Monday, November 15, 2021

ಕಲ್ಲಂಗಡಿಯಲ್ಲಿ ಅರಳಿದ ಪವರ್ ಸ್ಟಾರ್ : ಪುನೀತ್ ರಾಜ್‌ಕುಮಾರ್ ಗೌರವ ನಮನ

    ಭದ್ರಾವತಿ, ನ. ೧೫: ಇತ್ತೀಚೆಗೆ ನಿಧನ ಹೊಂದಿದ ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ನಗರದ ತರೀಕೆರೆ ರಸ್ತೆ ಶಿವಾನಿ ವೃತ್ತದ ಫೈಜಾನ್ ಆರ್ಟ್ಸ್‌ನ ಕಲಾವಿದ ಮಹಮದ್ ಫೈಜಾನ್ ಕಲ್ಲಂಗಡಿ ಹಣ್ಣಿನಲ್ಲಿ ತಮ್ಮ ಕಲಾ ಕೌಶಲ್ಯದ ಮೂಲಕ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
    ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ಅವರಿಗೆ ಗೌರವ ಸಲ್ಲಿಸಲು ಕಲ್ಲಂಗಡಿ ಹಣ್ಣಿನಲ್ಲಿ ಅವರ ಆಕಷರ್ಕ ಕಲಾಕೃತಿಯನ್ನು ರಚಿಸಿದ್ದಾರೆ. ಈ ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ. ಇವರ ಈ ಕಲೆಗೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ. ವಿಶೇಷ ಎಂದರೆ ಈ ಕಲಾಕೃತಿಗೆ ಬಣ್ಣ ಬಣ್ಣದ ವಿದ್ಯುತ್ ದೀಪ ಸಹ ಅಳವಡಿಕೆ ಮಾಡುವ ಮೂಲಕ ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಲಾಗಿದೆ.
    ಮಹಮದ್ ಫೈಜಾನ್ ಅವರು ಸ್ಟಿಕ್ಕರ್ ಕಟಿಂಗ್ಸ್, ಬಣ್ಣ ಲೇಪನ ವೃತ್ತಿ ಜೊತೆಗೆ ಕುಂಚ ಕಲಾವಿದರಾಗಿ ಸಹ ಗುರುತಿಸಿಕೊಂಡಿದ್ದು, ತಮ್ಮಲ್ಲಿನ ಕೆತ್ತನೆಯ ಕಲಾ ಕೌಶಲ್ಯದ ಮೂಲಕ ಹಲವಾರು ಕಲಾಕೃತಿಗಳನ್ನು ರಚಿಸಿದ್ದಾರೆ. ಗಣ್ಯರ ಹುಟ್ಟುಹಬ್ಬ ಸೇರಿದಂತೆ ವಿಶೇಷ ದಿನಗಳಂದು ಕಲ್ಲಂಗಡಿ ಹಣ್ಣಿನಲ್ಲಿ ಅವರ ಕಲಾಕೃತಿಗಳನ್ನು ರಚಿಸಿಕೊಂಡು ಬರುತ್ತಿದ್ದಾರೆ. ೨೦೧೯ರಲ್ಲಿ ಗಾಂಧಿಜಯಂತಿ ದಿನದಂದು ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಕಲಾಕೃತಿ, ೨೦೧೮ರಲ್ಲಿ ನಟ ಸಲ್ಮಾನ್ ಖಾನ್ ಅವರ ಹುಟ್ಟುಹಬ್ಬದಂದು ಅವರ ಕಲಾಕೃತಿ, ೨೦೧೯ರಲ್ಲಿ ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ಅವರ ಹುಟ್ಟುಹಬ್ಬದಂದು ಅವರ ಕಲಾಕೃತಿ ಹೀಗೆ ಹಲವಾರು ಗಣ್ಯ ವ್ಯಕ್ತಿಗಳ ಕಲಾಕೃತಿಗಳನ್ನು ರಚಿಸಿ ಗಮನ ಸೆಳೆದಿದ್ದಾರೆ.
    ಫೈಜಾನ್ ಅವರು ಕೇವಲ ಕಲ್ಲಂಗಡಿ ಹಣ್ಣು ಮಾತ್ರವಲ್ಲದೆ ಎಲೆಗಳ ಮೇಲೆ ಕಲಾಕೃತಿಗಳನ್ನು ರಚಿಸಿದ್ದಾರೆ. ಗೋಡೆಗಳ ಮೇಲೆ ಆಕರ್ಷಕವಾದ ಕುಂಚ ಕಲೆ, ವರ್ಣ ಚಿತ್ರ ಕಲೆಗಳಲ್ಲಿಯೂ ಸಹ ಪರಿಣಿತರಾಗಿದ್ದಾರೆ.
ಫೈಜಾನ್ ಅವರು ತಮ್ಮ ಎಲ್ಲಾ ಕಲಾಕೃತಿಗಳನ್ನು ತಮ್ಮದೇ ಯೂ ಟೂಬ್ ಚಾನಲ್‌ನಲ್ಲಿ ಸಂಗ್ರಹಿಸಿಟ್ಟುಕೊಂಡು ಆಸಕ್ತರಿಗೆ ಪರಿಚರಿಸಿಕೊಂಡು ಬರುತ್ತಿದ್ದಾರೆ. ಸುಮಾರು ೧೫ ವರ್ಷಗಳಿಂದ ಯಾವುದೇ ಪ್ರಚಾರದ ಗೀಳು ಹಚ್ಚಿಸಿಕೊಳ್ಳದ ಎಲೆಮರೆ ಕಾಯಿಯಂತೆ ಉಳಿದುಕೊಂಡಿದ್ದಾರೆ.
    ಕಳೆದ ೩ ದಿನಗಳ ಹಿಂದೆ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗು ಪುನೀತ್ ರಾಜ್‌ಕುಮಾರ್ ಅವರ ಪುಣ್ಮಸ್ಮರಣೆ ಕಾರ್ಯಕ್ರಮದಲ್ಲಿ ಪುನೀತ್‌ರಾಜ್‌ಕುಮಾರ್ ಅವರ ಕಲಾಕೃತಿಯನ್ನು ಸಮರ್ಪಿಸಿಕೊಂಡು ತಮ್ಮಲ್ಲಿನ ಕಲಾ ಕೌಶಲ್ಯವನ್ನು ಅನಾವರಣಗೊಳಿಸಿದ್ದಾರೆ.



ಇತ್ತೀಚೆಗೆ ನಿಧನ ಹೊಂದಿದ ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಭದ್ರಾವತಿ ತರೀಕೆರೆ ರಸ್ತೆ ಶಿವಾನಿ ವೃತ್ತದ ಫೈಜಾನ್ ಆರ್ಟ್ಸ್‌ನ ಕಲಾವಿದ ಮಹಮದ್ ಫೈಜಾನ್ ಕಲ್ಲಂಗಡಿ ಹಣ್ಣಿನಲ್ಲಿ ತಮ್ಮ ಕಲಾ ಕೌಶಲ್ಯದ ಮೂಲಕ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

No comments:

Post a Comment