ಜಿಂಕ್‌ಲೈನ್ ಕಾಮಧೇನು ನ್ಯಾಯಬೆಲೆ ಅಂಗಡಿ ಪ್ರಾಧಿಕಾರ ಅಮಾನತ್ತು
ಭದ್ರಾವತಿ, ಜು. ೧೪: ನಗರಸಭೆ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಪಡಿತರ ಆಹಾರ ವಿತರಣೆ ತೂಕದಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಈ ನ್ಯಾಯಬೆಲೆ ಅಂಗಡಿಯ ಪ್ರಾಧಿಕಾರವನ್ನು ಅಮಾನತ್ತುಗೊಳಿಸಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ನಗರಸಭೆ ೩೧ನೇ ವಾರ್ಡ್ ವ್ಯಾಪ್ತಿಯ ಜಿಂಕ್‌ಲೈನ್‌ನಲ್ಲಿರುವ ವೈ.ವಿ ಮೋಹನ್‌ಕುಮಾರ್ ಎಂಬುವರ ಕಾಮಧೇನು ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ಕಾನೂನು ಮಾಪನ ಶಾಸ್ತ್ರ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ವಿಶೇಷ ತಂಡ ಜು.೧೨ರಂದು ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ಪಡಿತರ ಚೀಟಿಯೊಂದರ ಕುಟುಂಬಕ್ಕೆ ೪೦ ಕೆ.ಜಿ ಅಕ್ಕಿ ವಿತರಣೆಯಾಗಿದ್ದು, ಇದನ್ನು ಪರಿಶೀಲನೆ ನಡೆಸಿದಾಗ ೩ ಕೆ.ಜಿ ಕಡಿಮೆ ಇರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ವಿಶೇಷ ತಂಡದ ವರದಿಯನ್ನು ಆಧರಿಸಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಬಿ.ಟಿ ಮಂಜುನಾಥನ್ ಅವರು ಅಂಗಡಿಯ ಪ್ರಾಧಿಕಾರವನ್ನು ಅಮಾನತ್ತುಗೊಳಿಸಿದ್ದಾರೆ.
No comments:
Post a Comment