ಭದ್ರಾವತಿ ನಿರ್ಮಲ ಮಹಿಳಾ ಸೇವಾ ಕೇಂದ್ರದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಸ್ಟರ್ ವಿಲ್ಮಾ ರೆಬೆಲ್ಲೊ, ಡಾ. ಇಸಬೆಲ್ಲಾ ಜೇವಿಯರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ : ಮಹಿಳೆಯರು ಸದಾ ಕಾಲ ಕ್ರಿಯಾಶೀಲರಾಗಿರಬೇಕು. ತಮ್ಮಲ್ಲಿನ ಸ್ವಾಭಾವಿಕ ಶಕ್ತಿ, ನೇತೃತ್ವ ಶಕ್ತಿ ಮತ್ತು ಕ್ರಿಯಾ ಶಕ್ತಿ ಕುರಿತು ತಿಳುವಳಿಕೆ ಹೊಂದಬೇಕೆಂದು ಹಳೇನಗರದ ನಿರ್ಮಲ ಆಸ್ಪತ್ರೆ ವ್ಯವಸ್ಥಾಪಕಿ ಹಾಗು ನಿರ್ಮಲ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ವಿಲ್ಮಾ ರೆಬೆಲ್ಲೊ ಹೇಳಿದರು.
ಅವರು ನಿರ್ಮಲ ಮಹಿಳಾ ಸೇವಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳೆಯರಲ್ಲಿ ಅದ್ಭುತ ಶಕ್ತಿಗಳಿದ್ದು, ನಮ್ಮ ಇತಿಹಾಸದಲ್ಲಿನ ಆನೇಕ ವೀರ ಮಹಿಳೆಯರು ಇದಕ್ಕೆ ಉದಾಹರಣೆಯಾಗಿದ್ದಾರೆ. ಇಂತಹ ಮಹಿಳೆಯರ ಆದರ್ಶತನಗಳನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಇಸಬೆಲ್ಲಾ ಜೇವಿಯರ್ ಮಾತನಾಡಿ, ಹೆಣ್ಣು-ಗಂಡು ಎಂಬ ಭೇದಭಾವವಿಲ್ಲ. ಮಹಿಳೆಯರು, ಪುರುಷರು ಎಲ್ಲಾ ಒಂದೇ. ಲಿಂಗ ತಾರತಮ್ಯ ಮಾಡಬಾರದು. ಡಾ. ಬಿ.ಆರ್ ಅಂಬೇಡ್ಕರ್‌ರವರು ಸಂವಿಧಾನ ರಚಿಸದಿದ್ದಲ್ಲಿ ನಾವುಗಳು ಇಷ್ಟೊಂದು ಸ್ವತಂತ್ರವಾಗಿ ಜೀವಿಸಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಜೀವನ ನಾವೇ ರೂಪಿಸಿಕೊಳ್ಳಬೇಕು ಎಂದರು.
ಸಿಸ್ಟರ್ ಬರ್ನಾಂಡಿಸ್ ಫೆರ್ನಾಂಡಿಸ್, ಸಿಸ್ಟರ್ ವಿನ್ಸಿ, ಸಿಸ್ಟರ್ ರಜಿನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಂಸ್ಥೆ ನಿರ್ದೇಶಕಿ ಸಿಸ್ಟರ್ ತೆರೇಸಾ ಮಸಕಾರೇನೆಸ್ ಕ್ರೀಡಾ ಚಟುವಟಿಕೆಗಳನ್ನು ನಡೆಸಿಕೊಟ್ಟರು. ಒಕ್ಕೂಟದ ಸದಸ್ಯರಾದ ಜ್ಯೂಲಿಯಟ್ ರೇಷ್ಮಾ ಮತ್ತು ರೋಜ್ ಮೇರಿರವರು ಬಹುಮಾನಗಳನ್ನು ವಿತರಿಸಿದರು.
ಆರಂಭದಲ್ಲಿ ಅಶ್ವಿನಿ ಮತ್ತು ತಂಡದವರಿಂದ ಪ್ರಾರ್ಥನಾ ನೃತ್ಯ ನಡೆಯಿತು. ಚೈತ್ರ ಸ್ವಾಗತಿಸಿ, ಭಾನುಪ್ರಿಯ ನಿರೂಪಿಸಿದರು. ಕವಿತ ವಾರ್ಷಿಕ ವರದಿ ಮಂಡಿಸಿದರು. ನಾಜಿಯಾ ವಂದಿಸಿದರು.
No comments:
Post a Comment