ಬಗರ್ ಹುಕುಂ ರೈತರು, ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಸ್ಪಷ್ಟನೆ

ಭದ್ರಾವತಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ನೀಡಿರುವ ನೋಟಿಸ್‌ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗು ಉಪವಿಭಾಗಾಧಿಕಾರಿಗಳು ಸ್ಪಷ್ಟನೆ ನೀಡಿದ್ದು, ರೈತರು, ಗ್ರಾಮಸ್ಥರು ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದ್ದಾರೆ.
ಭದ್ರಾವತಿ: ಬಗರ್ ಹುಕುಂ ಸಾಗುವಳಿದಾರರಿಗೆ ನೀಡಿರುವ ನೋಟಿಸ್‌ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗು ಉಪವಿಭಾಗಾಧಿಕಾರಿಗಳು ಸ್ಪಷ್ಟನೆ ನೀಡಿದ್ದು, ರೈತರು, ಗ್ರಾಮಸ್ಥರು ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದ್ದಾರೆ.
ಅವರು ಈ ಸಂಬಂಧ ಶುಕ್ರವಾರ ಗೃಹ ಕಛೇರಿಯಲ್ಲಿ ಅರಣ್ಯ ಹಾಗು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಬಗರ್ ಹುಕುಂ ರೈತರ ಸಭೆ ನಡೆಸಿ ಈ ಕುರಿತು ಮಾತನಾಡಿದರು. ಒಂದು ವೇಳೆ ನೋಟಿಸ್ ಸಂಬಂಧ ಮುಂದಿನ ದಿನಗಳಲ್ಲಿ ಯಾವುದೇ ರೀತಿ ಸಮಸ್ಯೆಗಳು ಎದುರಾದಲ್ಲಿ ಹೋರಾಟಕ್ಕೂ ಸಹ ಸಿದ್ದನಾಗಿದ್ದೇನೆ. ಈ ಹಿನ್ನಲೆಯಲ್ಲಿ ಯಾರು ಆತಂಕಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಸ್ ರೆಡ್ಡಿ ಮಾತನಾಡಿ, ಸರ್ವೋಚ್ಛ ನ್ಯಾಯಾಲಯ ಆದೇಶದಂತೆ ಅಗತ್ಯ ದಾಖಲಾತಿಗಳೊಂದಿಗೆ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ನೋಟಿಸ್ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಆತಂಕಕ್ಕೆ ಒಳಗಾಗಬಾರದು. ಬಗರ್ ಹುಕುಂ ರೈತರು, ಗ್ರಾಮಸ್ಥರು ತಮ್ಮ ಬಳಿ ಇರುವ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಗೊಂದಲ ಬಗೆಹರಿಸಿಕೊಳ್ಳಬಹುದು. ಒಂದು ವೇಳೆ ಸರ್ವೋಚ್ಛ ನ್ಯಾಯಾಲಯದ ಮಾರ್ಗಸೂಚಿ ಉಲ್ಲಂಘನೆಗಳು ಕಂಡು ಬಂದಲ್ಲಿ ಮಾತ್ರ ಮುಂದಿನ ಕ್ರಮ ಕೈಗೊಳ್ಳುವ ಕುರಿತು ವರದಿ ನೀಡಲಾಗುವುದು ಎಂದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್ ಮಾತನಾಡಿ, ರೈತರು ಹಾಗು ಗ್ರಾಮಸ್ಥರಲ್ಲಿ ಉಂಟಾಗಿರುವ ಆತಂಕ ದೂರ ಮಾಡುವ ಉದ್ದೇಶದಿಂದ ಶಾಸಕರು ನೇರವಾಗಿ ಸಭೆಯಲ್ಲಿ ಅಧಿಕಾರಿಗಳಿಂದಲೇ ಮಾಹಿತಿ ಕೊಡಿಸುತ್ತಿದ್ದಾರೆ. ಪಕ್ಷ ಯಾವುದೇ ಇರಲಿ ನಾವು ಎಂದಿಗೂ ರೈತರ ಪರವಾಗಿ ಇರುತ್ತೇವೆ. ಪಕ್ಷಾತೀತವಾಗಿ ಹೋರಾಟ ನಡೆಸುತ್ತೇವೆ. ಎಂದಿಗೂ ಮಾತು ತಪ್ಪುವುದಿಲ್ಲ. ಸರಿಯಾದ ದಾರಿಯಲ್ಲಿ ನಿಮ್ಮನ್ನು ಕೊಂಡೊಯ್ಯುವವರ ಪರವಾಗಿ ನಿಲ್ಲಿ ಎಂದು ಮನವಿ ಮಾಡಿದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಉಪ ವಿಭಾಗಾಧಿಕಾರಿ ಸತ್ಯನಾರಾಯಣ, ತಹಸೀಲ್ದಾರ್ ಪರುಸಪ್ಪ ಕುರುಬರ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.