ಸೋಮವಾರ, ಜನವರಿ 25, 2021

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸಾಧಕರಿಗೆ ಸನ್ಮಾನ

ಪೌರಾಯುಕ್ತ ಮನೋಹರ್, ಪಿಎಸ್‌ಐ ಬಿ.ಎನ್ ದುರ್ಗಾಪ್ರಸಾದ್, ಇಸ್ರೊ ವಿಜ್ಞಾನಿ ರವಿಶಂಕರ್ ಸೇರಿದಂತೆ ಒಟ್ಟು ೩೩ ಮಂದಿ
ಭದ್ರಾವತಿ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗು ವಿವಿಧ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೩೩ ಮಂದಿಯನ್ನು ಗಣರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಿದೆ.
ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶ್ರಾಂತ ಪ್ರಾಂಶುಪಾಲ, ಕಸಾಪ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ, ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಕಿ ಕೆ. ಜ್ಯೋತಿ, ರಾಜ್ಯಮಟ್ಟದ ಖೋ-ಖೋ ಸ್ಪರ್ಧೆಗಳಲ್ಲಿ ಭಾಗವಹಿಸಿ ತಂಡವನ್ನು ಪ್ರತಿನಿಧಿಸುತ್ತಿರುವ ಇದೆ ಶಾಲೆಯ ದೈಹಿಕ ಶಿಕ್ಷಕ ದಯಾನಂದ, ಡಾ. ಬಿ.ಆರ್ ಅಂಬೇಡ್ಕರ್ ಫಿಲಾಸಫಿ ಅವಾರ್ಡ್ ಪ್ರಶಸ್ತಿ ಪುರಸ್ಕೃತ, ಕಾರೇಹಳ್ಳಿ ಡಾ. ಬಿ.ಆರ್ ಅಂಬೇಡ್ಕರ್ ಪ್ರೌಢಶಾಲೆ ದೈಹಿಕ ಶಿಕ್ಷಕ ಶ್ರೀಕಾಂತ್, ಸುಮಾರು ೧೫ ವರ್ಷಗಳಿಂದ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಬೋಧನ ಮತ್ತು ಚೇತನ ತರಬೇತಿಯಲ್ಲಿ ತೊಡಗಿಸಿಕೊಂಡಿರುವ ತಾಲೂಕಿನ ಹನುಮಂತಪುರ ಬಡ್ತಿ ಮುಖ್ಯ ಶಿಕ್ಷಕ ಎಸ್. ಪುಟ್ಟರಾಜ್, ಸರ್‌ಎಂವಿ ಸರ್ಕಾರಿ ಕಾಲೇಜಿನ ಆಂಗ್ಲ ಉಪನ್ಯಾಸಕ ಮೊಹಮ್ಮದ್ ನಜೀಬ್, ತರೀಕೆರೆ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಚಂದ್ರನಾಯ್ಕ ಹಾಗು ಸ್ಮಾರ್ಟ್ ಕ್ಲಾಸ್ ಹಾಗು ಎನ್‌ಜಿಓ ಸಂಸ್ಥೆಯಿಂದ ಅನುದಾನ ಪಡೆದು ಶಾಲೆಯನ್ನು ಅಭಿವೃದ್ಧಿಪಡಿಸಿರುವ ತಾಲೂಕಿನ ಕಲ್ಲಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ನವೀನ್ ಹಿರೇಮಠ್‌ರವರಿಗೆ ಸನ್ಮಾನ ನಡೆಯಲಿದೆ.
ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಸ್ಕೌಟ್ ವಿಭಾಗದಿಂದ ರಾಜ್ಯಪಾಲರಿಂದ ರಾಜ್ಯ ಪುರಸ್ಕಾರ ಪಡೆದ ನಗರದ ಹೊಸಮನೆ ಸೇಂಟ್ ಮೇರಿಸ್ ಶಾಲೆ ವಿದ್ಯಾರ್ಥಿಗಳಾದ ಕೆ. ಸಂಜಯ್ ಸಿಂಗ್, ಎಂ. ಕಿರಣ್‌ರಾವ್, ಬಿ.ಎಸ್ ಮಂಜುನಾಥ್, ಜಿ. ದಿಗಂತ, ಡಿ.ಎನ್ ಪುಜಿತ, ಪಿ. ಚಂದನ ಕುಮಾರ್ ಮತ್ತು ಸ್ವಾಮಿ ವಿವೇಕಾನಂದ ಆವಾರ್ಡ್ ಪ್ರಶಸ್ತಿ ಪುರಸ್ಕೃತ, ರಾಷ್ಟ್ರಮಟ್ಟದ ಖೋ-ಖೋ ಆಟಗಾರ ಕೆ. ಪವನ್ ಕುಮಾರ್ ಹಾಗು ರಾಷ್ಟ್ರಮಟ್ಟದ ಯೋಗಪಟು ಐ.ಪಿ ಮೋಹನ್, ಖೋ-ಖೋ ಇಂಡಿಯಾ ಗೋಲ್ಡ್ ಮೆಡಲ್ ಪ್ರಶಸ್ತಿ ವಿಜೇತರಾದ ಎನ್. ಅಭಿಷೇಕ್, ಎಂ. ಕೋಟೇಶ್ವರ ಮತ್ತು ಯೂತ್ ನ್ಯಾಷನಲ್ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಪಂದ್ಯಾವಳಿ ಭಾಗವಹಿಸಿ ಪ್ರಶಸ್ತಿ ಪಡೆದಿರುವ ಜಿ.ಎನ್ ಆಕಾಶ್‌ರವರಿಗೆ ಸನ್ಮಾನ ನಡೆಯಲಿದೆ.
ಸರ್ಕಾರಿ ಸೇವೆ ವಿಭಾಗದಿಂದ ಉತ್ತಮವಾಗಿ ಸೇವೆ ಸಲ್ಲಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿರುವ ನಗರಸಭೆ ಪೌರಾಯುಕ್ತ ಮನೋಹರ್, ಶಿಕ್ಷಣ ಇಲಾಖೆಯ ಟಿ.ಪಿ.ಯು ಪಂಚಾಲ್, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಕೆ.ಆರ್ ಪ್ರಶಾಂತ್, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್, ಇದೆ ರೀತಿ ಸಾಹಿತ್ಯ ಹಾಗು ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿಯಾಗಿರುವ ಬೊಮ್ಮನಕಟ್ಟೆ ಕ್ಲಸ್ಟರ್ ಸಿಆರ್‌ಪಿ ಚನ್ನಪ್ಪ, ಕೋಶಾಧ್ಯಕ್ಷರಾಗಿರುವ ಕೈಗಾರಿಕೋದ್ಯಮಿ ಜಿ.ಎನ್ ಸತ್ಯಮೂರ್ತಿ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮೂಲತಃ ನಗರದವರಾದ ಬೆಂಗಳೂರಿನ ಶ್ರೀರಾಂಪುರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ಗಳಾದ ಬಿ.ಎನ್ ದುರ್ಗಾಪ್ರಸಾದ್ ಮತ್ತು ನಾಗೇಂದ್ರ, ವಿಜ್ಞಾನ ವಿಭಾಗದಿಂದ ಇಸ್ರೊ ವಿಜ್ಞಾನಿ ಕಾಗದನಗರದ ನಿವಾಸಿ ರವಿಶಂಕರ್, ಸಮಾಜ ಸೇವೆ ವಿಭಾಗದಿಂದ ಹಳೇನಗರದ ಅಕ್ಕ ಮಹಾದೇವಿ ಬಳಗದ ಬಸವರಾಜಯ್ಯ, ಜಮೀನ್ದಾಋ ಎಚ್.ಎಸ್ ನಾಗರಾಜಪ್ಪ ಮತ್ತು ಮತ್ತು ಹಳೇನಗರ ರಾಘವೇಂದ್ರ ಮಠದ ಸೀತಾರಾಮಣ್ಣ ಸೇರಿದಂತೆ ಒಟ್ಟು ೩೩ ಮಂದಿಯನ್ನು ಸನ್ಮಾನಿಸಿ ಗೌರವಿಸಲಿದೆ.  

ತಾಲ್ಲೂಕು ಕಛೇರಿ ಸೇರಿದಂತೆ ವಿವಿಧೆಡೆ ಮತದಾರರ ದಿನ


ಭದ್ರಾವತಿ ಜೆ ಪಿ ಎಸ್ ಕಾಲೋನಿಯಲ್ಲಿರುವ ಘಟಕ -1ರ ವಿಭಾಗೀಯ ಕಚೇರಿಯಲ್ಲಿ ವಿಭಾಗೀಯ  ಕಾರ್ಯನಿರ್ವಾಹಕ  ಅಭಿಯಂತರ  ಎನ್. ಎಸ್ ಸತೀಶ್ಚಂದ್ರ ನೇತೃತ್ವದಲ್ಲಿ ಮತದಾರರ ದಿನ ನಡೆಯಿತು.
ಭದ್ರಾವತಿ :  ತಾಲ್ಲೂಕು ಕಚೇರಿ, ಶಾಲಾ ಕಾಲೇಜು  ಹಾಗೂ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಸೋಮವಾರ ಮತದಾರರ ದಿನ ಆಚರಿಸಲಾಯಿತು. 
   ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲ್ಲೂಕು ಕಾನೂನು ಸೇವಾ ಸಮಿತಿ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಚುನಾವಣಾ ತರಬೇತಿ ಅಧಿಕಾರಿ, ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ ಬಿ.ಜಿ  ಧನಂಜಯ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು.
     ನ್ಯಾಯಾಧೀಶ  ಪುರುಷೋತ್ತಮ್,  ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಜಯರಾಮ್, ಕಾರ್ಯದರ್ಶಿ ಟಿ.ಎಸ್ ರಾಜು, ಸರ್ಕಾರಿ ಅಭಿಯೋಜಕ ತ್ಯಾಗರಾಜ್,  ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ, ಉಪ ತಹಸೀಲ್ದಾರ್ ಮಲ್ಲಿಕಾರ್ಜುನಯ್ಯ, ಶಿರಸ್ತೇದಾರ್ ಮಂಜಾನಾಯ್ಕ್, ಕಂದಾಯ ಅಧಿಕಾರಿ ಪ್ರಶಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
        ಮೆಸ್ಕಾಂ  ಘಟಕ-1ರ ವಿಭಾಗೀಯ  ಕಚೇರಿಯಲ್ಲಿ  ಮತದಾರರ ದಿನ: 
  ಜೆಪಿಎಸ್ ಕಾಲೋನಿಯಲ್ಲಿರುವ ಘಟಕ -1ರ ವಿಭಾಗೀಯ  ಕಚೇರಿಯಲ್ಲಿ ವಿಭಾಗೀಯ  ಕಾರ್ಯನಿರ್ವಾಹಕ ಅಭಿಯಂತರ ಎನ್. ಎಸ್ ಸತೀಶ್ಚಂದ್ರ ನೇತೃತ್ವದಲ್ಲಿ ಮತದಾರರ ದಿನ ನಡೆಯಿತು.
     ಕಚೇರಿ  ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಲೆಕ್ಕಾಧಿಕಾರಿ ಎಂ.ಈ ರಾಮಚಂದ್ರ, ಸಹಾಯಕ ಲೆಕ್ಕಾಧಿಕಾರಿ ಎಂ. ಜಿ ಅಶ್ವಿನ್ ಕುಮಾರ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ : ಉನ್ನತ ಮಟ್ಟದ ತನಿಖೆ ಕೈಗೊಳ್ಳಿ

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ

ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕ ಹುದ್ದೆ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಹಿನ್ನಲೆಯಲ್ಲಿ ಉನ್ನತ ಮಟ್ಟದ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಖಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಭದ್ರಾವತಿಯಲ್ಲಿ ಸೋಮವಾರ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.  
   ಭದ್ರಾವತಿ, ಜ. ೨೫: ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕ ಹುದ್ದೆ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಹಿನ್ನಲೆಯಲ್ಲಿ ಉನ್ನತ ಮಟ್ಟದ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಖಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಸೋಮವಾರ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.  
   ಇತ್ತೀಚಿನ ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ. ಅದರಲ್ಲೂ ಲೋಕಸೇವಾ ಆಯೋಗದಲ್ಲಿ ಹೆಚ್ಚಿನ ಭ್ರಷ್ಟಾಚಾರ ಪ್ರಕರಣಗಳು ಕಂಡು ಬರುತ್ತಿದ್ದು, ಪ್ರಕರಣಗಳು ಮರುಕಳುಹಿಸುತ್ತಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ.
   ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಈ ರೀತಿಯ ಪ್ರಕರಣಗಳು ಪುನಃ ನಡೆಯದಂತೆ ಎಚ್ಚರ ವಹಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರಮುಖರಾದ ಮನು, ಆಕಾಶ್, ವರುಣ್, ಪುನಿತ್ ಮತ್ತು ಸೂರ್ಯ ಇತರರು ಉಪಸ್ಥಿತರಿದ್ದರು.

ಗುತ್ತಿಗೆ ಕಾರ್ಮಿಕರ ಸಂಘದ ಕಾರ್ಯದರ್ಶಿ ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತದಿಂದ ಸಾವು

ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ  ಘಟನೆ  :  ಗುತ್ತಿಗೆ ಕಾರ್ಮಿಕರಿಂದ ಪ್ರತಿಭಟನೆ  

ಹೃದಯಾಘಾತದಿಂದ ಸಾವನ್ನಪ್ಪಿದ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಕಾರ್ಯದರ್ಶಿ ಅಂತೋಣಿ ರಾಜ್.
    ಭದ್ರಾವತಿ, ಜ. ೨೫: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ ಕಾರ್ಮಿಕರ ಸಂಘದ ಕಾರ್ಯದರ್ಶಿ ಅಂತೋಣಿ ರಾಜ್  ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
      ಹೃದಯಾಘಾತ ಸಂಭವಿಸಿದ ತಕ್ಷಣ ಆಂಬ್ಯುಲೆನ್ಸ್ ಸೇವೆ ಲಭ್ಯವಾಗದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಆಂತೋಣಿ ರಾಜ್ ಮೃತಪಟ್ಟಿದ್ದು, ಆಂಬ್ಯುಲೆನ್ಸ್ ಸಕಾಲದಲ್ಲಿ ಆಗಮಿಸದಿರುವುದನ್ನು ಖಂಡಿಸಿ ಹಾಗೂ ಮೃತ ಕುಟುಂಬಕ್ಕೆ ಗುತ್ತಿಗೆದಾರರು ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಮತ್ತು  ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವಂತೆ ಗುತ್ತಿಗೆ ನೌಕರರು ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಿದರು.  

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಕಾರ್ಯದರ್ಶಿ ಅಂತೋಣಿ ರಾಜ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಆಡಳಿತ ಮಂಡಳಿಯೊಂದಿಗೆ ನಡೆದ ಸಂಧಾನ ಸಭೆ.


       ಸಂಧಾನ ಸಭೆ ಮಾತುಕತೆ ಯಶಸ್ವಿ:
    ಕಾರ್ಖಾನೆ ಆಡಳಿತ ಮಂಡಳಿ, ಗುತ್ತಿಗೆದಾರರೊಂದಿಗೆ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಇದರ ಪರಿಣಾಮ ಕುಟುಂಬ ೧೦ ಲಕ್ಷ ರು. ಪರಿಹಾರ ಹಾಗು ಹೆಂಡತಿ ಮತ್ತು ಮಗಳಿಗೆ ನಗರಾಡಳಿತ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡುವ ಭರವಸೆ ನೀಡಲಾಯಿತು.
   ಸಭೆಯಲ್ಲಿ ನಡೆದ ಮಾತುಕತೆ ಪ್ರಕಾರ ಶಾಸಕ ಬಿ.ಕೆ ಸಂಗಮೇಶ್ವರ್ ಗುತ್ತಿಗೆದಾರರು ನೀಡಬೇಕಾಗಿರುವ ಪರಿಹಾರ ಮೊತ್ತವನ್ನು ತಕ್ಷಣ ನೊಂದ ಕುಟುಂಬಕ್ಕೆ ನೀಡಬೇಕೆಂಬ ಉದ್ದೇಶದಿಂದ ಸ್ಥಳದಲ್ಲಿಯೇ ರು.೧೦ ಲಕ್ಷ ಪರಿಹಾರ ವಿತರಿಸಿ ಮಾನವೀಯತೆ ಮೆರದರು.
    ಸಭೆಯಲ್ಲಿ ಪ್ರಮುಖರಾದ ಆಡಳಿತ ಮಂಡಳಿ ಅಧಿಕಾರಿಗಳು, ಸ್ನೇಹ ಜೀವಿ ಬಳಗದ ಉಮೇಶ್, ನಗರಸಭಾ ಸದಸ್ಯ ಎಂ.ಎ ಅಜಿತ್, ಎಎಪಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಬಾಲಕೃಷ್ಣ, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಮತ್ತು ಪದಾಧಿಕಾರಿಗಳು, ಗುತ್ತಿಗೆ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಕಾರ್ಯದರ್ಶಿ ಅಂತೋಣಿ ರಾಜ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡುತ್ತಿರುವ ಶಾಸಕ ಬಿ.ಕೆ ಸಂಗಮೇಶ್ವರ್.

ಜಗತ್ತಿಗೆ ಕಾಯಕದ ಮಹತ್ವ ತಿಳಿಸಿಕೊಟ್ಟ ನೆಲದಲ್ಲಿ ಇಂದು ಕಾಯಕ ಮರೆ : ಡಾ. ಬಿ.ವಿ ವೀರಭದ್ರಪ್ಪ

ಭದ್ರಾವತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ : ಜಗತ್ತಿಗೆ ೧೨ನೇ ಶತಮಾನದಲ್ಲಿಯೇ ಕಾಯಕದ ಮಹತ್ವ ತಿಳಿಸಿಕೊಟ್ಟ ದೇಶದಲ್ಲಿ ಪ್ರಸ್ತುತ ಕಾಯಕವನ್ನು ನಿರ್ಲಕ್ಷಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಬಿ.ವಿ ವೀರಭದ್ರಪ್ಪ ಹೇಳಿದರು.
    ಅವರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
     ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಸುಮಾರು ೧೨ ಗಂಟೆ ಸಮಯವನ್ನು ಕಾಯಕಕ್ಕೆ ಮೀಸಲಿಡಲಾಗಿದೆ. ಈ ಹಿನ್ನಲೆಯಲ್ಲಿ ಆ ರಾಷ್ಟ್ರಗಳಲ್ಲಿ ಬಡತನ ಎಂಬುದು ಕಣ್ಮರೆಯಾಗಿದೆ. ಆದರೆ ನಮ್ಮ ರಾಷ್ಟ್ರದಲ್ಲಿ  ಕಾಯಕದ ಪರಿಕಲ್ಪನೆ ಮರೆಯಾಗುತ್ತಿದ್ದು, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದೇ ಪ್ರಮುಖ ಗುರಿ ಎಂಬ ಆಲೋಚನೆಯಲ್ಲಿನ ಕಾಲಘಟ್ಟದಲ್ಲಿಯೇ ಕಾಯಕ ಮರೆಯಾಗಿ ಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ಪ್ರತಿಯೊಬ್ಬರು ಕಾಯಕವನ್ನು ನಂಬಿ ಬದುಕು ಸಾಗಿಸಬೇಕು. ನಮ್ಮ ಅಗತ್ಯಗಳನ್ನು ನಾವು ಸಂಪಾದಿಸಿದ ಹಣದಲ್ಲಿಯೇ ಸಾಧ್ಯವಾದಷ್ಟು ಈಡೇರಿಸಿಕೊಳ್ಳಬೇಕು. ನಮ್ಮ ಹಿಂದಿನ ತಲೆಮಾರಿನವರ ಆಲೋಚನೆಗಳು ಈ ನಿಟ್ಟಿನಲ್ಲಿಯೇ ಸಾಗುತ್ತಿತ್ತು. ಯಾರು ಸಹ ಸಾಲದ ಸುಳಿಗೆ ಒಳಗಾಗುತ್ತಿರಲಿಲ್ಲ. ಒಂದು ವೇಳೆ ಸಾಲ ಮಾಡಿದರೂ ಸಹ ಅದನ್ನು ಪೂರ್ಣವಾಗಿ ಹಿಂದಿರುಗಿಸುವ ಬದ್ದತೆ ಬೆಳೆಸಿಕೊಂಡಿದ್ದರು. ಆದರೆ ಇಂದಿನವರಿಗೆ ಆ ಬದ್ದತೆ ಇಲ್ಲವಾಗಿದೆ. ಎಲ್ಲವನ್ನು ಸರ್ಕಾರ ಮಾಡಬೇಕು ಎಂಬ ಆಲೋಚನೆ ಬೆಳೆಸಿಕೊಂಡಿದ್ದಾರೆ. ಈ ಆಲೋಚನೆಯಿಂದ ಹೊರಬರಬೇಕಾಗಿದೆ. ಸರ್ಕಾರದಿಂದ ನಾವು ಪ್ರೀತಿ, ಮಮತೆ, ಸಹಕಾರ, ಸಹಬಾಳ್ವೆ, ಸೋದರತ್ವವನ್ನು ಮಾತ್ರ ನಿರೀಕ್ಷಿಸಬೇಕು. ನಮ್ಮ ನಾಡು ಪುನಃ ೧೨ನೇ ಶತಮಾನದ ಪರಿಕಲ್ಪನೆಯಂತೆ ಕಲ್ಯಾಣದ ನೆಲೆಬೀಡಾಗಿ ರೂಪು ಕೊಳ್ಳಬೇಕಾಗಿದೆ ಎಂದರು.
    ಸಮಾರೋಪ ಸಮಾರಂಭದಲ್ಲಿ ಸಮ್ಮೇಳನ ಸರ್ವಾಧ್ಯಕ್ಷ ಎ ಪಿ ಕುಮಾರ್ ದಂಪತಿ, ತಾಲ್ಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಗಣರಾಜ್ಯೋತ್ಸವ ಸಂಭ್ರಮ ಶ್ರೀಮಂತರು, ಬಂಡವಾಳಶಾಹಿಗಳು, ಅಧಿಕಾರಿಗಳಿಗೆ ಮಾತ್ರ : ಕೆ.ಟಿ ಗಂಗಾಧರ್

ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ಪ್ರತಿಭಟನೆ

ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭದ್ರಾವತಿ ತಾಲೂಕು ಕಚೇರಿ ಮುಂಭಾಗ ಹಮ್ಮಿಕೊಳ್ಳಲಾಗಿರುವ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವರಿಷ್ಠ ಕೆ.ಟಿ ಗಂಗಾಧರ್ ಮಾತನಾಡಿದರು.
ಭದ್ರಾವತಿ, ಜ. ೨: ದೇಶದಲ್ಲಿ ಗಣರಾಜ್ಯೋತ್ಸವ ಸಂಭ್ರಮ ಎಂಬುದು ಕೇವಲ ಶ್ರೀಮಂತರು, ಬಂಡವಾಳಶಾಹಿಗಳು, ಮತ್ತು ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿದೆ. ಈ ದೇಶದಲ್ಲಿ ಬಡವರಿಗೆ, ದುಡಿಯುವ ವರ್ಗಕ್ಕೆ ಇದರ ಸಂಭ್ರಮ ಇಲ್ಲವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವರಿಷ್ಠ ಕೆ.ಟಿ ಗಂಗಾಧರ್ ಆರೋಪಿಸಿದರು.
      ಅವರು ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಕಚೇರಿ ಮುಂಭಾಗ ಹಮ್ಮಿಕೊಳ್ಳಲಾಗಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಸ್ತುತ ದೇಶದಲ್ಲಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವವರು ಹಾಗು ಕಾರ್ಯ ರೂಪಕ್ಕೆ ತರಬೇಕಾದ ಅಧಿಕಾರಿ ವರ್ಗದವರು ಸಂವಿಧಾನದ ಮಹತ್ವ ಅರ್ಥ ಮಾಡಿಕೊಂಡಿಲ್ಲ. ಈ ಹಿನ್ನಲೆಯಲ್ಲಿ ಸಂವಿಧಾನ ಬದ್ಧವಾಗಿ ಲಭಿಸಬೇಕಾದ ಸೌಲಭ್ಯಗಳಿಂದ ಬಡವರ್ಗದವರು, ದುಡಿಯುವ ವರ್ಗದವರು ವಂಚಿತರಾಗಿದ್ದಾರೆಂದು ದೂರಿದರು.
ಸಂವಿಧಾನದ ಆಶಯ ಎತ್ತಿ ಹಿಡಿಯಬೇಕಾದ ಅವಶ್ಯಕತೆ ಇಂದು ಹೆಚ್ಚಿನದ್ದಾಗಿದ್ದು, ಈ ಹಿನ್ನಲೆಯಲ್ಲಿ ರೈತರ ಸಂಘ ಸಮಾಜವಾದಿ ಚಿಂತಕರು ಹಾಗು ಸಮಾನ ಮನಸ್ಕರೊಂದಿಗೆ ಜ.೨೬ರ ಮಂಗಳವಾರ ಜನತಾ ಗಣರಾಜ್ಯೋತ್ಸವ ಶಿವಮೊಗ್ಗ ನಗರದಲ್ಲಿ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಬಡವರ್ಗದವರು, ಶ್ರಮಿಕರು, ಶ್ರೀಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದರು.  
ಪ್ರಸ್ತುತ ಬಿ.ಎನ್ ರಾಜುರವರ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಹೋರಾಟದ ಬಹುತೇಕ ಬೇಡಿಕೆಗಳು ಸಂವಿಧಾನದಲ್ಲಿ ರೂಪಿಸಲಾಗಿರುವ ಕಾನೂನಿಗೆ ಸರಿಸಮಾನವಾಗಿವೆ. ಈ ಹಿನ್ನಲೆಯಲ್ಲಿ ಅಧಿಕಾರಿ ವರ್ಗ ಬೇಡಿಕೆಗಳನ್ನು ಈಡೇರಿಸಿಕೊಡುವ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಆಗ್ರಹಿಸಿದರು.
ನಗರದಲ್ಲಿ ನಿರ್ಮಾಣದ ಹಂತದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನಕ್ಕೆ ಅಗತ್ಯವಿರುವ ಅನುದಾನವನ್ನು ಸರ್ಕಾರ ತಕ್ಷಣ ಬಿಡುಗಡೆಗೊಳಿಸಬೇಕು. ಪ್ರಸ್ತುತ ಎದುರಾಗಿರುವ ಆರ್ಥಿಕ ಸಂಕಷ್ಟದಿಂದ ಹಣ ಬಿಡುಗಡೆ ಮಾಡಲು ಒಂದು ವೇಳೆ ಸಾಧ್ಯವಾಗದಿದ್ದಲ್ಲಿ ಈ ಬಾರಿ ಬಜೆಟ್‌ನಲ್ಲಿ ಅಧಿಕೃತವಾಗಿ ಹಣ ಬಿಡುಗಡೆ ಬಗ್ಗೆ ಘೋಷಿಸಬೇಕೆಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.
ಸಮಿತಿ ಅಧ್ಯಕ್ಷ ಬಿ.ಎನ್ ರಾಜು ವಿವಿಧ ಹೋರಾಟಗಳ ಬಗ್ಗೆ ವಿವರಿಸಿದರು. ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ಪ್ರಮುಖರಾದ ಡಿ.ವಿ ವೀರೇಶ್, ಸುಬ್ಬೇಗೌಡ, ಮುಳ್ಕೆರೆ ಲೋಕೇಶ್, ಇಬ್ರಾಹಿಂ ಖಾನ್, ತಮ್ಮಣ್ಣ, ಮುತ್ತು, ಆಂಜನೇಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.