Saturday, March 20, 2021

ಕೋಡಿಹಳ್ಳಿಯಲ್ಲಿ ತಹಸೀಲ್ದಾರ್ ಗ್ರಾಮ ವಾಸ್ತವ್ಯ

ಭದ್ರಾವತಿ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನೇತೃತ್ವದ ತಂಡ ಶನಿವಾರ ತಾಲೂಕಿನ ಕೂಡ್ಲಿಗೆರೆ ಹೋಬಳಿ ಕೋಡಿಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ನಡೆಸಿತು.
    ಭದ್ರಾವತಿ, ಮಾ. ೨೦: ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನೇತೃತ್ವದ ತಂಡ ಶನಿವಾರ ತಾಲೂಕಿನ ಕೂಡ್ಲಿಗೆರೆ ಹೋಬಳಿ ಕೋಡಿಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ನಡೆಸಿತು.
     ಗ್ರಾಮದ ಸರ್ವೆ ನಂ.೨೮ರಲ್ಲಿ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ, ಕೊಟ್ಟದಾಳು ಸರ್ವೆ ನಂ. ೧ ಮತ್ತು ೨ರಲ್ಲಿ ಬಗರ್‌ಹುಕುಂ ಸಾಗುವಳಿ ವಿಚಾರಕ್ಕೆ ಸಂಬಂಧಿಸಿದಂತೆ, ಕೂಡ್ಲಿಗೆರೆ ಗ್ರಾಮದ ಸ್ಮಶಾನ ಹಾಗು ಗುಂಡುತೋಪು ಜಾಗ ಹಾಗು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಜೂರಾತಿಯಾಗಿರುವ ಜಾಗ ಪರಿಶೀಲನೆ, ಕೋಡಿಹಳ್ಳಿ ಗ್ರಾಮದ ಬಳಸೋಕೆರೆ ಹೂಳು ತೆಗೆಯುವ ಸಂಬಂಧ ಪಿಡಿಓ ಜೊತೆ ಚರ್ಚೆ, ಗ್ರಾಮದ ಪರಿಶಿಷ್ಟ ಜಾತಿ/ಪಂಗಡ ಕಾಲೋನಿಯಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳ  ಕುರಿತು ಪಿಡಿಓ ಮತ್ತು ಕಂದಾಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲಕ್ ಬಿ ವೀರಪ್ಪ, ಸದಸ್ಯರಾದ ಜಿ.ಆರ್ ನಾಗರಾಜ್, ಕೂಡ್ಲಿಗೆರೆ ರುದ್ರೇಶ್, ಉಪತಹಸೀಲ್ದಾರ್‌ಗಳಾದ ನಾರಾಯಣಗೌಡ, ಮಂಜಾನಾಯ್ಕ, ಆರ್.ಆರ್ ಶಿರಸ್ತೆದಾರ್ ಮಲ್ಲಿಕಾರ್ಜುನಯ್ಯ, ರಾಜ್ಯಸ್ವ ನಿರೀಕ್ಷಕ ಪ್ರಶಾಂತ್, ಜಗದೀಶ್ ಹಾಗು ಎಲ್ಲಾ ಗ್ರಾಮ ಪಂಚಾಯಿತಿಗಳ ಪಿಡಿಓಗಳು, ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.  

ಕೋವಿಡ್ ಲಸಿಕೆ ಪಡೆದ ಬಿಳಿಕಿ ಶ್ರೀ

ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಶನಿವಾರ ಲಸಿಕೆ ಪಡೆದರು.
   ಭದ್ರಾವತಿ, ಮಾ. ೨೦: ಕೊರೋನಾ ೨ನೇ ಹಂತದ ಅಲೆ ಎಲ್ಲೆಡೆ ಹೆಚ್ಚಾಗುತ್ತಿದ್ದು, ಈ ನಡುವೆ ಕೊರೋನಾ ಲಸಿಕೆ ಪಡೆಯುವವರ ಸಂಖ್ಯೆ ಸಹ ಅಧಿಕವಾಗುತ್ತಿದೆ. ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಶನಿವಾರ ಲಸಿಕೆ ಪಡೆದರು.
    ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ಡಾ. ದಿವ್ಯ ಕೋವಿಡ್-೧೯ ವ್ಯಾಕ್ಸಿನ್ ನೀಡಿದರು. ಸಮಾಜದ ಮುಖಂಡರಾದ ಸಿದ್ದಲಿಂಗಯ್ಯ, ಎಸ್ ವಾಗೀಶ್, ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಈಗಾಗಲೇ ಆಸ್ಪತ್ರೆಯಲ್ಲಿ ಪೌರಕಾರ್ಮಿಕರು, ಆರೋಗ್ಯ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳು ಹಾಗು ಇನ್ನಿತರ ಇಲಾಖೆಗಳ ಆಯ್ದ ಸಿಬ್ಬಂದಿಗಳಿಗೆ   ೧ ಮತ್ತು ೨ನೇ ಹಂತದ ಲಸಿಕೆಯನ್ನು ನೀಡಲಾಗಿದೆ. ಉಳಿದಂತೆ ಕಳೆದ ಸುಮಾರು ೧೦ ದಿನಗಳಿಂದ ೪೫ ವರ್ಷ ಮೇಲ್ಪಟ್ಟ ೬೦ ವರ್ಷದೊಳಗಿನ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹಾಗು ೬೦ ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲಾಗುತ್ತಿದೆ.

೧೮ ವರ್ಷ ಸೇವೆ ಸಲ್ಲಿಸಿ ಮರಳಿ ಬಂದ ವೀರ ಯೋಧನಿಗೆ ಅಭಿನಂದನೆ

ಹೆಬ್ಬಂಡಿ ತಾಂಡಾ ಎಚ್.ಪಿ ಮೋಹನ್ ಮೇಘಾಲಯ, ಜಮ್ಮು-ಕಾಶ್ಮೀರ, ಚೀನಾ ಗಡಿಯಲ್ಲಿ ಕರ್ತವ್ಯ


ಭಾರತೀಯ ಸೇನೆಯಲ್ಲಿ ಸುಮಾರು ೧೮ ವರ್ಷ ಸೇವೆ ಸಲ್ಲಿಸಿ ಹಿಂದಿರುಗಿದ ಭದ್ರಾವತಿ ತಾಲೂಕಿನ ಹೆಬ್ಬಂಡಿ ತಾಂಡಾದ ನಿವಾಸಿ, ವೀರಯೋಧ ಎಚ್.ಪಿ ಮೋಹನ್‌ರನ್ನು ಅಭಿನಂದಿಸಲಾಯಿತು.
    ಭದ್ರಾವತಿ, ಮಾ. ೨೦: ಭಾರತೀಯ ಸೇನೆಯಲ್ಲಿ ಸುಮಾರು ೧೮ ವರ್ಷ ಸೇವೆ ಸಲ್ಲಿಸಿ ಹಿಂದಿರುಗಿದ ತಾಲೂಕಿನ ಹೆಬ್ಬಂಡಿ ತಾಂಡಾದ ನಿವಾಸಿ, ವೀರಯೋಧ ಎಚ್.ಪಿ ಮೋಹನ್‌ರನ್ನು ಅಭಿನಂದಿಸಲಾಯಿತು.
    ತಾಂಡಾದ ದಿವಂಗತ ಪೀಕ್ಯಾನಾಯ್ಕ, ರುಕ್ಮಿಣಿ ಬಾಯಿರವರ ಪುತ್ರರಾಗಿರುವ ಎಚ್.ಪಿ ಮೋಹನ್ ೨೦೦೨-೦೩ರಲ್ಲಿ ಭಾರತೀಯ ಸೇನೆಗೆ ಸೇವೆಗೆ ಸೇರಿದ್ದು, ಮೇಘಾಲಯ, ಜಮ್ಮು-ಕಾಶ್ಮೀರ ಹಾಗು ಚೀನಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿ ಮರಳಿದ್ದಾರೆ.
   ಎಚ್.ಪಿ ಮೋಹನ್ ಮರಳಿ ಬಂದ ಹಿನ್ನಲೆಯಲ್ಲಿ ತಾಂಡಾದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕುಟುಂಬಸ್ಥರು, ತಾಂಡಾ ನಿವಾಸಿಗಳು ಸಿಹಿ ಹಂಚಿ ಸಂಭ್ರಮಿಸಿದರು.
ಮುಖ್ಯ ಶಿಕ್ಷಕರಾದ ಹನುಮಂತನಾಯ್ಕ, ಎಸ್. ಕೂಬಾನಾಯ್ಕ, ಜಮೀನ್ದಾರ್ ಪ್ರೇಮ್‌ಕುಮಾರ್, ಆನಂದನಾಯ್ಕ, ಎಂ.ಎಸ್ ನಾಯ್ಕ, ಕೇಶವಮೂರ್ತಿ ಮತ್ತು ಪಿ. ಧನಂಜಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತ್ರಿಕೋನಾಸನ ಯೋಗ ಸ್ಪರ್ಧೆಯಲ್ಲಿ ಡಿ. ನಾಗರಾಜ್ ಯೂನಿವರ್ಸಲ್ ರೆಕಾರ್ಡ್

ಭದ್ರಾವತಿ, ಮಾ. ೨೦: ನಗರದ ವಿವೇಕಾನಂದ ಯೋಗ ಟ್ರಸ್ಟ್ ಅಧ್ಯಕ್ಷ, ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್ ೩ ನಿಮಿಷಗಳ ತ್ರಿಕೋನಾಸನ ಯೋಗ ಸ್ಪರ್ಧೆಯಲ್ಲಿ ಯೂನಿವರ್ಸಲ್ ರೆಕಾರ್ಡ್‌ಗೆ ಪಾತ್ರರಾಗಿದ್ದಾರೆ.
   ಭದ್ರಾವತಿ, ಮಾ. ೨೦: ನಗರದ ವಿವೇಕಾನಂದ ಯೋಗ ಟ್ರಸ್ಟ್ ಅಧ್ಯಕ್ಷ, ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್ ೩ ನಿಮಿಷಗಳ ತ್ರಿಕೋನಾಸನ ಯೋಗ ಸ್ಪರ್ಧೆಯಲ್ಲಿ ಯೂನಿವರ್ಸಲ್ ರೆಕಾರ್ಡ್‌ಗೆ ಪಾತ್ರರಾಗಿದ್ದಾರೆ.
   ಶಿವಮೊಗ್ಗ ಕೋಟೆ ರಸ್ತೆಯಲ್ಲಿರುವ ವಾಸವಿ ಪಬ್ಲಿಕ್ ಶಾಲೆಯಲ್ಲಿ ವರ್ಷಿಣಿ ಯೋಗ ಶಿಕ್ಷಣ ಸಂಸ್ಥೆ ಮತ್ತು ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್ ಹಾಗು ಜೈ ಭೀಮ್ ಕನ್ನಡ ಸೈನ್ಯ ರಕ್ಷಣಾವೇದಿಕೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಈ ಸಾಧನೆಗೆ ಪಾತ್ರರಾಗಿದ್ದು, ಈಗಾಗಲೇ ನಾಗರಾಜ್‌ರವರು ಹಲವಾರು ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
   ವರ್ಷಿಣಿ ಯೋಗಕೇಂದ್ರದ ಅಧ್ಯಕ್ಷ ಪಿ. ಪೆಂಚಾಲಯ್ಯ, ಕಾರ್ಯದರ್ಶಿ ವೆಂಕಟೇಶ್, ಯೋಗ ತೀರ್ಪುಗಾರರಾದ ಮುದ್ದುಕೃಷ್ಣ, ಗೋಪಾಲ್‌ರಾಜ್, ಪುರಶುರಾಮ್ ಹಾಗು ಡಾ. ನಿಂಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಸುಮಾರು ೧೩೫ಕ್ಕೂ ಹೆಚ್ಚು ಯೋಗಪಟುಗಳು ಭಾಗವಹಿಸಿದ್ದರು.

ತಂಬಾಕು ಉತ್ಪನ್ನಗಳ ಮಾರಾಟ ಕಾಯ್ದೆ ಉಲ್ಲಂಘನೆ : ೧೩೫೦ ರು. ದಂಡ

ಭದ್ರಾವತಿಯಲ್ಲಿ ಕಾಯ್ದೆ ಉಲ್ಲಂಘಿಸಿ ಅಕ್ರಮವಾಗಿ ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ತೊಡಗಿರುವ ಅಂಗಡಿಮುಂಗಟ್ಟುಗಳ ಮೇಲೆ ಶನಿವಾರ ದಾಳಿ ನಡೆಸಿ ಸುಮಾರು ೧೩೫೦ ರು. ದಂಡ ವಸೂಲಾತಿ ಮಾಡಿರುವ ಘಟನೆ ನಡೆದಿದೆ.
     ಭದ್ರಾವತಿ, ಮಾ. ೨೦: ಕಾಯ್ದೆ ಉಲ್ಲಂಘಿಸಿ ಅಕ್ರಮವಾಗಿ ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ತೊಡಗಿರುವ ಅಂಗಡಿಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಸುಮಾರು ೧೩೫೦ ರು. ದಂಡ ವಸೂಲಾತಿ ಮಾಡಿರುವ ಘಟನೆ ಶನಿವಾರ ನಡೆದಿದೆ.
     ಶಿವಮೊಗ್ಗ ಜಿಲ್ಲಾ ತಂಬಾಕು ಕೋಶ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಪೊಲೀಸ್ ಇಲಾಖೆ ವತಿಯಿಂದ  ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಸಮೀಪ ಅಂಗಡಿಮುಂಗಟ್ಟುಗಳ ಮೇಲೆ ದಾಳಿ ನಡೆಸಲಾಯಿತು.
     ಕಾರ್ಯಾಚರಣೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಎಂ.ವಿ ಅಶೋಕ್, ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ರಾಜೇಗೌಡ, ತಾಲೂಕು ಹಿರಿಯ ಸಹಾಯಕ ಆನಂದಮೂರ್ತಿ, ಕಿರಿಯ ಆರೋಗ್ಯ ಸಹಾಯಕ ಹರೀಶ್, ಜಿಲ್ಲಾ ತಂಬಾಕು ಕೋಶದ ಹೇಮಂತ್ ರಾಜ್, ರವಿರಾಜ್ ಹಾಗು ಪೊಲೀಸ್ ಠಾಣಾಧಿಕಾರಿ ಅನ್ನಪೂರ್ಣ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಧರ್ಮ ವಿರೋಧಿ ಆರೋಪ

ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆ

ಸಿ.ಎಂ ಖಾದರ್
    ಭದ್ರಾವತಿ, ಮಾ. ೨೦: ಸ್ವ ಧರ್ಮೀಯ ಕೆಲವರು ನನ್ನ ವಿರುದ್ಧ ವಿನಾಕಾರಣ ಧರ್ಮ ವಿರೋಧಿ ಆರೋಪದೊಂದಿಗೆ ತೇಜೋವಧೆ ಮಾಡುವ ಜೊತೆಗೆ ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆಗೊಳಿಸಿದ್ದು, ಕುತಂತ್ರ ನಡೆಸುತ್ತಿರುವವರ ವಿರುದ್ಧ ಕಾನೂನು ಕೈಗೊಳ್ಳಬೇಕೆಂದು ಸಿ.ಎಂ ಖಾದರ್ ಆಗ್ರಹಿಸಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷನಾಗಿದ್ದು, ಅಲ್ಲದೆ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿ ಸಹ ಸೇವೆ ಸಲ್ಲಿಸುತ್ತಿದ್ದೇನೆ. ಎಲ್ಲಾ ಧರ್ಮಗಳನ್ನು ಪ್ರೀತಿಸುವ, ಗೌರವಿಸುವ ಮನೋಭಾವ ನಮ್ಮದಾಗಿದೆ. ಸಂವಿಧಾನ ಸಹ ಈ ನಿಟ್ಟಿನಲ್ಲಿ ನಮಗೆ ಹಕ್ಕನ್ನು ನೀಡಿದೆ. ಅಲ್ಲದೆ ಪವಿತ್ರ ಕುರಾನ್ ಧರ್ಮಗ್ರಂಥದಲ್ಲೂ ಉಲ್ಲೇಖಿಸಲಾಗಿದೆ.  ಈಗಿರುವಾಗ ಇತ್ತೀಚಿಗೆ ಶಿವಮೊಗ್ಗದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಜನಾಕ್ರೋಶ ಸಭೆಯ ಮೆರವಣಿಗೆಯಲ್ಲಿ ನಾನು ಘೋಷಣೆಗಳನ್ನು ಕೂಗುವಾಗ ಜೈ ಶ್ರೀರಾಮ್ ಘೋಷಣೆ ಸಹ ಕೂಗಿದ್ದೇನೆ.  ಜೆಬಿಟಿ ಬಾಬು ಎಂಬುವರು ನಾನು ಜೈ ಶ್ರೀರಾಮ್ ಘೋಷಣೆ ಕೂಗುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ವಾಟ್ಸಫ್, ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಧರ್ಮ ವಿರೋಧಿ ಎಂದು ಅಪಪ್ರಚಾರ ನಡೆಸುವ ಮೂಲಕ ತೇಜೋವಧೆಗೆ ಮುಂದಾಗಿದ್ದಾರೆ. ಈ ವಿಚಾರ ಸಹ ಧರ್ಮಗುರುಗಳ ಗಮನಕ್ಕೆ ತರಲಾಗಿದೆ. ಧರ್ಮ ಗುರುಗಳು ಸಹ ಈ ವಿಚಾರವನ್ನು ದೊಡ್ಡದಾಗಿ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಆದರೂ ಸಹ ನನ್ನನ್ನು ತೇಜೋವಧೆ ಮಾಡಲು ಮುಂದಾಗುತ್ತಿದ್ದಾರೆ. ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದರು.
    ನನ್ನ ಏಳಿಗೆಯನ್ನು ಸಹಿಸದ ಸ್ವಯಂ ಘೋಷಿತ ಮುಖಂಡರಾದ ಜೆಬಿಟಿ ಬಾಬು, ನಗರಸಭಾ ಸದಸ್ಯರಾದ ಟಿಪ್ಪುಸುಲ್ತಾನ್, ಮುರ್ತುಜಾಖಾನ್, ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಮಾಜಿ ಅಧ್ಯಕ್ಷರಾದ ಫೀರ್‌ಷರೀಫ್, ಬಾಬಾಜಾನ್, ಬೊಮ್ಮನಕಟ್ಟೆ ನಿವಾಸಿ ಮಸ್ತಾನ್, ಬ್ರೋಕರ್ ಖಾದರ್, ಭೂತನಗುಡಿ ನಿವಾಸಿ ಜಾವಿದ್ ಸೇರಿದಂತೆ ಇನ್ನಿತರರು ನನನ್ನು ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಸ್ಥಾನ ಕೆಳಗಿಳಿಸಲು ಹಲವಾರು ತಿಂಗಳುಗಳಿಂದ ಹುನ್ನಾರ ನಡೆಸುತ್ತಿದ್ದು, ಈ ಹಿಂದೆ ಸಹ ಇದೆ ರೀತಿ ಹುನ್ನಾರ ನಡೆಸಿದ್ದರು. ಇದೀಗ ಜೈಶ್ರೀರಾಮ್ ಘೊಷಣೆಯನ್ನು ನೆಪವಾಗಿಟ್ಟುಕೊಂಡು ಅಧಿಕಾರದಿಂದ ಕೆಳಗಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.
    ಈಗಾಗಲೇ ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ. ಈ ವಿಚಾರವನ್ನು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಗಳ ಗಮನಕ್ಕೂ ತರಲಾಗುವುದು. ನಾನು ಯಾವುದೇ ದ್ರೇಶದ್ರೋಹಿ ಅಥವಾ ಧರ್ಮ ವಿರೋಧಿ ಘೋಷಣೆಗಳನ್ನು ಕೂಗಿಲ್ಲ. ಇದನ್ನು ಈಗಲೂ ಸಮರ್ಥಿಸಿಕೊಳ್ಳಲು ಸಿದ್ದನಿದ್ದೇನೆ. ಈ ಕುರಿತು ನ್ಯಾಯಾಲಯದಲ್ಲೂ ಪ್ರಶ್ನಿಸಲಾಗುವುದು ಎಂದರು.