ಶುಕ್ರವಾರ, ಅಕ್ಟೋಬರ್ 10, 2025

ಅ.೧೨ರಂದು ವಿದ್ಯುತ್ ವ್ಯತ್ಯಯ

 

  
ಭದ್ರಾವತಿ : ಮೆಸ್ಕಾಂ ನಗರ ಉಪವಿಭಾಗದ ಬಿ.ಎಚ್ ರಸ್ತೆಯಲ್ಲಿ ಹೊಸದಾಗಿ ೧೧ ಕೆ.ವಿ ಮಾರ್ಗ ರಚಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೆಸ್ಕಾಂ ಘಟಕ-೫ರ ಶಾಖಾ ವ್ಯಾಪ್ತಿಯಲ್ಲಿ ಅ.೧೨ರ ಭಾನುವಾರ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಶಿವರಾಮನಗರ, ವಿಶ್ವೇಶ್ವರಾಯ ನಗರ, ಜೇಡಿಕಟ್ಟೆ, ಜೇಡಿಕಟ್ಟೆ ಹೊಸೂರು, ಸಿರಿಯೂರು, ವೀರಾಪುರ, ಕಲ್ಲಹಳ್ಳಿ, ಸಂಕ್ಲೀಪುರ, ಹಾಗಲಮನೆ, ಹುಲಿರಾಮನಕೊಪ್ಪ, ಸಿರಿಯೂರು ಕ್ಯಾಂಪ್ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾ. 

ಅ.೧೧, ೧೨ರಂದು ಎನ್‌ಎಸಿ ಕರೆ ನೀಡಿರುವ ಹೋರಾಟದಲ್ಲಿ ಪಾಲ್ಗೊಳ್ಳಿ


    ಭದ್ರಾವತಿ:  ನ್ಯಾಷನಲ್ ಅಜಿಟೇಷನ್ ಕಮಿಟಿ(ಎನ್‌ಎಸಿ) ವತಿಯಿಂದ ಅ. ೧೧ ಮತ್ತು ೧೨ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ(ಫ್ರೀಡಂ ಪಾರ್ಕ್)ದಲ್ಲಿ ಇಪಿಎಸ್-೯೫ ಪಿಂಚಣಿಗೆ ಸಂಬಂಧಿಸಿದಂತೆ, ಹೆಚ್ಚುವರಿ ಪಿಂಚಣಿ/ಕನಿಷ್ಠ ಪಿಂಚಣಿ ೭,೫೦೦ ರು.ಗಳಿಗೂ ಅಧಿಕ ಹಾಗು ಡಿಎ ಜಾರಿ ಬಗ್ಗೆ ಹಾಗು ದಕ್ಷಿಣ ಭಾರತದ ರಾಜ್ಯಗಳ ಪಿಂಚಣಿದಾರರ ಸಮಾವೇಶ ಮತ್ತು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಎಂಪಿಎಂ ರಿಟೈರ್ಡ್ ಎಂಪ್ಲಾಯಿಸ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷರು ಕೋರಿದ್ದಾರೆ. 
    ಎಂಪಿಎಂ ರಿಟೈರ್ಡ್ ಎಂಪ್ಲಾಯಿಸ್ ವೆಲ್‌ಫೇರ್ ಅಸೋಸಿಯೇಷನ್ ನ್ಯಾಷನಲ್ ಕಾನ್ಫಿಡ್ರೇಶನ್ ರಿಟೈರೀಸ್ ಸದಸ್ಯರಾಗಿರುವುದರಿಂದ ಭಾಗವಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಸಂಬಂಧ ಈಗಾಗಲೇ ಸರ್ವಸದಸ್ಯರ ಸಭೆಯಲ್ಲಿ ಚರ್ಚಿಲಾಗಿದ್ದು, ಅದರಂತೆ ಎನ್‌ಎಸಿ ಕರೆ ನೀಡಿರುವ ಹೋರಾಟದಲ್ಲಿ ಭಾಗವಹಿಸುವುದು. ರಾಜ್ಯದ ಇತರೆಡೆ ಹಾಗು ಬೆಂಗಳೂರಿನ ಸುತ್ತಮುತ್ತ ವಾಸಿಸುತ್ತಿರುವ ಸಂಘದ ಸದಸ್ಯರು ಸಹ ಭಾಗವಹಿಸುವುದು. 
    ನ್ಯಾಷನಲ್ ಅಜಿಟೇಷನ್ ಕಮಿಟಿ(ಎನ್‌ಎಸಿ) ವತಿಯಿಂದ ಹಮ್ಮಿಕೊಳ್ಳಲಾಗಿರುವ ಹೋರಾಟದಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಕ್ಷೇತ್ರದ ಶಾಸಕರಾದ ಬಿ.ಕೆ ಸಂಗಮೇಶ್ವರ್ ಸಹ ಭಾಗವಹಿಸಿ ಬೆಂಬಲ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ಎಲ್ಲಾ ಸದಸ್ಯರು ಭಾಗವಹಿಸುವ ಮೂಲಕ ಯಶಸ್ವಿಗೊಳಿಸುವಂತೆ ಎಂಪಿಎಂ ರಿಟೈರ್ಡ್ ಎಂಪ್ಲಾಯಿಸ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಆರ್ ಸೋಮಶೇಖರ್ ಮತ್ತು ಕಾರ್ಯದರ್ಶಿ ಕೆ.ಸಿ ಪ್ರೇಮದಾಸ್ ಕೋರಿದ್ದಾರೆ. 

ಅ.೧೧ರಂದು ಭೂಮಿಕಾದಿಂದ ವಿಶೇಷ ಕಾರ್ಯಕ್ರಮ

    ಭದ್ರಾವತಿ: ಕನ್ನಡ ನಾಡು ನಡೆ-ನುಡಿ ಬಿಂಬಿಸುವ ವೇದಿಕೆ ನಗರದ ಭೂಮಿಕಾ ವತಿಯಿಂದ ಅ.೧೧ರ ಶನಿವಾರ ಸಂಜೆ ೬ ಗಂಟೆಗೆ ಹಳೇನಗರದ ಶ್ರೀ ರಾಮೇಶ್ವರ ದೇವಸ್ಥಾನ ಹಿಂಭಾಗದಲ್ಲಿರುವ ಶ್ರೀ ಗಾಯಿತ್ರಿ ಧರ್ಮ ಶಾಲಾ ಭವನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ದಿವಂಗತ `ಶ್ರೀ ಮಾಸ್ತಿ ವೆಂಕಟೇಶ ಐಯ್ಯಂಗಾರ್‌ರವರ ಕಥಾಲೋಕ' ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
    ಶಿವಮೊಗ್ಗ ನಿವೃತ್ತ ಪ್ರಾಂಶಪಾಲ ಡಾ.ಎಚ್.ಎಸ್ ನಾಗಭೂಷಣ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ವೇದಿಕೆ ಅಧ್ಯಕ್ಷ, ವೈದ್ಯ ಡಾ. ಕೃಷ್ಣ ಎಸ್. ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಮಾಸ್ತಿ ವೆಂಕಟೇಶ ಐಯ್ಯಂಗಾರ್‌ರವರ ಬದುಕು, ಬರಹ ಹಾಗು ಅವರ ಕಥೆಗಳಲ್ಲಿನ ಮೌಲ್ಯಗಳ ಕುರಿತು ಉಪನ್ಯಾಸ ನಡೆಯಲಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಅಯ್ಯಂಗಾರ್ ಕೇಕ್ ಮನೆ ಮಳಿಗೆಗೆ ಬೆಂಕಿ ಲಕ್ಷಾಂತರ ರು. ನಷ್ಟ

    ಭದ್ರಾವತಿ: ಕುವೆಂಪು ವಿಶ್ವವಿದ್ಯಾಲಯ ಸಮೀಪ ಶಂಕರಘಟ್ಟ ಮುಖ್ಯ ರಸ್ತೆಯ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಅಯ್ಯಂಗಾರ್ ಕೇಕ್ ಮನೆ ಮಳಿಗೆಯಲ್ಲಿ ಶುಕ್ರವಾರ ಬೆಳಗಿನಜಾವ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರು. ನಷ್ಟ ಉಂಟಾಗಿರುವ ಘಟನೆ ನಡೆದಿದೆ. 
    ಬೇಕರಿ ಮಳಿಗೆಯಲ್ಲಿ ಬೆಳಗಿನ ಜಾವ ೩ ಗಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯರು ಎಚ್ಚರಗೊಂಡು ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ವಿಷಯ ತಿಳಿದು  ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮಳಿಗೆಯಲ್ಲಿದ್ದ ಬಹುಬೇಕ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿ ಲಕ್ಷಾಂತರ ರು. ನಷ್ಟ ಉಂಟಾಗಿದೆ. ಮಳಿಗೆ ಅರಸಿಕೆರೆ ಶ್ರೀಧರ್ ಎಂಬುವರಿಗೆ ಸೇರಿದ್ದಾಗಿದ್ದು,  ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಎನ್ನಲಾಗಿದೆ.


ಭದ್ರಾವತಿ ಕುವೆಂಪು ವಿಶ್ವವಿದ್ಯಾಲಯ ಸಮೀಪ ಶಂಕರಘಟ್ಟ ಮುಖ್ಯ ರಸ್ತೆಯ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಅಯ್ಯಂಗಾರ್ ಕೇಕ್ ಮನೆ ಮಳಿಗೆಯಲ್ಲಿ ಶುಕ್ರವಾರ ಬೆಳಗಿನಜಾವ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರು. ನಷ್ಟ ಉಂಟಾಗಿರುವ ಘಟನೆ ನಡೆದಿದೆ.