ಭದ್ರಾವತಿ ಹುಣಸೇಕಟ್ಟೆ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ತುರ್ತು ಕಾಳಜಿ ವಹಿಸಿರುವ ಹಿನ್ನಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಅಪರ ಕಾರ್ಯದರ್ಶಿಗಳು ಬರೆದಿರುವ ಮೆಚ್ಚುಗೆ ಪತ್ರ.
ಭದ್ರಾವತಿ, ಸೆ. ೭: ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ತುರ್ತು ಕಾಳಜಿ ವಹಿಸಿರುವುದು ತಿಳಿದು ಬಂದಿದ್ದು, ಅಲ್ಲದೆ ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಎನ್. ನಾಗಾಂಬಿಕಾ ದೇವಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳಲ್ಲಿ ಸೆ.೪ರಂದು ಮಂದಗತಿಯ ಶೀತ ಕಾಣಿಸಿಕೊಂಡಿದ್ದು, ಸ್ಥಳೀಯರು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಡಾ.ಎನ್. ನಾಗಾಂಬಿಕಾ ದೇವಿಯವರು ಕೋರಿದ ಹಿನ್ನಲೆಯಲ್ಲಿ ತಕ್ಷಣ ಖುದ್ದಾಗಿ ವಸತಿ ಶಾಲೆಗೆ ಭೇಟಿ ನೀಡಿದ ಕೆ.ಬಿ ಶಿವಕುಮಾರ್ ಅವರು ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್-೧೯ ಪರೀಕ್ಷೆ ಕ್ಷಿಪ್ರಗತಿಯಲ್ಲಿ ನಡೆಸಿದ್ದು, ವಿದ್ಯಾರ್ಥಿಗಳಲ್ಲಿ ನೆಗಟಿವ್ ವರದಿ ಬಂದಿದೆ. ಈ ನಡುವೆಯೂ ವಿದ್ಯಾರ್ಥಿಗಳೊಂದಿಗೆ ವೈಯಕ್ತಿಕ ಸಮಾಲೋಚನೆ ನಡೆಸುವ ಜೊತೆಗೆ ಆತ್ಮಸ್ಥೈರ್ಯ ತುಂಬುವಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನಲೆಯಲ್ಲಿ ಡಾ. ಎನ್. ನಾಗಾಂಬಿಕಾ ಅವರು ಸೆ.೬ರಂದು ಮೆಚ್ಚುಗೆ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರಕ್ಕೆ ಒಳಪಟ್ಟಿದೆ.
ಜಿಲ್ಲಾಧಿಕಾರಿಗಳ ಮೆಚ್ಚುಗೆ ಪತ್ರಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಅವರು ಕಾರ್ಮಿಕರನ್ನು ಕಡೆ ಗಣಿಸಿದ್ದಾರೆ. ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕಳೆದ ಸುಮಾರು ೬ ತಿಂಗಳಿನಿಂದ ವೇತನ ಇಲ್ಲವಾಗಿದೆ. ಈ ಬಗ್ಗೆ ಹಲವಾರು ಮನವಿ ಮಾಡಲಾಗಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇಂತಹ ಜಿಲ್ಲಾಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.