Friday, February 28, 2025

ಲಂಚದ ಹಣ ಸ್ವೀಕರಿಸಿದ ಪ್ರಕರಣ : ಸರ್ಕಾರಿ ಅಧಿಕಾರಿಗೆ ಶಿಕ್ಷೆ

    ಭದ್ರಾವತಿ : ಲಂಚದ ಹಣ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನಲ್ಲಿ ಈ ಹಿಂದೆ ಭೂಮಾಪನ ಪರಿವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿ. ಮಲ್ಲಿಕಾರ್ಜುನಯ್ಯನವರಿಗೆ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. 
    ತಾಲೂಕಿನ ಮತ್ತಿಘಟ್ಟ ಗ್ರಾಮದ ಎಂ.ಎಚ್ ಬಸವರಾಜಪ್ಪ ಬಿನ್ ಲೇಟ್ ಹನುಮಂತಪ್ಪನವರ ಹೆಸರಿನಲ್ಲಿದ್ದ ಸರ್ವೆ ನಂ. ೫೬/೧೦ರ ೧ ಎಕರೆ ೨೦ ಗುಂಟೆ ಜಮೀನಿನ ಪಕ್ಕ ಪೋಡಿ ದುರಸ್ಥಿ ಮಾಡಿಕೊಡುವ ಬಗ್ಗೆ  ಅಂದು ಎ.ಡಿ.ಎಲ್.ಆರ್ ಕಛೇರಿಯ ಭೂಮಾಪನಾ ಪರಿವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನಯ್ಯ ಲಂಚದ ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಶಿವಮೊಗ್ಗ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. 
    ಶಿವಮೊಗ್ಗ ನಗರ ವಿನೋಬನಗರ ಬಡಾವಣೆಯ ಕೆಂಚಪ್ಪ ಲೇಔಟ್ ವಾಸದ ಮನೆಯಲ್ಲಿ ದೂರುದಾರರಿಂದ ಜುಲೈ ೨೩, ೨೦೧೩ ರಂದು ಮಲ್ಲಿಕಾರ್ಜುನಯ್ಯ ೧೫,೦೦೦ ರು. ಲಂಚದ ಹಣ ಕೇಳಿ ಪಡೆದುಕೊಳ್ಳುವಾಗ ದಾಳಿ ನಡೆಸಲಾಗಿತ್ತು. ಲೋಕಾಯುಕ್ತ ಪೊಲೀಸ್ ಠಾಣೆ ಜಿಲ್ಲಾ ನಿರೀಕ್ಷಕ ಕೆ.ಸಿ ಪುರುಷೋತ್ತಮರವರು ಪ್ರಕರಣದ ತನಿಖೆ ಕೈಗೊಂಡು ಮಲ್ಲಿಕಾರ್ಜುನಯ್ಯ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿ ಸಲ್ಲಿಸಿದ್ದರು. 
    ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಫೆ.೨೮ರ ಶುಕ್ರವಾರ ಶಿವಮೊಗ್ಗ ೧ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಚ್.ಜೆ ಮರುಳಸಿದ್ದಾರಾದ್ಯ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಮಲ್ಲಿಕಾರ್ಜುನಯ್ಯರಿಗೆ ಒಂದು ವರ್ಷ ಆರು ತಿಂಗಳು ಕಾರಾಗೃಹ ಶಿಕ್ಷೆ ಮತ್ತು ೩೦ ಸಾವಿರ ರು. ದಂಡ ವಿಧಿಸಿ ಆದೇಶಿಸಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಂ.ಡಿ ಸುಂದರ್ ರಾಜ್‌ರವರು ವಾದ ಮಂಡಿಸಿದರು. 

No comments:

Post a Comment