Thursday, November 4, 2021

ಡಿಎಫ್‌ಓ ಕರ್ತವ್ಯ ಲೋಪ ಪ್ರಕರಣ : ನ.೧೦ರೊಳಗೆ ವರದಿ ಸಲ್ಲಿಸಲು ಆದೇಶ

ನ.೧೦ರೊಳಗೆ ವರದಿ ಸಲ್ಲಿಸುವಂತೆ ಅರಣ್ಯ ಇಲಾಖೆ ಜಾಗೃತ ದಳದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಶಿವಮೊಗ್ಗ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಆದೇಶಿಸಿರುವುದು.
    ಭದ್ರಾವತಿ, ನ. ೪: ಶಿವಮೊಗ್ಗ ಸಾಮಾಜಿಕ ಅರಣ್ಯ ವಿಭಾಗದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕಾನೂನು ಮೀರಿ ನಿಯಮ ೩೨ರ ಉಪ ವಲಯ ಅರಣ್ಯಾಧಿಕಾರಿಗೆ ವಲಯ ಅರಣ್ಯಾಧಿಕಾರಿಗಳ ಪ್ರಭಾರ ನೀಡಿ ಹಾಗು ಅರಣ್ಯ ರಕ್ಷಕರ ತರಬೇತಿ ಪಡೆಯದೆ ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಿರುವ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ ನ.೧೦ರೊಳಗೆ ವರದಿ ಸಲ್ಲಿಸುವಂತೆ ಅರಣ್ಯ ಇಲಾಖೆ ಜಾಗೃತ ದಳದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಶಿವಮೊಗ್ಗ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಆದೇಶಿಸಿದ್ದಾರೆ.
    ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಉಕ್ಕುಂದ ಗ್ರಾಮದ ನಿವಾಸಿ, ಸಾಮಾಜಿಕ ಹೋರಾಟಗಾರ ಶಿವಕುಮಾರ್ ಅ.೧೩ರಂದು ಅರಣ್ಯ ಇಲಾಖೆ ಜಾಗೃತ ದಳದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೀಮಾಗರ್ಗ್ ಅವರಿಗೆ ಮನವಿ ಸಲ್ಲಿಸಿ, ಶಿವಮೊಗ್ಗ ಸಾಮಾಜಿಕ ಅರಣ್ಯ ವಿಭಾಗದ ಭದ್ರಾವತಿ-ಶಿವಮೊಗ್ಗ-ತೀರ್ಥಹಳ್ಳಿ ಒಳಗೊಂಡ ಶಿವಮೊಗ್ಗ ವಲಯಕ್ಕೆ ನಿಯಮ ೩೨ರ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ರಾಥೋಡ್‌ಗೆ ವಲಯ ಅರಣ್ಯಾಧಿಕಾರಿಯಾಗಿ ೩೧.೦೫.೨೦೧೮ರಲ್ಲಿ ಪ್ರಭಾರ ನೀಡಿ ಕೆ.ಸಿ.ಎಸ್.ಆರ್ ನಿಯಮಾವಳಿ ೧೯೫೭ರ ಉಲ್ಲಂಘನೆ ಮಾಡಿದ್ದು, ಒಬ್ಬ ಅರಣ್ಯ ರಕ್ಷಕನಿಗೆ ಡ್ರಾಯಿಂಗ್ ಆಫೀಸರ್ ಪ್ರಭಾರ ಹುದ್ದೆಯನ್ನು ನೀಡಿರುವುದು ಕಾನೂನು ಬಾಹಿರ ಹಾಗು ಯಾವುದೇ ಕಾರ್ಯನಿರ್ವಹಣೆಯ ತರಬೇತಿಯನ್ನು ಪಡೆಯದೆ ಕಾಮಗಾರಿಗಳ ಕೋಟ್ಯಾಂತರ ರು. ಬಿಲ್ಲು ಮಾಡುವಂತಹ ಹುದ್ದೆ ನೀಡಿರುವುದು ಶಿವಮೊಗ್ಗ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕರ್ತವ್ಯ ಲೋಪ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
    ಇದೆ ರೀತಿ ನೂತನ್ ಕುಮಾರ್ ಎಂಬುವರು ಅರಣ್ಯ ರಕ್ಷಕರ ತರಬೇತಿ ಪಡೆಯದೆ ಮುಂಬಡ್ತಿಯಾಗಿ ಉಪ ವಲಯ ಅರಣ್ಯಾಧಿಕಾರಿಯಾಗಿದ್ದು, ಇವರಿಗೂ ಸಹ ನಿಯಮ ಉಲ್ಲಂಘಿಸಿ ಸಾಗರ ಮತ್ತು ಹೊಸನಗರ ಒಳಗೊಂಡ ವಲಯ ಅರಣ್ಯಾಧಿಕಾರಿಗಳ ಪ್ರಭಾರ ನೀಡಿ, ಸರ್ಕಾರಿ ಕಾಮಗಾರಿಗಳ ನಿರ್ವಹಣೆ ವಹಿಸಲಾಗಿದೆ. ಇವರು ಸುಮಾರು ನಾಲ್ಕೂವರೆ ವರ್ಷಗಳಿಂದ ಈ ಹುದ್ದೆ ನಿರ್ವಹಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.


ಸಾಮಾಜಿಕ ಹೋರಾಟಗಾರ ಶಿವಕುಮಾರ್

ಭಾರ ಎತ್ತುವ ಸ್ಪರ್ಧೆಯಲ್ಲಿ ಡಿ. ಸಂಜಯ್‌ಗೆ ಬೆಳ್ಳಿ ಪದಕ

ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಡಿ. ಸಂಜಯ್ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ, ನ. ೪: ನಗರದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಡಿ. ಸಂಜಯ್ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ದಾವಣಗೆರೆಯಲ್ಲಿ ನಡೆದ ಪುರುಷರ ರಾಜ್ಯಮಟ್ಟದ ವ್ಹೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಒಟ್ಟು ೧೭೫ ಕೆ.ಜಿ ಭಾರ ಎತ್ತುವ ಮೂಲಕ ಬಹುಮಾನ ಪಡೆದುಕೊಂಡಿದ್ದಾರೆ.
    ಡಿ. ಸಂಜಯ್ ದಿನೇಶ್ ಮತ್ತು ಗೀತಾ ದಂಪತಿ ಪುತ್ರರಾಗಿದ್ದು, ಪ್ರಥಮ ಬಿ.ಎ ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಯನ್ನು ಶಾಸಕ ಬಿ.ಕೆ ಸಂಗಮೇಶ್ವರ್, ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಡಿ ವಿಶ್ವನಾಥ್ ಹಾಗು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ.

ಪೌರಕಾರ್ಮಿಕರ ಕೊಡುಗೆ ಸ್ಮರಣೆ : ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ನಗರಸಭೆ ಪೌರಕಾರ್ಮಿಕರಾದ ಶಾರದಮ್ಮ ಅವರನ್ನು ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಕೆ. ಪರಮೇಶ್, ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್ ಸೇರಿದಂತೆ ಇನ್ನಿತರರು ಅಭಿನಂದಿಸಿದರು.  
    ಭದ್ರಾವತಿ, ನ. ೪: ಪೌರಕಾರ್ಮಿಕರು ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನು ಸ್ಮರಿಸುವ ಮೂಲಕ ಈ ವೃತ್ತಿಯಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ನಗರಸಭೆ ಪೌರಕಾರ್ಮಿಕರನ್ನು ಈ ಬಾರಿ ಕನ್ನಡ ರಾಜ್ಯೋತ್ಸವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
    ಪೌರಕಾರ್ಮಿಕರಾದ ಶಾರದಮ್ಮ ಅವರನ್ನು ಹಳೇನಗರದ ಕನಕಮಂಟಪ ಮೈದಾನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್, ತಹಸೀಲ್ದಾರ್ ಆರ್. ಪ್ರದೀಪ್ ಸೇರಿದಂತೆ ಇನ್ನಿತರರು ಸನ್ಮಾನಿಸಿದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಕೆ. ಪರಮೇಶ್, ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್ ಸೇರಿದಂತೆ ಇನ್ನಿತರರು ಶಾರದಮ್ಮ ಅವರನ್ನು ಅಭಿನಂದಿಸಿದರು.