Monday, November 15, 2021

ಕಲ್ಲಂಗಡಿಯಲ್ಲಿ ಅರಳಿದ ಪವರ್ ಸ್ಟಾರ್ : ಪುನೀತ್ ರಾಜ್‌ಕುಮಾರ್ ಗೌರವ ನಮನ

    ಭದ್ರಾವತಿ, ನ. ೧೫: ಇತ್ತೀಚೆಗೆ ನಿಧನ ಹೊಂದಿದ ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ನಗರದ ತರೀಕೆರೆ ರಸ್ತೆ ಶಿವಾನಿ ವೃತ್ತದ ಫೈಜಾನ್ ಆರ್ಟ್ಸ್‌ನ ಕಲಾವಿದ ಮಹಮದ್ ಫೈಜಾನ್ ಕಲ್ಲಂಗಡಿ ಹಣ್ಣಿನಲ್ಲಿ ತಮ್ಮ ಕಲಾ ಕೌಶಲ್ಯದ ಮೂಲಕ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
    ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ಅವರಿಗೆ ಗೌರವ ಸಲ್ಲಿಸಲು ಕಲ್ಲಂಗಡಿ ಹಣ್ಣಿನಲ್ಲಿ ಅವರ ಆಕಷರ್ಕ ಕಲಾಕೃತಿಯನ್ನು ರಚಿಸಿದ್ದಾರೆ. ಈ ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ. ಇವರ ಈ ಕಲೆಗೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ. ವಿಶೇಷ ಎಂದರೆ ಈ ಕಲಾಕೃತಿಗೆ ಬಣ್ಣ ಬಣ್ಣದ ವಿದ್ಯುತ್ ದೀಪ ಸಹ ಅಳವಡಿಕೆ ಮಾಡುವ ಮೂಲಕ ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಲಾಗಿದೆ.
    ಮಹಮದ್ ಫೈಜಾನ್ ಅವರು ಸ್ಟಿಕ್ಕರ್ ಕಟಿಂಗ್ಸ್, ಬಣ್ಣ ಲೇಪನ ವೃತ್ತಿ ಜೊತೆಗೆ ಕುಂಚ ಕಲಾವಿದರಾಗಿ ಸಹ ಗುರುತಿಸಿಕೊಂಡಿದ್ದು, ತಮ್ಮಲ್ಲಿನ ಕೆತ್ತನೆಯ ಕಲಾ ಕೌಶಲ್ಯದ ಮೂಲಕ ಹಲವಾರು ಕಲಾಕೃತಿಗಳನ್ನು ರಚಿಸಿದ್ದಾರೆ. ಗಣ್ಯರ ಹುಟ್ಟುಹಬ್ಬ ಸೇರಿದಂತೆ ವಿಶೇಷ ದಿನಗಳಂದು ಕಲ್ಲಂಗಡಿ ಹಣ್ಣಿನಲ್ಲಿ ಅವರ ಕಲಾಕೃತಿಗಳನ್ನು ರಚಿಸಿಕೊಂಡು ಬರುತ್ತಿದ್ದಾರೆ. ೨೦೧೯ರಲ್ಲಿ ಗಾಂಧಿಜಯಂತಿ ದಿನದಂದು ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಕಲಾಕೃತಿ, ೨೦೧೮ರಲ್ಲಿ ನಟ ಸಲ್ಮಾನ್ ಖಾನ್ ಅವರ ಹುಟ್ಟುಹಬ್ಬದಂದು ಅವರ ಕಲಾಕೃತಿ, ೨೦೧೯ರಲ್ಲಿ ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ಅವರ ಹುಟ್ಟುಹಬ್ಬದಂದು ಅವರ ಕಲಾಕೃತಿ ಹೀಗೆ ಹಲವಾರು ಗಣ್ಯ ವ್ಯಕ್ತಿಗಳ ಕಲಾಕೃತಿಗಳನ್ನು ರಚಿಸಿ ಗಮನ ಸೆಳೆದಿದ್ದಾರೆ.
    ಫೈಜಾನ್ ಅವರು ಕೇವಲ ಕಲ್ಲಂಗಡಿ ಹಣ್ಣು ಮಾತ್ರವಲ್ಲದೆ ಎಲೆಗಳ ಮೇಲೆ ಕಲಾಕೃತಿಗಳನ್ನು ರಚಿಸಿದ್ದಾರೆ. ಗೋಡೆಗಳ ಮೇಲೆ ಆಕರ್ಷಕವಾದ ಕುಂಚ ಕಲೆ, ವರ್ಣ ಚಿತ್ರ ಕಲೆಗಳಲ್ಲಿಯೂ ಸಹ ಪರಿಣಿತರಾಗಿದ್ದಾರೆ.
ಫೈಜಾನ್ ಅವರು ತಮ್ಮ ಎಲ್ಲಾ ಕಲಾಕೃತಿಗಳನ್ನು ತಮ್ಮದೇ ಯೂ ಟೂಬ್ ಚಾನಲ್‌ನಲ್ಲಿ ಸಂಗ್ರಹಿಸಿಟ್ಟುಕೊಂಡು ಆಸಕ್ತರಿಗೆ ಪರಿಚರಿಸಿಕೊಂಡು ಬರುತ್ತಿದ್ದಾರೆ. ಸುಮಾರು ೧೫ ವರ್ಷಗಳಿಂದ ಯಾವುದೇ ಪ್ರಚಾರದ ಗೀಳು ಹಚ್ಚಿಸಿಕೊಳ್ಳದ ಎಲೆಮರೆ ಕಾಯಿಯಂತೆ ಉಳಿದುಕೊಂಡಿದ್ದಾರೆ.
    ಕಳೆದ ೩ ದಿನಗಳ ಹಿಂದೆ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗು ಪುನೀತ್ ರಾಜ್‌ಕುಮಾರ್ ಅವರ ಪುಣ್ಮಸ್ಮರಣೆ ಕಾರ್ಯಕ್ರಮದಲ್ಲಿ ಪುನೀತ್‌ರಾಜ್‌ಕುಮಾರ್ ಅವರ ಕಲಾಕೃತಿಯನ್ನು ಸಮರ್ಪಿಸಿಕೊಂಡು ತಮ್ಮಲ್ಲಿನ ಕಲಾ ಕೌಶಲ್ಯವನ್ನು ಅನಾವರಣಗೊಳಿಸಿದ್ದಾರೆ.



ಇತ್ತೀಚೆಗೆ ನಿಧನ ಹೊಂದಿದ ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಭದ್ರಾವತಿ ತರೀಕೆರೆ ರಸ್ತೆ ಶಿವಾನಿ ವೃತ್ತದ ಫೈಜಾನ್ ಆರ್ಟ್ಸ್‌ನ ಕಲಾವಿದ ಮಹಮದ್ ಫೈಜಾನ್ ಕಲ್ಲಂಗಡಿ ಹಣ್ಣಿನಲ್ಲಿ ತಮ್ಮ ಕಲಾ ಕೌಶಲ್ಯದ ಮೂಲಕ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಎಸ್.ಎಸ್ ಕೃಷ್ಣ ನೇಮಕ

ಎಸ್.ಎಸ್ ಕೃಷ್ಣ
    ಭದ್ರಾವತಿ, ನ. ೧೫: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ತಾಲೂಕಿನ ವೀರಾಪುರ ನಿವಾಸಿ ಎಸ್.ಎಸ್ ಕೃಷ್ಣ ನೇಮಕಗೊಂಡಿದ್ದಾರೆ.
    ಅಸಂಘಟಿತ ಕಾರ್ಮಿಕರ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಅರಬಿಂದ್ ಸಿಂಗ್ ಹಾಗು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ರವರ ಅನುಮೋದನೆ ಮೇರೆಗೆ ಎಸ್.ಎಸ್ ಕೃಷ್ಣ ಅವರನ್ನು ರಾಜ್ಯ ಕಾರ್ಯದರ್ಶಿಯಾಗಿ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್ ಮಂಜುನಾಥ್ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
    ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಪ್ರಾಮಾಣಿಕವಾಗಿ ಶ್ರಮಿಸುವಂತೆ ಆದೇಶ ಪತ್ರದಲ್ಲಿ ಜಿ.ಎಸ್ ಮಂಜುನಾಥ್ ಸೂಚಿಸಿದ್ದಾರೆ.

ಚುನಾವಣೆ ಮಹತ್ವ ಅರಿತುಕೊಂಡು ಮತದಾನದ ಹಕ್ಕು ಹೊಂದಿ : ಆರ್. ಪ್ರದೀಪ್

ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯಲ್ಲಿ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ೨೦೨೧-೨೨ನೇ ಸಾಲಿನ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ ರಾಷ್ಟೀಯ ಮತದಾರರ ದಿನಾಚರಣೆ(ಎನ್‌ವಿಡಿ) ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಸ್ಪರ್ಧಾತ್ಮಕ ಚಟುವಟಿಕೆಗಳು ಕಾರ್ಯಕ್ರಮವನ್ನು ತಹಸೀಲ್ದಾರ್ ಆರ್. ಪ್ರದೀಪ್ ಮತ್ತು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಶಾಲಾ ಮಕ್ಕಳು ಉದ್ಘಾಟಿಸಿದರು.
    ಭದ್ರಾವತಿ, ನ. ೧೫: ದೇಶದಲ್ಲಿ ಚುನಾವಣೆ ಪರಿಕಲ್ಪನೆ ರಾಜಮನೆತನದಿಂದ ಆರಂಭಗೊಂಡಿದ್ದು, ಹಲವು ಕ್ರಾಂತಿಕಾರಕ ಹೋರಾಟಗಳ ಪರಿಣಾಮ ಚುನಾವಣಾ ಆಯೋಗ ರಚನೆಯಾಗುವ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿತು. ವಿದ್ಯಾರ್ಥಿಗಳು ಚುನಾವಣೆ ಮಹತ್ವ ಅರಿತುಕೊಂಡು ಮತದಾನ ಹಕ್ಕು ಹೊಂದಬೇಕೆಂದು ತಹಸೀಲ್ದಾರ್ ಆರ್. ಪ್ರದೀಪ್ ಹೇಳಿದರು.
    ಅವರು ಸೋಮವಾರ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯಲ್ಲಿ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ೨೦೨೧-೨೨ನೇ ಸಾಲಿನ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ ರಾಷ್ಟೀಯ ಮತದಾರರ ದಿನಾಚರಣೆ(ಎನ್‌ವಿಡಿ) ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಸ್ಪರ್ಧಾತ್ಮಕ ಚಟುವಟಿಕೆಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ದೇಶದ ಇತಿಹಾಸದಲ್ಲಿ ಚುನಾವಣೆಗಳ ಮಹತ್ವ ಪ್ರಮುಖವಾಗಿದ್ದು, ಅದರಲ್ಲೂ ರಾಜಮನೆತನಗಳಲ್ಲಿ ರಾಜಮಹಾರಾಜರು ಸಹ ಚುನಾವಣೆ ಮೂಲಕ ಆಯ್ಕೆಯಾಗುವ ವ್ಯವಸ್ಥೆ ನಡೆಸಿಕೊಂಡು ಬಂದಿದ್ದರೂ ಎಂಬುದು ಗಮನಾರ್ಹ ಸಂಗತಿಯಾಗಿದೆ. ನಂತರದ ದಿನಗಳಲ್ಲಿ ಚುನಾವಣಾ ಆಯೋಗ ರಚನೆಗೊಂಡು ೧೮ ವರ್ಷ ತುಂಬಿದ ದೇಶದ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಲಭಿಸಿದೆ. ಭವಿಷ್ಯದ ಮತದಾರರಾದ ನಾವುಗಳು ಮೊದಲು ಚುನಾವಣೆ ಮಹತ್ವ ಅರಿತುಕೊಳ್ಳಬೇಕು. ಚುನಾವಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ. ೧೮ ವರ್ಷ ತುಂಬಿದ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವಂತಾಗಬೇಕು ಎಂದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಮಾತನಾಡಿ, ದೇಶದಲ್ಲಿ ನಾವುಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸರಿಯಾಗಿ ಬಳಕೆಮಾಡಿಕೊಳ್ಳಬೇಕು. ನಮ್ಮ ಮತದಾನದ ಹಕ್ಕನ್ನು ಬಹಳ ಜವಾಬ್ದಾರಿಯುತವಾಗಿ ಚಲಾಯಿಸಬೇಕಾಗಿದೆ. ಈಗಲೂ ಮತದಾನದ ಮಹತ್ವ ಅರಿತುಕೊಳ್ಳುವಲ್ಲಿ ಬಹಳಷ್ಟು ಮಂದಿ ವಿಫಲರಾಗಿದ್ದು, ಈ ಹಿನ್ನಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಮತದಾನ ನಡೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
    ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ. ರಾಕೇಶ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು.  ಸಾಕ್ಷರತಾ ಸಂಘಗಳ ತಾಲೂಕು ನೋಡಲ್ ಅಧಿಕಾರಿ ನವೀದ್ ಪರ್ವೀಜ್ ಅಹಮದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಂಚಿಯಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಹ ಶಿಕ್ಷಕ  ದಿವಾಕರ್, ಕನಕವಿದ್ಯಾಸಂಸ್ಥೆ ಪ್ರಾಂಶುಪಾಲ ಸಿ.ಡಿ ಮಂಜುನಾಥ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
   ಅಂಬೇಡ್ಕರ್ ಜಾನಪದ ಕಲಾತಂಡದ ತಮಟೆ ಜಗದೀಶ್, ದಿವಾಕರ್ ಮತ್ತು ಜಿ. ರವಿಕುಮಾರ್ ತಂಡದವರು ಪ್ರಾರ್ಥಿಸಿದರು. ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಗಣೇಶ್ ಸ್ವಾಗತಿಸಿದರು. ಬಿಐಇಆರ್‌ಟಿ ಆರ್. ಕವಿತಾ ನಿರೂಪಿಸಿದರು. ಶಿಕ್ಷಣ ಸಂಯೋಜಕರಾದ ಶ್ಯಾಮಲ ವಂದಿಸಿದರು. ವಿಇಎಸ್ ವಿದ್ಯಾಸಂಸ್ಥೆ ಸಹಾಯಕ ಆಡಳಿತಾಧಿಕಾರಿ ಶಿವಲಿಂಗೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸಿಬ್ಬಂದಿಗಳು ಹಾಗು ವಿವಿಧ ಶಾಲೆಗಳ ಶಿಕ್ಷಕರು ಮತ್ತು ಶಾಲಾ ಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುವ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆ ಮತ್ತು ಭಿತ್ತಿ ಚಿತ್ರ ಹಾಗು ರಸಪ್ರಶ್ನೆ ಸ್ಪರ್ಧೆಗಳು ನಡೆದವು. ತೀರ್ಪುಗಾರರಾಗಿ ಮಂಜಪ್ಪ, ಲಕ್ಷ್ಮೀಕಾಂತ್‌, ಸುಧೀಂದ್ರ ಮತ್ತು ಆರ್‌. ಕವಿತಾ ಪಾಲ್ಗೊಂಡಿದ್ದರು.