Wednesday, July 14, 2021

ಭದ್ರಾವತಿಯಲ್ಲಿ ೧೦ ಮಂದಿಯಲ್ಲಿ ಕೊರೋನಾ ಸೋಂಕು

     ಭದ್ರಾವತಿ, ಜು. ೧೪: ತಾಲೂಕಿನಲ್ಲಿ ಬುಧವಾರ ಒಟ್ಟು ೧೦ ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
     ಒಟ್ಟು ೮೨೨ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ೧೦ ಸೋಂಕು ದೃಢಪಟ್ಟಿದೆ. ೧೨ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೂ ಒಟ್ಟು ೭೪೫೫ ಸೋಂಕು ಪತ್ತೆಯಾಗಿದ್ದು, ೭೩೯೫ ಮಂದಿ ಗುಣಮುಖರಾಗಿದ್ದಾರೆ. ೬೦ ಸಕ್ರಿಯ ಪ್ರಕರಣಗಳು ಇದ್ದು, ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ.
    ತಾಲೂಕಿನಲ್ಲಿ ಸೋಂಕು ಇಳಿಮುಖವಾದರೂ ಸಾವಿನ ಪ್ರಮಾಣ ಇಳಿಮುಖವಾಗುತ್ತಿಲ್ಲ. ಇದರಿಂದಾಗಿ ನಾಗರಿಕರಲ್ಲಿ ಆತಂಕ ಹೆಚ್ಚು ಮಾಡಿದೆ.  

ಕಾರ್ಯದರ್ಶಿಯಾಗಿ ಕೃಷ್ಣೋಜಿರಾವ್

ಕೃಷ್ಣೋಜಿರಾವ್
    ಭದ್ರಾವತಿ, ಜು. ೧೪: ಹೊಸ ಬುಳ್ಳಾಪುರ ವಾಡ್ ನಂ.೨೬ ನಿವಾಸಿ ಕೃಷ್ಣೋಜಿರಾವ್ ಅವರನ್ನು ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಕಾರ್ಯದರ್ಶಿಯಾಗಿ ನೇಮಕಗೊಳಿಸಲಾಗಿದೆ.
   ಕೃಷ್ಣೋಜಿರಾವ್ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸೂಚನೆ ಮೇರೆಗೆ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ ನೇಮಕಗೊಳಿಸಿ ಆದೇಶಿಸಿದ್ದಾರೆ. ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ದರಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ನೇಮಕಾತಿ ಆದೇಶದಲ್ಲಿ ಸೂಚಿಸಿದ್ದಾರೆ.
    ಕಾರ್ಯದರ್ಶಿಯಾಗಿ ನೇಮಕಗೊಳ್ಳಲು ಕಾರಣಕರ್ತರಾದ ಶಾಸಕ ಬಿ.ಕೆ ಸಂಗಮೇಶ್ವರ್, ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಎಸ್.ಸಿ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಎಸ್.ಎನ್ ಶಿವಪ್ಪ, ಕೆಪಿಸಿಸಿ ಸದಸ್ಯ ಮಹಮದ್ ಸನಾವುಲ್ಲಾ ಹಾಗು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ನ್ಯಾಯಬೆಲೆ ಅಂಗಡಿ ಪಡಿತರ ವಿತರಣೆ ತೂಕದಲ್ಲಿ ಅಕ್ರಮ : ೪೦ ಕೆ.ಜಿ ಅಕ್ಕಿ ವಿತರಣೆಯಲ್ಲಿ ೩ ಕೆ.ಜಿ ವಂಚನೆ

ಜಿಂಕ್‌ಲೈನ್ ಕಾಮಧೇನು ನ್ಯಾಯಬೆಲೆ ಅಂಗಡಿ ಪ್ರಾಧಿಕಾರ ಅಮಾನತ್ತು


ಭದ್ರಾವತಿ, ಜು. ೧೪: ನಗರಸಭೆ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಪಡಿತರ ಆಹಾರ ವಿತರಣೆ ತೂಕದಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಈ ನ್ಯಾಯಬೆಲೆ ಅಂಗಡಿಯ ಪ್ರಾಧಿಕಾರವನ್ನು ಅಮಾನತ್ತುಗೊಳಿಸಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
      ನಗರಸಭೆ ೩೧ನೇ ವಾರ್ಡ್ ವ್ಯಾಪ್ತಿಯ ಜಿಂಕ್‌ಲೈನ್‌ನಲ್ಲಿರುವ ವೈ.ವಿ ಮೋಹನ್‌ಕುಮಾರ್ ಎಂಬುವರ ಕಾಮಧೇನು ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ಕಾನೂನು ಮಾಪನ ಶಾಸ್ತ್ರ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
    ವಿಶೇಷ ತಂಡ ಜು.೧೨ರಂದು ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ಪಡಿತರ ಚೀಟಿಯೊಂದರ ಕುಟುಂಬಕ್ಕೆ ೪೦ ಕೆ.ಜಿ ಅಕ್ಕಿ ವಿತರಣೆಯಾಗಿದ್ದು, ಇದನ್ನು ಪರಿಶೀಲನೆ ನಡೆಸಿದಾಗ ೩ ಕೆ.ಜಿ ಕಡಿಮೆ ಇರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ವಿಶೇಷ ತಂಡದ ವರದಿಯನ್ನು ಆಧರಿಸಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಬಿ.ಟಿ ಮಂಜುನಾಥನ್ ಅವರು ಅಂಗಡಿಯ ಪ್ರಾಧಿಕಾರವನ್ನು ಅಮಾನತ್ತುಗೊಳಿಸಿದ್ದಾರೆ.