾಂಶ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಶ್ಲಾಘನೆ

ಭದ್ರಾವತಿ ಹಳೇನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಛೇರಿಯಲ್ಲಿ ಗುರುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಿಸಿದರು.
   ಭದ್ರಾವತಿ, ಜೂ. ೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೈಗೊಳ್ಳುತ್ತಿರುವ ಸಮಾಜ ಮುಖಿ ಕಾರ್ಯಗಳಿಗೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಹಿಳಾ ಸದಸ್ಯರಿಗೆ ಸಾಲದ ಜೊತೆಗೆ ಪೂರ್ಣ ಪ್ರಮಾಣದ ಲಾಭಾಂಶ ಸಹ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಪ್ರಶಂಸೆ ವ್ಯಕ್ತಪಡಿಸಿದರು.
    ಅವರು ಗುರುವಾರ ಹಳೇನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಲಾಭಾಂಶ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಯಾವುದೇ ಬ್ಯಾಂಕ್ ಸಹ ಸಾಲದ ಜೊತೆಗೆ ಪೂರ್ಣ ಲಾಭಾಂಶವನ್ನು ತನ್ನ ಗ್ರಾಹಕರಿಗೆ ನೀಡುವುದಿಲ್ಲ. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಲದ ಜೊತೆಗೆ ಪೂರ್ಣ ಲಾಭಾಂಶ ಸಹ ನೀಡುತ್ತಿರುವುದು ಸದಸ್ಯರ ಅದೃಷ್ಟವಾಗಿದೆ. ಈ ಲಾಭಾಂಶವನ್ನು ಪುನಃ ಸದ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಮಹಿಳೆಯರು ಸಾಮಾಜಿಕ ಕಾಳಜಿಯನ್ನು ಹೊಂದಬೇಕು. ಆ ಮೂಲಕ ಸಮಾಜದಲ್ಲಿ ಪರಿವರ್ತನೆಗೆ ನಾಂದಿ ಹಾಡಬೇಕೆಂದು ಕರೆ ನೀಡಿದರು.
    ಯೋಜನಾಧಿಕಾರಿ ಪ್ರಕಾಶ್ ಮಾತನಾಡಿ, ತಾಲೂಕಿನಲ್ಲಿ ಕಳೆದ ೧೪ ವರ್ಷಗಳಿಂದ ಯೋಜನೆ ತನ್ನ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರನ್ನು ಸ್ವ-ಸಹಾಯ ಸಂಘಗಳ ಮೂಲಕ ಆರ್ಥಿಕವಾಗಿ ಸಬಲೀಕರಣ ಮಾಡಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಂದ ಪ್ರಗತಿನಿಧಿ ಸಾಲ ಪಡೆದು ಶಿಸ್ತು ಬದ್ಧ ವ್ಯವಹಾರದ ಜೊತೆಗೆ ಉಳಿತಾಯದ ಶಿಸ್ತು ತಿಳುವಳಿಕೆಯಡಿಯಲ್ಲಿ ಪ್ರತಿ ಸದಸ್ಯರು ಉಳಿತಾಯವನ್ನು ಮಾಡುತ್ತಿದ್ದಾರೆ. ಉಳಿತಾಯ ಮತ್ತು ಬ್ಯಾಂಕಿನ ಸಾಲ ಸದ್ಬಳಕೆ ಮಾಡಿಕೊಂಡು ಮರುಪಾವತಿ ಮಾಡಿದ್ದಲ್ಲಿ ಸಂಘಗಳಿಗೆ ಲಾಭಾಂಶ ಬರುತ್ತದೆ. ಇದುವರೆಗೂ ಒಟ್ಟು ೩ ಬಾರಿ ಲಾಭಾಂಶ ವಿತರಣೆ ಮಾಡಲಾಗಿದೆ.  ಈ ಬಾರಿ  ೨.೯೪ ಕೋ. ರು. ಒಟ್ಟು ಲಾಭಾಂಶವಾಗಿದ್ದು, ತಾಲೂಕಿನ ಒಟ್ಟು ೨೦೮೪ ಸಂಘಗಳ ೧೭,೭೦೭ ಸದಸ್ಯರು ಲಾಭಾಂಶದ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
   ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ಮಾತನಾಡಿದರು. ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಿಸಲಾಯಿತು.
   ಮೇಲ್ವಿಚಾರಕ ವಿ.ಎನ್ ಪ್ರಶಾಂತ್, ಸೇವಾ ಪ್ರತಿನಿಧಿಗಳಾದ ರಾಜೇಶ್ವರಿ, ಶೃತಿ, ಶಾರದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.