Thursday, December 17, 2020

ಸರ್ಕಾರಿ ಪಠ್ಯಪುಸ್ತಕದಲ್ಲಿ ಬ್ರಾಹ್ಮಣ ಸಮುದಾಯ ಕುರಿತು ಅವಹೇಳನಕಾರಿ ವಾಕ್ಯ

ತಕ್ಷಣ ತೆಗೆದುಹಾಕಲು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ

ಬ್ರಾಹ್ಮಣ ಸಮುದಾಯ ಕುರಿತು ರಾಜ್ಯ ಸರ್ಕಾರ ಮುದ್ರಿಸಿರುವ ೬ ಮತ್ತು ೯ನೇ ತರಗತಿ ಪಠ್ಯ ಪುಸ್ತಕದಲ್ಲಿನ ಅವಹೇಳನಕಾರಿ ವಾಕ್ಯಗಳನ್ನು ತೆಗೆದು ಹಾಕಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ತಾಲೂಕು ಬ್ರಾಹ್ಮಣ ಸಭಾ ವತಿಯಿಂದ ಶುಕ್ರವಾರ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೧೮: ಬ್ರಾಹ್ಮಣ ಸಮುದಾಯ ಕುರಿತು ರಾಜ್ಯ ಸರ್ಕಾರ ಮುದ್ರಿಸಿರುವ ೬ ಮತ್ತು ೯ನೇ ತರಗತಿ ಪಠ್ಯ ಪುಸ್ತಕದಲ್ಲಿನ ಅವಹೇಳನಕಾರಿ ವಾಕ್ಯಗಳನ್ನು ತೆಗೆದು ಹಾಕಬೇಕೆಂದು ಆಗ್ರಹಿಸಿ ತಾಲೂಕು ಬ್ರಾಹ್ಮಣ ಸಭಾ ವತಿಯಿಂದ ಶುಕ್ರವಾರ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
   ಶಾಲಾ ಪಠ್ಯ ಪುಸ್ತಕದಲ್ಲಿ ಬ್ರಾಹ್ಮಣರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ವಿಷಯವನ್ನು ಸೇರಿಸಿರುವುದು ಬಹಳ ಅಘಾತಕಾರಿಯಾಗಿದೆ. ಬೆಳೆಯುತ್ತಿರುವ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವಂತಾಗಿದೆ. ವೇದಗಳ ಕಾಲದಲ್ಲಿ ಆಚರಿಸುತ್ತಿದ್ದ ಯಜ್ಞ ಮತ್ತು ಯಾಗಗಳಲ್ಲಿ ಆಹಾರ ಧಾನ್ಯ, ಹಾಲು, ತುಪ್ಪವನ್ನು ಹವಿಸ್ಸು ಎಂದು ದಹಿಸುತ್ತಿದ್ದರಿಂದ ಆಹಾರದ ಅಭಾವ ಸೃಷ್ಟಿಯಾಯಿತು ಎಂದು ಕಪೋಲಕಲ್ಪಿತವಾಗಿ ಉಲ್ಲೇಖಿಸಿ ಸನಾತನ ಸಂಪ್ರದಾಯ ಆಚರಣೆಗೆ ಅವಮಾನ ಮಾಡಿರುತ್ತಾರೆ. ಅಲ್ಲದೆ ಇದೆಲ್ಲವನ್ನು ಬ್ರಾಹ್ಮಣರೇ ಮಾಡುತ್ತಿದ್ದರೆಂದು ತಪ್ಪು ಅಭಿಪ್ರಾಯ ಮೂಡುವಂತೆ ನಮೂದಿಸಿರುತ್ತಾರೆ. ಇದು ನಮ್ಮ ಸನಾತನ ಧರ್ಮ ಹಾಗು ಸಂಪ್ರದಾಯಕ್ಕೆ ಘೋರ ಅಪರಾಧ, ಅಪಮಾನ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ವರ್ಣ ವ್ಯವಸ್ಥೆಯಿಂದ ಸಾಮಾಜಿಕ ವಿಘಟನೆಯಾಯಿತು ಎಂಬ ಸತ್ಯಕ್ಕೆ ದೂರವಾದ ಅಂಶಗಳನ್ನು ಪಠ್ಯದಲ್ಲಿ ಉಲ್ಲೇಖಿಸಿರುವುದು ವಿಷಾದನೀಯ. ಇದು ಬ್ರಾಹ್ಮಣ ಸಮಾಜವನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಪ್ರತಿಬಿಂಬಿಸುವ ಹಾಗು ನಾಡಿನ ಯುವ ಜನತೆಗೆ ತಪ್ಪು ಸಂದೇಶ ನೀಡುವ ಹೇಯ ಕೆಲಸವಾಗಿದೆ. ಈ ಹಿನ್ನಲೆಯಲ್ಲಿ ಸತ್ಯಕ್ಕೆ ದೂರವಾದ ವಾಕ್ಯಗಳನ್ನು ತೆಗೆದು ಹಾಕಬೇಕೆಂದು ಆಗ್ರಹಿಸಿದರು.
    ಬ್ರಾಹ್ಮಣ ಸಭಾ ತಾಲೂಕು ಅಧ್ಯಕ್ಷ ಎಂ.ಎಸ್ ಜನರ್ಧನ ಅಯ್ಯಂಗಾರ್, ಉಪಾಧ್ಯಕ್ಷರಾದ ಡಿ. ಸತ್ಯನಾರಾಯಣರಾವ್, ಜಿ. ರಮಾಕಾಂತ್, ಪ್ರಧಾನ ಕಾರ್ಯದರ್ಶಿ ಜಿ. ರಮೇಶ್, ಖಜಾಂಚಿ ಕೆ. ಮಂಜುನಾಥ್, ಪ್ರಮುಖರಾದ ಸುರೇಶ್, ರಾಘವೇಂದ್ರಚಾರ್, ಸ್ವರ್ಣ ನಾಗರಾಜ್, ಕೇಶವಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾನೂನು ಬಾಹಿರವಾಗಿ ತಂಬಾಕು ಮಾರಾಟ : ದಾಳಿ

ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ಕಾನೂನು ಬಾಹಿರವಾಗಿ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು.
    ಭದ್ರಾವತಿ, ಡಿ. ೧೭: ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ಕಾನೂನು ಬಾಹಿರವಾಗಿ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು.
     ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಹಾಗೂ ರಾಷ್ಟ್ರೀಯ ತಂಬಾಕು ನಿಯಂತ್ರಣ ಮಂಡಳಿ ಕಾರ್ಯಕ್ರಮ ಅಧಿಕಾರಿ ಡಾ. ಬಿ.ಎಫ್ ಶಂಕರಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್, ಜಿಲ್ಲಾ ಸಲಹೆಗಾರ ಹೇಮಂತ್ ರಾಜ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಜಿ.ಮಂಜುನಾಥ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಫರ್ನಾಂಡಿಸ್, ಪಿಎಸ್‌ಐ ಎಂ.ಮೋಹನ್, ರಾಜಸ್ವ ನಿರೀಕ್ಷಕ ವೆಂಕಟಾಚಲ, ತಾಲೂಕು ಹಿರಿಯ ಆರೋಗ್ಯ ಸಹಾಯಕ ನೀಲೇಶ್ ರಾಜ್ ಇನ್ನಿತರರು ಪಾಲ್ಗೊಂಡಿದ್ದರು.

ಡಿ.೨೭ರಂದು ಪ್ರೊ ಕಬಡ್ಡಿ ಪಂದ್ಯಾವಳಿಗೆ ಕ್ರೀಡಾಪಟುಗಳ ಆಯ್ಕೆ

ಭದ್ರಾವತಿ, ಡಿ. ೧೭: ತಾಲೂಕು ಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಇದರ ಅಂಗವಾಗಿ ಡಿ.೨೭ರಂದು ಹಳೇನಗರದ ಕನಕಮಂಟಪ ಮೈದಾನದಲ್ಲಿ ಕ್ರೀಡಾಪಟುಗಳ ಆಯ್ಕೆ ನಡೆಯಲಿದೆ.
   ಆಯ್ಕೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಕ್ರೀಡಾಪಟುಗಳು ತಮ್ಮ ಆಧಾರ್ ಕಾರ್ಡ್ ನಕಲು ಪ್ರತಿಯೊಂದಿಗೆ ಬೆಳಿಗ್ಗೆ ೯ ಗಂಟೆಗೆ ಹಾಜರಾಗತಕ್ಕದ್ದು. ಪ್ರತಿ ತಂಡಕ್ಕೆ ೧೦ ಕ್ರೀಡಾಪಟುಗಳು ಒಳಗೊಂಡಂತೆ ಒಟ್ಟು ೮ ತಂಡಗಳ ಆಯ್ಕೆ ನಡೆಯಲಿದೆ.
   ಹೆಚ್ಚಿನ ಮಾಹಿತಿಗೆ ಕಬಡ್ಡಿ ತರಬೇತಿದಾರ ಎಚ್.ಆರ್ ರಂಗನಾಥ್, ಮೊ: ೮೯೭೧೨೫೯೫೯೧, ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಎಚ್.ಎನ್ ಕೃಷ್ಣೇಗೌಡ, ಮೊ: ೯೯೦೨೨೧೦೩೫೫, ತೀರ್ಪುಗಾರ ಎಂ.ಬಿ ಬಸವರಾಜ್, ಮೊ: ೯೪೪೯೪೭೨೮೬೩ ಮತ್ತು ಅಂತರಾಷ್ಟ್ರೀಯ ತೀರ್ಪುಗಾರ ಎಸ್.ಎನ್ ಸಿದ್ದಯ್ಯ, ಮೊ: ೯೧೬೪೦೪೭೭೭೭ ಸಂಖ್ಯೆಗೆ ಕರೆ ಮಾಡಬಹುದಾಗಿದೆ.