ಮೈಸೂರು ದಸರಾ ನಾಡಹಬ್ಬ ಗೊಂಬೆ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ದಂಪತಿ
![](https://blogger.googleusercontent.com/img/b/R29vZ2xl/AVvXsEjiGzq4i2qRJdUX63g0w6yiqjw-YlTRGJkFzKlpoDB-vq6ThF1v_1bxovP5GtLp4z7so7ghf_Z5rR5qMYFUOqqF5bq3W0vG7jg0OjBJ7BkEvoOoApCdVSfNs4F4RnAoclcFkOcTEO2KYIsT/w400-h225-rw/D13-BDVT-762885.jpg)
ಭದ್ರಾವತಿ ನ್ಯೂಕಾಲೋನಿ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಸಮೀಪದ ವಿಐಎಸ್‌ಎಲ್ ವಸತಿ ಗೃಹದಲ್ಲಿ ವಾಸವಾಗಿರುವ ಉಮೇಶ್ ಹಾಗು ಕುಸುಮ ದಂಪತಿ ಈ ಬಾರಿ ಕೈಗೊಂಡಿರುವ ದಸರಾ ಗೊಂಬೆ ಪ್ರದರ್ಶನ ಎಲ್ಲರನ್ನು ಆಕರ್ಷಿಸುತ್ತಿದೆ.
* ಅನಂತಕುಮಾರ್
ಭದ್ರಾವತಿ: ವೈಭವದ ಮೈಸೂರು ದಸರಾ ನಾಡಹಬ್ಬ ಪರಂಪರೆ ಕೇವಲ ಗೊಂಬೆ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗದೆ. ನಮ್ಮ ಸುತ್ತಮುತ್ತಲಿನ ಪಾರಂಪರಿಕ ಸ್ಥಳಗಳು, ಪ್ರವಾಸಿ ತಾಣಗಳು, ವನ್ಯ ಜೀವಿ ನೆಲೆಗಳನ್ನು ಸಹ ಅನಾವರಣಗೊಳಿಸುವ ಮೂಲಕ ನಗರದ ನಿವಾಸಿಗಳಾದ ಉಮೇಶ್ ಮತ್ತು ಕುಸುಮ ದಂಪತಿ ಜನರ ಗಮನ ಸೆಳೆಯುತ್ತಿದ್ದಾರೆ.
ನಗರದ ನ್ಯೂಕಾಲೋನಿ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಸಮೀಪದ ವಿಐಎಸ್‌ಎಲ್ ವಸತಿ ಗೃಹದಲ್ಲಿ ವಾಸವಾಗಿರುವ ವೆಸ್ಟೀಜ್ ಹೆಲ್ತ್‌ಕೇರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಮೇಶ್ ಹಾಗು ನ್ಯಾಯಾಂಗ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕುಸುಮ ದಂಪತಿ ಕಳೆದ ೨೦ ವರ್ಷಗಳಿಂದ ಮೈಸೂರು ದಸರಾ ನಾಡಹಬ್ಬ ಪರಂಪರೆಯನ್ನು ಗೊಂಬೆ ಪ್ರದರ್ಶನದ ಮೂಲಕ ಉಕ್ಕಿನ ನಗರದ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ನಮ್ಮ ನಾಡಿನ ಭವ್ಯ ಪರಂಪರೆ ಮುಂದಿನ ಪೀಳಿಗೆಗೂ ಉಳಿಯಬೇಕೆಂಬ ಆಶಯ ನಮ್ಮದಾಗಿದೆ. ಅದರಲ್ಲೂ ಉಕ್ಕಿನ ನಗರದ ಜನತೆಗೆ ಈ ಪರಂಪರೆಯನ್ನು ಪರಿಚಯಿಸುವ ಮೂಲಕ ಸಮಾಜದ ಎಲ್ಲರೂ ಜಾತಿ, ಧರ್ಮ, ಭೇದಭಾವ ಮರೆತು ಒಗ್ಗಟ್ಟಾಗಿ ಆಚರಿಸುವಂತಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ.
- ಉಮೇಶ್, ಭದ್ರಾವತಿ
ವಿಶೇಷ ಎಂದರೆ ವನ್ಯ ಜೀವಿ ತಾಣಗಳಾದ ಶಿವಮೊಗ್ಗ ತಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮ, ಸಕ್ರೆಬೈಲು ಆನೆ ಬಿಡಾರ, ಭದ್ರಾ ಅಭಯಾರಣ್ಯ, ಗುಡವಿ ಪಕ್ಷಿ ಧಾಮ, ಮತ್ಸ್ಯ ಧಾಮ ಹಾಗು ವಿಜಯ ನಗರ, ಚಾಮುಂಡಿ ಬೆಟ್ಟ, ಶ್ರೀ ಕ್ಷೇತ್ರ ಧರ್ಮಸ್ಥಳ, ಇಡಗುಂಜಿ, ಗಾಣಗಾಪುರ, ಗೋಕರ್ಣ ಸೇರಿದಂತೆ ಹಲವು ಪ್ರವಾಸಿ ತಾಣಗಳು ಹಾಗು ಧಾರ್ಮಿಕ ಕ್ಷೇತ್ರಗಳನ್ನು ಆಕರ್ಷಕವಾಗಿ ಅನಾವರಣಗೊಳಿಸಲಾಗಿದೆ. ಇದರ ಜೊತೆಗೆ ಆಧುನಿಕ ಶೈಲಿಯ ಅಡುಗೆ ಮನೆ ಹಾಗು ಪ್ರಾಚಿನ ಕಾಲದ ಅಡುಗೆ ಮನೆ ಮತ್ತು ನಗರದ ಪದ್ಮನಿಲಯ ಹೋಟೆಲ್ ಸಹ ಇಲ್ಲಿ ತೆರೆದುಕೊಂಡಿವೆ.
ತಾಯಿ ಮನೆಯಿಂದ ರೂಢಿಸಿಕೊಂಡು ಬಂದ ಭವ್ಯಪರಂಪರೆಯ ಈ ಆಚರಣೆಯನ್ನು ಅತ್ತೆಯ ಮನೆಯಲ್ಲೂ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಪ್ರತಿ ವರ್ಷ ವಿಭಿನ್ನತೆ ಕಾಯ್ದುಕೊಂಡು ಬರಲಾಗುತ್ತಿದೆ. ಈ ಗೊಂಬೆ ಪ್ರದರ್ಶನವನ್ನು ವೀಕ್ಷಿಸಲು ಪ್ರತಿ ವರ್ಷ ನೂರಾರು ಮಂದಿ ಆಗಮಿಸುತ್ತಿದ್ದು, ಮತ್ತಷ್ಟು ಸ್ಪೂರ್ತಿಯನ್ನುಂಟು ಮಾಡುತ್ತಿದೆ.
- ಕುಸುಮ, ಭದ್ರಾವತಿ
ಉಳಿದಂತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯನ್ನೊಳಗೊಂಡಂತೆ ನವದುರ್ಗಿಯರು, ಶೃಂಗೇರಿ ಶಾರದಾಂಬೆ, ಆಚಾರ್ಯತ್ರಯರು, ದಶವತಾರ, ವಿಶ್ವರೂಪ, ಶ್ರೀ ತಿರುಪತಿ ವೆಂಕಟೇಶ್ವರ, ಸಪ್ತಋಷಿ, ಸಂಗೀತ ವಾದ್ಯಗಳು, ಬೆಣ್ಣೆಕೃಷ್ಣ, ಲಲಿತಾದೇವಿ ಅಷ್ಟ ಲಕ್ಷ್ಮಿಯರು, ತ್ರಿಶಕ್ತಿ ಅನಂತಪದ್ಮನಾಭ, ರುಕ್ಮಿಣಿ ಪಾಂಡುರಂಗ ಜೊತೆಗೆ ವಿಶೇಷವಾಗಿ ಸುಮಾರು ೧೫೦ ವರ್ಷ ಹಳೆಯದಾದ ಪಟ್ಟದ ಗೊಂಬೆ ಸಹ ಇದ್ದು ಇವುಗಳನ್ನು ನೋಡಿ ಆನಂದಿಸುವ ಜೊತೆಗೆ ಕಣ್ತುಂಬಿ ಕೊಳ್ಳಬಹುದಾಗಿದೆ. ಇವುಗಳ ನಡುವೆ ದೇಶದ ಬೆನ್ನೆಲುಬು ರೈತನನ್ನು ಈ ದಂಪತಿ ಸ್ಮರಿಸಿರುವುದು ಈ ದಂಪತಿಯ ಮತ್ತೊಂದು ವಿಶೇಷವಾಗಿದೆ.
ಉಮೇಶ್ ಅವರ ತಾಯಿ ನಾಗರತ್ನ ಅವರ ಮಾರ್ಗದರ್ಶನದಲ್ಲಿ ಮಕ್ಕಳಾದ ಸ್ಕಂದ ಭಾರದ್ವಾಜ್ ಮತ್ತು ಸ್ತುತಿ ಭಾರದ್ವಾಜ್ ಅವರ ಸಹಕಾರದೊಂದಿಗೆ ಈ ದಂಪತಿ ಬಿಡುವಿಲ್ಲದ ಕರ್ತವ್ಯದ ನಡುವೆಯೂ ಯಶಸ್ವಿಯಾಗಿ ಈ ಕಾರ್ಯವನ್ನು ಮುನ್ನೆಡೆಸಿಕೊಂಡು ಬರುತ್ತಿದ್ದಾರೆ. ಅಲ್ಲದೆ ಸುತ್ತಮುತ್ತಲಿನ ನಿವಾಸಿಗಳು ಪ್ರತಿ ವರ್ಷ ಇವರ ಮನೆಗೆ ಭೇಟಿ ನೀಡಿ ಗೊಂಬೆ ಪ್ರದರ್ಶನ ವೀಕ್ಷಿಸಿ ಕಣ್ತುಂಬಿಕೊಳ್ಳುತ್ತಿದ್ದಾರೆ.