ಭದ್ರಾವತಿ ನಗರಸಭೆ ವಾರ್ಡ್ ನಂ.೨೩ರಲ್ಲಿ ಹಾಲಿ ನಗರಸಭಾ ಸದಸ್ಯ ವೆಂಕಟಯ್ಯ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಮೋಹನ್ ಪರವಾಗಿ ಮತಯಾಚನೆ ನಡೆಸಿದರು.
ಭದ್ರಾವತಿ, ಏ. ೨೩: ನಗರಸಭೆ ೩೫ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳಿಂದ ಚುನಾವಣಾ ಪ್ರಚಾರ ಭರದಿಂದ ಸಾಗುತ್ತಿದ್ದು, ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪಕ್ಷದ ಪ್ರಮುಖರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ.
ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಇಂದಿಗೂ ಗ್ರಾಮೀಣ ಪರಿಸರ ಕಂಡು ಬರುವ ತಿಮ್ಲಾಪುರ ಮತ್ತು ಡಿ.ಜಿ ಹಳ್ಳಿ, ಬುಳ್ಳಾಪುರ ೨ನೇ ಡಿವಿಜನ್ ವ್ಯಾಪ್ತಿಯನ್ನು ಒಳಗೊಂಡಿರುವ ವಾರ್ಡ್ ನಂ.೨೩ರಲ್ಲಿ ಒಟ್ಟು ೩೬೮೭ ಮತದಾರರಿದ್ದಾರೆ. ಲಂಬಾಣಿ, ಒಕ್ಕಲಿಗ, ಲಿಂಗಾಯಿತ, ಕುರುಬ ಸಮುದಾಯದವರು ಹೆಚ್ಚಾಗಿದ್ದು, ಈ ವಾರ್ಡ್‌ನಲ್ಲಿ ಈ ಬಾರಿ ಒಟ್ಟು ೫ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ತಾಲೂಕು ಛಲವಾದಿಗಳ(ಪರಿಶಿಷ್ಟ) ಸಮಾಜದ ಮಾಜಿ ಅಧ್ಯಕ್ಷ, ಹಾಲಿ ನಗರಸಭಾ ಸದಸ್ಯ ಬದರಿನಾರಾಯಣ ಅವರ ಪತ್ನಿ ಪ್ರೇಮಾರನ್ನು ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಮುಖಂಡ ಉಮೇಶ್‌ನಾಯ್ಕ್‌ರವರು ಪತ್ನಿ ಎಚ್. ಯಶೋಧಬಾಯಿ ಅವರನ್ನು, ಬಿಜೆಪಿ ಪಕ್ಷದಿಂದ ಮಾಜಿ ನಗರಸಭಾ ಸದಸ್ಯ ಕೆ. ರಮೇಶ್‌ರವರು ಪತ್ನಿ ಸುಮಾರನ್ನು ಕಣಕ್ಕಿಳಿಸಿದ್ದಾರೆ. ಸ್ನೇಹ ಜೀವಿ ಬಳಗದ ಸದಸ್ಯೆ ಎಂ.ಬಿ ಶಾಲಿನಿ ಸೇರಿದಂತೆ ಇಬ್ಬರು ಪಕ್ಷೇತರರು ಸ್ಪರ್ಧೆಯಲ್ಲಿದ್ದಾರೆ. ಈ ವಾರ್ಡ್‌ನಲ್ಲಿ ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಮಹಾದೇವಿ ಆಯ್ಕೆಯಾಗಿದ್ದರು. ಈ ವಾರ್ಡ್‌ನಲ್ಲೂ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಬೆಳಿಗ್ಗೆಯಿಂದ ಸಂಜೆವರೆಗೂ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ.
ದಲಿತರು, ಕೂಲಿಕಾರ್ಮಿಕರು, ಶ್ರಮಜೀವಿಗಳು ಹೆಚ್ಚಾಗಿರುವ ಉಜ್ಜನಿಪುರ ವ್ಯಾಪ್ತಿಯನ್ನು ಹೊಂದಿರುವ ವಾರ್ಡ್ ನಂ.೨೨ರಲ್ಲಿ ಒಟ್ಟು ೨೮೭೭ ಮತದಾರರಿದ್ದಾರೆ. ಈ ವಾರ್ಡ್‌ನಲ್ಲಿ ಈ ಬಾರಿ ಒಟ್ಟು ೪ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಸ್ಪರ್ಧಿಸಿರುವ ಕಾರಣ ಈ ವಾರ್ಡ್ ಹೆಚ್ಚು ಗಮನ ಸೆಳೆಯುತ್ತಿದೆ. ಉಳಿದಂತೆ ಮರಾಠ ಸಮುದಾಯಕ್ಕೆ ಸೇರಿದ ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತ ಭರತ್‌ರಾವ್ ಬಿಜೆಪಿ ಅಭ್ಯರ್ಥಿಯಾಗಿದ್ದು, ಬೋರೇಗೌಡ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಆನಂದರಾವ್ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಈ ವಾರ್ಡ್‌ನಲ್ಲಿ ಕಳೆದ ೨ ಬಾರಿ ಕಾಂಗ್ರೆಸ್ ಪಕ್ಷದಿಂದ ವೆಂಕಟಯ್ಯ ಆಯ್ಕೆಯಾಗಿದ್ದರು. ಈ ವಾರ್ಡ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಈ ಬಾರಿ ಬಿ.ಕೆ ಮೋಹನ್‌ರವರಿಗೆ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ವಾರ್ಡ್‌ನಲ್ಲೂ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಬೆಳಿಗ್ಗೆಯಿಂದ ಸಂಜೆವರೆಗೂ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ.
ಭದ್ರಾವತಿ ನಗರಸಭೆ ವಾರ್ಡ್ ನಂ.೩ರ ಕಾಂಗ್ರೆಸ್ ಅಭ್ಯರ್ಥಿ ಜಾರ್ಜ್ ಶುಕ್ರವಾರ ತಮ್ಮ ವಾರ್ಡ್ ವ್ಯಾಪ್ತಿಯ ಚಾಮೇಗೌಡ ಏರಿಯಾದಲ್ಲಿ ಮತಯಾಚನೆ ನಡೆಸಿದರು.
ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸಿಸುತ್ತಿರುವ ಎಂಪಿಎಂ ಕಾರ್ಖಾನೆ ವಸತಿಗೃಹಗಳ ನಡುವಿನ ೬ ಮತ್ತು ೮ನೇ ವಾರ್ಡ್ ಒಳಗೊಂಡಿರುವ ವಾರ್ಡ್ ನಂ.೨೧ರಲ್ಲಿ ಒಟ್ಟು ೨೫೯೦ ಮತದಾರರಿದ್ದಾರೆ. ಈ ವಾರ್ಡ್‌ನಲ್ಲಿ ಈ ಬಾರಿ ಒಟ್ಟು ೩ ಮಂದಿ ಕಣದಲ್ಲಿದ್ದಾರೆ.
ಈ ಬಾರಿ ವಿಶೇಷತೆ ಎಂದರೆ ಪ್ರಮುಖ ಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಅತ್ತೆ-ಸೊಸೆಯನ್ನು ಕಣಕ್ಕಿಳಿಸಿವೆ. ಸಮಾಜ ಸೇವಕ, ಜೆಡಿಎಸ್ ಮುಖಂಡ ಅಶೋಕ್‌ಕುಮಾರ್‌ರವರು ತಮ್ಮ ತಾಯಿ ವಿಜಯ ಅವರನ್ನು ಕಣಕ್ಕಿಳಿಸಿದ್ದಾರೆ. ಇವರ ಎದುರಾಳಿಯಾಗಿ ೨ನೇ ಮಗ ಮಧುಸೂದನ್ ತಮ್ಮ ಪತ್ನಿ ಅನುಷಾ ಅವರನ್ನು ಬಿಜೆಪಿ ಪಕ್ಷದಿಂದ ಕಣಕ್ಕಿಳಿಸಿದ್ದಾರೆ. ಇವರಿಬ್ಬರ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೆ. ರಮ್ಯ ಸ್ಪರ್ಧಿಸಿದ್ದಾರೆ. ಈ ವಾರ್ಡ್‌ನಲ್ಲಿ ಕಳೆದ ೨ ಬಾರಿ ಜೆಡಿಎಸ್ ಪಕ್ಷದಿಂದ ಬದರಿನಾರಾಯಣ ಆಯ್ಕೆಯಾಗಿದ್ದರು. ಈ ವಾರ್ಡ್‌ನಲ್ಲೂ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಬೆಳಿಗ್ಗೆಯಿಂದ ಸಂಜೆವರೆಗೂ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ.
No comments:
Post a Comment