Monday, December 23, 2024

ಮಾರಾಕಾಸ್ತ್ರ ಹಿಡಿದು ಎರಡು ಗ್ಯಾಂಗ್‌ಗಳಿಂದ ಕೊಲೆಗೆ ಯತ್ನ

ಎರಡು ಗ್ಯಾಂಗ್‌ಗಳ ವಿರುದ್ಧ ಪ್ರಕರಣ ದಾಖಲು 

    ಭದ್ರಾವತಿ: ಹಳೇನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುನಃ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಸೋಮವಾರ ಎರಡು ಗ್ಯಾಂಗ್‌ಗಳ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ. 
    ನಗರದ ಬಿ.ಎಚ್ ರಸ್ತೆಯಲ್ಲಿರುವ ಸ್ಮಾರ್ಟ್ ಫಿಟ್ನೆಸ್ ವ್ಯಾಯಾಮ ಶಾಲೆಯಲ್ಲಿ ಬೆಳಗಿನ ಜಾವ ವ್ಯಾಯಾಮ ಮುಗಿಸಿ ಹೊರ ಬರುತ್ತಿದ್ದ ಜೋಯೆಲ್ ಥಾಮ್ಸನ್ ಎಂಬ ಯುವಕನ ಮೇಲೆ ಸುಮಾರು ೬ ಜನರ ಗ್ಯಾಂಗ್ ಮಚ್ಚು, ಲಾಂಗ್ ಸೇರಿದಂತೆ ಇನ್ನಿತರ ಮಾರಾಕಾಸ್ತ್ರಗಳನ್ನು ಹಿಡಿದು ಕೊಲೆ ಮಾಡಲು ಯತ್ನಿಸಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಥಾಮ್ಸನ್ ತಪ್ಪಿಸಿಕೊಂಡು ವ್ಯಾಯಾಮ ಶಾಲೆ ಒಳಗೆ ಓಡಿ ಹೋಗಿದ್ದಾನೆ. ಪೊಲೀಸರಿಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 
    ವಿಶ್ವ ಅಲಿಯಾಸ್ ಮುದ್ದೆ, ಕೋಟೇಶ ಅಲಿಯಾಸ್ ಕೋಟಿ, ನವೀನ ಅಲಿಯಾಸ್ ಡಿಂಗ ಸೇರಿದಂತೆ ೬ ಜನರ ಗ್ಯಾಂಗ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಜೋಯೆಲ್ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. 
    ಇದಕ್ಕೂ ಮೊದಲು ಈ ಗ್ಯಾಂಗ್ ವಿರುದ್ಧ ಜಟ್‌ಪಟ್ ನಗರದಲ್ಲಿ ೭ ಜನರ ಗ್ಯಾಂಗ್ ಓರ್ವನ ಕೊಲೆಗೆ ಯತ್ನಿಸಿದ್ದು, ಇಲ್ಲೂ ಸಹ ಆತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಸಹ ಹಳೇನಗರ ಪೊಲೀಸ್ ಠಾಣೆಯಲ್ಲಿ ಮಧುಕುಮಾರ್ ಎಂಬಾತ ದೂರು ನೀಡಿದ್ದಾನೆ. 
    ಎರಡು ಗ್ಯಾಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ನಡುವೆ ನಗರದಲ್ಲಿ ಪುನಃ ಪುಡಿ ರೌಡಿಗಳ ಹಾವಳಿ ಹೆಚ್ಚಾಗುತ್ತಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. 

ಎಚ್.ಎಸ್ ಶ್ರೀನಾಗ್-ಸುಜಾತ ವಿವಾಹ ಮಹೋತ್ಸವ

ಭದ್ರಾವತಿ ನಗರದ ನ್ಯೂಟೌನ್ ಮೆಸ್ ಸರ್ಕಲ್, ದತ್ತಮಂದಿರದಲ್ಲಿ ಎಚ್.ಎಸ್ ಶ್ರೀನಾಗ್-ಸುಜಾತ ವಿವಾಹ ಮಹೋತ್ಸವದ ಆರತಕ್ಷತೆ ಕಾರ್ಯಕ್ರಮ ಸೋಮವಾರ ಜರುಗಿತು
    ಭದ್ರಾವತಿ : ನಗರದ ಹಿರಿಯ ಪತ್ರಕರ್ತ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ ಶಿವಶಂಕರ್-ಎಂ. ಚಂದ್ರಕಲಾ ದಂಪತಿ ಪುತ್ರ ಎಚ್.ಎಸ್ ಶ್ರೀನಾಗ್ ರವರ ವಿವಾಹ ಮಹೋತ್ಸವ ಡಿ.೨೨ರ ಭಾನುವಾರ ವಿಜಯನಗರ ಜಿಲ್ಲೆ, ಹೂವಿನಹಡಗಲಿ ತಾಲೂಕಿನ ನಡುವಿನಹಳ್ಳಿ ಗ್ರಾಮದ ನಾಗರಾಜ ಮಡಿವಾಳರ-ರೇಣುಕಾ ದಂಪತಿ ಪುತ್ರಿ  ಸುಜಾತ ಅವರೊಂದಿಗೆ ಹೊಳಲು ಗ್ರಾಮದಲ್ಲಿ ನೆರವೇರಿತು. 


    ಸೋಮವಾರ ನಗರದ ನ್ಯೂಟೌನ್ ಮೆಸ್ ಸರ್ಕಲ್, ದತ್ತಮಂದಿರದಲ್ಲಿ ಆರತಕ್ಷತೆ ಕಾರ್ಯಕ್ರಮ ಜರುಗಿತು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮಾಚಿದೇವ ಮಡಿವಾಳರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು, ಕುಟುಂಬ ವರ್ಗದವರು, ಬಂಧ-ಮಿತ್ರರು, ಜನಪ್ರತಿನಿಧಿಗಳು ಪಾಲ್ಗೊಂಡು ನೂತನ ದಂಪತಿಗೆ ಶುಭ ಕೋರಿದರು. 

ರೈತರು ಬೆಳೆಗಳನ್ನು ಬೆಳೆಯುವುದರಿಂದಲೇ ಮನುಜ ಕುಲ ಶಾಂತಿಯುತವಾಗಿ ಜೀವನ ನಡೆಸಲು ಸಾಧ್ಯ : ಬಿ. ಸಿದ್ದಬಸಪ್ಪ

ಭದ್ರಾವತಿ ನಗರದ ಹೊಸ ಸೇತುವೆ ರಸ್ತೆ, ಸಿದ್ದಾರೂಢ ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಎ. ಪ್ರಕಾಶ್, ಅರಳಿಹಳ್ಳಿ ಹಾಗೂ ಜಿ. ಗೋಪಾಲ್ ತಳ್ಳಿಕಟ್ಟೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ನಮ್ಮ ದೇಶ ಕೃಷಿ ಪ್ರಧಾನ ದೇಶವಾಗಿದ್ದು, ಬಹಳಷ್ಟು ಜನ ಕೃಷಿಯನ್ನು ಅವಲಂಬಿಸಿದ್ದಾರೆ. ರೈತರು ಬೆಳೆಗಳನ್ನು ಬೆಳೆಯುವುದರಿಂದಲೇ ಮನುಜ ಕುಲ ಶಾಂತಿಯುತವಾಗಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ನಗರದ ಹೊಸ ಸೇತುವೆ ರಸ್ತೆ, ಸಿದ್ದಾರೂಢ ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಅಧ್ಯಕ್ಷ ಬಿ. ಸಿದ್ದಬಸಪ್ಪ ಹೇಳಿದರು. 
    ಅವರು ಸೋಮವಾರ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅನ್ನ ನೀಡುವ ರೈತರನ್ನು ಪ್ರತಿಯೊಬ್ಬರು ಗೌರವಿಸುವುದು ಕರ್ತವ್ಯವಾಗಿದೆ ಎಂದರು. 
    ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಎ. ಪ್ರಕಾಶ್, ಅರಳಿಹಳ್ಳಿ ಹಾಗೂ ಜಿ. ಗೋಪಾಲ್ ತಳ್ಳಿಕಟ್ಟೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಗತಿಪರ ರೈತ ಪ್ರಕಾಶ್‌ರವರು, ಕೃಷಿಯ ಐತಿಹಾಸಿಕ ಹಿನ್ನೆಲೆ ಕೃಷಿ ಚಟುವಟಿಕೆಯ ಅದ್ಭುತಾವಕಾಶಗಳನ್ನು ಹೊಂದಿದೆ. ಕೃಷಿ ಕೇವಲ ಮನುಜ ಕುಲಕ್ಕೆ ಮಾತ್ರವಲ್ಲ ಸಕಲ ಜೀವರಾಶಿಗೆ ಅಗತ್ಯವಿದೆ ಎಂದರು. 
    ಗೋಪಾಲ್‌ರವರು ಕೃಷಿ ಚಟುವಟಿಕೆಯ ನೈಜ ಚಿತ್ರಣ ತೆರೆದಿಡುವ ಮೂಲಕ ರೈತರು ಎದುರಿಸುವ ಸಂಕಷ್ಟಗಳು, ಸವಾಲುಗಳನ್ನು ವಿವರಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆ ಬಿ. ಎಲ್.ರಂಗಸ್ವಾಮಿ ವಹಿಸಿದ್ದರು. 
    ವಿದ್ಯಾಸಂಸ್ಥೆ ಕಾರ್ಯದರ್ಶಿ ಎಸ್.ಕೆ ಮೋಹನ್, ನಿರ್ದೇಶಕರುಗಳಾದ ಚೆನ್ನಯ್ಯ ಮತ್ತು ಪುಟ್ಟಲಿಂಗ ಮೂರ್ತಿ, ರಮೇಶ್, ಜನಾರ್ಧನ್, ಶ್ರೀನಿವಾಸ ಬಾಗೋಡಿ, ರಮೇಶ್, ಆಡಳಿತ ಅಧಿಕಾರಿ ಡಾ.ಎಸ್.ಪಿ ರಾಕೇಶ್.ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ ಹಾಗೂ ಮುಖ್ಯೋಪಾಧ್ಯಾಯರುಗಳಾದ  ಹೇಮಾವತಿ, ರೇಣುಕಪ್ಪ, ಚೈತ್ರ, ಕಿರಣ್ ಕುಮಾರ್ ಹಾಗೂ ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 
    ನೇತ್ರಾವತಿ ಸ್ವಾಗತಿಸಿ, ರೇವತಿ ಅತಿಥಿಗಳನ್ನು ಪರಿಚಯಿಸಿದರು. ರೇಣುಕಪ್ಪ ನಿರೂಪಿಸಿದರು, ಅಲಿಮಿಯ ವಂದಿಸಿದರು. 

ತೋಟಗಾರಿಕೆ ಬೆಳೆಯಲ್ಲಿ ಪ್ರಗತಿ : ಜಿಲ್ಲಾ ಅತ್ಯುತ್ತಮ ತೋಟಗಾರಿಕೆ ಪ್ರಶಸ್ತಿ

ಪತ್ರಕರ್ತ ಸುರೇಶ್ ಸಾಧನೆ

ಭದ್ರಾವತಿ: ಮೂಲತಃ ಪತ್ರಕರ್ತರಾಗಿರುವ ಸುರೇಶ್‌ರವರು ಕಳೆದ ೧೫ ವರ್ಷಗಳಿಂದ ತೋಟಗಾರಿಕೆ ಬೆಳೆಗಳನ್ನು ಬೆಳೆದು ಪ್ರಗತಿ ಸಾಧಿಸಿದ್ದು, ರೂರಲ್ ಎಜ್ಯುಕೇಷನ್ ಅಂಡ್ ಡೆವಲಪ್‌ಮೆಂಟ್ ಟ್ರಸ್ಟ್ ಜಿಲ್ಲಾ ಅತ್ಯುತ್ತಮ ತೋಟಗಾರಿಕೆ ಪ್ರಶಸ್ತಿ ನೀಡಿ ಅಭಿನಂದಿಸಿದೆ. 
    ಭದ್ರಾವತಿ: ಮೂಲತಃ ಪತ್ರಕರ್ತರಾಗಿರುವ ಸುರೇಶ್‌ರವರು ಕಳೆದ ೧೫ ವರ್ಷಗಳಿಂದ ತೋಟಗಾರಿಕೆ ಬೆಳೆಗಳನ್ನು ಬೆಳೆದು ಪ್ರಗತಿ ಸಾಧಿಸಿದ್ದು, ರೂರಲ್ ಎಜ್ಯುಕೇಷನ್ ಅಂಡ್ ಡೆವಲಪ್‌ಮೆಂಟ್ ಟ್ರಸ್ಟ್ ಜಿಲ್ಲಾ ಅತ್ಯುತ್ತಮ ತೋಟಗಾರಿಕೆ ಪ್ರಶಸ್ತಿ ನೀಡಿ ಅಭಿನಂದಿಸಿದೆ. 
      ತಾಲೂಕಿನ ಹಿರಿಯೂರು ಗ್ರಾಮದಲ್ಲಿ ಸುಮಾರು ೨ ಎಕರೆ ಜಮೀನು ಹೊಂದಿರುವ ಸುರೇಶ್‌ರವರು ತೋಟಗಾರಿಕೆ ಬೆಳೆಗಳಾದ ತರಕಾರಿ, ಹಣ್ಣು, ಸೊಪ್ಪು ಮತ್ತು ಅಣಬೆ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದು, ಉತ್ತಮ ಇಳಿವರಿ ಪಡೆಯುವ ಮೂಲಕ ಪ್ರಗತಿ ಸಾಧಿಸಿದ್ದಾರೆ. 
    ಅಲ್ಲದೆ ಹಸು, ಕುರಿ ಮತ್ತು ಕೋಳಿ ಸಾಕಾಣಿಕೆ ಮೂಲಕ ಹೈನುಗಾರಿಕೆಯಲ್ಲೂ ಪ್ರಗತಿ ಸಾಧಿಸಿದ್ದು, ತೋಟಗಾರಿಕೆ ಬೆಳೆ ಹಾಗು ಹೈನುಗಾರಿಕೆ ಇವರ ಬದುಕಿಗೆ ಆಧಾರ ಸ್ತಂಭಗಳಾಗಿವೆ. 
    ಸುರೇಶ್‌ರವರ ಸಾಧನೆಯನ್ನು ಗುರುತಿಸಿ ರೂರಲ್ ಎಜ್ಯುಕೇಷನ್ ಅಂಡ್ ಡೆವಲಪ್‌ಮೆಂಟ್ ಟ್ರಸ್ಟ್ ಜಿಲ್ಲಾ ಅತ್ಯುತ್ತಮ ತೋಟಗಾರಿಕೆ ಪ್ರಶಸ್ತಿಯನ್ನು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಮಾರಂಭದಲ್ಲಿ ನೀಡಿ ಅಭಿನಂದಿಸಿದೆ.