Sunday, October 20, 2024

ಭಾರಿ ಮಳೆಯಿಂದ ಹಲವು ಸಮಸ್ಯೆ : ರೈತರಿಗೆ ಭತ್ತದ ಬೆಳೆ ಹಾನಿ, ತಗ್ಗು ಪ್ರದೇಶದ ನಿವಾಸಿಗಳಿಗೆ ನೀರು ನುಗ್ಗುವ ಆತಂಕ

ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆಗೊಳಿಸಿರುವ ಹಿನ್ನಲೆಯಲ್ಲಿ ಕೆಲವು ದಿನಗಳಿಂದ ನಗರದ ಹಳೇ ಸೇತುವೆ ಸಮೀಪದ ಭದ್ರಾ ನದಿಯಲ್ಲಿರುವ ಸಂಗಮೇಶ್ವರ ದೇವಸ್ಥಾನ ಮುಳುಗಡೆಗೊಂಡಿರುವುದು. 
    ಭದ್ರಾವತಿ: ಕಳೆದ ಕೆಲವು ದಿನಗಳಿಂದ ಕ್ಷೇತ್ರದಾದ್ಯಂತ ಪುನಃ ಮಳೆಯಾಗುತ್ತಿದ್ದು, ಇದರಿಂದ ಕೊಯ್ಲು ಹಂತಕ್ಕೆ ಬಂದಿರುವ ಭತ್ತದ ಬೆಳೆಗೆ ಒಂದೆಡೆ ಹಾನಿಯಾಗುವ ಭೀತಿ, ಮತ್ತೊಂದೆಡೆ ಅಡಕೆ ಒಣಗಿಸಲು ಬಿಸಿಲಿನ ಕೊರತೆ ಎದುರಾಗಿದೆ. 
    ಕ್ಷೇತ್ರದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯಲಾಗಿದ್ದು, ಈಗಾಗಲೇ ಭತ್ತದ ಬೆಳೆ ಕಾಳು ಕಟ್ಟಿ ಕಟಾವು ಹಂತ ತಲುಪಿದೆ. ಈ ಹಂತದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಇದರಿಂದಾಗಿ ಬೆಳೆ ನೀರಿನಲ್ಲಿ ಕೊಚ್ಚಿಹೋಗಿ ನಾಶವಾಗುವ ಸ್ಥಿತಿ ನಿರ್ಮಾಣಗೊಂಡಿದೆ. ಮಳೆ ಇದೆ ರೀತಿ ಮುಂದುವರೆದಲ್ಲಿ ರೈತರಿಗೆ ಕೈಗೆ ಬಂದದ್ದು, ಬಾಯಿಗೆ ಸಿಗಲಿಲ್ಲ ಎಂಬಂತಾಗಲಿದೆ. 
    ಮತ್ತೊಂದೆಡೆ ಅಡಕೆ ತೋಟಗಳಲ್ಲಿ ಕಾಯಿ ಬಳಿತು ಕೊಯ್ಲು ನಡೆಯುತ್ತಿದ್ದು, ರೈತರಿಗೆ ಅಡಕೆ ಸುಲಿದು ಒಣಗಿಸಲು ಬಿಸಿಲಿನ ಕೊರತೆ ಎದುರಾಗಿದೆ. ಸದಾ ಮೋಡಕವಿದ ವಾತಾವರಣವಿದ್ದು, ಅಡಕೆ ಬೆಳೆಗಾರರಿಗೆ ಸಮಸ್ಯೆಯಾಗಿದೆ. ಅಲ್ಲದೆ ಮಳೆ ಇದೆ ರೀತಿ ಮುಂದುವರೆದಲ್ಲಿ ಬೆಳವಣಿಗೆ ಹಂತದಲ್ಲಿರುವ ಅಡಕೆ ದಪ್ಪವಾಗದೆ ಇಳುವರಿ ಕುಂಠಿತವಾಗುವ ಆತಂಕ ಎದುರಾಗಿದೆ. 
    ಬೀದಿ ಬದಿ ವ್ಯಾಪಾರಸ್ಥರಿಗೆ ತೊಂದರೆ: 
    ನಗರವ್ಯಾಪ್ತಿಯಲ್ಲಿ ಮಳೆಯಿಂದಾಗಿ ಬೀದಿಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಒಳಗಾಗಿದ್ದು, ದಿನದ ಕೂಲಿ ನಂಬಿ ಬದುಕುತ್ತಿರುವ ಬಹಳಷ್ಟು ಮಂದಿ ಬೀದಿಬದಿ ವ್ಯಾಪಾರಿಗಳು ಕೆಲವು ದಿನಗಳಿಂದ ವ್ಯಾಪಾರ ವಹಿವಾಟು ಇಲ್ಲದೆ ತೊಂದರೆ ಎದುರಿಸುತ್ತಿದ್ದಾರೆ. 
ಹೂ-ಹಣ್ಣು, ತರಕಾರಿ ಮಾರಾಟ ಮಾಡುವ ಹಾಗು ರಸ್ತೆ ಬದಿ ತಿಂಡಿ ತಿನುಸುಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರು ವಹಿವಾಟುವಿಲ್ಲದೆ ದಿನ ಕಳೆಯುವಂತಾಗಿದ್ದು, ಮಳೆ ಇಳಿಮುಖವಾಗುವುದನ್ನು ಎದುರು ನೋಡುತ್ತಿದ್ದಾರೆ. 
    ಹಾಳಾದ ರಸ್ತೆಗಳು: 
    ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಹಾಳಾಗಿದ್ದು, ಅದರಲ್ಲೂ ಡಾಂಬರ್ ರಸ್ತೆಗಳು ಹಾಳಾಗಿರುವುದು ಪಾದಚಾರಿಗಳು ಹಾಗು ವಾಹನ ಸವಾರರಿಗೆ ತೊಂದರೆಯಾಗಿದೆ. ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಉಂಟಾಗಿದ್ದು, ವಾಹನಗಳು ಅಪಘಾತಗಳುಗೊಳ್ಳುವ ಸಾಧ್ಯತೆ ಹೆಚ್ಚಾಗಿವೆ. ಸಂಬಂಧಪಟ್ಟ ಇಲಾಖೆಯವರು ತಕ್ಷಣ ಎಚ್ಚೆತ್ತುಕೊಂಡು ತುರ್ತು ಕ್ರಮ ಕೈಗೊಳ್ಳಬೇಕಾಗಿದೆ.  
    ರಸ್ತೆ, ಚರಂಡಿಗಳಲ್ಲಿ ನಿಂತ ನೀರು: 
ನಗರಸಭೆ ವ್ಯಾಪ್ತಿಯ ಬಹುತೇಕ ಕಡೆ ರಸ್ತೆ ಹಾಗು ಚರಂಡಿ ಕಾಮಗಾರಿ ಸಮರ್ಪಕವಾಗಿ ನಿರ್ವಹಿಸದ ಹಿನ್ನಲೆಯಲ್ಲಿ ಮಳೆ ನೀರು ರಸ್ತೆ ಹಾಗು ಚರಂಡಿಗಳಲ್ಲಿ ಕಸಕಡ್ಡಿ ಕಟ್ಟಿಕೊಂಡು ನಿಂತುಕೊಳ್ಳುತ್ತಿದ್ದು, ಇದರಿಂದಾಗಿ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಈ ಸಂಬಂಧ ಹಲವಾರು ಬಾರಿ ನಗರಸಭೆ ಆಡಳಿತಕ್ಕೆ ನಿವಾಸಿಗಳು ಅಗತ್ಯ ಕೈಗೊಳ್ಳುವಂತೆ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ವಾರ್ಡ್ ಸದಸ್ಯರುಗಳು ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
    ಭದ್ರಾ ನದಿಯಲ್ಲಿ ಮುಳುಗಿದ ಸಂಗಮೇಶ್ವರ :
ಭದ್ರಾ ಜಲಾಶಯದ ಸುತ್ತಮುತ್ತ ವ್ಯಾಪಕವಾಗಿ ಮಳೆಯಾಗುತ್ತಿರುವ ಈ ಹಿನ್ನಲೆಯಲ್ಲಿ ಕೆಲವು ದಿನಗಳಿಂದ ಜಲಾಶಯದಿಂದ ನದಿಗೆ ನೀರು ಬಿಡುಗಡೆಗೊಳಿಸಲಾಗಿದ್ದು, ಇದರಿಂದಾಗಿ ಹಳೇ ಸೇತುವೆ ಸಮೀಪ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನ ನೀರಿನ ಪ್ರಮಾಣ ಹೆಚ್ಚಾದ ಕಾರಣ ಮುಳುಗಡೆಗೊಂಡಿದೆ. ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾದ್ದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ನಿರ್ಮಾಣವಾಗಿದೆ. 

ವಿನಾಯಕ ಮೂರ್ತಿ ಪ್ರತಿಷ್ಠಾಪನೆ : ಅನ್ನಸಂತರ್ಪಣೆ

ಭದ್ರಾವತಿ ನಗರದ ನ್ಯೂಟೌನ್ ಆಂಜನೇಯ ಅಗ್ರಹಾರದ ಮುಖ್ಯರಸ್ತೆಯಲ್ಲಿ ಬಾಲಕರ ವಿದ್ಯಾರ್ಥಿ ನಿಲಯದ ಸಮೀಪ ಭಗತ್ ಸಿಂಗ್ ಯುವಕರ ಸಂಘದ ವತಿಯಿಂದ ಶ್ರೀ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಭಾನುವಾರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. 
    ಭದ್ರಾವತಿ: ನಗರದ ನ್ಯೂಟೌನ್ ಆಂಜನೇಯ ಅಗ್ರಹಾರದ ಮುಖ್ಯರಸ್ತೆಯಲ್ಲಿ ಬಾಲಕರ ವಿದ್ಯಾರ್ಥಿ ನಿಲಯದ ಸಮೀಪ ಭಗತ್ ಸಿಂಗ್ ಯುವಕರ ಸಂಘದ ವತಿಯಿಂದ ಶ್ರೀ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಭಾನುವಾರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. 
    ಕಳೆದ ಕೆಲವು ವರ್ಷಗಳಿಂದ ಇಲ್ಲಿನ ಯುವಕರು ಶ್ರೀ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬರುತ್ತಿದ್ದು, ಈ ಬಾರಿ ವಿಶೇಷವಾಗಿ ಸಿಂಹದ ಆಸನದ ಮೇಲೆ ಕುಳಿತ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅ.೨೭ರಂದು ಈ ಮೂರ್ತಿಯ ವಿಸರ್ಜನೆ ನಡೆಯಲಿದೆ. 


    ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ನ್ಯೂಟೌನ್, ಆಂಜನೇಯ ಅಗ್ರಹಾರ, ವಿದ್ಯಾಮಂದಿರ ಸೇರಿದಂತೆ ಸುತ್ತಮತ್ತಲಿನ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು. 

ಅ.೨೧ರಂದು ಭದ್ರಾವತಿ ಆಕಾಶವಾಣಿಯಲ್ಲಿ ಜೆ.ಎನ್ ಬಸವರಾಜಪ್ಪನವರ ಸಂದರ್ಶನ ಪ್ರಸಾರ

ಜೆ.ಎನ್ ಬಸವರಾಜಪ್ಪ  
    ಭದ್ರಾವತಿ: ನಗರದ ಹಿರಿಯ ಸಾಹಿತಿ ಜೆ.ಎನ್ ಬಸವರಾಜಪ್ಪನವರೊಂದಿಗೆ `ಸ್ವಚ್ಛತೆ ನಮ್ಮೆಲ್ಲರ ಆದ್ಯತೆ' ಕುರಿತು ಭದ್ರಾವತಿ ಆಕಾಶವಾಣಿ ನಡೆಸಿದ ಸಂದರ್ಶನ ಅ.೨೧ರ ಸೋಮವಾರ ಬೆಳಿಗ್ಗೆ ೭.೧೫ಕ್ಕೆ ಪ್ರಸಾರಗೊಳ್ಳಲಿದೆ. 
    ಜೆ.ಎನ್ ಬಸವರಾಜಪ್ಪನವರು ನೂರಾರು ಕವನ, ಐತಿಹಾಸಿಕ ಸ್ಥಳಗಳ ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಸಾಹಿತಿ ಹಾಗು ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ರಾಜ್ಯ ಹಾಗು ಜಿಲ್ಲಾಮಟ್ಟದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ್ದಾರೆ. 
    ಇವರೊಂದಿಗೆ ಭದ್ರಾವತಿ ಆಕಾಶವಾಣಿ ಕೇಂದ್ರದ ಎಸ್.ಆರ್ ಭಟ್‌ರವರು ನಡೆಸಿರುವ ಸಂದರ್ಶನ ಪ್ರಸಾರಗೊಳ್ಳುತ್ತಿದ್ದು, ಶ್ರೋತೃಗಳು ಇದರ ಸದುಪಯೋಗಪಡೆದುಕೊಳ್ಳಬಹುದಾಗಿದೆ.    

ಅಲ್ ಇಂಡಿಯಾ ಮೊದಲಿಯಾರ್ ಸಂಘದ ಅಧ್ಯಕ್ಷರಾಗಿ ನಗರದ ಹಿರಿಯ ಪತ್ರಕರ್ತ ಕಣ್ಣಪ್ಪ

ಕಣ್ಣಪ್ಪ 
    ಭದ್ರಾವತಿ: ಅಲ್ ಇಂಡಿಯಾ ಮೊದಲಿಯಾರ್ ಸಂಘದ ಅಧ್ಯಕ್ಷರಾಗಿ ನಗರದ ಹಿರಿಯ ಪತ್ರಕರ್ತ ಕಣ್ಣಪ್ಪ ಭಾನುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
    ಬೆಂಗಳೂರಿನ ಕರ್ನಾಟಕ ಬಿಲ್ಡರ್‍ಸ್ ಕ್ಲಬ್‌ನಲ್ಲಿ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪದೇಶ, ದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸಂಘದ ಪ್ರತಿನಿಧಿಗಳಿಂದ ೩ ವರ್ಷಗಳ ಅವಧಿಗೆ ಆಯ್ಕೆಯಾದರು. 
    ತಮಿಳುನಾಡಿನ ಪ್ರಸಿದ್ದ ವೈದ್ಯ ರಾಜ್‌ಕುಮಾರ್ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ದೇಶದ ವಿವಿಧೆಡೆಗಳಿಂದ ಆಲ್ ಇಂಡಿಯಾ ಮೊದಲಿಯಾರ್ ಸಂಘ ಪ್ರತಿನಿಧಿಸುವ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. 
    ಕಣ್ಣಪ್ಪರವರು ತಾಲೂಕು ತಮಿಳು ಸಂಘ ಹಾಗು ಮೊದಲಿಯಾರ್ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ತಾಲೂಕು ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷರಾಗಿ, ಲಾರಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮೊದಲಿಯಾರ್ ಸಂಘದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 
    ಇವರಿಗೆ ಶಾಸಕ ಬಿ.ಕೆ ಸಂಗಮೇಶ್ವರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಪತ್ರಿಕಾ ಭವನ ಟ್ರಸ್ಟ್, ತಾಲೂಕು ಮೊದಲಿಯಾರ್ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಅಭಿನಂದನೆ ಸಲ್ಲಿಸಿವೆ.