![](https://blogger.googleusercontent.com/img/b/R29vZ2xl/AVvXsEhPNXIKmxwN27hN3t3n-VlE-1pfL3OFp3ejVfuhyb0_qTUfFIEbkMbOGd4ptPiou1nXxnS1VhnrFkU3b1c_du-5dWiCI_0XpCY6NwVoAJuQPJOhUnSQaLkvNd2dCUwghEGGGd5Yr6lmqNUL/w640-h248-rw/D23-BDVT-736650.jpg)
ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಅಣ್ಣಾ ಡಿಎಂಕೆ ಪಕ್ಷ ನಗರಸಭೆ ಬೆಂಬಲಿಸುವ ದೃಢೀಕರಣ ಪತ್ರವನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ವೇಲಾಯುದನ್‌ರವರಿಂದ ಸ್ವೀಕರಿಸಿದರು.
ಭದ್ರಾವತಿ, ಏ. ೨೩: ಭದ್ರಾವತಿಯನ್ನು ಭಯ ಮುಕ್ತ ನಗರವನ್ನಾಗಿಸುವುದು ಭಾರತೀಯ ಜನತಾ ಪಕ್ಷದ ಗುರಿಯಾಗಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ನಗರಸಭೆಯಲ್ಲಿ ಕೇವಲ ೨ ಜನ ಬಿಜೆಪಿ ಪಕ್ಷದ ಸದಸ್ಯರಿದ್ದರು. ಆದರೆ ಈ ಬಾರಿ ಸಂಪೂರ್ಣ ಬಹುಮತ ಪಡೆಯುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ. ನನ್ನನ್ನು ಒಳಗೊಂಡಂತೆ ಸಂಸದ ಬಿ.ವೈ ರಾಘವೇಂದ್ರ, ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್, ವಿಧಾನಸಭೆ ಸದಸ್ಯ ಕೆ.ಬಿ ಅಶೋಕ್‌ನಾಯ್ಕ್, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಎಸ್. ದತ್ತಾತ್ರಿ, ಗಿರೀಶ್ ಪಟೇಲ್ ಸೇರಿದಂತೆ ಇನ್ನಿತರನ್ನು ಒಳಗೊಂಡಿರುವ ತಂಡ ಈ ಬಾರಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರು.
ಎಲ್ಲಾ ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಕಳೆದ ೪೦ ದಿನಗಳಿಂದ ನಿರಂತರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ. ಎದುರಾಳಿಗಳು ಅವರ ರಾಜಕಾರಣ ಅವರು ಮಾಡಲಿ, ಇಲ್ಲಿನ ರಾಜಕಾರಣಿಗಳು ನಗರವನ್ನು ಭಯಭೀತರನ್ನಾಗಿಸಿದ್ದಾರೆ. ಇಲ್ಲಿನ ಜನರಿಗೆ ಶಾಂತಿ ನೆಮ್ಮದಿ ಕಲ್ಪಿಸಿಕೊಡುವುದು ಬಿಜೆಪಿ ಪಕ್ಷದ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮದೇ ರೀತಿಯಲ್ಲಿ ರಾಜಕಾರಣ ನಾವು ಮಾಡುತ್ತೇವೆ. ಇಲ್ಲಿನ ಜನರು ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವ ವಿಶ್ವಾಸವಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳು ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಲಿವೆ. ಈ ಹಿನ್ನಲೆಯಲ್ಲಿ ಈ ಬಾರಿ ಸಂಪೂರ್ಣ ಬಹುಮತ ಪಡೆಯುವ ವಿಶ್ವಾಸವಿದೆ ಎಂದರು.
ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರೀತಿಯಲ್ಲೂ ರಾಜಕಾರಣ ಮಾಡಿಲ್ಲ. ವಿನಾಕಾರಣ ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಿ. ಟಿ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಶಿವರಾಜ್, ಎಸ್ ದತ್ತಾತ್ರಿ, ಗಿರೀಶ್ ಪಟೇಲ್, ಮಂಗೋಟೆ ರುದ್ರೇಶ್, ರಾಮಣ್ಣ, ತೀರ್ಥೇಶ್, ಅವಿನಾಶ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅಣ್ಣಾ ಡಿಎಂಕೆ ಬೆಂಬಲ:
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತ ನೇತೃತ್ವದ ಅಣ್ಣಾ ಡಿಎಂಕೆ ಪಕ್ಷ ಈ ಬಾರಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬೆಂಬಲಿಸುವುದಾಗಿ ಘೋಷಿಸಿದೆ.
ಬಿಜೆಪಿ ಪಕ್ಷ ಬೆಂಬಲಿಸುವ ದೃಢೀಕರಣ ಪತ್ರವನ್ನು ಕೆ.ಎಸ್ ಈಶ್ವರಪ್ಪನವರಿಗೆ ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ವೇಲಾಯುದನ್ ನೀಡುವ ಮೂಲಕ ಪಕ್ಷದ ಅಧ್ಯಕ್ಷರ ಆದೇಶದ ಮೇರೆಗೆ ಬೆಂಬಲ ಘೋಷಿಸಲಾಗುತ್ತಿದೆ ಎಂದು ತಿಳಿಸಿದರು.
ನಗರಸಭೆ ಚುನಾವಣೆಯಲ್ಲಿ ಅಣ್ಣಾ ಡಿಎಂಕೆ ಬೆಂಬಲ ನೀಡುತ್ತಿರುವುದು ಸ್ವಾಗತಾರ್ಹವಾಗಿದ್ದು, ಬಿಜೆಪಿ ಪಕ್ಷ ಬೆಂಬಲಿಸುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಈಶ್ವರಪ್ಪ ತಿಳಿಸಿದರು.