Thursday, July 1, 2021

ಸ್ವ ಸಹಾಯ ಸಂಘಗಳಿಗೆ ಪೂರ್ಣ ಲಾಭಾಂಶ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಶ್ಲಾಘನೆ

ಭದ್ರಾವತಿ ಹಳೇನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಛೇರಿಯಲ್ಲಿ ಗುರುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಿಸಿದರು.
   ಭದ್ರಾವತಿ, ಜೂ. ೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೈಗೊಳ್ಳುತ್ತಿರುವ ಸಮಾಜ ಮುಖಿ ಕಾರ್ಯಗಳಿಗೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಹಿಳಾ ಸದಸ್ಯರಿಗೆ ಸಾಲದ ಜೊತೆಗೆ ಪೂರ್ಣ ಪ್ರಮಾಣದ ಲಾಭಾಂಶ ಸಹ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಪ್ರಶಂಸೆ ವ್ಯಕ್ತಪಡಿಸಿದರು.
    ಅವರು ಗುರುವಾರ ಹಳೇನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಲಾಭಾಂಶ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಯಾವುದೇ ಬ್ಯಾಂಕ್ ಸಹ ಸಾಲದ ಜೊತೆಗೆ ಪೂರ್ಣ ಲಾಭಾಂಶವನ್ನು ತನ್ನ ಗ್ರಾಹಕರಿಗೆ ನೀಡುವುದಿಲ್ಲ. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಲದ ಜೊತೆಗೆ ಪೂರ್ಣ ಲಾಭಾಂಶ ಸಹ ನೀಡುತ್ತಿರುವುದು ಸದಸ್ಯರ ಅದೃಷ್ಟವಾಗಿದೆ. ಈ ಲಾಭಾಂಶವನ್ನು ಪುನಃ ಸದ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಮಹಿಳೆಯರು ಸಾಮಾಜಿಕ ಕಾಳಜಿಯನ್ನು ಹೊಂದಬೇಕು. ಆ ಮೂಲಕ ಸಮಾಜದಲ್ಲಿ ಪರಿವರ್ತನೆಗೆ ನಾಂದಿ ಹಾಡಬೇಕೆಂದು ಕರೆ ನೀಡಿದರು.
    ಯೋಜನಾಧಿಕಾರಿ ಪ್ರಕಾಶ್ ಮಾತನಾಡಿ, ತಾಲೂಕಿನಲ್ಲಿ ಕಳೆದ ೧೪ ವರ್ಷಗಳಿಂದ ಯೋಜನೆ ತನ್ನ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರನ್ನು ಸ್ವ-ಸಹಾಯ ಸಂಘಗಳ ಮೂಲಕ ಆರ್ಥಿಕವಾಗಿ ಸಬಲೀಕರಣ ಮಾಡಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಂದ ಪ್ರಗತಿನಿಧಿ ಸಾಲ ಪಡೆದು ಶಿಸ್ತು ಬದ್ಧ ವ್ಯವಹಾರದ ಜೊತೆಗೆ ಉಳಿತಾಯದ ಶಿಸ್ತು ತಿಳುವಳಿಕೆಯಡಿಯಲ್ಲಿ ಪ್ರತಿ ಸದಸ್ಯರು ಉಳಿತಾಯವನ್ನು ಮಾಡುತ್ತಿದ್ದಾರೆ. ಉಳಿತಾಯ ಮತ್ತು ಬ್ಯಾಂಕಿನ ಸಾಲ ಸದ್ಬಳಕೆ ಮಾಡಿಕೊಂಡು ಮರುಪಾವತಿ ಮಾಡಿದ್ದಲ್ಲಿ ಸಂಘಗಳಿಗೆ ಲಾಭಾಂಶ ಬರುತ್ತದೆ. ಇದುವರೆಗೂ ಒಟ್ಟು ೩ ಬಾರಿ ಲಾಭಾಂಶ ವಿತರಣೆ ಮಾಡಲಾಗಿದೆ.  ಈ ಬಾರಿ  ೨.೯೪ ಕೋ. ರು. ಒಟ್ಟು ಲಾಭಾಂಶವಾಗಿದ್ದು, ತಾಲೂಕಿನ ಒಟ್ಟು ೨೦೮೪ ಸಂಘಗಳ ೧೭,೭೦೭ ಸದಸ್ಯರು ಲಾಭಾಂಶದ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
   ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ಮಾತನಾಡಿದರು. ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಿಸಲಾಯಿತು.
   ಮೇಲ್ವಿಚಾರಕ ವಿ.ಎನ್ ಪ್ರಶಾಂತ್, ಸೇವಾ ಪ್ರತಿನಿಧಿಗಳಾದ ರಾಜೇಶ್ವರಿ, ಶೃತಿ, ಶಾರದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment