ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
ಭದ್ರಾವತಿ ಎಂಪಿಎಂ ಅರಣ್ಯ ವ್ಯಾಪ್ತಿಯ ತಮ್ಮಡಿ ಹಳ್ಳಿಯ ಎಸ್‌ಎಲ್ ನಂ.೮೬೩, ೮೬೪, ೮೬೫ ಮತ್ತು ೮೬೬ರ ಭೂಮಿಯಲ್ಲಿ ಸುಮಾರು ೧೫೦ಕ್ಕೂ ಹೆಚ್ಚಿನ ನಾಯಿಗಳನ್ನು ಜೀವಂತವಾಗಿ ಹೂತಿಟ್ಟಿದ್ದು, ಪ್ರಕರಣ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಹೂತಿಟ್ಟ ನಾಯಿಗಳನ್ನು ಹೊರ ತೆಗೆಯುತ್ತಿರುವುದು.
ಭದ್ರಾವತಿ, ಸೆ. ೭: ನಾಯಿಗಳನ್ನು ಜೀವಂತವಾಗಿ ಹೂತಿಟ್ಟು ಮಾರಾಣ ಹೋಮಕ್ಕೆ ಕಾರಣವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಸಿಂಗನಮನೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಂಬದಾಳಲು-ಹೊಸೂರು ಗ್ರಾಮ ಪಂಚಾಯಿತಿಗೆ ಒಳಪಡುವ ರಂಗನಾಥಪುರದಲ್ಲಿ ಕಳೆದ ಸುಮಾರು ೪ ದಿನಗಳ ಹಿಂದೆ ಘಟನೆ ನಡೆದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಎಂಪಿಎಂ ಅರಣ್ಯ ವ್ಯಾಪ್ತಿಯ ತಮ್ಮಡಿ ಹಳ್ಳಿಯ ಎಸ್‌ಎಲ್ ನಂ.೮೬೩, ೮೬೪, ೮೬೫ ಮತ್ತು ೮೬೬ರ ಭೂಮಿಯಲ್ಲಿ ಸುಮಾರು ೧೫೦ಕ್ಕೂ ಹೆಚ್ಚಿನ ನಾಯಿಗಳನ್ನು ಜೀವಂತವಾಗಿ ಹೂತಿಟ್ಟಿದ್ದು, ನಾಯಿಗಳನ್ನು ಹೂತಿಡುವಾಗ ಈ ಭಾಗದಲ್ಲಿ ನಾಯಿಗಳು ಬೊಗಳುವ ಶಬ್ದ ಸ್ಥಳೀಯರಿಗೆ ಕೇಳಿಸಿದೆ. ನಂತರ ಈ ಭಾಗದಲ್ಲಿ ನಿಶಬ್ದ ಕಂಡು ಬಂದಿದ್ದು, ಇದರಿಂದ ಅನುಮಾನಗೊಂಡ ಸ್ಥಳೀಯರು ಮಾಹಿತಿಯನ್ನು ಶಿವಮೊಗ್ಗ ಪ್ರಾಣಿ ದಯಾ ಸಂಘದವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಪ್ರಾಣಿ ದಯಾ ಸಂಘದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ನಾಯಿಗಳನ್ನು ಜೀವಂತವಾಗಿ ಹೂತಿಟ್ಟಿರುವುದು ಬೆಳಕಿಗೆ ಬಂದಿದೆ. ಇದೀಗ ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ನಾಯಿಗಳನ್ನು ಜೀವಂತವಾಗಿ ಹೂತಿಡಲು ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಇದಕ್ಕೆ ಕಂಬದಾಳಲು-ಹೊಸೂರು ಗ್ರಾಮಚಾಯಿತಿ ಆಡಳಿತ ಸ್ಪಷ್ಟನೆ ನೀಡಬೇಕಾಗಿದೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಈ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ಪಿ ಯೋಗೇಶ್ ನಾಯಿಗಳನ್ನು ಹೂತಿಟ್ಟಿರುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಗ್ರಾಮ ಪಂಚಾಯಿತಿ ಮಾಹಿತಿ ಪ್ರಕಾರ ನಾಯಿಗಳನ್ನು ಜನವಸತಿ ಪ್ರದೇಶಗಳಿಂದ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುವುದು ವಾಡಿಕೆಯಾಗಿದೆ. ಆದರೆ ನಾಯಿಗಳನ್ನು ಕೊಲ್ಲುವ ಬಗ್ಗೆ ಎಲ್ಲೂ ಸೂಚಿಸಲಾಗಿಲ್ಲ ಎಂದರು.
ಮತ್ತೊಂದೆಡೆ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಿ ಪುನಃ ಅವುಗಳನ್ನು ವಾಸಿಸುತ್ತಿದ್ದ ಸ್ಥಳದಲ್ಲಿಯೇ ಬಿಡಲಾಗುತ್ತದೆ. ಈ ಸಂಬಂಧ ಗ್ರಾಮ ಪಂಚಾಯಿತಿ ವತಿಯಿಂದ ಟೆಂಡರ್ ಸಹ ನೀಡಲಾಗಿತ್ತು ಎನ್ನಲಾಗುತ್ತಿದೆ. ಟೆಂಡರ್‌ದಾರರು ಶಸ್ತ್ರಚಿಕಿತ್ಸೆ ಹಣ ಉಳಿಸುವ ಉದ್ದೇಶದಿಂದ ಈ ರೀತಿಯ ಕೃತ್ಯ ನಡೆಸಿರಬಹುದೆಂಬ ಆರೋಪ ಸಹ ಸ್ಥಳೀಯರಿಂದ ಕೇಳಿ ಬರುತ್ತಿವೆ. ಯಾವುದಕ್ಕೂ ತನಿಖೆಯಿಂದ ಸತ್ಯಾಂಶ ಹೊರಬರಬೇಕಾಗಿದೆ.
No comments:
Post a Comment