Monday, November 15, 2021

ಚುನಾವಣೆ ಮಹತ್ವ ಅರಿತುಕೊಂಡು ಮತದಾನದ ಹಕ್ಕು ಹೊಂದಿ : ಆರ್. ಪ್ರದೀಪ್

ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯಲ್ಲಿ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ೨೦೨೧-೨೨ನೇ ಸಾಲಿನ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ ರಾಷ್ಟೀಯ ಮತದಾರರ ದಿನಾಚರಣೆ(ಎನ್‌ವಿಡಿ) ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಸ್ಪರ್ಧಾತ್ಮಕ ಚಟುವಟಿಕೆಗಳು ಕಾರ್ಯಕ್ರಮವನ್ನು ತಹಸೀಲ್ದಾರ್ ಆರ್. ಪ್ರದೀಪ್ ಮತ್ತು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಶಾಲಾ ಮಕ್ಕಳು ಉದ್ಘಾಟಿಸಿದರು.
    ಭದ್ರಾವತಿ, ನ. ೧೫: ದೇಶದಲ್ಲಿ ಚುನಾವಣೆ ಪರಿಕಲ್ಪನೆ ರಾಜಮನೆತನದಿಂದ ಆರಂಭಗೊಂಡಿದ್ದು, ಹಲವು ಕ್ರಾಂತಿಕಾರಕ ಹೋರಾಟಗಳ ಪರಿಣಾಮ ಚುನಾವಣಾ ಆಯೋಗ ರಚನೆಯಾಗುವ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿತು. ವಿದ್ಯಾರ್ಥಿಗಳು ಚುನಾವಣೆ ಮಹತ್ವ ಅರಿತುಕೊಂಡು ಮತದಾನ ಹಕ್ಕು ಹೊಂದಬೇಕೆಂದು ತಹಸೀಲ್ದಾರ್ ಆರ್. ಪ್ರದೀಪ್ ಹೇಳಿದರು.
    ಅವರು ಸೋಮವಾರ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯಲ್ಲಿ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ೨೦೨೧-೨೨ನೇ ಸಾಲಿನ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ ರಾಷ್ಟೀಯ ಮತದಾರರ ದಿನಾಚರಣೆ(ಎನ್‌ವಿಡಿ) ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಸ್ಪರ್ಧಾತ್ಮಕ ಚಟುವಟಿಕೆಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ದೇಶದ ಇತಿಹಾಸದಲ್ಲಿ ಚುನಾವಣೆಗಳ ಮಹತ್ವ ಪ್ರಮುಖವಾಗಿದ್ದು, ಅದರಲ್ಲೂ ರಾಜಮನೆತನಗಳಲ್ಲಿ ರಾಜಮಹಾರಾಜರು ಸಹ ಚುನಾವಣೆ ಮೂಲಕ ಆಯ್ಕೆಯಾಗುವ ವ್ಯವಸ್ಥೆ ನಡೆಸಿಕೊಂಡು ಬಂದಿದ್ದರೂ ಎಂಬುದು ಗಮನಾರ್ಹ ಸಂಗತಿಯಾಗಿದೆ. ನಂತರದ ದಿನಗಳಲ್ಲಿ ಚುನಾವಣಾ ಆಯೋಗ ರಚನೆಗೊಂಡು ೧೮ ವರ್ಷ ತುಂಬಿದ ದೇಶದ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಲಭಿಸಿದೆ. ಭವಿಷ್ಯದ ಮತದಾರರಾದ ನಾವುಗಳು ಮೊದಲು ಚುನಾವಣೆ ಮಹತ್ವ ಅರಿತುಕೊಳ್ಳಬೇಕು. ಚುನಾವಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ. ೧೮ ವರ್ಷ ತುಂಬಿದ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವಂತಾಗಬೇಕು ಎಂದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಮಾತನಾಡಿ, ದೇಶದಲ್ಲಿ ನಾವುಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸರಿಯಾಗಿ ಬಳಕೆಮಾಡಿಕೊಳ್ಳಬೇಕು. ನಮ್ಮ ಮತದಾನದ ಹಕ್ಕನ್ನು ಬಹಳ ಜವಾಬ್ದಾರಿಯುತವಾಗಿ ಚಲಾಯಿಸಬೇಕಾಗಿದೆ. ಈಗಲೂ ಮತದಾನದ ಮಹತ್ವ ಅರಿತುಕೊಳ್ಳುವಲ್ಲಿ ಬಹಳಷ್ಟು ಮಂದಿ ವಿಫಲರಾಗಿದ್ದು, ಈ ಹಿನ್ನಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಮತದಾನ ನಡೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
    ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ. ರಾಕೇಶ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು.  ಸಾಕ್ಷರತಾ ಸಂಘಗಳ ತಾಲೂಕು ನೋಡಲ್ ಅಧಿಕಾರಿ ನವೀದ್ ಪರ್ವೀಜ್ ಅಹಮದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಂಚಿಯಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಹ ಶಿಕ್ಷಕ  ದಿವಾಕರ್, ಕನಕವಿದ್ಯಾಸಂಸ್ಥೆ ಪ್ರಾಂಶುಪಾಲ ಸಿ.ಡಿ ಮಂಜುನಾಥ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
   ಅಂಬೇಡ್ಕರ್ ಜಾನಪದ ಕಲಾತಂಡದ ತಮಟೆ ಜಗದೀಶ್, ದಿವಾಕರ್ ಮತ್ತು ಜಿ. ರವಿಕುಮಾರ್ ತಂಡದವರು ಪ್ರಾರ್ಥಿಸಿದರು. ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಗಣೇಶ್ ಸ್ವಾಗತಿಸಿದರು. ಬಿಐಇಆರ್‌ಟಿ ಆರ್. ಕವಿತಾ ನಿರೂಪಿಸಿದರು. ಶಿಕ್ಷಣ ಸಂಯೋಜಕರಾದ ಶ್ಯಾಮಲ ವಂದಿಸಿದರು. ವಿಇಎಸ್ ವಿದ್ಯಾಸಂಸ್ಥೆ ಸಹಾಯಕ ಆಡಳಿತಾಧಿಕಾರಿ ಶಿವಲಿಂಗೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸಿಬ್ಬಂದಿಗಳು ಹಾಗು ವಿವಿಧ ಶಾಲೆಗಳ ಶಿಕ್ಷಕರು ಮತ್ತು ಶಾಲಾ ಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುವ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆ ಮತ್ತು ಭಿತ್ತಿ ಚಿತ್ರ ಹಾಗು ರಸಪ್ರಶ್ನೆ ಸ್ಪರ್ಧೆಗಳು ನಡೆದವು. ತೀರ್ಪುಗಾರರಾಗಿ ಮಂಜಪ್ಪ, ಲಕ್ಷ್ಮೀಕಾಂತ್‌, ಸುಧೀಂದ್ರ ಮತ್ತು ಆರ್‌. ಕವಿತಾ ಪಾಲ್ಗೊಂಡಿದ್ದರು. 

1 comment:

  1. Thanks for the swift Report. To increase Awareness about casting vote and to create awareness for new enrolment as on 01.01.20222 such events are carried out..

    ReplyDelete